ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್–4 ವಾಹನ ನೋಂದಣಿ 31ಕ್ಕೆ ಕೊನೆ

ನೋಂದಣಿ ಮಾಡಿಕೊಳ್ಳದಿದ್ದರೆ ಕಾನೂನು ಕ್ರಮ: ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್‌ ಚವ್ಹಾಣ್‌
Last Updated 12 ಮಾರ್ಚ್ 2020, 10:09 IST
ಅಕ್ಷರ ಗಾತ್ರ

ಯಾದಗಿರಿ: ಭಾರತ್‌ ಸ್ಟೇಜ್‌ (ಬಿಎಸ್‌–4) ವಾಹನಗಳನ್ನು ನೋಂದಣಿ ಮಾಡಿಕೊಳ್ಳಲು ಇದೇ ಮಾರ್ಚ್ 31 ಕೊನೆಯ ದಿನ. ಅಷ್ಟರೊಳಗೆ ನೋಂದಾಯಿಸಿಕೊಳ್ಳದಿದ್ದರೆ ಅಂಥ ವಾಹನಗಳನ್ನು ವಶಪಡಿಸಿಕೊಂಡು ಗುಜರಿಗೆ ಹಾಕಲು ಸಾರಿಗೆ ಇಲಾಖೆಗೆ ಅಧಿಕಾರ ನೀಡಲಾಗಿದೆ.

ಹೊಸ ಮೋಟಾರ್ ವಾಹನ ಕಾಯ್ದೆಯಂತೆ ಏಪ್ರಿಲ್‌ 1ರಿಂದ ಬಿಎಸ್‌- 6 ವಾಹನಗಳನ್ನು ಚಾಲ್ತಿಗೆ ಬರಲಿವೆ. ಅದರಂತೆ ಮಾರ್ಚ್‌ 31ಕ್ಕೆ ಬಿಎಸ್‌- 4 ವಾಹನಗಳ ನೋಂದಣಿಗೆ ಗಡುವು ನೀಡಲಾಗಿದೆ. ಒಂದು ವೇಳೆ ನೋಂದಣಿ ಮಾಡಿಸದಿದ್ದರೆ ನೇರವಾಗಿ ನೋಂದಣಿ ಪ್ರಾಧಿಕಾರಗಳನ್ನೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಮಾರಾಟ, ನೋಂದಣಿ ಇಲ್ಲ

ಏಪ್ರಿಲ್ 1ರಿಂದ ದೇಶದಲ್ಲಿ ಭಾರತ್‌ ಸ್ಟೇಜ್‌– 4 ಮಾಪನದ ವಾಹನಗಳನ್ನು ಮಾರಾಟ ಅಥವಾ ನೋಂದಣಿ ಮಾಡುವಂತಿಲ್ಲ. ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ನೋಂದಣಿ ಪ್ರಾಧಿಕಾರಗಳೇ ಹೊಣೆಯಾಗುತ್ತವೆ ಮತ್ತು ನ್ಯಾಯಾಲಯ ಆದೇಶದ ಉಲ್ಲಂಘನೆ/ ನ್ಯಾಯಾಲಯ ನಿಂದನೆಗೆ ಗುರಿ ಆಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

‘ಜಿಲ್ಲೆಯಲ್ಲಿ ಇಲ್ಲಿಯವರೆಗೆ ಹಲವಾರು ವಾಹನ ಸವಾರರು ತಮ್ಮ ವಾಹನಗಳನ್ನು ನೋಂದಾಯಿಸಿಕೊಳ್ಳದೆ ಚಲಾಯಿಸುವುದು ಕಂಡು ಬಂದಿದೆ. ಹೀಗಾಗಿ ಕೊನೆಯ ಅವಕಾಶವಾಗಿ ವಾಹನಗಳನ್ನು ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್‌ ಚವ್ಹಾಣ್‌ ಹೇಳುತ್ತಾರೆ.

ಶೋರೂಂನಲ್ಲಿ ಆಫರ್

ಬೈಕ್ ಸೇರಿದಂತೆ ವಿವಿಧ ವಾಹನಗಳ ಶೋರೂಂಗಳಲ್ಲಿ ಬಿಎಸ್‌– 4 ವಾಹನಗಳನ್ನು ಮಾರಾಟ ಮಾಡಲು ಆಫರ್‌ ನೀಡಲಾಗುತ್ತಿದೆ.ಬಜಾಜ್ ಬೈಕ್ ಕಂಪನಿಯಪಲ್ಸರ್ 125, ಸಿಟಿ 110, 150 ನಿಯೋನ್ ಬೈಕ್‌ಗಳಿಗೆ ಮಾರ್ಚ್‌ 31ರೊಳಗೆ ಖರೀದಿಸಿದರೆ ₹3000 ರಿಯಾಯ್ತಿ ಆಫರ್ ಪ್ರಕಟಿಸಲಾಗಿದೆ. ಹಲವಾರು ಶೋರೂಂಗಳು ಸಾಲ ಮೇಳವನ್ನು ಆಯೋಜಿಸಿವೆ.

ಮಾಲೀಕರ ಆತಂಕ

ಗಡುವು ಮೀರಿ ವಾಹನಗಳನ್ನು ಮಾರಾಟ ಮಾಡುವಂತಿಲ್ಲ. ಹೀಗಾಗಿ ಬಿಎಸ್‌–4 ವಾಹನಗಳನ್ನು ಮಾರಾಟ ಮಾಡುವ ಒತ್ತಡಕ್ಕೆ ಶೋರೂಂಗಳ ಮಾಲೀಕರು ಸಿಲುಕಿದ್ದಾರೆ.

‘ಶೋರೂಂನಲ್ಲಿಹಲವಾರು ವಾಹನಗಳು ಇವೆ. ಕಳೆದ ಬಾರಿಯಂತೆ ಗ್ರಾಹಕರು ಕೊನೆ ದಿನಗಳವರೆಗೆ ಕಾಯುತ್ತಾರೆ. ಹೀಗಾಗಿ ನಾವು ಗ್ರಾಹಕರನ್ನುಸೆಳೆಯಲು ವಿವಿಧ ರಿಯಾಯ್ತಿಗಳನ್ನು ಘೋಷಿಸಿದ್ದೇವೆ’ ಎನ್ನುತ್ತಾರೆಬಜಾಜ್ ಮೋಟಾರ್ ಸೈಕಲ್ ಮ್ಯಾನೇಜರ್ ಸಿದ್ದಾರ್ಥ ರೆಡ್ಡಿ.

ಏನಿದುಬಿಎಸ್‌– 6

ಭಾರತ್‌ ಸ್ಟೇಜ್‌– 6 (ಬಿಎಸ್‌) ಇದು ಬಿಎಸ್‌ 4 ನಂತೆ ಹೆಚ್ಚಿನ ಹೊಗೆ ಬಿಡುವುದಿಲ್ಲ. ಪರಿಸರ ಮಾಲಿನ್ಯ ಕಡಿಮೆ ಮಾಡುವ ಸಾಮರ್ಥ್ಯವನ್ನು ಇದರಲ್ಲಿ ಅಳವಡಿಸಲಾಗಿದೆ. ಎಂಜಿನ್‌ ಒಳಗಡೆ ಸುಟ್ಟು ಹೊಗೆ ಪ್ರಮಾಣ ಕಡಿಮೆ ಮಾಡಲಿದೆ. ಬಿಎಸ್‌–6 ಶೇಕಡ 51ರಷ್ಟು ಮಾಲಿನ್ಯ ಕಡಿಮೆ ಮಾಡುತ್ತದೆ. ವಿದೇಶಗಳಲ್ಲಿ ಈಗಾಗಲೇ ಬಿಎಸ್‌–6ಚಾಲ್ತಿಯಲ್ಲಿದೆ. ಹೀಗಾಗಿ ದೇಶದಲ್ಲಿ ಬಿಎಸ್‌–5ರ ಬದಲಾಗಿ ನೇರವಾಗಿ ಬಿಎಸ್‌– 6 ಕ್ಕೆ ನೆಗೆದಿದೆ. ಇದು ಪರಿಸರ ಮಾಲಿನ್ಯ ತಗ್ಗಲು ಸಹಾಯಕ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

2005ರಿಂದ 2010ವರೆಗೆ ಬಿಎಸ್‌–2,2010ರಿಂದ 2017 ವರೆಗೆ ಬಿಎಸ್‌–3,2017ರಿಂದ 2020ವರೆಗೆ ಬಿಎಸ್‌–4 ಇದೆ ಎಂಬುದು ಸಾರಿಗೆ ಅಧಿಕಾರಿಗಳ ಮಾಹಿತಿ.

ವಾಹನ ನೋಂದಣಿ

ಯಾದಗಿರಿಯಲ್ಲಿ 2017–18ರಲ್ಲಿ 1424, 2018–19ರಲ್ಲಿ 1712, ಏಪ್ರಿಲ್‌ 1, 2019ರಿಂದ 6 ಮಾರ್ಚ್‌ 2020ರವರೆಗೆ 1649 ವಾಹನಗಳು ನೋಂದಣಿ ಆಗಿವೆ.ಏಪ್ರಿಲ್‌ 1, 2019ರಿಂದ ಮಾರ್ಚ್‌6, 2020ರವರೆಗೆ 10,873ಬೈಕ್‌ಗಳು ಹಾಗೂಏಪ್ರಿಲ್‌ 1, 2019ರಿಂದ ಮಾರ್ಚ್‌6, 2020ರವರೆಗೆ 5,81ಕಾರುಆರ್‌ಟಿಒದಲ್ಲಿ ನೋಂದಣಿ ಆಗಿವೆ.ತಿಂಗಳಿಗೆ ಅಂದಾಜು ದ್ವಿಚಕ್ರ ವಾಹನ 1200, ಕಾರು 40, ಇತರ ಸಾರಿಗೆ ವಾಹನಗಳು 30 ನೋಂದಣಿ ಆಗುತ್ತವೆಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಾಹಿತಿ
ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT