ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ; ಎಂಎಲ್ಸಿ ಚುನಾವಣೆ–ಅಕ್ರಮ ಮದ್ಯದ ಮೇಲೆ ಅಬಕಾರಿ ಕಣ್ಣು

ಅವಳಿ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ: ಗಡಿ ಭಾಗದಲ್ಲಿ ನಿಗಾ
Last Updated 20 ನವೆಂಬರ್ 2021, 4:17 IST
ಅಕ್ಷರ ಗಾತ್ರ

ಯಾದಗಿರಿ: ಕಲಬುರಗಿ, ಯಾದಗಿರಿ ಅವಳಿ ಜಿಲ್ಲೆಗಳ ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆ) ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯದ ಬಳಕೆ ಹೆಚ್ಚಳಗೊಳ್ಳುವ ಸಾಧ್ಯತೆ ಇರುವ ಕಾರಣ ಅಂತಹ ಬೆಳವಣಿಗೆ ಮೇಲೆ ಅಬಕಾರಿ ಇಲಾಖೆ ಕಣ್ಣಿಟ್ಟಿದೆ.

ನವೆಂಬರ್ 9ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗಿದೆ. ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಈ ಅವಧಿಯಲ್ಲಿ ಅಕ್ರಮ ಮದ್ಯ ಪೂರೈಕೆ ಹೆಚ್ಚಲಿರುವ ಕಾರಣ ಅಧಿಕಾರಿಗಳು ನಿಗಾವಹಿಸಿದ್ದಾರೆ.

ಅಬಕಾರಿ ಇಲಾಖೆ ಅಧಿಕಾರಿಗಳು ಎರಡು ದಿನಗಳಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಬೆಳಿಗ್ಗೆ ಅಥವಾ ಸಂಜೆ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುವ ಸುದ್ದಿ ಬರುತ್ತಿದ್ದಂತೆ ಅಧಿಕಾರಿಗಳ ತಂಡ ತೆರಳಿ ದಾಳಿ ಮಾಡಿ ಮದ್ಯ ವಶಪಡಿಸಿಕೊಂಡು ನಾಶ ಮಾಡುತ್ತಿದೆ.

ಜಿಲ್ಲೆಯು ತೆಲಂಗಾಣ ಭಾಗಕ್ಕೆ ಹೊಂದಿಕೊಂಡಿರುವ ಕಾರಣ ಅಕ್ರಮ ಮದ್ಯ ಯಥೇಚ್ಛವಾಗಿ ಪೂರೈಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳ ತಂಡ ದಾಳಿ ಮಾಡುತ್ತಿದೆ.

ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ಸದಸ್ಯರು ವಿಧಾನ ಪರಿಷತ್‌ ಚುನಾವಣಾ ಮತದಾರರಾದ್ದರಿಂದ ಅವರ ಹಿಂಬಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಹೀಗಾಗಿ ಅಕ್ರಮ ಮದ್ಯವೂ ಭರಪೂರ ಪೂರೈಕೆಯಾಗುತ್ತಿದೆ. ಇಂಥ ಘಟನೆಗಳು ನಡೆಯದಂತೆ ಇಲಾಖೆ ಜಾಗೃತಿ ವಹಿಸಿದೆ.

155 ಲೀಟರ್‌ ಮದ್ಯ ಜಪ್ತಿ:ಗುರುಮಠಕಲ್ ತಾಲ್ಲೂಕಿನ ಗಾಜರಕೋಟ ಗ್ರಾಮದ ಅಶೋಕ ದೊಡ್ಡ ಭೀಮಯ್ಯ ಕಲಾಲ ಅವರ ಮನೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದಾಗ ಆರೋಪಿ ಅಕ್ರಮವಾಗಿ ಮಾರಾಟದ ಉದ್ದೇಶಕ್ಕಾಗಿ ಸಂಗ್ರಹಿಸಿಟ್ಟ 155.52 ಲೀ ಮದ್ಯ ಹಾಗೂ 131.2 ಲೀ ಬಿಯರ್ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗುರುಮಠಕಲ್‌ ತಾಲ್ಲೂಕಿನ ಕೊಂಕಲ್‌ ಸೀಮಾಂತರ ಪಾಡಪಲ್ಲಿಯ ಹತ್ತಿ ಜಮೀನಿನಲ್ಲಿ 92 ಗಾಂಜಾ ಗಿಡಗಳನ್ನು ಬೆಳೆದಿದ್ದು, ಅವುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಯಾದಗಿರಿ ತಾಲ್ಲೂಕಿನ ಮುದ್ನಾಳ ದೊಡ್ಡ ತಾಂಡಾದ ಕಾಶೀನಾಥ್ ಸೊನ್ಯಾ ರಾಠೋಡ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟ 5 ಲೀಟರ್ ಕಳ್ಳಭಟ್ಟಿ ಸರಾಯಿ, 20 ಲೀಟರ್ ಬೆಲ್ಲದಕೊಳೆ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸುಕ್ರನಾಯಕ ತಾಂಡಾದಲ್ಲಿ 2 ಲೀಟರ್‌ ಕಳ್ಳಭಟ್ಟಿ ಸರಾಯಿ, 65 ಲೀಟರ್‌ ಬೆಲ್ಲದ ಕೊಳೆ, 6 ಕೆಜಿ ಬೆಲ್ಲದಕೊಳೆ ವಶಪಡಿಸಿಕೊಳ್ಳಲಾಗಿದೆ. ಇದೇ ರೀತಿ ಚುನಾವಣೆ ಮುಗಿಯುವ ತನಕ ದಾಳಿಗಳನ್ನು ಮುಂದುವರಿಸಲಾಗುತ್ತಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

‘ತೆಲಂಗಾಣ ಗಡಿ ಭಾಗದಲ್ಲಿ ನಿಗಾ ವಹಿಸಿ ನಮ್ಮ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ರಾಜ್ಯದಲ್ಲಿ ಚುನಾವಣೆ ವೇಳೆ ಮದ್ಯ ನಿಷೇಧ ಮಾಡಿದ ಮೇಲೆ ಅಲ್ಲಿಂದ ಪೂರೈಕೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈಗನಿಂದಲೇ ಎಚ್ಚರಿಕೆ ವಹಿಸಲಾಗಿದೆ. ದಾಳಿ ಮಾಡಿ ಪ್ರಕರಣ ದಾಖಲಿಸಲಾಗುತ್ತಿದೆ’ ಎನ್ನುತ್ತಾರೆ ಉಪ ವಿಭಾಗ ಶಹಾಪುರ ಅಬಕಾರಿ ಉಪ ಅಧೀಕ್ಷಕ ಶ್ರೀರಾಮ ರಾಠೋಡ.

***

ಅಕ್ರಮ ಮದ್ಯ ತಯಾರಿಕೆ, ಮಾರಾಟದ ಸ್ಥಳಗಳ ಮೇಲೆ ದಾಳಿ ನಡೆಸಿ, ವಶಪಡಿಸಿಕೊಳ್ಳಲಾಗುತ್ತಿದೆ. ಚುನಾವಣೆ ಅಂಗವಾಗಿ ಅಲ್ಲಲ್ಲಿ ದಾಳಿ ಮಾಡಲಾಗುತ್ತಿದೆ

- ಫಿರೋಜಖಾನ ಎಂ.ಕಿಲ್ಲೇದಾರ, ಅಬಕಾರಿ ಉಪ ಆಯುಕ್ತ, ಯಾದಗಿರಿ ಜಿಲ್ಲೆ

***

ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡ ಅಕ್ರಮ ಮದ್ಯವನ್ನು ಚಾರ್ಜ್‌ಶೀಟ್‌ ಆದ ನಂತರ ನಾಶಪಡಿಸಲಾಗುವದು. ಗಡಿ ಭಾಗಗಳಲ್ಲಿ ನಿಗಾ ವಹಿಸಲಾಗಿದೆ

- ಶ್ರೀರಾಮ ರಾಠೋಡ, ಅಬಕಾರಿ ಉಪ ಅಧೀಕ್ಷಕ, ಉಪ ವಿಭಾಗ ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT