ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಎಂಎಲ್ಸಿ ಚುನಾವಣೆಯಲ್ಲಿ ಕೋವಿಡ್‌ ನಿಯಮ ಪಾಲಿಸಲು ಸೂಚನೆ

ಅಭ್ಯರ್ಥಿ ಸೇರಿ ಐದು ಜನರು ಮಾತ್ರ ಪ್ರಚಾರ ನಡೆಸಲು ಅವಕಾಶ: ಜಿಲ್ಲಾಧಿಕಾರಿ
Last Updated 19 ನವೆಂಬರ್ 2021, 3:03 IST
ಅಕ್ಷರ ಗಾತ್ರ

ಯಾದಗಿರಿ: ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆ) ಮತಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಅಥವಾ ಮುಖಂಡರು ₹50 ಸಾವಿರಕ್ಕಿಂತ ಹೆಚ್ಚಿಗೆ ಹಣ ಹೊಂದಿರಬಾರದು. ಅವರ ಬಳಿ ₹10 ಸಾವಿರಕ್ಕಿಂತ ಮೀರಿದ ಯಾವುದೇ ಬಗೆಯ ಉಡುಗೊರೆ ನೀಡಬಹುದಾದ ವಸ್ತುಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್, ತಿಳಿಸಿದರು.

ಕೋವಿಡ್ ಕಾರಣ ಚುನಾವಣಾ ಆಯೋಗವು ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ಮತ ಕೇಳುವ ಸಂದರ್ಭದಲ್ಲಿ ಅಭ್ಯರ್ಥಿಯನ್ನು ಸೇರಿಸಿ ಐದು ಜನರು ಮಾತ್ರ ಪ್ರಚಾರ ನಡೆಸಬಹುದು. ಬಹಿರಂಗ ಪ್ರಚಾರ ಸಭೆಯ ಸಭಾಂಗಣ ಇದ್ದರೆ ಅದರ ಸಾಮರ್ಥ್ಯದ ಶೇ 30ರಷ್ಟು ಹಾಗೂ ಮೈದಾನದಲ್ಲಿ ನಡೆಸಿದರೆ ಒಟ್ಟು ಸಾಮರ್ಥ್ಯದ ಶೇ 50ರಷ್ಟು ಜನರನ್ನು ಸೇರಿಸಲು ಅವಕಾಶವಿದೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳೊಂದಿಗೆ ಗರಿಷ್ಠ 20 ವಾಹನಗಳು ಇರಬಹುದು. ಅದಕ್ಕಿಂತ ಹೆಚ್ಚಿದ್ದರೆ ಜಪ್ತಿ ಮಾಡಲಾಗುವುದು. ಚುನಾವಣಾ ವೆಚ್ಚಕ್ಕೆ ಯಾವುದೇ ಮಿತಿ ಇರುವುದಿಲ್ಲ ಎಂದರು.

ಕರ್ನಾಟಕ ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆ) ಮತಕ್ಷೇತ್ರದ ಚುನಾವಣೆ ಚುನಾವಣೆ ನಡೆಯುವ ತಾಲ್ಲೂಕುಗಳಲ್ಲಿ ಚುನಾವಣೆ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಲು ಎಂಸಿಸಿ ತಂಡಗಳನ್ನು ರಚಿಸಲಾಗಿದೆ ಎಂದರು.

ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಜರುಗಲು ಮಾಧ್ಯಮ ಪ್ರಮಾಣೀಕರಣ ಮೇಲ್ವಿಚಾರಣೆ ಸಮಿತಿ ಅಧ್ಯಕ್ಷ ಡಾ.ರಾಗಪ್ರಿಯಾ ಆರ್., ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರನ್ನು ನೇಮಿಸಲಾಗಿದೆ.

126 ಮತಗಟ್ಟೆಗಳು:ಮತದಾನ ನಡೆಯುವ ಯಾದಗಿರಿ ತಾಲ್ಲೂಕಿನಲ್ಲಿ 23 ಮತಗಟ್ಟೆಗಳು, ಶಹಾಪುರ ತಾಲ್ಲೂಕಿನಲ್ಲಿ 25, ಸುರಪುರ ತಾಲ್ಲೂಕಿನಲ್ಲಿ 24, ಗುರುಮಠಕಲ್ ತಾಲ್ಲೂಕಿನಲ್ಲಿ 19, ವಡಗೇರಾ ತಾಲ್ಲೂಕಿನಲ್ಲಿ 17, ಹುಣಸಗಿ ತಾಲ್ಲೂಕಿನಲ್ಲಿ 18 ಮತಗಟ್ಟೆಗಳು ಹೀಗೆ ಜಿಲ್ಲೆಯಲ್ಲಿ ಒಟ್ಟು 126 ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಮಸ್ಟರಿಂಗ್- ಡಿ-ಮಸ್ಟರಿಂಗ್ ಕೇಂದ್ರ:ಜಿಲ್ಲೆಯಲ್ಲಿ ಒಟ್ಟು 6 ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳನ್ನು ಗುರ್ತಿಸಲಾಗಿದೆ. ಯಾದಗಿರಿ, ಶಹಾಪುರ , ಸುರುಪುರ, ಹುಣಸಗಿ ತಹಶೀಲ್ದಾರ್‌ ಕಾರ್ಯಾಲಯ, ವಡಗೇರಾ ತಾಲ್ಲೂಕಿಗೆ ಸಂಬಂಧಿಸಿದಂತೆ ಸರ್ಕಾರಿ ಪ್ರೌಡ ಶಾಲೆ ಮತ್ತು ಗುರುಮಠಕಲ್ ತಾಲ್ಲೂಕಿಗೆ ಸಂಬಂಧಿಸಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುರುತಿಸಲಾಗಿದೆ ಎಂದು ತಿಳಿಸಿದರು.

ಭಾರತ ಚುನಾವಣಾ ಆಯೋಗವು ಚುನಾವಣೆ ಜರುಗಿಸಲು ನವೆಂಬರ್ 9 ರಂದು ವೇಳಾಪಟ್ಟಿ ಘೋಷಿಸಿರುವುದರಿಂದ ಡಿಸೆಂಬರ್ 16 ರ ವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಹಾಗೂ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಇದ್ದರು.

***

‘2,300 ಹೆಕ್ಟೇರ್ ಬೆಳೆ ನಷ್ಟ’

ಯಾದಗಿರಿ: ಜಿಲ್ಲೆಯಲ್ಲಿ 2021-22 ನೇ ಸಾಲಿನಲ್ಲಿ ಅತಿವೃಷ್ಟಿ, ಪ್ರವಾಹದಿಂದ 2,300.28 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದ್ದು, ಇಲ್ಲಿಯವರೆಗೆ 1,824 ಹೆಕ್ಟೇರ್ ನಷ್ಟು ಬೆಳೆ ಹಾನಿಯ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌ ತಿಳಿಸಿದರು.

ಇಲ್ಲಿಯವರೆಗೆ 714 ರೈತರಿಗೆ ಎರಡು ಹಂತದಲ್ಲಿ ಒಟ್ಟು ₹83,94,421 ಮೊತ್ತ ನೇರವಾಗಿ ಫಲಾನುಭವಿಗಳ ಖಾತೆ ಜಮೆ ಆಗಿದೆ. ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಮನೆ ಹಾನಿ ಪರಿಹಾರ

ಜಿಲ್ಲೆಯಲ್ಲಿ 2021-22 ನೇ ಸಾಲಿನಲ್ಲಿ ಅತಿವೃಷ್ಟಿಯಿಂದ 735 ಮನೆಗಳು ಹಾನಿಯಾಗಿದ್ದು, ಫಲಾನುಭವಿಗಳ ವಿವರವನ್ನು ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ತಂತ್ರಾಂಶದಲ್ಲಿ 701 ಮನೆಗಳ ವಿವರ ನಮೂದಿಸಲಾಗಿದ್ದು, ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್-19 ನಿಂದ 207 ಜನ ಮೃತಪಟ್ಟಿದ್ದಾರೆ. ದುಡಿಯುವ ವ್ಯಕ್ತಿ ಸದಸ್ಯರನ್ನು ಕಳೆದು ಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುತ್ತಿದ್ದು, ಇಲ್ಲಿಯವರೆಗೆ 118 ಅರ್ಜಿಗಳು ಸ್ವೀಕೃತಿಯಾಗಿವೆ. ನಿಯಾಮನುಸಾರ ಪರಿಶೀಲಿಸಿ 108 ಅರ್ಜಿಗಳನ್ನು ಅನುಮೋದನೆ ನೀಡಲಾಗಿದ್ದು, ಇನ್ನೂ 88 ಅರ್ಜಿಗಳ ಸ್ವೀಕೃತಿ ಬಾಕಿ ಇವೆ ಎಂದು ಮಾಹಿತಿ ನೀಡಿದರು.

ಶೇ 90ರಷ್ಟು ಯಾತ್ರಿ ನಿವಾಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT