ಭಾನುವಾರ, ಸೆಪ್ಟೆಂಬರ್ 20, 2020
22 °C

ಕೃಷ್ಣಾ ನದಿಗೆ ನೀರು: ಜಮೀನು ಮುಳುಗುವ ಭೀತಿ

ಟಿ.ನಾಗೇಂದ್ರ / ದೇವಿಂದ್ರಪ್ಪ ಬಿ ಕ್ಯಾತನಾಳ Updated:

ಅಕ್ಷರ ಗಾತ್ರ : | |

Prajavani

ಶಹಾಪುರ/ವಡಗೇರಾ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿ ನದಿ ದಂಡೆಯ 23 ಹಳ್ಳಿಗಳು ಈಗ ಪ್ರವಾಹದ ಭೀತಿ ಎದುರಿಸುವಂತೆ ಆಗಿದೆ.
ಕೃಷ್ಣಾ ನದಿ ದಂಡೆಯಿಂದ ಗ್ರಾಮಗಳು ದೂರ ಮತ್ತು ಎತ್ತರ ಪ್ರದೇಶದಲ್ಲಿ ಇವೆ. ಪ್ರವಾಹ ಬಂದಾಗ ಹೆಚ್ಚಾಗಿ ಜಮೀನುಗಳಿಗೆ ನೀರು ನುಗ್ಗುತ್ತದೆ, ಗ್ರಾಮಗಳಿಗೆ ನೀರು ನುಗ್ಗುವುದು ಕಡಿಮೆ ಎನ್ನುತ್ತಾರೆ ಕೃಷ್ಣಾ ನದಿ ದಂಡೆಯ ಗ್ರಾಮಸ್ಥರು.

ಕಂದಾಯ ಹಾಗೂ ನಿಗಮ ಅಧಿಕಾರಿಗಳು ನದಿಗೆ ನೀರು ಹರಿಸುವ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ನದಿ ದಂಡೆಯ ಜಮೀನುಗಳ ರೈತರು ಪರದಾಡುವಂತೆ ಆಯಿತು. ‘ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದಂತೆ ರಾತ್ರೋರಾತ್ರಿ ನದಿ ನೀರಿನಲ್ಲಿ ಇಳಿದು ಅಳವಡಿಸಿದ ಪಂಪ್‌ಸೆಟ್‌ಗಳನ್ನು ಸುರಕ್ಷಿತ ಸ್ಥಳಗಳಿಗೆ ತರಲು ಹರಸಾಹಸ ಪಟ್ಟೆವು, ಇನ್ನೂ ನೀರಿನ ಹರಿವು ಹೆಚ್ಚಾಗಿದ್ದರಿಂದ ಮರಕಲ್ ಹಾಗೂ ಇನ್ನಿತರ ಕಡೆ ನೀರಿನಲ್ಲಿ ಮೋಟಾರ್ ಉಳಿದಿವೆ. ಇದಕ್ಕೆ ಅಧಿಕಾರಿಗಳು ಹೊಣೆ’ ಎಂದು ಕೃಷ್ಣಾ ನದಿ ದಂಡೆಯ ರೈತರು ಆರೋಪಿಸಿದ್ದಾರೆ.

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ಹೆಚ್ಚಿನ ನೀರು ಬರುತ್ತಿರುವುದರಿಂದ ಶಹಾಪುರ-ದೇವದುರ್ಗ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳುವ ಭೀತಿ ಇದೆ. ಸೇತುವೆಯಿಂದ ಇನ್ನೂ ಎಂಟು ಅಡಿ ನೀರು ಕೆಳಗಡೆ ಹರಿಯುತ್ತಲಿದೆ.

‘ನದಿಗೆ ಸದ್ಯಕ್ಕೆ 1.80 ಲಕ್ಷ ಕ್ಯುಸೆಕ್‌ ಹರಿದು ಬರುತ್ತಿದೆ. ಎರಡು ಲಕ್ಷ ಕ್ಯುಸೆಕ್ ನೀರು ಬಂದರೆ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಕೊಳ್ಳೂರ, ಗೌಡುರ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಮಾಹಿತಿ ನೀಡಿದೆ. ಈಗಾಗಲೇ ಕಂದಾಯ ಇಲಾಖೆಯ ಸಿಬ್ಬಂದಿ ಗ್ರಾಮದಲ್ಲಿ ನೆಲೆಸಿ ಪ್ರತಿ ಗಂಟೆಗೆ ಒಮ್ಮೆ ಮಾಹಿತಿ ನೀಡುತ್ತಿದ್ದಾರೆ. ಪ್ರವಾಹದ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ’ ಎಂದು ಶಹಾಪುರ ತಹಶೀಲ್ದಾರ್ ಜಗನ್ನಾಥರಡ್ಡಿ ತಿಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಬಳಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸೇತುವೆ ಬಳಿ ಬ್ಯಾರಿಕೇಡ್ ಅಳವಡಿಸಲು ಸೂಚಿಸಿದೆ. ಗ್ರಾಮಸ್ಥರು ನದಿಗೆ ಇಳಿಯದಂತೆ ಸೂಚಿಸಲಾಗಿದೆ ಎಂದರು.

‘ವಡಗೇರಾ ತಾಲ್ಲೂಕಿನ ಹಯ್ಯಾಳ, ಐಕೂರ, ಯಕ್ಷಿಂತಿ, ಗೌಡೂರ, ಟೊಣ್ಣೂರ, ಅನಸೂಗೂರ, ಗೊಂದೆನೂರ, ಚೆನ್ನೂರ, ತುಮಕೂರ, ಗುಂಡ್ಲೂರ, ಕೊಂಕಲ್, ಕೋಡಾಲ, ಸಂಗಂ, ಬೆಂಡಬೆಂಬಳಿ, ಅಗ್ನಿಹಾಳ, ಶಿವಪುರ, ರೊಟ್ನಡಗಿ ಮುಂತಾದ ಕೃಷ್ಣಾ ನದಿ ದಂಡೆಯ ಗ್ರಾಮಗಳಿಗೆ ಭೇಟಿ ನೀಡಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ಇದೆ. ಜನ ಜಾನುವಾರುಗಳನ್ನು ನದಿ ದಂಡೆಗೆ ಬಿಡಬಾರದು ಎಂದು ಗ್ರಾಮದಲ್ಲಿ ಡಂಗೂರ ಸಾರಲಾಗಿದೆ. ನಮ್ಮ ಕಂದಾಯ ಸಿಬ್ಬಂದಿ ಗ್ರಾಮದಲ್ಲಿ ವಾಸವಾಗಿದ್ದಾರೆ’ ಎಂದು ವಡಗೇರಾ ತಹಶೀಲ್ದಾರ್ ಸುರೇಶ ಅಂಕಲಗಿ ತಿಳಿಸಿದರು.

ನದಿ ದಂಡೆಯ ತಗ್ಗು ಪ್ರದೇಶದಲ್ಲಿ ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆಗೆ ನೀರು ನುಗ್ಗುತ್ತಿದ್ದು ರೈತರಿಗೆ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು