ಭಾನುವಾರ, ಜನವರಿ 23, 2022
24 °C
78 ಸಾವಿರ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಅರ್ಹ; ಜಿಲ್ಲಾಧಿಕಾರಿ ರಾಗಪ್ರಿಯಾ ಹೇಳಿಕೆ

ಕೋವಿಡ್ ಲಸಿಕಾಕರಣ ಯಶಸ್ಸಿಗೆ ಸಹಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ 15 ವರ್ಷದಿಂದ 18 ವರ್ಷದ ವಯೋಮಾನದ 78 ಸಾವಿರ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಅರ್ಹರಿದ್ದಾರೆ. ಎಲ್ಲರೂ ಲಸಿಕೆ ಪಡೆದು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ತಿಳಿಸಿದರು.

ನಗರದ ಸರ್ಕಾರಿ ಕನ್ಯಾ ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ 15 ವರ್ಷದಿಂದ 18 ವರ್ಷದ ವಯೋಮಾನದವರಿಗೆ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್ ಲಸಿಕಾಕರಣಕ್ಕೆ ಜಿಲ್ಲಾಡಳಿತ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಶೇ 97ರಷ್ಟು ಮೊದಲನೆ ಡೋಸ್ ಮತ್ತು ಶೇ 74ರಷ್ಟು ಎರಡನೇ ಡೋಸ್ ಪ್ರಗತಿ ಸಾಧಿಸಿದ್ದು, ಇಲ್ಲಿಯವರೆಗೂ ಅಡ್ಡಪರಿಣಾಮ ಆಗಿರುವ ಪ್ರಕರಣ ವರದಿಯಾಗಿಲ್ಲ ಎಂದರು.

ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ ಮಾತನಾಡಿ, ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಜಗತ್ತಿನಲ್ಲಿಯೇ ಗುಣಮಟ್ಟದ ಲಸಿಕೆ ಎಂದು ಹೆಸರು ಪಡೆದಿವೆ. ಕೊರೊನಾ ರೂಪಾಂತರ ತಳಿ ಓಮೈಕ್ರಾನ್ ವೈರಸ್ ಎಲ್ಲೆಡೆ ಹರಡುತ್ತಿದೆ. ಇದನ್ನು ನಾವು ಒಗ್ಗೂಡಿ ಎದುರಿಸಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಸ್ನೇಹಿತರಿಗೆ ಲಸಿಕೆ ಹಾಕಿಕೊಳ್ಳಲು ಮನವೊಲಿಸಬೇಕು. 3ನೇ ಅಲೆ ತಡೆಗೆ ಲಸಿಕಾಕರಣವೊಂದೇ ಅಸ್ತ್ರವಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ನಗರ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡ್ರಿಕಿ, ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಪಾಟೀಲ, ಆರ್‌ಸಿಎಚ್‌ಒ ಲಕ್ಷ್ಮೀಕಾಂತ ಒಂಟಿಪೀರ, ಡಿಡಿಪಿಐ ಶಾಂತಗೌಡ ಪಾಟೀಲ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಶಾ ಆಲಂ ಹುಸೇನ್, ನಗರಸಭೆ ಆಯುಕ್ತ ಬಕ್ಕಪ್ಪ, ಯಾದಗಿರಿ ತಹಶೀಲ್ದಾರ ಚೆನ್ನಮಲ್ಲಪ್ಪ ಘಂಟಿ, ಯಾದಗಿರಿ ವೈದ್ಯಾಧಿಕಾರಿ ಹಣಮಂತರೆಡ್ಡಿ ಇದ್ದರು.

ಶಾಲಾ ಮಕ್ಕಳಿಗೆ ಚುಚ್ಚುಮದ್ದು

ಹುಣಸಗಿ: ಸರ್ಕಾರದ ನಿರ್ದೇಶನದಂತೆ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ 15 ರಿಂದ 18 ವಯಸ್ಸಿನೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಪಾಲಕರು ಹಾಕಿಸಬೇಕು ಎಂದು ಮುಖ್ಯಶಿಕ್ಷಕಿ ನೀಲಮ್ಮ ನಾಗರಬೆಟ್ಟ ಹೇಳಿದರು.

ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರೀನಿವಾಸಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸದ್ಯ ಲಸಿಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಇದೆ. ಪ್ರತಿಯೊಬ್ಬರು ಲಸಿಕೆ ಪಡೆದು ಕೋವಿಡ್ ಮುಕ್ತ ಗ್ರಾಮಕ್ಕಾಗಿ ಸಹಕರಿಸಬೇಕು ಎಂದರು.

ಶ್ರೀನಿವಾಸಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ್ವರಿ ಲಸಿಕೆ ನೀಡಿದರು. ಮುಖಂಡರಾದ ಬಸನಗೌಡ ಬಿರಾದಾರ, ಬಸವರಾಜ ಹೊಸಮನಿ, ಮಹಾಂತೇಶ, ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.