ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾವಿಬ್ಬರು ನಮಗೊಬ್ಬರು ವಿಧಾನ ಅನುಸರಿಸಿ’

ಉತ್ತಮ ಕುಟುಂಬ ಕಲ್ಯಾಣ ಸೇವೆ ಒದಗಿಸುತ್ತಿರುವ ವೈದ್ಯರಿಗೆ ಪ್ರಶಸ್ತಿ ವಿತರಣೆ
Last Updated 25 ಅಕ್ಟೋಬರ್ 2019, 11:25 IST
ಅಕ್ಷರ ಗಾತ್ರ

ಯಾದಗಿರಿ: ‘ಜನಸಂಖ್ಯೆ ಹೆಚ್ಚಳದಿಂದ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ದೇಶದ ಜನಸಂಖ್ಯೆ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯ ಜವಾಬ್ದಾರಿಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಕಾರವು ಅಗತ್ಯವಾಗಿದ್ದು, ನಾವಿಬ್ಬರು ನಮಗೊಬ್ಬರು ಎನ್ನುವ ಘೋಷಣೆ ಅನುಸರಿಸಬೇಕು’ ಎಂದು ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸೂರ್ಯಪ್ರಕಾಶ ಎಂ.ಕಂದಕೂರ ಹೇಳಿದರು.

ನಗರದ ಎನ್‍ವಿಎಂ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎನ್‍ಜೆಂಡರ್ ಹೆಲ್ತ್ ಸಂಸ್ಥೆ ಸಹಯೋಗದಲ್ಲಿ ನಡೆದ ಉತ್ತಮವಾಗಿ ಕುಟುಂಬ ಕಲ್ಯಾಣ ಸೇವೆಗಳನ್ನು ಒದಗಿಸುತ್ತಿರುವ ವೈದ್ಯರು, ಶುಶ್ರೂಷಕರು ಮತ್ತು ಆರೋಗ್ಯ ಸಂಸ್ಥೆಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭ ಹಾಗೂ ಮಾಧ್ಯಮದವರಿಗೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜನಸಂಖ್ಯೆ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯ ಪಾತ್ರ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಗಂಡು-ಹೆಣ್ಣಿನ ನಡುವೆ ಬೇಧ-ಭಾವ ಬೇಡ. ಬೇಟಿ ಬಚಾವೋ ಬೇಟಿ ಪಡಾವೂ ಆಂದೋಲನಕ್ಕೆ ಆದ್ಯತೆ ನೀಡಿ, ಮಗುವಿನ ಜನನದಲ್ಲಿ ಕನಿಷ್ಠ ಮೂರು ವರ್ಷಗಳ ಅಂತರವಿರಬೇಕು’ ಎಂದು ಹೇಳಿದರು.

ಜನಸಂಖ್ಯಾ ನಿಯಂತ್ರಣದಲ್ಲಿ ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಗಳಲ್ಲಿ ಎರಡು ವಿಧಾನಗಳಿದ್ದು, ಅದರಲ್ಲಿ ತಾತ್ಕಾಲಿಕವಾಗಿ ಅಂತರ ಕಾಯ್ದುಕೊಳ್ಳುವುದು. ಸ್ತ್ರೀಯರು ಮತ್ತು ಪುರುಷರು ಶಾಶ್ವತ ವಿಧಾನದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮೂಲಕ ನಿಯಂತ್ರಣ ಮಾಡಲು ಸಾಧ್ಯವಿದೆ’ ಎಂದರು.

‘ಸರ್ಕಾರ ಇತ್ತೀಚೆಗೆ ಹಲವು ಗರ್ಭನಿರೋಧಕ ಕುಟುಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಮೂರು ತಿಂಗಳಿಗೊಮ್ಮೆ ಇಂಜೆಕ್ಷನ್ ರೂಪದಲ್ಲಿ ತೆಗೆದುಕೊಳ್ಳುವ ಅಂತರ ಎಂಪಿಎ, ನುಂಗುವ ಗುಳಿಗೆಗಳಾದ ಛಾಯಾ ಮುಂತಾದವುಗಳಿವೆ. ಇವುಗಳಲ್ಲಿ ಸೂಕ್ತವಾದ ಗರ್ಭನಿರೋಧಕಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ’ ಎಂದರು.

‘ಎನ್‍ಜೆಂಡರ್ ಸಂಸ್ಥೆಯ ವತಿಯಿಂದ ಆಯ್ಕೆಯಾದ ಆರೋಗ್ಯ ಸಂಸ್ಥೆಗಳಲ್ಲಿ ಕುಟುಂಬ ಕಲ್ಯಾಣ ಸೇವೆಗಳನ್ನು ಒದಗಿಸುತ್ತಿರುವ ವೈದ್ಯರು ಮತ್ತು ಶುಶ್ರೂಷಕರಿಗೆ ತರಬೇತಿ ನೀಡಲಾಗಿದೆ. ಈ ಆರೋಗ್ಯ ಸಂಸ್ಥೆಗಳು ದಂಪತಿ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸಜ್ಜುಗೊಂಡಿವೆ. ಆಶಾ ಕಾರ್ಯಕರ್ತೆಯರಿಗೂ ಸಹ ಕುಟುಂಬ ಕಲ್ಯಾಣ ಯೋಜನೆಯ ತರಬೇತಿ ನೀಡಲಾಗಿದೆ’ ಎಂದು ತಿಳಿಸಿದರು.

ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಬಿ.ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು.ಎನ್‍ಜೆಂಡರ್ ಹೆಲ್ತ್ ಸಂಸ್ಥೆಯ ಹಿರಿಯ ವೈದ್ಯಕೀಯ ತರಬೇತುದಾರ ಡಾ.ಶಾಂತಿ,ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಾರಾಯಣಪ್ಪ, ಎನ್‍ಜೆಂಡರ್ ಹೆಲ್ತ್ ಸಂಸ್ಥೆಯ ಯೋಜನಾ ಸಂಯೋಜನಾಧಿಕಾರಿ ಡಾ.ಡೆಬಾಸಿಸ್, ಎನ್‍ಜೆಂಡರ್ ಹೆಲ್ತ್ ಸಂಸ್ಥೆಯ ಹಿರಿಯ ವೈದ್ಯಕೀಯ ತರಬೇತುದಾರ ಸೈಲಜಾ, ಯೋಜನಾ ಸಹಾಯಕ ಯಲ್ಲಪ್ಪ ಇದ್ದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದರ ಶಂಕರ ನಿರೂಪಿಸಿದರು. ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT