ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಲಿಂಗಾಯತ ಮಹಾಸಭಾ ಪ್ರತಿಭಟನೆ

ಕೇಂದ್ರ ಒ‍ಬಿಸಿ ಪಟ್ಟಿಗೆ ವೀರಶೈವ ಲಿಂಗಾಯತರನ್ನು ಸೇರಿಸಲು ಆಗ್ರಹ
Last Updated 2 ಆಗಸ್ಟ್ 2022, 2:15 IST
ಅಕ್ಷರ ಗಾತ್ರ

ಯಾದಗಿರಿ: ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕದಿಂದ ಪ್ರತಿಭಟನೆ ಮಾಡಲಾಯಿತು.

ಶಾಸಕ ವೆಂಕಟರೆಡ್ಡಿ ಮುದ್ನಾಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಸಮುದಾಯದ ಮುಖಂಡರು, ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಶಾಸಕ ಮುದ್ನಾಳ, ರಾಜ್ಯದಲ್ಲಿ ಕಳೆದ 60 ವರ್ಷಗಳಿಂದ ವೀರಶೈವ ಲಿಂಗಾಯತ ಸಮುದಾಯವನ್ನು ಇತರೆ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದ್ದರೂ, ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಇದರಿಂದ ಕೇಂದ್ರ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳಿಂದ ಸಮುದಾಯ ವಂಚಿತವಾಗಿದೆ ಎಂದರು.

ವೀರಶೈವ ಲಿಂಗಾಯತ ಸಮುದಾಯ ಕೃಷಿ ಮತ್ತು ಕೃಷಿ ಆಧಾರಿತ ಕಸಬುಗಳನ್ನು ಅವಲಂಬಿಸಿದ್ದು, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗದ ಕಾರಣ ನಮ್ಮ ಸಮುದಾಯ ಜನರು ದಶಕಗಳಿಂದ ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಕೇಂದ್ರದ ನೇಮಕಾತಿ ಅವಕಾಶಗಳಿಂದ ವಂಚಿತವಾಗಿದ್ದಾರೆ ಎಂದರು.

ವೀರಶೈವ ಲಿಂಗಾಯತ 16 ಉಪ ಪಂಗಡಗಳು ಮಾತ್ರ ಕೇಂದ್ರದ ಪಟ್ಟಿಯಲ್ಲಿದ್ದು, ಸೌಲಭ್ಯ ಪಡೆಯುತ್ತಿದ್ದಾರೆ. ವೀರಶೈವ ಲಿಂಗಾಯತ ಸಮದಾಯವನ್ನು ಒಳಗೊಂಡಂತೆ ಎಲ್ಲ ಉಪಪಂಗಡಗಳಿಗೆ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವ ಮೂಲಕ ಸಮುದಾಯಕ್ಕೆ ಸೌಲಭ್ಯ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ 3ನೇ ಹಿಂದುಳಿದ ವರ್ಗಗಳ ಆಯೋಗದ ನ್ಯಾಯಮೂರ್ತಿ ಚಿನ್ನಪ್ಪರಡ್ಡಿ ವರದಿಯಂತೆ ರಾಜ್ಯ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಮತ್ತು ಈಗಾಗಲೇ ಕೇಂದ್ರದ ಒಬಿಸಿ ಪಟ್ಟಿಯಲ್ಲಿರುವ ಈ ಸಮುದಾಯಗಳಿಗಿಂತಲೂ ವೀರಶೈವ ಲಿಂಗಾಯತ ಸಮುದಾಯ ಹಿಂದುಳಿದಿದೆ. ಆದರೂ ಒಬಿಸಿಗೆ ಸೇರ್ಪಡೆ ಮಾಡದಿರುವುದು ಸೋಜಿಗದ ಸಂಗತಿ ಎಂದರು.

ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳನ್ನೂ ಒಳಗೊಂಡಂತೆ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವ ಮೂಲಕ ಸಮುದಾಯಕ್ಕೆ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕದ ಅಧ್ಯಕ್ಷ ಸೋಮಶೇಖರ ಮಣ್ಣೂರ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರ, ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅವಿನಾಶ ಜಗನ್ನಾಥ, ಯುಡಾ ಅಧ್ಯಕ್ಷ ರುದ್ರಗೌಡ ಪಾಟೀಲ, ಮುಖಂಡರಾದ ಮಹಾದೇವಪ್ಪ ಅಬ್ಬೆತುಮಕೂರು, ಅಯ್ಯಣ್ಣ ಹುಂಡೆಕರ್‌, ಶರಣಗೌಡ ಬಾಡಿಯಾಳ, ಸಿದ್ದು ಪಾಟೀಲ, ರಮೇಶ್ ದೊಡ್ಮನಿ, ಮಾಣಿಕರೆಡ್ಡಿ ಕುರುಕುಂದಿ, ಸನ್ನಿ ಗೌಡ, ಮಹೇಶ್ ಕುಮಾರ ಹಿರೇಮಠ ಇದ್ದರು.

***

ಹಳ್ಳಿಗಳಲ್ಲಿ ಶೇ 90ರಷ್ಟು ವೀರಶೈವ ಲಿಂಗಾಯತ ಸಮುದಾಯವರು ಬಿ‍ಪಿಎಲ್‌ಗಿಂತ ಕೆಳ ಸ್ಥರದಲ್ಲಿದ್ದಾರೆ. ಕೆಲವರಿಗೆ ಜಮೀನೂ ಇಲ್ಲ. ಹೀಗಾಗಿ ಒಬಿಸಿ ಪಟ್ಟಿಗೆ ಶಿಫಾರಸು ಮಾಡಿದರೆ ಅನುಕೂಲವಾಗಲಿದೆ
ವೆಂಕಟರೆಡ್ಡಿ ಮುದ್ನಾಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT