ಶನಿವಾರ, ಜನವರಿ 29, 2022
24 °C
ಜಿಲ್ಲೆಯಾದ್ಯಂತ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಅಭಿಯಾನ

ಲಸಿಕೆ: ಶಿಕ್ಷಣದಿಂದ ದೂರವುಳಿದ ಮಕ್ಕಳ ಪತ್ತೆಯೇ ಸವಾಲು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ 15ರಿಂದ 18 ವಯೋಮಾನದ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನ ಜನವರಿ 3ರಿಂದ ಆರಂಭವಾಗಿದ್ದು, ಮೊದಲ ಡೋಸ್‌ ನೀಡುವ ಪ್ರಕ್ರಿಯೆ ಈ ವಾರ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಕೋವಿಡ್‌ ರೂಪಾಂತರಿ ತಳಿ ಓಮೈಕ್ರಾನ್‌ ಆತಂಕಕಾರಿಯಾಗಿರುವ ಕಾರಣ ಕೇಂದ್ರ ಸರ್ಕಾರ ಮಕ್ಕಳಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ನೀಡುವಂತೆ ಸೂಚಿಸಿದ್ದು, ಜಿಲ್ಲೆಯಲ್ಲೂ ಲಸಿಕಾಕರಣ ನಡೆಯುತ್ತಿದೆ.

ಜಿಲ್ಲಾಡಳಿತವು ಮೊದಲನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ, ನಂತರ 18ರಿಂದ 45 ವಯಸ್ಸಿನವರಿಗೆ, 60ಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಿದೆ. ಈಗ 15ರಿಂದ 18ರ ವಯೋಮಾನದವರಿಗೆ ಲಸಿಕೆ ನೀಡುತ್ತಿದೆ.

ಜಿಲ್ಲೆಯಲ್ಲಿ 74 ಸಾವಿರ ಮಕ್ಕಳಿದ್ದು, ಈ ವಾರರೊಳಗೆ ಮೊದಲ ಡೋಸ್‌ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಪ್ರೌಢಶಾಲೆ ಹಾಗೂ ಪಿಯು ಕಾಲೇಜು ಹಂತದಲ್ಲಿ ಲಸಿಕಾಕರಣ ನಡೆಯುತ್ತಿದೆ. ವಾರಾಂತ್ಯ ಕರ್ಫ್ಯೂ ಪ್ರಯುಕ್ತ ಶನಿವಾರ ಮತ್ತು ಭಾನುವಾರ ಲಸಿಕಾಕರಣ ನಡೆಯಲಿಲ್ಲ. ಸೋಮವಾರದಿಂದ ಮತ್ತೆ ಶುರುವಾಗಲಿದೆ.

ಉರ್ದು ಶಾಲೆಗಳಲ್ಲಿ ಹಿನ್ನಡೆ:
ಉರ್ದು ಶಾಲೆಗಳಲ್ಲಿ ಲಸಿಕಾಕರಣಕ್ಕೆ ಸ್ಪಲ್ಪ ಹಿನ್ನಡೆಯಾಗಿದೆ ಎಂದು ಶಾಲಾ ಮೂಲಗಳು ತಿಳಿಸಿವೆ. ಕೆಲವರು ಸ್ವಯಂ ಪ್ರೇರಿತರಾಗಿ ಲಸಿಕಾರಣಕ್ಕೆ ಮುಂದಾದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಗುರಿ ತಲುಪಲು ಸಮಯ ತೆಗೆದುಕೊಳ್ಳಲಿದೆ.

6–7 ಸಾವಿರ ಮಕ್ಕಳು ಶಾಲೆಯಿಂದ ಹೊರಗೆ:
ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಸುಮಾರು 6 ರಿಂದ 7 ಸಾವಿರ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದು, ಅವರಿಗೆ ಲಸಿಕೆ ಹಾಕುವುದು ಸವಾಲಿನ ಕೆಲಸವಾಗಿದೆ. ಕೆಲ ಮಕ್ಕಳು ಪೋಷಕರ ಜತೆಗೆ ಮಹಾನಗರಗಳಿಗೆ ವಲಸೆ ಹೋಗಿದ್ದು, ಅವರನ್ನು ಹುಡುಕಿ ತರುವುದು ಕಷ್ಟದ ಕೆಲಸವಾಗಿದೆ. ಅಲ್ಲದೇ ಶಾಲಾ–ಕಾಲೇಜಿನಿಂದ ದೂರ ಉಳಿದವರ ಪಟ್ಟಿ ಇದ್ದು, ಅದನ್ನು ಆರೋಗ್ಯ ಇಲಾಖೆ ಜತೆಗೂಡಿ ಲಸಿಕೆ ಹಾಕಿಸಲಾಗುವುದು ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು.

21 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ: ಜಿಲ್ಲೆಯಲ್ಲಿ ವಸತಿ ಶಾಲೆಗಳು ಸೇರಿ 15ರಿಂದ 18 ವರ್ಷದೊಳಗಿನ 37,098 ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ ಜನವರಿ 7ರ ವರೆಗೆ 21 ಸಾವಿರ ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಮಾಹಿತಿ ನೀಡಿದರು.

11 ಸಾವಿರ ವಿದ್ಯಾರ್ಥಿಗಳಿಗೆ ಚುಚ್ಚುಮದ್ದು: ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ 11,466 ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ. ಯಾದಗಿರಿ ತಾಲ್ಲೂಕಿನಲ್ಲಿ 9,919, ಶಹಾಪುರ ತಾಲ್ಲೂಕಿನಲ್ಲಿ 5,916, ಸುರಪುರ ತಾಲ್ಲೂಕಿನಲ್ಲಿ 5,570 ಸೇರಿ 21,405 ವಿದ್ಯಾರ್ಥಿಗಳಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ 5,620, ಶಹಾಪುರ ತಾಲ್ಲೂಕಿನಲ್ಲಿ 3,256, ಸುರಪುರ ತಾಲ್ಲೂಕಿನಲ್ಲಿ 2,590 ಸೇರಿದಂತೆ 11,466 ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ.

***

ಅಂಕಿ ಅಂಶ
15ರಿಂದ 18 ವರ್ಷದೊಳಗಿನ ಶಾಲಾ ಮಕ್ಕಳ ವಿವರ
ತಾಲ್ಲೂಕು;ವಿದ್ಯಾರ್ಥಿಗಳ ಸಂಖ್ಯೆ
ಯಾದಗಿರಿ;12,280
ಶಹಾಪುರ;12,269
ಸುರಪುರ;10,074
ವಸತಿ ಶಾಲೆ;2,475
ಒಟ್ಟು;37,098
ಆಧಾರ: ಸಾರ್ವಜನಿಕ ಶಿಕ್ಷಣ ಇಲಾಖೆ
******
‘ಶೀಘ್ರವೇ ಮೊದಲ ಡೋಸ್ ಪೂರ್ಣ’

ಸುರಪುರ: ತಾಲ್ಲೂಕಿನಲ್ಲಿ 15ರಿಂದ 18 ವಯೋಮಾನದ 23,500 ಮಕ್ಕಳಿದ್ದು, ಈ ಪೈಕಿ 3,000 ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದನ್ನು ಆರೋಗ್ಯ ಇಲಾಖೆ ಗುರುತಿಸಿದೆ.

ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಕಳೆದ ಸೋಮವಾರದಿಂದ ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಭೇಟಿ ನೀಡಿ ಆರೋಗ್ಯ ಸಿಬ್ಬಂದಿ ಲಸಿಕೆ ಹಾಕುತ್ತಿದ್ದಾರೆ. 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ದಾಸ್ತಾನು ಇದೆ.

ಶಾಲೆಗೆ ಹೋಗದ 3,000 ಮಕ್ಕಳಿಗೆ ಲಸಿಕೆ ನೀಡುವುದು ಸವಾಲಾಗಿದೆ. ಆ ಮಕ್ಕಳನ್ನು ಅಂಗನವಾಡಿ, ಆಶಾ ಕಾರ್ಯಕರ್ತರ ಮೂಲಕ ಗುರುತಿಸಿ ಲಸಿಕೆ ನೀಡುವ ಕಾರ್ಯ ನಡೆದಿದೆ.
****
ಭರದಿಂದ ಸಾಗಿದ ಲಸಿಕೆ ಅಭಿಯಾನ

ಶಹಾಪುರ/ವಡಗೇರಾ: ಕೋವಿಡ್ ನಿಯಂತ್ರಣಕ್ಕೆ 15ರಿಂದ18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗಿದೆ

ವಡಗೇರಾ ಮತ್ತು ಶಹಾಪುರ ತಾಲ್ಲೂಕುಗಳಲ್ಲಿ 9 ಹಾಗೂ 10ನೇ ತರಗತಿಯಲ್ಲಿ 16,315 ವಿದ್ಯಾರ್ಥಿಗಳು ಇದ್ದಾರೆ. ಪಿಯುಸಿಯಲ್ಲಿ 3,975 ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ 18,315 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು.

ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ಶಾಲಾ ಹಾಗೂ ಕಾಲೇಜಿಗೆ ತೆರಳಿ ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಹಾಗೂ ಔಷಧಿ ಸಂಗ್ರಹವಿದೆ. ಆಮ್ಲಜನಕ ಯಂತ್ರಗಳು ಸಜ್ಜಾಗಿದ್ದು, ಹಾಸಿಗೆ ಸಿದ್ದಪಡಿಸಿದ್ದೇವೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೆದಾರ ತಿಳಿಸಿದ್ದಾರೆ.

ಶಹಾಪುರ ತಾಲ್ಲೂಕಿನ ಮಡಬೂಳ ಕ್ರಾಸ್ ಬಳಿ ಸ್ಥಾಪಿಸಿದ ಚೆಕ್‌ಪೋಸ್ಟ್ ಬಳಿ ನಮ್ಮ ಸಿಬ್ಬಂದಿ ಎರಡು ಪಾಳೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ತಪಾಸಣೆ ನಡೆಸುತ್ತಿದ್ದಾರೆ. ಶೀಘ್ರವೇ ಶೆಡ್ ನಿರ್ಮಿಸುವುದಾಗಿ ತಹಶೀಲ್ದಾರ್‌ ತಿಳಿಸಿದ್ದಾರೆ.
*****
ಶೇ 50ರಷ್ಟು ಲಸಿಕೆ ಪೂರ್ಣ

ಹುಣಸಗಿ: ತಾಲ್ಲೂಕಿನಲ್ಲಿ ಅರ್ಹ ಶೇ 50ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಸುರಪುರದ ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ ತಿಳಿಸಿದ್ದಾರೆ.

ತಾಲ್ಲೂಕಿನ ಶಾಲಾ ಕಾಲೇಜುಗಳಲ್ಲಿ ಸುಮಾರು 7,200 ಮಕ್ಕಳು ಇದ್ದಾರೆ. ಕಳೆದ ವಾರ ಹಲವು ಶಾಲೆಗಳಲ್ಲಿ ಪಾಲಕರ ಸಭೆ ನಡೆಸಿ, ಮಕ್ಕಳಿಗೆ ಲಸಿಕೆ ಹಾಕಿಸುವ ಬಗ್ಗೆ ಅವರಿಗೆ ತಿಳಿವಳಿಕೆ ನೀಡಲಾಯಿತು. ಹೀಗಾಗಿ, ಮಕ್ಕಳ ಲಸಿಕೆಯ ಪ್ರಮಾಣ ಶೇ 50ರ ಗಡಿ ದಾಟಿದೆ ಎನ್ನುತ್ತಾರೆ ವೈದ್ಯರು.

ಗುರುವಾರದ ಒಳಗೆ ನಿರೀಕ್ಷಿತ ಗುರಿ ಮುಟ್ಟುವ ಸಾಧ್ಯತೆ ಇದೆ. ತಾಲ್ಲೂಕಿನಲ್ಲಿ ಸುಮಾರು 1,500 ಮಕ್ಕಳು ಶಾಲೆಯಿಂದ ದೂರ ಇದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಅವರಿಗೂ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ.

***

ಶಾಲಾ ಕಾಲೇಜುಗಳಲ್ಲಿ 15ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಹಾಜರಾತಿ ಕಡಿಮೆ ಇರುವ ಕಡೆ ಸಮಸ್ಯೆ ಆಗುತ್ತಿದೆ
ಡಾ.ಲಕ್ಷ್ಮಿಕಾಂತ ಒಂಟಿಪೀರ, ಆರ್‌ಸಿಎಚ್‌ಒ

***

18 ವರ್ಷ ಮೇಲ್ಪಟ್ಟವರು ಈಗಾಗಲೇ ಲಸಿಕೆ ಪಡೆದಿದ್ದಾರೆ.. ಉಳಿದವರಿಗೆ ಚುಚ್ಚುಮದ್ದು ನೀಡುವ ಕಾರ್ಯ ಪ್ರಗತಿಯಲ್ಲಿದೆ
ಚಂದ್ರಕಾಂತ ಜೆ ಹಿಳ್ಳಿ, ಡಿಡಿಪಿಯು

***

ಜಿಲ್ಲೆಯ ಕೆಲ ಉರ್ದು ಶಾಲೆಗಳಲ್ಲಿ ಲಸಿಕೆ ನೀಡುವಿಕೆಗೆ ಸಮಸ್ಯೆಯಾಗಿದೆ. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಚುಚ್ಚುಮದ್ದು ತೆಗೆದುಕೊಳ್ಳಲು ಮನವೊಲಿಸಲಾಗುತ್ತಿದೆ
ಶಾಂತಗೌಡ ಪಾಟೀಲ, ಡಿಡಿಪಿಐ

***

ಇದುವರೆಗೆ ಶೇ 60ರಷ್ಟು ಲಸಿಕೆ ಗುರಿ ತಲುಪಲಾಗಿದೆ. ಇದೇ ಬುಧವಾರದವರೆಗೆ ಸಂಪೂರ್ಣ ಲಸಿಕಾಕರಣ ಮುಗಿಸುತ್ತೇವೆ
ಡಾ. ರಾಜಾ ವೆಂಕಪ್ಪನಾಯಕ, ಟಿಎಚ್‌ಒ, ಸುರಪುರ

***

3ನೇ ಅಲೆ ಆರಂಭ ಆಗಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಆಗುತ್ತಿದೆ. ಈಗ ಲಸಿಕೆ ನೀಡುತ್ತಿರುವುದು ಮಕ್ಕಳು ಮತ್ತು ಪಾಲಕರಲ್ಲಿ ನೆಮ್ಮದಿ ಮೂಡಿಸಿದೆ
ಭೀಮರಾಯ ಸಿಂಧಗೇರಿ, ವಿದ್ಯಾರ್ಥಿ ಪಾಲಕ, ಸುರಪುರ

***

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.