ಮಂಗಳವಾರ, ಆಗಸ್ಟ್ 16, 2022
27 °C
ಕಲ್ಯಾಣ ಕರ್ನಾಟಕ ಉತ್ಸವ: ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಚಿವ ಶ್ರೀರಾಮುಲು ಸಲಹೆ

ಕ.ಕ. ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧರಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಲು ಯುವಕ, ಯುವತಿಯರು ಕಂಕಣ ಕಟ್ಟಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಿತಿ ಹಾಗೂ ಭಾವೈಕ್ಯತಾ ಸಮಿತಿ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುವ ಸಂದರ್ಭದಲ್ಲಿ ಯಾಕೆ ಇನ್ನೂ ಈ ಭಾಗ ಕಲ್ಯಾಣ ಆಗಿಲ್ಲ ಎನ್ನುವುದನ್ನು ಪರಾಮರ್ಶಿಸಬೇಕು. ಹೀಗಾಗಿ ಈ ಭಾಗದ ಯುವ ಸಮೂಹ ಅಭಿವೃದ್ಧಿಗೆ ಕಂಕಣ ತೋಡಬೇಕು. ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

‘ಕಲ್ಯಾಣ ಕರ್ನಾಟಕಕ್ಕೆ, ಕಲ್ಯಾಣ ಕಂಕಣ’ ಇದು ನಮ್ಮ ಧ್ಯೇಯ ವಾಕ್ಯ ಆಗಬೇಕಿದೆ. ವಿಮೋಚನಾ ದಿನವೆಂದರೆ ಹೊಸ ಸಂಕಲ್ಪ, ಕನಸುಗಳನ್ನ ಬೆನ್ನತ್ತುವ ಸಮಯ. ನಾವು ಹೊಸ ಸಂಕಲ್ಪ ಮಾಡಬೇಕಿದೆ. ಕನಸು ಕಟ್ಟಬೇಕಿದೆ. ಅದನ್ನು ನನಸು ಮಾಡಬೇಕಿದೆ ಎಂದು ತಿಳಿಸಿದರು.

ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆ, ಅನ್ಯಾಯ-ಶೋಷಣೆಗಳಿಂದ ವಿಮೋಚನೆ ಆಗಬೇಕಿದೆ. ಅದಕ್ಕೆ ಅಪಾರ ಇಚ್ಛಾಶಕ್ತಿಯ ಅಗತ್ಯ ಇದೆ. ಹಾಗಂತ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಇಲ್ಲವೇ ಎಂದರೆ, ಇದೆ ಎನ್ನುವುದು ನನ್ನ ಉತ್ತರ. ಈ ಉತ್ತರ ನಮ್ಮ-ನಿಮ್ಮ ಕೈಲಿದೆ ಎಂದು ಹೇಳಿದರು.

ಬೆಳೆ ಕಣಜ, ಗವಿ ಸಿದ್ದೇಶ್ವರ- ಮೈಲಾರಲಿಂಗರ ಪುಣ್ಯ ಭೂಮಿ, ಶರಣ-ವಚನ ಸಾಹಿತ್ಯದ ನೆಲೆಯಲ್ಲಿ ಆಚರಣೆ ಮಾಡುತ್ತಿದ್ದೇವೆ. ಭಾರತಕ್ಕೆ ಸ್ವಾತಂತ್ರ ಬಂದಮೇಲೂ, ಸ್ವಾತಂತ್ರಕ್ಕಾಗಿ ಹೋರಾಟಗಳು, ಬಲಿದಾನಗಳು ನಡೆದ ಭೂಮಿ ಇದು ಎಂದರು.

ಸ್ವಾಮಿ ರಮಾನಂದರು, ಸರ್ದಾರ್ ವಲ್ಲಭಭಾಯ್ ಪಟೇಲರು ಹಾಗೂ ಕೆ.ಎಂ.ಮುನ್ಷಿ ವಿಮೋಚನಾ ದಿನದ ಹಿಂದಿರುವ 3 ಶಕ್ತಿಗಳು. ಸರ್ದಾರ್ ಶರಣಗೌಡ ಇನಾಮ್ದಾರ್, ವಿದ್ಯಾಧರ್ ಗುರೂಜಿ, ಪಂಡಿತ್ ತಾರಾನಾಥ್ ಹಾಗೂ ಕುಸುಮಾಕರ ದೇಸಾಯಿ ಹೀಗೆ ಸಾವಿರಾರು ಸ್ವತಂತ್ರ ಸೇನಾನಿಗಳ, ಯುವಕರ, ತಾಯಂದಿರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದರು.

ಕಲ್ಯಾಣ ಕರ್ನಾಟಕಕ್ಕೆ ಕಲಂ 371ಎ ಪ್ರಕಾರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಮುಖ್ಯಮಂತ್ರಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಈಗಾಗಲೇ ಘೋಷಣೆ ಮಾಡಿದ್ದಾರೆ. ಈ ಭಾಗದ ಸರ್ವತೋಮುಖ ಬೆಳವಣಿಗೆಗೆ ಸುಮಾರು ₹7000 ಕೋಟಿ ಅಗತ್ಯವಿದ್ದು, ಹಂತ ಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಶ್ವೀಜಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಉಪವಿಭಾಗಾಧಿಕಾರಿ ಶಂಕರಗೌಡ ಎಸ್.ಸೋಮನಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣ ವನ್ನು ಸಚಿವ ಶ್ರೀರಾಮುಲು ತುಂತುರು ಮಳೆಯಲ್ಲಿ ನೆರವೇರಿಸಿದರು.

ಸಚಿವರ ಭಾಷಣದ ವೇಳೆ ಹೋಂಗಾರ್ಡ್‌ ಮತ್ತು ಡಿಆರ್‌ ಪೊಲೀಸ್‌ ಸಿಬ್ಬಂದಿ ಮೈದಾನದಲ್ಲಿ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಅವರನ್ನು ಸ್ಥಳದಲ್ಲಿದ್ದವರು ಉಪಚರಿಸಿದರು.

***
ಜಿಲ್ಲೆಯ ಅಭಿವೃದ್ಧಿ, ರಾಜ್ಯದಲ್ಲಿ ಅಭಿವೃದ್ಧಿಯ ಕಥೆ ಹೇಳುವಂತೆ ಆಗಬೇಕು. ಅದಕ್ಕೆ ನಾವು ಕಂಕಣ ತೊಡಬೇಕಿದೆ. ನಾನು ಅಭಿವೃದ್ಧಿಯ ಕಂಕಣ ತೊಡುತ್ತೇನೆ.
-ಬಿ.ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು