ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ನೀರು ರಾಜಕೀಯ ಸಂಘರ್ಷಕ್ಕೆ ನಾಂದಿ!

ಕೃಷ್ಣಾಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿದ ನೀರಿನ ಬೇಡಿಕೆ
Last Updated 13 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಶಹಾಪುರ: ಪ್ರಸಕ್ತ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಬರಗಾಲದ ದವಡೆಗೆ ಸಿಲುಕಿದ ರೈತರ ನೋಟ ಈಗ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ನೀರಿನ ಮೇಲಿದೆ.

ನೀರಿನ ಬೇಡಿಕೆಯ ಕೂಗು ಹೆಚ್ಚಾಗುತ್ತಲಿದೆ. ಕೆಬಿಜೆಎನ್ಎಲ್ ನಿಗಮದ ಭೀಮರಾಯನಗುಡಿ ಆಡಳಿತ ಕಚೇರಿಯ ಮುಂದೆ ಪ್ರತಿದಿನ ಪ್ರತಿಭಟನೆ, ಧರಣಿ ಶುರುವಾಗಿವೆ. ಇದು ರಾಜಕೀಯ ಸಂಘರ್ಷಕ್ಕೆ ನಾಂದಿಯಾಗುತ್ತಿರುವುದು ನಿಗಮದ ಎಂಜಿನಿಯರ್‌ಗೆ ತಲೆನೋವಾಗಿ ಪರಿಣಮಿಸಿದೆ.

‘ಸುರಪುರ ಹಾಗೂ ಶಹಾಪುರ ತಾಲ್ಲೂಕಿನ ಹಲವು ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರಿನ ಸಮಸ್ಯೆ ಅಷ್ಟೊಂದು ಕಾಡುತ್ತಿಲ್ಲ. ಆದರೆ ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಶಹಾಪುರ ತಾಲ್ಲೂಕಿನ ಗ್ರಾಮಗಳಾದ ಕೊಳ್ಳೂರ, ದೋರನಹಳ್ಳಿ, ಗುಂಡಳ್ಳಿ, ಮರಕಲ್, ಹಯ್ಯಾಳ, ಕಾಡಂಗೇರಾ, ಬಿರನೂರ, ಯಕ್ಷಿಂತಿ, ಮದರಕಲ್, ನಂದಿಹಳ್ಳಿ ಹೀಗೆ 30ಕ್ಕೂ ಹೆಚ್ಚು ಗ್ರಾಮಗಳಿಗೆ ಕಾಲುವೆ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದ ಯಾದಗಿರಿ ಕ್ಷೇತ್ರದ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ನೀರಿನ ರಾಜಕೀಯಕ್ಕಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ರೈತ ಮುಖಂಡ ಸಾಯಿಬಣ್ಣ.

‘ಜೇವರ್ಗಿ ಮುಖ್ಯ ಕಾಲುವೆ (ಜೆಬಿಸಿ) ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರ ಸಿಗದ ಕಾರಣ ಹತ್ತಿ, ಮೆಣಸಿಕಾಯಿ, ತೊಗರಿ ಬೆಳೆ ಒಣಗಿವೆ. ಹತಾಶೆಗೊಂಡ ರೈತರು ಜೇವರ್ಗಿ ಶಾಸಕ ಡಾ.ಅಜೇಯಸಿಂಗ್ ಅವರ ಮೇಲೆ ಹೆಚ್ಚಿನ ಒತ್ತಡ ಹಾಕಿದ ಪರಿಣಾಮ ಅನಿವಾರ್ಯವಾಗಿ ಭೀಮರಾಯನಗುಡಿ ಆಡಳಿತ ಕಚೇರಿಗೆ ಬಂದ ಅಜಯ್‌ಸಿಂಗ್‌ ಅವರು ನಿಗಮದ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡು ಹೋಗಿದ್ದಾರೆ.

ಅಲ್ಲದೆ ಬಿಜೆಪಿಯ ಮಾಜಿ ಶಾಸಕ ದೊಡ್ಡಪ್ಪಗೌಡ ನರಿಬೋಳ ಅವರು ಸಹ ನಿಗಮದ ಕಚೇರಿಗೆ ಬಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿದರು. ವಾಸ್ತವವಾಗಿ ಆಯಾ ಕ್ಷೇತ್ರದ ಶಾಸಕರು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎಲ್ಲಾ ನಿರ್ಣಯಗಳಿಗೆ ಷರಾ ಹಾಕಿ ನಂತರ ನೀರಿನ ರಾಜಕೀಯ ಹೋರಾಟ ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸುತ್ತಾರೆ ನೀರಾವರಿ ಸಲಹಾ ಸಮಿತಿ ಮಾಜಿ ಸದಸ್ಯ ಭಾಸ್ಕರರಾವ ಮುಡಬೂಳ.

‘ಕಾಲುವೆ ಮೇಲ್ಭಾಗದ ರೈತರು ಸಮೃದ್ಧಿಯಾಗಿ ನೀರು ಪಡೆಯುವುದರ ಜೊತೆಯಲ್ಲಿ ಬೆಳೆ ಪದ್ಧತಿ ಉಲ್ಲಂಘಿಸಿ ಭತ್ತ ನಾಟಿ ಅಧಿಕ ನೀರು ಹಿಡಿದಿಟ್ಟುಕೊಳ್ಳುತ್ತಾರೆ. ಅಲ್ಲದೆ ಕಾಲುವೆ ಸೀಳಿ ಅನಧಿಕೃತವಾಗಿ ವಿದ್ಯುತ್ ಪಂಪ್‌ಸೆಟ್ ಮೂಲಕ ನೀರು ಪಡೆದು ಜಮೀನಿನ ಮೂಲೆಯಲ್ಲಿ ಅಕ್ರಮವಾಗಿ ಕೃತಕ ಕೆರೆಯನ್ನು ನಿರ್ಮಿಸಿ ನೀರು ಸಂಗ್ರಹಿಸಿದ್ದಾರೆ. ಇದರಿಂದ ಸಮರ್ಪಕವಾಗಿ ನಮಗೆ ನೀರು ದೊರಕುತ್ತಿಲ್ಲ’ ಎನ್ನುತ್ತಾರೆ ಕಾಲುವೆ ಕೊನೆ ಭಾಗದ ರೈತ ಚಂದ್ರಶೇಖರ.

ಅಲ್ಲದೆ ಅದೇ ಕಾಲುವೆ ಜಾಲದ ಕೆಳ ಭಾಗದ ಪ್ರದೇಶದಲ್ಲಿ ಬಿತ್ತನೆ ಮಾಡಿದ ಹತ್ತಿ, ತೊಗರಿ, ಸೂರ್ಯಪಾನ, ಮೆಣಸಿನಕಾಯಿ ಬೆಳೆಗೆ ನೀರು ದೊರಕದೆ ಬೆಳೆದು ನಿಂತ ಪೈರು ಒಣಗುತ್ತಲಿವೆ. ಒಂದಡೆ ಸಮೃದ್ಧಿ ನೀರು ಪಡೆದುಕೊಂಡರೆ ಇನ್ನೊಂದಡೆ ಹನಿ ನೀರಿಗೂ ರೈತರು ಪರದಾಡುವ ದುಸ್ಥಿತಿ ಬಂದಿದೆ.

ಅಲ್ಲದೆ ‘ಕಾಲುವೆ ಜಾಲದ ಪ್ರದೇಶದಲ್ಲಿ ಎಸ್ಕೇಪ್ ಗೇಟ್‌ ಮೂಲಕ ನೀರನ್ನು ಹಳ್ಳಕ್ಕೆ ಹರಿಬಿಟ್ಟು ಹಳ್ಳದ ಎಡ ಮತ್ತು ಬರಗಾಲದ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಇದರಿಂದ ಹಳ್ಳದ ಕೊನೆ ಭಾಗಕ್ಕೂ ನೀರು ತಲುಪುತ್ತಿಲ್ಲ. ಜಾನುವಾರುಗಳಿಗೂ ಕುಡಿಯುವ ನೀರಿನ ಬರ ಎದುರಾಗಿದೆ’ ಎನ್ನುತ್ತಾರೆ ಶಿವಪ್ಪ.

ಕಾಲುವೆ ಎರಡು ಕಡೆಗಳಲ್ಲಿ ರೈತರು ಅನಧಿಕೃತವಾಗಿ ಮೋಟಾರ್ ಬಳಸಿ, ಸೈಫಾಲ್ ತಡೆಗೋಡೆ ನಿರ್ಮಿಸಿ ವಾಮ ಮಾರ್ಗದಿಂದ ನಿರಂತರಾಗಿ ನೀರು ಉಪಯೋಗಿಸುವುದರಿಂದ ಕಾಲುವೆ ಜಾಲದಲ್ಲಿ ಗಣನೀಯ ನೀರಿನ ಪ್ರಮಾಣ ನೀರಿನ ಕೊರತೆ ಉಂಟಾಗಿ ಕೊನೆ ಭಾಗದ ಗ್ರಾಮಗಳ ಅಚ್ಚುಕಟ್ಟು ಜಮೀನುಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ನೀರು ನಿರ್ವಹಣೆ ಸಮಯದಲ್ಲಿನ ತೂಬಿನ ಗೇಟುಗಳನ್ನು ಕಿತ್ತು ಹಾಕಿದ್ದಾರೆ. ಯಾರ ವಿರುದ್ದ ಕ್ರಮ ತೆಗೆದುಕೊಳ್ಳದ ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ನಿಗಮದ ಎಂಜಿನಿಯರ್ ಒಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

*ಕಾಲುವೆ ನೀರಿಗೆ ಹೆಚ್ಚಿದ ಬೇಡಿಕೆಯು ಈಗ ಮಹತ್ವ ಪಡೆದುಕೊಳ್ಳುತ್ತಿದೆ. ಜನಪ್ರತಿನಿಧಿಗಳಿಗೆ ನೀರು ರಾಜಕೀಯ ಅಸ್ತ್ರವಾಗಿ ಮಾರ್ಪಾಡಾಗುತ್ತಿದೆ. ನಿಗಮದ ಎಂಜಿನಿಯರ್ ರಾಜಕೀಯ ನಾಯಕರ ಕೈಗೊಂಬೆಯಾಗಿ ವರ್ತಿಸುತ್ತಿರುವುದು ಬೇಸರ ಮೂಡಿಸಿದೆ.
-ಭಾಸ್ಕರರಾವ ಮುಡಬೂಳ,ನೀರಾವರಿ ಸಲಹಾ ಸಮಿತಿ ಮಾಜಿ ಸದಸ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT