ವಡಗೇರಾ ಬಂದ್‌ ಯಶಸ್ವಿ

7
ವಡಗೇರಾ: ಇಲಾಖೆ ಕಚೇರಿ ಆರಂಭಕ್ಕೆ ಆಗ್ರಹ, ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು

ವಡಗೇರಾ ಬಂದ್‌ ಯಶಸ್ವಿ

Published:
Updated:
Deccan Herald

ಯಾದಗಿರಿ: ನೂತನ ತಾಲ್ಲೂಕು ವಡಗೇರಾದಲ್ಲಿ ವಿವಿಧ ಇಲಾಖೆಗಳ ತಾಲ್ಲೂಕುಮಟ್ಟದ ಕಚೇರಿಗಳು ಕಾರ್ಯಾರಂಭಿಸಿ ಸಾರ್ವಜನಿಕ ಸೇವೆ ಒದಗಿಸುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕರೆ ನೀಡಿದ್ದ ಬಂದ್‌ ಯಶಸ್ವಿಯಾಯಿತು.

ವಡಗೇರಾ ನೂತನ ತಾಲ್ಲೂಕು ಘೋಷಣೆಯಾಗಿ ವರ್ಷ ಎಂಟು ತಿಂಗಳು ಕಳೆದಿದೆ. ಆದರೆ, ಹಳೆಯ ಕಟ್ಟಡದಲ್ಲಿ ಕಂದಾಯ ಕಚೇರಿ ಹೊರತುಪಡಿಸಿದರೆ ಇದುವರೆಗೂ ಯಾವೊಂದು ಇಲಾಖೆ ಕಚೇರಿಗಳನ್ನು ಸರ್ಕಾರ ಆರಂಭಿಸಿಲ್ಲ. ಇದರಿಂದ ಜನರು ಮತ್ತೆ ಜಿಲ್ಲಾಕೇಂದ್ರದತ್ತ ನಿತ್ಯ ದೌಡಾಯಿಸುವಂತಾಗಿದ್ದು ಸಂಕಷ್ಟ ಪಡುತ್ತಿದ್ದಾರೆ. ಇಲಾಖೆ ಕಚೇರಿಗಳನ್ನೇ ತೆರೆಯಲು ಸರ್ಕಾರಕ್ಕೆ ಒಂದು ವರ್ಷ ಕಾಲಾವಧಿ ತೆಗೆದುಕೊಂಡರೆ ಅಭಿವೃದ್ಧಿ ಆರಂಭಿಸುವುದು ಯಾವಾಗ? ಎಂದು ದಸಂಸ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಕ್ರೋಶ ವ್ಯಕ್ತಪಡಿಸಿದರು.

ಬಂದ್‌ ತೀವ್ರಗೊಳಿಸಿದ ಪ್ರತಿಭಟನಾಕಾರರು ರಸ್ತೆತಡೆ ನಡೆಸಿದರು. ನಂತರ ಪಟ್ಟಣದಲ್ಲಿನ ಅಂಗಡಿಮುಂಗಟ್ಟುಗಳ ಕದ ಮುಚ್ಚಿಸಿದರು. ಇದರಿಂದ ಸಾರ್ವಜನಿಕರು ಬಂದ್‌ ಬಿಸಿ ಅನುಭವಿಸುವಂತಾಯಿತು.

‘ನೂತನ ತಾಲ್ಲೂಕುಗಳಲ್ಲಿ ಕಚೇರಿಗಳು ಆರಂಭಿಸಲು ಮತ್ತು ಕಚೇರಿಗಳಿಗೆ ಸಾಮಗ್ರಿ ಖರೀದಿಸಲು ಸರ್ಕಾರ ಮೊದಲ ಹಂತದಲ್ಲಿ ₹5 ಲಕ್ಷ ಬಿಡುಗಡೆ ಮಾಡಿದ್ದರೂ, ಜಿಲ್ಲಾಡಳಿತ ನೂತನ ತಾಲ್ಲೂಕು ಕೇಂದ್ರಗಳಿಗೆ ಅನುದಾನ ಒದಗಿಸಿಲ್ಲ. ಜಿಲ್ಲಾಧಿಕಾರಿ ನೂತನ ತಾಲ್ಲೂಕುಗಳ ಪರಿಸ್ಥಿತಿ ಅವಲೋಕಿಸುತ್ತಿಲ್ಲ. ಇದರಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ತಾಲ್ಲೂಕುಗಳು ಅಭಿವೃದ್ಧಿ ಹಿನ್ನಡೆ ಅನುಭವಿಸುಂತಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಮುಖ್ಯವಾಗಿ ತಾಲ್ಲೂಕು ಪಂಚಾಯಿತಿ ಕಚೇರಿ, ಕೃಷಿ ಸಹಾಯಕ ನಿರ್ದೇಶಕರ ಕಚೇರಿ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆಗಳನ್ನು ಪಟ್ಟಣದಲ್ಲಿ ತತಕ್ಷಣ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಕ್ರಮಕೈಗೊಳ್ಳಬೇಕು. ಮೂಲಸೌಕರ್ಯ ಒದಗಿಸಬೇಕು ಸಿಬ್ಬಂದಿಯನ್ನು ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.

ನಂತರ ವಡಗೇರಾ ತಹಶೀಲ್ದಾರ್ ಪ್ರಕಾಶ ಅವರಿಗೆ ಮನವಿ ಸಲ್ಲಿಸಿದರು.

ನಿಂಗಣ್ಣ ಮಳ್ಳಳ್ಳಿ, ಅಜೀಜ್ ಐಕೂರು, ಮಲ್ಲಿಕಾರ್ಜುನ ಆಶನಾಳ, ಜೆಟ್ಟೆಪ್ಪ ನಾಗರಾಳ, ತಿಪ್ಪಣ್ಣ ಶೆಳ್ಳಗಿ, ಮಾನಪ್ಪ ಶೆಳ್ಳಗಿ, ಭೀಮಣ್ಣ ಕೊಂಗಂಡಿ, ಮಲ್ಲಿಕಾರ್ಜುನ ಶಾಖನವರ, ಮಹೇಶ ಯಾದಗಿರಿ, ರಮೇಶ ಹುಂಡೇಕಲ್, ಗೌತಮ ಕ್ರಾಂತಿ, ಮರೆಪ್ಪ ಹಾಲಗೇರಿ, ಶಿವಶರಣ ವಡಗೇರಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !