ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ನಕಲಿ ಬೀಜದ ಹಾವಳಿಗೆ ಕೊನೆ ಯಾವಾಗ?

ಪ್ರತಿ ವರ್ಷ ಸಮಸ್ಯೆ ಎದುರಿಸುತ್ತಿರುವ ರೈತಾಪಿ ವರ್ಗ, ಕೃಷಿ ಇಲಾಖೆಗೆ ಮನವಿ ಸಲ್ಲಿಸಿದರೂ ದೊರೆಯದ ಸ್ಪಂದನೆ
Last Updated 6 ಜೂನ್ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವಾಣಿಜ್ಯ ಬೆಳೆಯಾದ ಹತ್ತಿಯನ್ನು ಹೆಚ್ಚಾಗಿ ರೈತರು ಬೆಳೆಯುತ್ತಾರೆ. ಪ್ರಸಕ್ತ ವರ್ಷ ಮುಂಗಾರು ಭರವಸೆದಾಯಕವಾಗಿದ್ದು, ರೈತರು ಮತ್ತೆ ಹತ್ತಿ ಬೀಜ ಖರೀದಿಗೆ ಮುಂದಾಗಿದ್ದಾರೆ. ಆದರೆ, ಲಾಕ್‌ಡೌನ್ ನೆಪ ಮುಂದೆ ಮಾಡಿಕೊಂಡು ಮಾರಾಟವಾಗುವ ನಕಲಿ ಹತ್ತಿ ಬೀಜದ ಬಗ್ಗೆ ರೈತರಲ್ಲಿ ಆತಂಕ ಕಾಡುತ್ತಿದೆ.

ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಿದ್ದು, ಬಿತ್ತನೆಗೆ ಜಮೀನು ಹದಗೊಳಿಸುತ್ತಿದ್ದಾರೆ.ಕಳೆದ ವರ್ಷದಂತೆಯೇ ಈ ಬಾರಿಯೂ ನಕಲಿ ಬಿತ್ತನೆ ಬೀಜ, ನಕಲಿ ರಸಗೊಬ್ಬರದಿಂದ ನಷ್ಟಕ್ಕೆ ಒಳಗಾಗುವ ಭೀತಿ ರೈತರಲ್ಲಿ ಮೂಡಿದೆ.

ರಾಜ್ಯದ ವಿವಿಧ ತಳಿಯ ಹತ್ತಿ ಬೀಜ ತಯಾರಿಕಾ ಕಂಪನಿ ಬೀಜಗಳುಶಹಾಪುರದಲ್ಲಿ ಸಿಗುತ್ತವೆ. ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಜೇವರ್ಗಿ, ದೇವದುರ್ಗ, ಸುರಪುರ ಸೇರಿದಂತೆ ಹಲವು ಕಡೆಯಿಂದ ರೈತರು ಬಂದು ಬೀಜ ಖರೀದಿಸುತ್ತಾರೆ. ಅಲ್ಲದೆ ಇಲ್ಲಿನ ಪ್ರದೇಶದಲ್ಲಿ ಆಂಧ್ರ ವಲಸಿಗರು ನೆಲೆಸಿದ್ದಾರೆ.

‘ಕೆಲ ವ್ಯಕ್ತಿಗಳು ತೆಲಂಗಾಣ, ಹೈದರಾಬಾದ್‌ ಮುಂತಾದ ಕಡೆಯಿಂದ ಖುಲ್ಲಾ ಹತ್ತಿ ಬೀಜವನ್ನು ತಂದು ಕಡಿಮೆ ದರದಲ್ಲಿ ರೈತರಿಗೆ ಮಾರುತ್ತಾರೆ. ಶುಕ್ರವಾರದ ಸಂತೆಯಲ್ಲಿ ಕದ್ದುಮುಚ್ಚಿ ವ್ಯಾಪಾರ ನಡೆಸಲಾಗುತ್ತದೆ. ರೈತರು ಇಂಥ ಬೀಜವನ್ನು ಖರೀದಿಸಬಾರದು’ ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಕೋರಿದ್ದಾರೆ.

‘ಲಾಕ್‌ಡೌನ್ ದುರ್ಬಳಕೆ ಮಾಡಿಕೊಂಡು ಹಳ್ಳಿಗಳಿಗೆ ಲಗ್ಗೆ ಇಡುವ ನಕಲಿ ಬೀಜ ಮಾರಾಟಗಾರರು ಕಡಿಮೆ ದರ, ಗುಣಮಟ್ಟದ ಬೀಜ ಹಾಗೂ ಉತ್ತಮ ಕಂಪನಿಯ ಬೀಜ ಎಂದು ರೈತರನ್ನು ನಂಬಿಸಿ ನಕಲಿ ಬೀಜ ಮಾರಾಟ ಮಾಡುವ ಸಾಧ್ಯತೆ ಹೆಚ್ಚಿದೆ. ರೈತರು ಅಪರಿಚಿತರ ಬಳಿ ಬೀಜ ಖರೀದಿಸಬೇಡಿ’ ಎಂದು ತಿಳಿಸಿದ್ದಾರೆ.

‘ರೈತರಿಗೆ ಕಳಪೆ ಬೀಜ ಮತ್ತು ಗೊಬ್ಬರದ ಬಗ್ಗೆ ಮನದಟ್ಟಾಗುವಂತೆ ಮಾಹಿತಿ ನೀಡಬೇಕು. ಅದನ್ನು ಖರೀದಿಸದಂತೆ ಸಲಹೆ ನೀಡಬೇಕು. ರೈತರು ಮಾರುಕಟ್ಟೆಗೆ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಸುವ ವೇಳೆ ಅವುಗಳನ್ನು ಪರಿಶೀಲಿಸಬೇಕು. ಕೃಷಿ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ನೆರವು ಪಡೆದು ಕಳಪೆ ಬೀಜ ಹಾಗೂ ಗೊಬ್ಬರ ಮಾರಾಟ ತಡೆಹಿಡಿಯಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಡಾ.ಭೀಮಣ್ಣ ಮೇಟಿ.

ನಕಲಿ ಬೀಜ–ಪ್ರಕರಣ ದಾಖಲು:

ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಆಗಾಗ ಬೀಜ, ರಸಗೊಬ್ಬರ, ಕೀಟನಾಶಕ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾದರಿ ಸಂಗ್ರಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 2019–20ರ ಅವಧಿಯಲ್ಲಿ 149 ಬೀಜ ಮಾದರಿಯಲ್ಲಿಒಂದು ಕಳಪೆ ಬಂದಿದೆ. 231 ಕೀಟನಾಶಕ ಮಾದರಿಯಲ್ಲಿ 4 ಕಳಪೆ ಬಂದಿದ್ದು, 3 ಪುನರ್‌ ಪರಿಶೀಲನೆ ಮಾಡಲು ಕಳಿಸಲಾಗಿದೆ. ಒಂದು ಪ್ರಕರಣ ದಾಖಲಾಗಿದೆ. 436 ರಸಗೊಬ್ಬರ ಮಾದರಿ ಸಂಗ್ರಹಿಸಿದ್ದು, 15 ಕಳಪೆ ಬಂದಿವೆ. 12 ಸರಿಯಾಗಿದ್ದು, 3 ಕಳಪೆ ಬಂದಿದೆ.

2020–21ರಲ್ಲಿ 168 ಬೀಜ ಮಾದರಿ ಸಂಗ್ರಹ ಮಾಡಿದ್ದು, ಇದರಲ್ಲಿ 2 ಕಳಪೆ ಬಂದಿದೆ. 199 ಕೀಟನಾಶಕದಲ್ಲಿ 7 ಕಳಪೆ ಬಂದಿದ್ದು, 3ರ ಫಲಿತಾಂಶ ಬಂದಿದ್ದು, 4ಇನ್ನೂ ಫಲಿತಾಂಶ ನೀಡಿಲ್ಲ. 439 ರಸಗೊಬ್ಬರ ಮಾದರಿಯಲ್ಲಿ 10 ಕಳಪೆ ಎಂದು ಶಂಕಿಸಲಾಗಿದ್ದು, 9 ಮಾದರಿಗಳ ಫಲಿತಾಂಶ ಬಂದಿಲ್ಲ. ಒಂದು ಮಾತ್ರ ಕಳಪೆ ಬಂದಿದೆ.

***

ಜಿಲ್ಲೆಯಲ್ಲಿರುವ ಅಂಗಡಿಗಳ ವಿವರ

ಬೀಜದ ಅಂಗಡಿ;292

ರಸಗೊಬ್ಬರ ಅಂಗಡಿ;468

ಕೀಟನಾಶಕ ಅಂಗಡಿ;525

ಹೋಬಳಿಗಳು;16

ಆಧಾರ: ಕೃಷಿ ಇಲಾಖೆ

***

ಕಳಪೆ ಬೀಜ ಮತ್ತು ಗೊಬ್ಬರದ ಬಗ್ಗೆ ರೈತರು ಎಚ್ಚರ ವಹಿಸಬೇಕು. ಈ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಾಲ್ಲೂಕು ದಂಡಾಧಿಕಾರಿಗಳ ತಂಡ ರಚಿಸಿ ಕಳಪೆ ಬೀಜ ಮತ್ತು ಗೊಬ್ಬರ ಮಾರಾಟ ತಡೆಯಬೇಕು
ಡಾ.ಭೀಮಣ್ಣ ಮೇಟಿ, ಸಾಮಾಜಿಕ ಕಾರ್ಯಕರ್ತ

***

ರೈತ ದೇಶದ ಬೆನ್ನೆಲುಬು ಎಂಬುದು ಕೇವಲ ಮಾತು. ಸರ್ಕಾರದ ಯಾವುದೇ ಯೋಜನೆಗಳು ರೈತನಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ, ಬೆಲೆ ಇಲ್ಲ. ಹೋರಾಟ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ
ಹಣಮಂತ್ರಾಯ ಮಾಡಿವಾಳ ತಾಲ್ಲೂಕು ಘಟಕದ ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

***

ಬಿತ್ತನೆ ಬೀಜ ಸೇರಿದಂತೆ ರೈತರು ಖರೀದಿಸಿದ ಪರಿಕರಗಳ ರಶೀದಿಯನ್ನು ಪಡೆದು ರಾಶಿ ಮಾಡುವವರೆಗೂ ಇಟ್ಟುಕೊಂಡಿರಬೇಕು. ಖುಲ್ಲಾ ಬಿ.ಟಿ ಹತ್ತಿಯನ್ನು ಖರೀದಿಸಬಾರದು.

ದೇವಿಕಾ ಆರ್, ಜಂಟಿ ಕೃಷಿ ನಿರ್ದೇಶಕಿ

***

ಕಳಪೆ ಬೀಜ ಕುರಿತು ಈಗಾಗಲೇರೈತರಿಗೆ ಮತ್ತು ಬೀಜ ಮಾರಾಟಗಾರರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗಿದೆ. ರೈತರು ಬೀಜದ ಪಾಕೆಟ್‌ ಮೇಲೆ ಇರುವ ಮಾಹಿತಿ ತಿಳಿದುಕೊಂಡು ಖರೀದಿ‌ ಮಾಡಬೇಕು.

ಡಾ.ಜಗದೀಶ್ ಗಾಯಕವಾಡ ರೈತ ಸಂಪರ್ಕ ಕೇಂದ್ರದ ಅಧಿಕಾರಿ

***

ಗ್ರಾಮೀಣ ಭಾಗದಲ್ಲಿ ಬಿತ್ತನೆಗೆ ಸಿದ್ಧತೆ ನಡೆದಿದ್ದು, ಪ್ರತಿಯೊಂದು ಗ್ರಾಮದಲ್ಲಿಯೂ ಕೃಷಿ ಇಲಾಖೆಯ ಅಧಿಕಾರಿಗಳು ಕಳೆಪೆ ಬೀಜದ ಬಗ್ಗೆ ಜಾಗೃತಿ ಮೂಡಿಸಬೇಕು. ಆ ಮೂಲಕ ರೈತರಿಗೆ ಸಂಭವಿಸುವ ನಷ್ಟವನ್ನು ತಡೆಗಟ್ಟಬೇಕು.

ಬಸಣ್ಣ ಪೂಜಾರಿ, ರೈತ

***

ಮಳೆ ಜಾಸ್ತಿಯಾಗದ ಕೋಡೆಕಲ್ಲ ಹೋಬಳಿ ಹೊರತು ಪಡಿಸಿ ಬೇರೆಎಲ್ಲ ಕಡೆ ಮುಂಗಾರು ಹಂಗಾಮಿನ ಬೆಳೆ ಬಿತ್ತನೆ ಮಾಡಬಹುದು. ಈಗಾಗಲೇ ಜಿಲ್ಲೆಯಲ್ಲಿ 101 ಎಂಎಂ ಮಳೆಯಾಗಿದೆ. ನಕಲಿ ಬೀಜದ ಬಗ್ಗೆ ಜಾಗೃತಿ ವಹಿಸಬೇಕು
ಡಾ.ಬಾಲರಾಜ ರಂಗರಾವ್‌, ಕೃಷಿ ಉಪ ನಿರ್ದೇಶಕ ಯಾದಗಿರಿ

***

20 ಅಂಗಡಿ ಮಾಲೀಕರ ಮೇಲೆ ಕ್ರಮ

ಶಹಾಪುರ: ‘ಕಳಪೆ ಗುಣಮಟ್ಟದ ಬೀಜ ಮಾರಾಟ ಮಾಡಿದ ಆರೋಪದಲ್ಲಿ ಮೂರು ರಸಗೊಬ್ಬರ ಅಂಗಡಿಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿದೆ. ಅಲ್ಲದೆ ಗುಣಮಟ್ಟವಲ್ಲದ 14 ರಸಗೊಬ್ಬರ ಅಂಗಡಿ ಹಾಗೂ 3 ಕೀಟನಾಶಕ ಕಳಪೆ ಕಂಡು ಬಂದ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ತಿಳಿಸಿದ್ದಾರೆ.

‘ಅಧಿಕೃತ ಬೀಜ ಮಾರಾಟಗಾರರ ಬಳಿ ಖರೀದಿ ಮಾಡಬೇಕು. ಕಡ್ಡಾಯವಾಗಿ ರಸೀದಿ ಪಡೆಯಿರಿ, ಚೀಲದ ಮೇಲಿನ ತೂಕ ಸರಿಯಾಗಿದೆ ಎಂಬುವುದನ್ನು ಗಮನಿಸಿ. ಬೀಜ ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸ ಗಮನಿಸಬೇಕು. ಬೀಜದ ಅವಧಿ ಗಮನಿಸಬೇಕು. ಅನುಮಾನಾಸ್ಪದ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಇಲ್ಲವೆ ಸಹಾಯಕ ನಿರ್ದೇಶಕರ ಕಚೇರಿಗೆ ತಕ್ಷಣ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
***
ವರ್ಷದಲ್ಲಿ 4 ಪ್ರಕರಣ ದಾಖಲು

ಜಿಲ್ಲೆಯಲ್ಲಿ 2020ರ ಜನವರಿ 1ರಿಂದ 2021 ಜೂನ್‌ 5ರ ವರೆಗೆ 4 ನಕಲಿ ಹತ್ತಿ ಮತ್ತು ರಸಗೊಬ್ಬರ ಸಂಬಂಧಪಟ್ಟಂತೆ ವಿವಿಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಯಾದಗಿರಿ ಗ್ರಾಮೀಣ, ಶಹಾಪುರ, ಭೀಮರಾಯನಗುಡಿ, ಗುರುಮಠಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಮೂರು ಪ್ರಕರಣಗಳು ನಕಲಿ ಹತ್ತಿ ಬೀಜ ಮಾರಾಟಕ್ಕೆ ಸಂಬಂಧಿಸಿದ್ದಾಗಿವೆ. ಒಂದು ಪ್ರಕರಣ ಮಾತ್ರ ಗೊಬ್ಬರಕ್ಕೆ ಸಂಬಂಧಿಸಿದ್ದಾಗಿದೆ.

2020ರ ಮೇ 26 ರಂದು 324 ಹತ್ತಿ ಬೀಜ ಪಾಕೇಟ್‌ ವಶಪಡಿಸಿಕೊಂಡಿದ್ದು, ನ್ಯಾಯಾಲಯದ ವಿಚಾರಣೆಯಲ್ಲಿದೆ. ಗುರುಮಠಕಲ್‌ ಠಾಣೆಯಲ್ಲಿ 40 ಹತ್ತಿ ಬೀಜ ಪಾಕೇಟ್‌ ವಶಪಡಿಸಿಕೊಂಡು 2020ರ ಮೇ 29ರಂದು ಪ್ರಕರಣ ದಾಖಲಿಸಲಾಗಿದೆ.2021ರ ಫೆಬ್ರುವರಿ 3ರಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಲಾಗಿದೆ.

ಯಾದಗಿರಿ ಗ್ರಾಮೀಣ ಠಾಣೆಯಲ್ಲಿ 2020ರ ಮೇ 30ರಂದು 476 ಹತ್ತಿ ಬೀಜಗಳನ್ನು ಪವಶಪಡಿಸಿಕೊಳ್ಳಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಶಹಾ‍ಪುರ ತಾಲ್ಲೂಕಿನ ಭೀಮರಾಯನಗುಡಿ ಠಾಣೆಯಲ್ಲಿ 2020ರ ಆಗಸ್ಟ್‌ 15ರಂದು ಅಕ್ರಮ ಗೊಬ್ಬರ ಸಾಗಣೆ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
***
ಸುರಪುರ: ಕಚೇರಿಗೆ ಬಾರದ ಅಧಿಕಾರಿಗಳು

ಸುರಪುರ: 'ತಾಲ್ಲೂಕಿನಲ್ಲಿ ರೈತರು ತಮ್ಮ ಹೊಲಗಳನ್ನು ಹದಗೊಳಿಸುತ್ತಿದ್ದಾರೆ. ಕೃಷಿ ಇಲಾಖೆ ತಕ್ಷಣ ರಿಯಾಯಿತಿ ಬಿತ್ತನೆ ಬೀಜ, ಗೊಬ್ಬರ ಪೂರೈಸಿ ರೈತರ ನೆರವಿಗೆ ಬರಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.

‘ಲಾಕ್‍ಡೌನ್‍ನಿಂದ ರೈತರು ಹಣ ತೆಗೆದುಕೊಳ್ಳಲು ಬ್ಯಾಂಕ್‍ಗೆ ಮತ್ತು ಬಿತ್ತನೆ ಬೀಜ, ಗೊಬ್ಬರ ತೆಗೆದುಕೊಳ್ಳಲು ನಗರಕ್ಕೆ ಬಂದರೆ ಪೊಲೀಸರ ಕಾಟ. ಸಿಬ್ಬಂದಿಗೆ ಕೊರೊನಾ ಬಂದಿದೆ ಎಂದು ಡಿಸಿಸಿ ಬ್ಯಾಂಕ್ 20 ದಿನಗಳವರೆಗೆ ಬಂದ್ ಮಾಡಲಾಗಿತ್ತು. ಉಳಿದ ಬ್ಯಾಂಕ್‍ಗಳು ಆಗಾಗ ಇದೇ ಕಾರಣದಿಂದ ಕೆಲ ದಿನ ಬಂದ್ ಆಗಿದ್ದವು’ ಎನ್ನುತ್ತಾರೆ ರೈತರು.

‘ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕಚೇರಿಗೆ ಬರುವುದಿಲ್ಲ. ಇದರಿಂದ ರೈತರಿಗೆ ಅಗತ್ಯ ಮಾಹಿತಿ, ಸಲಹೆ ಸಿಗುತ್ತಿಲ್ಲ. ಕೃಷಿಗೆ ಅಗತ್ಯವಿರುವ ಸಲಕರಣೆಗಳ ಪೂರೈಕೆ ಯೋಜನೆ ಬಂದ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ರೈತರು ಹೇಳುತ್ತಾರೆ.

ಕಳೆದ ಸಾಲಿನಲ್ಲಿ ತಾಲ್ಲೂಕಿನಲ್ಲಿ ನಕಲಿ ಬೀಜ ಮಾರಾಟದ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೂ ರೈತರು ಅಧಿಕೃತ ವಿತರಕರ ಹತ್ತಿರ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ಅಸಲಿ ರಸೀದಿ ಇಟ್ಟುಕೊಳ್ಳಬೇಕು ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಡಾ. ಭೀಮರಾಯ ಹವಾಲ್ದಾರ್ ತಿಳಿಸಿದ್ದಾರೆ.
***
ನಕಲಿ ಬೀಜ ಒಂದು ಪ್ರಕರಣ ದಾಖಲು

ಗುರುಮಠಕಲ್: 2020-21ನೇ ಸಾಲಿನ ಮುಂಗಾರು ಬಿತ್ತನೆಯ ಅವಧಿಯಲ್ಲಿ ನಕಲಿ ಹತ್ತಿ ಬೀಜ ಮಾರಾಟದ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳು ಒಂದು ಪ್ರಕರಣ ದಾಖಲಿಸಿದ್ದು, ಪ್ರಸ್ತುತ ಸಾಲಿನ ಬಿತ್ತನೆ ಬೀಜವನ್ನು ಅಧಿಕೃತ ಮಾರಾಟಗಾರರ ಹತ್ತಿರವೇ ಪಡೆಯುವಂತೆ ರೈತರಿಗೆ ಸಲಹೆ ನೀಡಿದ್ದಾರೆ.

ಕಳೆದ ಸಾಲಿನಲ್ಲಿ ಆಂಧ್ರದ ತಂಡವೊಂದು ಗ್ರಾಮಗಳಲ್ಲಿ ತೆರಳಿ ಕಡಿಮೆ ಬೆಲೆಯ ಹಾಗೂ ಉತ್ತಮ ಇಳುವರಿಯ ಆಸೆ ತೋರಿಸಿ ನಕಲಿ ಬೀಜ ಮಾರಾಟ ಮಾಡುತ್ತಿರುವ ಕುರಿತು ಜನರಿಂದ ಆರೋಪಗಳು ಕೇಳಿ ಬಂದಿದ್ದವು. ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಗ್ರಾಮಗಳಿಗೆ ಭೇಟಿ ನೀಡಿ, ರೈತರಿಗೆ ಮಾಹಿತಿ ನೀಡುವ ಮೂಲಕ ನಕಲಿ ಮಾರಾಟ ತಡೆಗಟ್ಟಿದ್ದರು.

‘ಬೀಜ ಖರೀದಿಸುವಾಗ ಅಧಿಕೃತ ಮಾರಾಟಗಾರರಲ್ಲಿ ಖರೀದಿಸಿ, ಅದರ ರಸೀದಿಯನ್ನು ಪಡೆಯುವುದು ಹಾಗೂ ಸಂಪೂರ್ಣ ಇಳುವರಿ ಕೈಸೇರುವ ವರೆಗೂ ರಸೀದಿ ಇಟ್ಟುಕೊಳ್ಳಬೇಕು. ರಸಗೊಬ್ಬರ ಖರೀದಿಸುವಾಗ ಅದರ ತೂಕವನ್ನು ಖಚಿತಪಡಿಸಿಕೊಳ್ಳುವುದು, ಚೀಲದ ಹೊಲಿಗೆ ಪರಿಶೀಲಿಸುವುದು ಹಾಗೂ ಸರ್ಕಾರ ನಿಗದಿಮಾಡಿರುವ ದರ ₹1,200 ಮಾತ್ರ ನೀಡಬೇಕು. ಹೆಚ್ಚಿನ ಹಣ ಕೇಳಿದರೆ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಕೃಷಿ ಇಲಾಖೆಗೆ ದೂರು ನೀಡುವಂತೆ’ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ಮಾಹಿತಿ ನೀಡಿದರು.

***

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ನಾಗೇಂದ್ರ, ಎಂ.ಪಿ ಚಪೆಟ್ಲಾ, ದೇವೀಂದ್ರಪ್ಪ ಬಿ ಕ್ಯಾತನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT