ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಶಿವಾಜಿ ಜಯಂತಿ ಮೆರವಣಿಗೆಗೆ ಪೊಲೀಸ್‌ ಕಣ್ಗಾವಲು

Last Updated 18 ಮೇ 2018, 12:04 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಶಿವಾಜಿ ಜಯಂತಿ ಉತ್ಸವ ಮಹಾಮಂಡಳದವರು ಇದೇ 19ರಂದು ಸಂಜೆ 4ರಿಂದ ಶಿವಾಜಿ ಜಯಂತಿ ಮೆರವಣಿಗೆ ಹಮ್ಮಿಕೊಂಡಿದ್ದು, ಭದ್ರತೆಗಾಗಿ 2300ಕ್ಕೂ ಹೆಚ್ಚಿನ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ ತಿಳಿಸಿದರು.

‘ಮೇ 20ರ ಬೆಳಿಗ್ಗೆ 8ರವರೆಗೆ ಮೆರವಣಿಗೆ ನಡೆಯಲಿದೆ. ಆದಷ್ಟು ಬೇಗ ಪೂರ್ಣಗೊಳಿಸುವಂತೆ ಆಯೋಜಕರಿಗೆ ಸಭೆ ನಡೆಸಿ ಸೂಚಿಸಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ನರಗುಂದಕರ ಭಾವೆ ಚೌಕದಿಂದ ಮೆರವಣಿಗೆ ಪ್ರಾರಂಭಗೊಳ್ಳಲಿದೆ. ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ್‌ ಗಲ್ಲಿ, ಟಿಳಕಚೌಕ, ಹೇಮು ಕಾಲೊನಿ ಚೌಕ, ಶನಿಮಂದಿರ, ಕಪಿಲೇಶ್ವರ ಮೇಲ್ಸೇತುವೆ ಮೂಲಕ ಕಪಿಲೇಶ್ವರ ಮಂದಿರದ ಬಳಿ ಮುಕ್ತಾಯವಾಗಲಿದೆ. ಇಬ್ಬರು ಡಿಸಿಪಿ, 15 ಎಸಿಪಿ, 36 ಇನ್‌ಸ್ಪೆಕ್ಟರ್‌, 59 ಪಿಎಸ್‌ಐ, 155 ಎಎಸ್‌ಐ, 945 ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌, 600 ಗೃಹರಕ್ಷಕ ಸಿಬ್ಬಂದಿ, 12 ಕೆಎಸ್‌ಆರ್‌ಪಿ ಪಡೆಗಳು ಹಾಗೂ 6 ಸಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ವಿವರಿಸಿದರು.

ಡಾಲ್ಬಿ ಬಳಸಿದರೆ ಕ್ರಮ: ‘ಭಾರಿ ಶಬ್ದಮಾಲಿನ್ಯ ಉಂಟು ಮಾಡುವ ಡಾಲ್ಬಿ/ಡಿಜೆ ಸೌಂಡ್‌ ಸಿಸ್ಟಮ್‌ಗಳನ್ನು ಬಳಸುವುದನ್ನು, ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ತಾಲ್ಲೂಕಿನಾದ್ಯಂತ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೇ 19ರ ಸಂಜೆ 6ರಿಂದ 20ರ ಮಧ್ಯಾಹ್ನ 1ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಲ್ಲ ರೀತಿಯ ಮದ್ಯದ ಅಂಗಡಿಗಳನ್ನು ಮುಚ್ಚಬೇಕು. ನಗರದಲ್ಲಿ ಶಾಂತಿ ಕಾಪಾಡಲು ಸಹಕಾರ ನೀಡಬೇಕು’ ಎಂದು ಹೇಳಿದರು.

‘ವಿಧಾನಸಭೆ ಚುನಾವಣೆ ಮತ ಎಣಿಕೆಯ ದಿನದಂದು ನಿಷೇಧಾಜ್ಞೆ ನಡುವೆಯೂ ಮೆರವಣಿಗೆ ನಡೆದಿದೆ. ಇದರಿಂದ ಪಾಟೀಲ ಗಲ್ಲಿಯಲ್ಲಿ ಕಲ್ಲು ತೂರಾಟ ನಡೆದಿತ್ತು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ ಮಾರ್ಕೆಟ್‌ ಠಾಣೆ ಇನ್‌ಸ್ಪೆಕ್ಟರ್‌ ಅಮಾನತು ಮಾಡಲಾಗಿದೆ. ಘಟನೆಯ ಸಂಪೂರ್ಣ ವರದಿ ಪಡೆಯಲಾಗುವುದು. ಹಿರಿಯ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದರೆ, ಅವರ ವಿರುದ್ಧವೂ ಶಿಸ್ತುಕ್ರಮ ಜರುಗಿಸಲಾಗುವುದು. ಕಲ್ಲು ತೂರಾಟ ಘಟನೆ ಕುರಿತಂತೆ ಈಗಾಗಲೇ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಕೆಲವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

‘ಕೆಲವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪಟ್ಟಿ ತಯಾರಿಸಲಾಗಿದೆ’ ಎಂದರು. ಎಷ್ಟು ಮಂದಿ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬಿತ್ಯಾದಿ ಮಾಹಿತಿ ನೀಡಲು ನಿರಾಕರಿಸಿದರು. ಡಿಸಿಪಿ ಸೀಮಾ ಲಾಟ್ಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT