ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯ ವಿಜಯದಶಮಿ

ಬನ್ನಿ ಗಿಡದವರೆಗೆ ದೇವಿ ಮೂರ್ತಿ ಮೆರವಣಿಗೆ, ಪರಸ್ಪರ ಬನ್ನಿ ವಿತರಣೆ
Last Updated 5 ಅಕ್ಟೋಬರ್ 2022, 15:40 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿಜಯದಶಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಬುಧವಾರ ಆಚರಿಸಲಾಯಿತು. ಆಯುಧ ಪೂಜೆ ಅಂಗವಾಗಿ ಮಂಗಳವಾರದಂದು ತಮ್ಮ ವಾಹನಗಳಿಗೆ ಆಯಾ ವೃತ್ತಿಯವರು ‍ಪೂಜೆಗಳನ್ನು ನಡೆಸಿದರು.

ನಗರದ ವಿವಿಧೆಡೆನವರಾತ್ರಿ ಹಬ್ಬದ ಅಂಗವಾಗಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ರೈಲ್ವೆ ಸ್ಟೇಷನ್ ಏರಿಯಾ, ಡಾ. ಬಾಬು ಜಗಜೀವನ ರಾಂ ನಗರ, ಶಹಾಪುರ ಪೇಟ, ಬೋವಿವಾಡ ನಗರ ಸೇರಿದಂತೆ ಕೋಟೆ ಬಳಿ ಭುವನೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು.

ಸ್ಟೇಷನ್ ಏರಿಯಾದ ಶಿವಾಜಿನಗರದ ಬಳಿ ಕಳೆದ ಹಲವಾರು ವರ್ಷಗಳಿಂದ ಸರ್ಕಾರದ ನೆರವಿಲ್ಲದೆದಸರಾಆಚರಿಸಲಾಗುತ್ತಿದೆ. ಶಾಸ್ತ್ರಿ ವೃತ್ತದಿಂದ ದೇವಸ್ಥಾನದ ವರೆಗೆ ವಿವಿಧ ಬಣ್ಣದ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ದಾಂಡಿಯಾ ನೃತ್ಯ ಆಕರ್ಷಣೆ: ದಸರಾಹಬ್ಬದ ಅಂಗವಾಗಿ ದಾಂಡಿಯಾ ನೃತ್ಯ ಆಕರ್ಷಣೆಯಾಗಿತ್ತು. ದೇವಿ ಪ್ರತಿಷ್ಠಾಪಿಸಿದ ದಿನದಿಂದ 9 ದಿನಗಳ ಕಾಲ ರಾತ್ರಿ 9 ಗಂಟೆಯಿಂದ 12ರ ತನಕ ನೃತ್ಯ ನಡೆಯಿತು. ಯುವತಿಯರು, ಮಹಿಳೆಯರು ನೃತ್ಯದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಗಾಂಧಿ ನಗರ ತಾಂಡಾ, ಮುದ್ನಾಳ ಲೇಔಟ್‌, ಹೊಸಳ್ಳಿ ಕ್ರಾಸ್ ಸೇರಿದಂತೆ ನಗರದ ವಿವಿಧೆಡೆ ಈ ಬಾರಿ ದಾಂಡಿಯಾ ನೃತ್ಯ ಅಯೋಜಿಸಲಾಗಿತ್ತು.

ವಿಜಯದಶಮಿ ದಿನ ರಥದಲ್ಲಿ ದೇವಿ ಮೂರ್ತಿಯನ್ನು ಭವಾನಿ ಮಂದಿರದಿಂದ ಕೋಟೆ ಬಳಿ ಇರುವ ಬನ್ನಿ ಗಿಡದವರೆಗೂ ಮೆರವಣಿಗೆ ನಡೆಸಲಾಯಿತು. ನಂತರ ಬನ್ನಿ ಗಿಡದ ಬಳಿ ಬನ್ನಿ ಮುಡಿದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ 500ಕ್ಕೂ ಹೆಚ್ಚು ಭಕ್ತರು ತುಳಜಾಪುರದ ತುಳಜಾಭವಾನಿ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ತೆರಳಿದರು.

‘9 ದಿನಗಳವರೆಗೆ ದೇವಿಯನ್ನು ಪ್ರತಿಷ್ಠಾಪಿಸಿ ವಿಜಯದಶಮಿ ದಿನ ಪೂಜೆ, ವಿಜೃಂಭಣೆಯಿಂದ ದೇವಿ ಮೆರವಣಿಗೆ ಮಾಡಲಾಗುತ್ತದೆ. ಕೆಲ ಕಡೆ ದೇವಿ ಮೂರ್ತಿಯನ್ನು ವಿಸರ್ಜನೆ ಮಾಡುತ್ತಾರೆ. ಆದರೆ, ನಾವು ವಿಸರ್ಜನೆ ಮಾಡುವುದಿಲ್ಲ. ಮೂರ್ತಿ ಹಳೆಯಾದದರೆ ಮಾತ್ರ ಅದನ್ನು ಬದಲಾಯಿಸುತ್ತೇವೆ’ ಎಂದು ದೇವಿ ಭಕ್ತರಾದ ನಾರಾಯಣ ರಾವ್ ಚವಾಣ್, ರಘುನಾಥ ಚವಾಣ್‌ ಹೇಳುತ್ತಾರೆ.

ಭುವನೇಶ್ವರಿ ಬೆಟ್ಟ: ನಗರದ ಕೋಟೆ ಪ್ರದೇಶದಲ್ಲಿಭುವನೇಶ್ವರಿ ದೇವಿ ಬೆಟ್ಟದಲ್ಲಿದಸರಾಹಬ್ಬದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು. ನವರಾತ್ರಿ ಅಂಗವಾಗಿ ತತ್ವಪದ ಗಾಯನ, ವಚನ ಗಾಯನ, ಜಾನಪದ ಗಾಯನ, ಭಕ್ತಿಗೀತೆಗಳ ಗಾಯನ, ಮಕ್ಕಳ ನೃತ್ಯ ನವರಾತ್ರಿ ವೈಭವ ಹಮ್ಮಿಕೊಳ್ಳಲಾಗಿತ್ತು.

ಆಯುಧ ಪೂಜೆ: ನವರಾತ್ರಿ ಅಂಗವಾಗಿ ಮಂಗಳವಾರ ಆಯುಧ ಪೂಜೆ ನಡೆಯಿತು. ಬೆಳಿಗ್ಗೆಯಿಂದಲೇ ಆಯಾ ವೃತ್ತಿಯವರು ತಮ್ಮ ಕಾಯಕಕ್ಕೆ ಬಳಸುವ ಸಾಮಗ್ರಿಯನ್ನು ಸ್ವಚ್ಛ ಮಾಡಿ ‍ಪೂಜೆ ಸಲ್ಲಿಸಿದರು.

ವಾಹನ ಸವಾರರು ಕುಂಬಳಕಾಯಿ ಒಡೆದು, ವಾಹನಗಳಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಿದ್ದರು. ಆಯುಧ ಪೂಜೆ ಅಂಗವಾಗಿ ಹಲವರು ಮುಂಗಡ ಬುಕ್ಕಿಂಗ್‌ ಮಾಡಿದ ವಾಹನಗಳನ್ನು ಖರೀದಿಸಿ ಪೂಜೆ ಮಾಡಿ ಸಂಭ್ರಮಿಸಿದರು. ಆಯುಧ ಪೂಜೆ ದಿನ ವಿವಿಧೆಡೆ ಧರ್ಮ ಸಭೆ, ಪುರಾಣ ಮಂಗಲ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT