ಶನಿವಾರ, ಜೂನ್ 25, 2022
24 °C
ಕೋವಿಡ್‌ ಕಾರಣದಿಂದ ಎರಡು ವರ್ಷದಿಂದ ಅನುದಾನವಿಲ್ಲ, ಅರಣ್ಯ ಬೆಳೆಸಲು ಪ್ರೋತ್ಸಾಹದ ಕೊರತೆ

ಇಂದು ಪರಿಸರ ದಿನ: ಅರಣ್ಯ ಬೆಳೆಸಲು ಬಜೆಟ್‌ ಇಲ್ಲ; ಗುರಿಯೂ ಇಲ್ಲ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಅರಣ್ಯ ಬೆಳೆಸಲು ಅನುದಾನವೇ ಇಲ್ಲ. ಗುರಿಯೂ ಇಲ್ಲದಿದ್ದರಿಂದ ಅರಣ್ಯ ಬೆಳೆಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣಬರುತ್ತಿದೆ.

ಇದಕ್ಕೂ ಮುಂಚೆ ಪ್ರತಿ ವರ್ಷ ಅರಣ್ಯ ಇಲಾಖೆ ಸಿಬ್ಬಂದಿ, ಕಾವಲುಗಾರರು ವೇತನ ಸೇರಿದಂತೆ ಗಿಡ ಮರ ಬೆಳೆಸಲು ವಾರ್ಷಿಕ ₹4 ಕೋಟಿ ಬರುತ್ತಿತ್ತು. ಈಗ ಕೋವಿಡ್‌ ಕಾರಣದಿಂದ ನಿಂತು ಹೋಗಿದೆ. ಹೀಗಾಗಿ ಯಾವುದೇ ಗುರಿಯೂ ನೀಡದ ಕಾರಣ ಅರಣ್ಯ ಬೆಳೆಸುವ ಯೋಜನೆಗೆ ಹಿನ್ನಡೆಯಾದಂತೆ ಆಗಿದೆ.

ಜಿಲ್ಲೆಯೂ ಬೆಟ್ಟಗುಡ್ಡಗಳಿಂದ ಆವೃತ್ತವಾಗಿದ್ದು, ಮಳೆ ಪ್ರಮಾಣವೂ ಕಡಿಮೆ ಇದೆ. ಅರಣ್ಯ ಹೆಚ್ಚು ಇದ್ದರೆ ಮಳೆಯ ಪ್ರಮಾಣವೂ ಹೆಚ್ಚುತ್ತದೆ. ಆದರೆ, ಅರಣ್ಯವೇ ಇಲ್ಲದಂತೆ ಆಗಿದೆ.

ಶೇ 5ರಷ್ಟಿರುವ ಅರಣ್ಯ: ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಶೇ 5 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಇನ್ನಿತರ ಕಡೆ ಜಮೀನು ಪ್ರದೇಶವಿದ್ದು, ಇನ್ನೂ ಹಲವೆಡೆ ಖಾಲಿ ಪ್ರದೇಶವಿದೆ.

ಯಾದಗಿರಿ, ಗುರುಮಠಕಲ್‌, ಶಹಾಪುರ, ಸುರಪುರ, ಹುಣಸಗಿ ಅಲ್ಲಲ್ಲಿ ಗುಡ್ಡಗಾಡು ಪ್ರದೇಶವಿದೆ. ವಡಗೇರಾ ತಾಲ್ಲೂಕು ಅರಣ್ಯ ಪ್ರದೇಶದಿಂದ ವಂಚಿತವಾಗಿದೆ.

28 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ:ವಡಗೇರಾ ಹೊರತುಪಡಿಸಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಸುಮಾರು 28 ಸಾವಿರ ಹೆಕ್ಟೇರ್‌ ಪ್ರದೇಶ ಅರಣ್ಯ ಪ್ರದೇಶ ಹೊಂದಿದೆ. ಇದು ಕೇವಲ ಶೇ 5 ರಷ್ಟು ಇರುವುದಾಗಿದೆ.

59 ಸಾವಿರ ಸಸಿ ವಿತರಣೆಗೆ ಸಿದ್ಧ:ಕೃಷಿ ಅರಣ್ಯ ಯೋಜನೆಯಡಿ ಸಾರ್ವಜನಿಕರು ಮತ್ತು ರೈತರಿಗೆ ರಿಯಾಯ್ತಿ ದರದಲ್ಲಿ 59 ಸಾವಿರ ಸಸಿ ವಿತರಣೆಗೆ ಸಿದ್ಧ ಮಾಡಲಾಗಿದೆ. ಶ್ರೀಗಂಧ, ಹೆಬ್ಬೇವು, ಸೀತಾಫಲ, ಕರಿಬೇವು, ನಿಂಬು, ಬಿದಿರು ಸಸಿಗಳನ್ನು ಅರಣ್ಯ ಇಲಾಖೆ ವಿತರಿಸಲು ಸಿದ್ಧತೆ ಮಾಡಿಕೊಂಡಿದೆ. ₹1ರಿಂದ 3 ರ ತನಕ ದರವಿಧಿಸಲಾಗುತ್ತಿದೆ.

4.21 ಲಕ್ಷ ಸಸಿ ನೆಡುವಿಕೆ
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಒಟ್ಟು 4.21 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಜಿಲ್ಲೆಯ ವಿವಿಧ ಸರ್ಕಾರಿ ಜಮೀನುಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗುತ್ತಿದೆ.

ಜೂನ್‌ 5ರಂದು ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಪ್ರತಿ ಗ್ರಾಮ ಪಂಚಾಯಿತಿಗೆ 200 ಸಸಿಗಳನ್ನು ಸಾಮಾಜಿಕ ಅರಣ್ಯ ಇಲಾಖೆಯು ನೀಡುತ್ತದೆ. ಇದರಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

‘ಉದ್ಯೋಗ ಖಾತ್ರಿ ಯೋಜನೆಯಡಿ ಯಾದಗಿರಿ ತಾಲ್ಲೂಕಿನ ಬಳಚಕ್ರ, ಕಾಳೆಬೆಳಗುಂದಿ ಗ್ರಾಮದಲ್ಲಿ ಹಲವಾರು ಜಾತಿಯ ಸಸಿಗಳನ್ನು ಬೆಳೆಸಲಾಗುತ್ತಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ 51 ಎಕರೆ ಪ್ರದೇಶದಲ್ಲಿ ಹೊಂಗೆ, ಬೇವು, 300 ಸೀತಾಫಲ ಸಸಿಗಳನ್ನು ಬೆಳೆಸಲಾಗುತ್ತಿದೆ. ಇನ್ನೂ ಕಾಳೆಬೆಳಗುಂದಿ ಪ‍್ರದೇಶದಲ್ಲಿ 100 ಎಕರೆ ಪ್ರದೇಶದಲ್ಲಿ ಕೆರೆಗೆ ಚೆಕ್‌ ಡ್ಯಾಂ ನಿರ್ಮಿಸಿ ಸಸಿಗಳನ್ನು ಬೆಳೆಸಲಾಗುತ್ತಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಅವರು.

***

ಜೂನ್‌ 5ರಂದು ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಕೋವಿಡ್ ಕಾರಣದಿಂದ ಐದು ಸಸಿಗಳನ್ನು ನೆಡುವ ಮೂಲಕ ಸಾಂಕೇತಿಕವಾಗಿ ಪರಿಸರ ದಿನಾಚರಣೆ ಆಚರಿಸಲಾಗುತ್ತದೆ.
-ಮುಕ್ಕಣ್ಣ ಕರಿಗಾರ, ನರೇಗಾ ನೋಡಲ್‌ ಅಧಿಕಾರಿ

***

ಕೋವಿಡ್‌ ಕಾರಣದಿಂದ ಕಳೆದ ವರ್ಷವೂ ಸರ್ಕಾರ ಅನುದಾನ ನೀಡಿರಲಿಲ್ಲ. ಈ ವರ್ಷವೂ ಇಲ್ಲ. ಯಾದಗಿರಿ– ಸುರಪುರ ವಲಯದಲ್ಲಿ ತಲಾ 30 ಸಾವಿರ ಸಸಿಗಳನ್ನು ಬೆಳೆಸಿದ್ದೇವೆ.
-ಎಂ.ಎಲ್‌.ಭಾವಿಕಟ್ಟಿ, ಪ್ರಾದೇಶಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು