ಬುಧವಾರ, ಮೇ 25, 2022
29 °C
ಜಾನುವಾರುಗಳ ದಾಹ ನೀಗಿಸಲು ಸೂಚಿಸಿದರೂ ಪಾಲನೆಯಾಗದ ಆದೇಶ

ಯಾದಗಿರಿ: ನಿರ್ಮಾಣವಾಗದ ತೊಟ್ಟಿಗಳು; ಸಿಗದ ನೀರು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಬೇಸಿಗೆ ಕಾಲದಲ್ಲಿ ಗ್ರಾಮಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಬೇಕು. ಅದರಲ್ಲಿ ಸದಾ ನೀರು ಇರುವಂತೆ ನೋಡಿಕೊಳ್ಳಬೇಕು ಎಂಬ ನಿಯಮ ಜಿಲ್ಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಪ್ರತಿ ವರ್ಷ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈ ಕುರಿತು ಕಟ್ಟುನಿಟ್ಟಿನ ಆದೇಶ ನೀಡಿದರೂ ಅದು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ.

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸದ್ಯಕ್ಕೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ತೊಟ್ಟಿ ನಿರ್ಮಿಸಿಲ್ಲ. ಕೆಲವು ಕಡೆ ನೀರಿನ ತೊಟ್ಟಿ ನಿರ್ಮಿಸಿದ್ದರೂ ಅವುಗಳಿಗೆ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುಲು ನೀರು ಸರಿಯಾಗಿ ಸಿಗುವುದಿಲ್ಲ.

ಜಿಲ್ಲೆಯಲ್ಲಿವೆ 6.93 ಲಕ್ಷ ಜಾನುವಾರು: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 6.93 ಲಕ್ಷ ಜಾನುವಾರುಗಳಿವೆ. ಇದರಲ್ಲಿ ಕುರಿ, ಮೇಕೆ, ಆಕಳು, ಎಮ್ಮೆ ಮುಂತಾದವುಗಳು ಸೇರಿವೆ. ಬೇಸಿಗೆ ಬಿಸಿಲಿಗೆ ಕೆಲ ಕಡೆ ಜಲಮೂಲಗಳು ಬತ್ತುತ್ತಿವೆ. ಹೀಗಾಗಿ ಜಾನುವಾರುಗಳಿಗಾಗಿ ನೀರಿನ ತೊಟ್ಟಿ ನಿರ್ಮಿಸಬೇಕಿದೆ. ಆದರೆ, ಜಿಲ್ಲೆಯಲ್ಲಿ ಇದು ಅನುಷ್ಠಾನಕ್ಕೆ ಬರುತ್ತಿಲ್ಲ.

ನಗರ ಪ್ರದೇಶದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರುಗಳಿಗಾಗಿ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಪ್ರತಿ ಮಂಗಳವಾರ ಜಾನುವಾರು ಸಂತೆ ನಡೆಯುವ ಕಾರಣ ಅಲ್ಲಿ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆದರೆ, ಉಳಿದ ಕಡೆ ಇಂಥ ಯಾವ ಸೌಲಭ್ಯವೂ ಇಲ್ಲ.

ಯಾದಗಿರಿ ನಗರದಲ್ಲಿ ಪೊಲೀಸ್‌ ಮತ್ತು ನಗರಸಭೆ ವತಿಯಿಂದ ಬಿಡಾಡಿ ದನಗಳನ್ನು ಕಾರ್ಯಾಚರಣೆ ಮಾಡಿ ಗೋಶಾಲೆಗೆ ಬಿಡಲಾಗಿದೆ. ಆದರೆ, ಉಳಿದ ತಾಲ್ಲೂಕುಗಳಲ್ಲಿ ರಸ್ತೆ ಮೇಲೆಯೇ ದನಗಳು ಮಲಗಿರುತ್ತವೆ.

ಸಾಕು ಹಾಗೂ ಬಿಡಾಡಿ ದನಗಳಿಗೂ ಬೇಸಿಗೆಯಲ್ಲಿ ನೀರಿನ ಹೆಚ್ಚು ಅವಶ್ಯಕತೆ ಇರುತ್ತದೆ. ಆದರೆ, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುವ ಅಗತ್ಯ ಇದೆ. ನೀರಿನ ತೊಟ್ಟಿ ನಿರ್ಮಾಣ ಮಾಡುವ ಕೆಲಸ ತಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ಕೈಕಟ್ಟಿಕೊಂಡು ಕೂರುತ್ತಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಸುರಪುರ ತಾಲ್ಲೂಕಿನ ದೇವತಕಲ್, ತಿಂಥಣಿ, ದೇವಪುರ, ದೇವರಗೋನಾಲ, ನಗನೂರ, ಬಾದ್ಯಾಪುರಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲ. ಶೇ 90 ರಷ್ಟು ಹಳ್ಳಿಗಳಲ್ಲಿ ನೀರಿನ ತೊಟ್ಟಿ ಇಲ್ಲ. ಕೆಲವೆಡೆ ಇರುವ ತೊಟ್ಟಿಗಳಲ್ಲಿ ನೀರು ಹಾಕುವುದಿಲ್ಲ.

ಪಶು ಸಂಗೋಪನಾ ಇಲಾಖೆಯ ಮಾಹಿತಿ ಪ್ರಕಾರ, ಸುರಪುರ ಮತ್ತು ಹುಣಸಗಿ ತಾಲ್ಲೂಕಿನಲ್ಲಿ 1.25 ಲಕ್ಷ ಜಾನುವಾರುಗಳಿವೆ. ಇವುಗಳಲ್ಲಿ ಬಹುತೇಕ ಮಾಲೀಕರು ನಿರ್ವಹಿಸುತ್ತಾರೆ. ಉಳಿದ ಜಾನುವಾರುಗಳು ಕುಡಿಯುವ ನೀರಿಲ್ಲದೆ ಹಾಹಾಕಾರ ಪಡುತ್ತಿವೆ.

‘ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರ ಜತೆಗೆ ನಡೆದ ಸಭೆಯಲ್ಲಿ ನೀರಿನ ತೊಟ್ಟಿ ನಿರ್ಮಿಸುವ ಬಗ್ಗೆ ಮನವಿ ಮಾಡಲಾಗಿದೆ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದೆ. ಜಾನುವಾರುಗಳಿಗೆ ನಿರ್ಮಿಸಿಕೊಟ್ಟರೆ ಬೇಸಿಗೆಯಲ್ಲಿ ಅನಕೂಲವಾಗಲಿದೆ’ ಎನ್ನುತ್ತಾರೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ರಾಜು ದೇಶಮುಖ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು