ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನ ಹೊದ್ದಿದ್ದ ಶಾಲೆಗಳಿಗೆ ಈಗ ಜೀವಕಳೆ

ಮುಂಜಾಗ್ರತಾ ಕ್ರಮಗಳೊಡನೆ ಜಿಲ್ಲೆಯಲ್ಲಿ ತರಗತಿಗಳು ಆರಂಭ, ಕೆಲವು ಪ್ರದೇಶಗಳಲ್ಲಿ ಉತ್ತಮ ಸ್ಪಂದನೆ: ಇನ್ನೂ ಕೆಲ ಕಡೆ ಬಾರದ ವಿದ್ಯಾರ್ಥಿಗಳು
Last Updated 2 ಜನವರಿ 2021, 3:59 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್‌ ಕಾರಣ ಬಂದ್‌ ಆಗಿ ಮೌನ ಹೊದ್ದು ಮಲಗಿದ್ದ ಶಾಲಾ–ಕಾಲೇಜ್‌ ಆವರಣಗಳಿಗೆ ಈಗ ಜೀವಕಳೆ ಬಂದಿದೆ.

ಜನವರಿ 01 ರಿಂದ ಶಾಲಾ–ಕಾಲೇಜ್‌ಗಳನ್ನು ಆರಂಭಿಸಲು ಸರ್ಕಾರ ಅವಕಾಶ ನೀಡಿತ್ತು. ಆದ್ದರಿಂದ ಜಿಲ್ಲೆಯ ವಿವಿಧೆಡೆ ಶುಕ್ರವಾರ ಶಾಲಾ–ಕಾಲೇಜ್‌ಗಳ ಬಾಗಿಲು ತೆರೆಯಲಾಯಿತು.

ಕಲಬುರ್ಗಿ ವಿಭಾಗದ ಹೆಚ್ಚುವರಿ ಶಿಕ್ಷಣ ಆಯುಕ್ತ ನಳಿನ್ ಅತುಲ್ ಅವರು ಜಿಲ್ಲೆಯಲ್ಲಿ ಶಾಲಾ ಮುಖ್ಯ ಶಿಕ್ಷಕರೊಡನೆ ತರಗತಿ ಆರಂಭಿಸುವ ಕುರಿತು ಬುಧವಾರ ಪೂರ್ವ ಸಿದ್ಧತಾ ಸಭೆ ನಡೆಸಿದ್ದರು. ಶಾಲಾ–ಕಾಲೇಜ್‌ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ನಿರ್ದೇಶನ ನೀಡಿದ್ದರು.

ಶುಕ್ರವಾರ ಜಿಲ್ಲೆಯಲ್ಲಿ ಶಾಲೆಗಳು ಆರಂಭವಾಗಿವೆ. ಬುಧುವಾರದ ವೇಳೆಗೆ ಶಾಲೆಗಳ ಎಲ್ಲ ಕೊಠಡಿಗಳಿಗೆ ಸ್ಯಾನಿಟೈಸ್‌ ಮಾಡಿಸಿ ಸ್ವಚ್ಛಗೊಳಿಸಲಾಗಿತ್ತು.

ಮೊದಲ ದಿನ ಕೆಲ ವಿದ್ಯಾರ್ಥಿಗಳು ಮಾತ್ರ ಮಾಸ್ಕ್ ಧರಿಸಿ ಶಾಲೆಗೆ ಉತ್ಸುಕರಾಗಿ ಹಾಜರಾಗಿದ್ದರು. ಶಿಕ್ಷಕರು ಹಾಗೂ ಸಿಬ್ಬಂದಿ ಅವರನ್ನು ಬರ ಮಾಡಿಕೊಂಡರು. ತರಗತಿ ಕೊಠಡಿಗಳಿಗೆ ಕರೆದುಕೊಂಡು ಹೋಗಿ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಅವರನ್ನು ಕೂಡಿಸಿದರು. ಸ್ನೇಹಿತರಿಗೆ ಜ್ವರದ ಲಕ್ಷಣಗಳು ಕಂಡುಬಂದರೆ ತಿಳಿಸಬೇಕು ಎಂದು ಹೇಳಿದರು.

ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಸ್ವಾಗತ

ಗುರುಮಠಕಲ್: ತಾಲ್ಲೂಕು ವ್ಯಾಪ್ತಿಯಲ್ಲಿ ಶಾಲಾ ಕೊಠಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಲಾಗಿತ್ತು.

ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳಲು ಶಿಕ್ಷಕರು ಉತ್ಸುಕರಾಗಿ ಬೆಳಿಗ್ಗೆ ಬೇಗನೆ ಬಂದು ಅವರಿಗಾಗಿ ಕಾಯುತ್ತಿದ್ದರು.

ತಾಲ್ಲೂಕಿನ ಚಪೆಟ್ಲಾ ಹಾಗೂ ಯದ್ಲಾಪುರ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸಿಆರ್‌ಪಿ ಚಂದ್ರಕಾಂತ ಭೇಟಿ ನೀಡಿ ವಿದ್ಯಾರ್ಥಿಗಳೊಡನೆ ಮಾತನಾಡಿದರು.

ಶಾಲಾ ಅವಧಿಯಲ್ಲಿ ಸ್ನೇಹಿತರೊಡನೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಪ್ರತ್ಯೇಕವಾಗಿ ಕುಡಿಯಲು ಬಿಸಿ ನೀರು ತಂದುಕೊಳ್ಳಬೇಕು.

ಸ್ವಚ್ಛತೆಗೆ ಆದ್ಯತೆ ನೀಡಬೇಕು ಹಾಗೂ ಮಾಸ್ಕ್ ಧರಿಸಿ ಶಾಲೆಗೆ ಬರುವುದು ಬಿಟ್ಟರೆ ಉಳಿದಂತೆ ನಿಮ್ಮ ಶಾಲೆಯ ವಾತಾವರಣ ಎಂದಿನಂತೆ ಇರಲಿದೆ. ಭಯಪಡುವ ಅವಶ್ಯಕತೆ ಇಲ್ಲ. ಆದರೆ, ಎಲ್ಲರೂ ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸಿ ಮುಂಜಾಗ್ರತೆಯಿಂದ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಮುಖ್ಯಶಿಕ್ಷಕ ಸೇಡಂಕರ್, ದೈಹಿಕ ಶಿಕ್ಷಣ ಶಿಕ್ಷಕ ಶಿವರೆಡ್ಡಿ, ರಾಜೇಶ್ವರಿ, ಕವಿತಾ, ಸಂಜೀವಕುಮಾರ, ವಿಶ್ವಾರಾಧ್ಯ, ಯಂಕಟಮ್ಮ, ಸೈಯದ ರಫಿ, ರಾಜು ಹಾಗೂ ಮಹಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT