ಗುರುವಾರ , ಜೂನ್ 17, 2021
27 °C
ಕೋವಿಡ್‌ ಚುಚ್ಚುಮದ್ದುಗಾಗಿ ತಿರುಗಾಡಿಸುವ ವೈದ್ಯರು; ಸಾರ್ವಜನಿಕರ ಆರೋಪ

ಯಾದಗಿರಿಯಲ್ಲಿ ಲಸಿಕೆಗಾಗಿ ಆಸ್ಪತ್ರೆಗಳಿಗೆ ಅಲೆದಾಟ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಈಗ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ‍ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡುವ ಸ್ಥಿತಿ ಸಾರ್ವಜನಿಕರಿದ್ದಾಗಿದೆ.

53 ಪ್ರಾಥಮಿಕ ಆರೋ ಗ್ಯ ಕೇಂ ದ್ರ ಮ ತ್ತು ಲ ಸಿ ಕೆ ಗಾಗಿ ಆಯ್ದ ಆಸ್ ಪ‍ತ್ರೆ ಗಳಲ್ಲಿ ಚುಚ್ಚು ಮದ್ದು ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಿದ್ದರೂ ಇದು ಕಾರ್ಯರೂಪಕ್ಕೆ ಬಂದಿಲ್ಲ. 

ಮೊದಲ ಬಾರಿಗೆ ಕೋವ್ಯಾಕ್ಸಿನ್‌ ಲಸಿಕೆ ಹಾಕಿಸಿಕೊಂಡವರು ಅದೇ ಲಸಿಕೆಯನ್ನು ಎರಡನೇ ಹಂತದಲ್ಲಿಯೂ ಹಾಕಿಸಿಕೊಳ್ಳಬೇಕು. ಆದರೆ, ಇದು ಕೊರತೆಯಾಗಿದ್ದರಿಂದ ಸಾರ್ವಜನಿಕರು ಅಲೆದಾಡುವುದು ತಪ್ಪಿಲ್ಲ.

ನಗರದಲ್ಲಿ ಹಳೆ ಆಸ್ಪತ್ರೆ, ರಾಟಿ ಭವನ ಮತ್ತು ಬೀಡಿ ಕಾರ್ಮಿಕ ಇಲಾಖೆ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಆದರೆ, ಮೊದಲ ಹಂತದ ಲಸಿಕೆ ಪಡೆದವರು ಮಾತ್ರ ಅದೇ ಚುಚ್ಚುಮದ್ದು ಪಡೆಯಲು ಆಗುತ್ತಿಲ್ಲ. ಇದರಿಂದ ವೈದ್ಯರ ಜೊತೆಗೆ ಸಾರ್ವಜನಿಕರು ಸಣ್ಣಮಟ್ಟದ ಮಾತುಕತೆಗಳು ನಡೆದಿವೆ.

‘ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಲಸಿಕೆ ಪಡೆಯಲು ನಿಂತರೆ ನಮ್ಮ ಸರದಿ ಬರುವುದರೊಳಗೆ ಅರ್ಧಗಂಟೆಯಿಂದ 1 ಗಂಟೆಯಾಗುತ್ತದೆ. ಆಗ ಅಲ್ಲಿನವರು ಇಲ್ಲಿ ಲಸಿಕೆ ನೀಡುತ್ತಿಲ್ಲ. ಹಳೆ ಆಸ್ಪತ್ರೆಗೆ ಹೋಗಿ ಎನ್ನುತ್ತಾರೆ. ಮೊದಲೇ ಲಾಕ್‌ಡೌನ್‌ ಇದ್ದು, 10 ಗಂಟೆ ನಂತರ ವಾಹನ ಸಂಚಾರಕ್ಕೆ ಅನುಮತಿ ಇಲ್ಲ. ಜೊತೆಗೆ ಆಟೊ, ನಗರ ಸಾರಿಗೆ ವಾಹನಗಳು ಇಲ್ಲ. ಲಸಿಕೆಗಾಗಿ ಅಲೆದಾಡುವಂತೆ ಮಾಡುವುದು ಎಷ್ಟು ಸರಿ ಎಂದು’ ನಗರ ನಿವಾಸಿ ರಮೇಶ, ಜಗನ್ನಾಥ, ಮಲ್ಲಯ್ಯ ಪೂಜಾರಿ ಪ್ರಶ್ನಿಸುತ್ತಾರೆ.

‘ಲಸಿಕೆ ಪೂರೈಕೆ ಕಡಿಮೆಯಾಗಿದ್ದರಿಂದ ಮೊದಲ ಹಂತದಲ್ಲಿ ನೀಡುವ ಲಸಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಈಗ ಎರಡನೇ ಹಂತದಲ್ಲಿ ನೀಡುವವರಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಜೊತೆಗೆ 3ನೇ ಅಲೆ ತಡೆಯಲು ಎರಡನೇ ಹಂತದ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಇವರಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮೂರು ದಿನಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ 1,200 ಲಸಿಕೆ ನೀಡಲಾಗಿದೆ. ಈಗ ಜಿಲ್ಲೆಯಲ್ಲಿ 2,000 ಲಸಿಕೆ ಲಭ್ಯವಿದೆ. ಶುಕ್ರವಾರ, ಶನಿವಾರ ಮತ್ತಷ್ಟು ಲಸಿಕೆ ಬರುವ ಸಾಧ್ಯತೆ ಇದೆ’ ಎನ್ನುತ್ತಾರೆ ಆರ್‌ಸಿಎಚ್‌ಒ ಡಾ.ಸೂರ್ಯಪ್ರಕಾಶ ಕಂದಕೂರ.

‘ಜಿಲ್ಲೆಯಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಶೇ 90ರಷ್ಟು ಜನರು ಪಡೆದಿದ್ದಾರೆ. ಶೇ 10ರಷ್ಟು ಮಾತ್ರ ಪಡೆದಿದ್ದಾರೆ. ಮೊದಲು ಯಾವುದನ್ನು ತೆಗೆದುಕೊಂಡಿರುತ್ತಾರೊ ಅದನ್ನೇ ತೆಗೆದುಕೊಂಡರೆ ಪರಿಣಾಮಕಾರಿ. ಆದರೆ, ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಪೂರೈಕೆ ಕೊರತೆ ಇದೆ’ ಎನ್ನುತ್ತಾರೆ ಅವರು.

‘ಶೇ 60ರಿಂದ 70 ರಷ್ಟು ಜನರು ಲಸಿಕೆ ಪಡೆದರೆ ಕೋವಿಡ್‌ ಎದುರಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಎರಡನೇ ಡೋಸ್‌ ಪಡೆಯಲು ಪ್ರೇರಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

***

ಲಸಿಕೆ ಕೊರತೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಚುಚ್ಚುಮದ್ದು ನೀಡಲು ಆಗುತ್ತಿಲ್ಲ. ಮೊದಲ ಹಂತದ ಡೋಸ್‌ ಸಂಪೂರ್ಣ ನಿಲ್ಲಿಸಿದ್ದು, ಎರಡನೇ ಡೋಸ್‌ ಪಡೆಯುವವರಿಗೆ ಆದ್ಯತೆ ನೀಡಲಾಗುತ್ತಿದೆ
- ಡಾ.ಇಂದುಮತಿ ಪಾಟೀಲ, ಡಿಎಚ್‌ಒ

***

18 ವರ್ಷ ಮೇಲ್ಪ‍ಟ್ಟ ಎಲ್ಲರಿಗೂ ಜಿಲ್ಲೆಯಲ್ಲಿ ಲಸಿಕೆ ನೀಡಲು ಗುರಿ ಹೊಂದಲಾಗಿದೆ. ಈಗಾಗಲೇ 1.68 ಲಕ್ಷ ಜನರಿಗೆ ಚುಚ್ಚುಮದ್ದು ನೀಡಲಾಗಿದೆ
- ಡಾ.ಸೂರ್ಯಪ್ರಕಾಶ ಕಂದಕೂರ, ಆರ್‌ಸಿಎಚ್‌ಒ

***

ಮೊದಲು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿತ್ತು. ಈಗ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದೆಂದು ಹೇಳಿದೆ. ಆದರೆ, ಲಸಿಕೆ ದಾಸ್ತನು ಮಾಡುವುದರಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ
- ಅಭಿಷೇಕ ಆರ್‌ ದಾಸನಕೇರಿ, ಯಾದಗಿರಿ ನಿವಾಸಿ

 

ಜಿಲ್ಲೆಯ ಅಂಕಿ ಅಂಶ

45 ವರ್ಷ ಮೇಲ್ಪಟ್ಟವರು; 2,85,542
18 ವರ್ಷ ಮೇಲ್ಪಟ್ಟವರು;5,86,764
ಒಟ್ಟು;8,69,306
ಆಧಾರ: ಆರೋಗ್ಯ ಇಲಾಖೆ

ಕೋವಿಡ್‌ ಅಂಕಿ ಅಂಶ

ಒಟ್ಟು ಸೋಂಕಿತರು; 21,720
ಸಕ್ರಿಯ ಪ್ರಕರಣ:6,920
ಗುಣಮುಖ ಆದವರು;14,673
ಒಟ್ಟು ಸಾವು;127
ದಿನದ ಏರಿಕೆ
ಹೊಸ ಪ್ರಕರಣ;675
ಗುಣಮುಖ;309
ಸಾವು;5
ಆಧಾರ: ಆರೋಗ್ಯ ಇಲಾಖೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು