ಬುಧವಾರ, ಜನವರಿ 22, 2020
25 °C

ಸಚಿವರು ವಾಸ್ತವ್ಯ ಮಾಡಿದರೂ ಬಾರದ ವಾರ್ಡನ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ತಾಲ್ಲೂಕಿನ ಬಂದಳ್ಳಿಯ ಅಲ್ಪಸಂಖ್ಯಾತರ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಿದರೂ ಅಲ್ಲಿಗೆ ಬಾರದ ವಾರ್ಡನ್‌ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಅಲ್ಪ ಸಂಖ್ಯಾತರ ಕಲ್ಯಾಣ ಖಾತೆಯನ್ನೂ ಹೊಂದಿರುವ ಸಚಿವರು ಗುರುವಾರ ರಾತ್ರಿ ಅನಿರೀಕ್ಷಿತವಾಗಿ ವಸತಿ ನಿಲಯಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಅವರೊಂದಿಗೆ ರಾತ್ರಿ ಊಟ ಮಾಡಿದರು. 

ಸಚಿವರು ಬಂದಿರುವ ಸುದ್ದಿ ತಿಳಿದು ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಅಲ್ಲಿಗೆ ದೌಡಾಯಿಸಿದರು. ವಸತಿ ನಿಲಯದಲ್ಲಿ ಸ್ವಚ್ಛತೆಯ ಕೊರತೆ, ಬಿಸಿನೀರು ಹಾಗೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದು, ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ, ವಿದ್ಯುತ್ ಸಮಸ್ಯೆಯನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಾರ್ಡನ್‌ ಅನಿಲಕುಮಾರ ಪಾಂಚಾಳ ಗೈರಾಗಿದ್ದರು. ಅವರು ಮೊಬೈಲ್ ಸಂಪರ್ಕಕ್ಕೂ ಸಿಗಲಿಲ್ಲ. ಇದರಿಂದ ಸಿಟ್ಟಾದ ಸಚಿವರು ಅವರ ಅಮಾನತಿಗೆ ಸೂಚಿಸಿದರು.

ಶುಕ್ರವಾರ ಬೆಳಿಗ್ಗೆ ಯೋಗಾಸನ ಮುಗಿಸಿ ವಸತಿ ನಿಲಯದಲ್ಲೇ ಸ್ನಾನ ಮಾಡಿದ ಸಚಿವರು, ವಿದ್ಯಾರ್ಥಿಗಳ ಜತೆಗೆ ಚಿತ್ರಾನ್ನ ಸೇವಿಸಿ 9.30ರ ಹೊತ್ತಿಗೆ ಯಾದಗಿರಿಗೆ ಬಂದರು.

ಅಮಾನತು: ‘ಮೂರು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿರುವ ವಾರ್ಡನ್‌ ಪಾಂಚಾಳ, ಕರ್ತವ್ಯ ಲೋಪ, ಅಶಿಸ್ತಿನ ನಡವಳಿಕೆ, ಉದ್ದೇಶಪೂರ್ವಕವಾಗಿ ಗೈರು ಹಾಗಿರುವುದರಿಂದ ಶುಕ್ರವಾರ ಜಿಲ್ಲಾಧಿಕಾರಿ ಅಮಾನತು ಆದೇಶ ಹೊರಡಿಸಿದ್ದಾರೆ’ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪೂರ್ಣಿಮಾ ಚೂರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು