ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಅಕಾಲಿಕ ಮಳೆ; ಸಂಕಷ್ಟಕ್ಕೆ ಸಿಲುಕಿದ ರೈತ

ಜಿಲ್ಲೆಯಲ್ಲಿ 11,171 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ಭತ್ತಕ್ಕೆ ಹೆಚ್ಚಿನ ಹೊಡೆತ
Last Updated 6 ಡಿಸೆಂಬರ್ 2021, 4:36 IST
ಅಕ್ಷರ ಗಾತ್ರ

ಯಾದಗಿರಿ: 2021-22ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ 11,171 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಭತ್ತಕ್ಕೆ ಹೆಚ್ಚಿನ ಹಾನಿಯಾಗಿದೆ.

ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್‌ ಮತ್ತು ವಡಗೇರಾ ತಾಲ್ಲೂಕಿನಲ್ಲಿ ಇನ್ನೇನೂ ಕೊಯ್ಲಿಗೆ ಬಂದ ಭತ್ತ ಮಳೆಯಿಂದ ನೆಲಕ್ಕುರಳಿ ಬಿದ್ದಿದ್ದು,ರೈತರುಕಂಗೆಟ್ಟಿದ್ದಾರೆ.

ಯಾದಗಿರಿ ಮತ್ತು ವಡಗೇರಾ ತಾಲ್ಲೂಕಿನಲ್ಲಿ ಕೊಯ್ಲು ನಂತರ ಬಯಲು ಪ್ರದೇಶದಲ್ಲಿ ಭತ್ತ ಒಣಗಲು ಹಾಕಲಾಗಿತ್ತು. ನವೆಂಬರ್‌ 23ರಂದು ರಾತ್ರಿ 10 ರಿಂದ 11ರವರೆಗೆ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಯಿತು. ಈ ಅಕಾಲಿಕ ಮಳೆಯಿಂದ ಒಣಗಲು ಹಾಕಿದ್ದ ಭತ್ತ ನೆನೆದುಹೋಗಿತ್ತು. ಸುರಪುರ, ಹುಣಸಗಿ, ಶಹಾಪುರ ಮತ್ತು ಗುರುಮಠಕಲ್‌ ತಾಲ್ಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಭತ್ತ ನೆಲಕ್ಕೆ ಬಿದ್ದು, ಅಪಾರ ನಷ್ಟ ಸಂಭವಿಸಿದೆ. ಜೋಳ, ಸಜ್ಜೆಯೂ ಹಾನಿಯಾಗಿದೆ.

ಮಳೆಗಾಲ ಇನ್ನೇನೂ ಮುಗಿಯಿತು ಎಂದು ರೈತರು ಅಂದುಕೊಳ್ಳುವಾಗಲೇ ಒಂದು ರಾತ್ರಿಯ ಮಳೆ ಎಲ್ಲವನ್ನು ಬುಡಮೇಲು ಮಾಡಿತು. ಬೆಳೆಗಳು ಧರೆಶಾಯಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಯಿತು. ರಾಶಿ ಹಾಕಿದ್ದ ಫಸಲುನೆಲದ ಪಾಲಾಗಿ ರೈತರು ಕಂಗೆಡುವಂತೆ ಮಾಡಿದೆ.

ಅಪಾರ ಹಾನಿ: ‘ಯಾದಗಿರಿ ತಾಲ್ಲೂಕಿನಲ್ಲಿ ಹೆಸರು 65.20 ಹೆಕ್ಟೇರ್ ಬೆಳೆ ಹಾನಿಯಾಗಿದೆ. 3,885.22 ಹೆಕ್ಟೇರ್ ತೊಗರಿ, 1,417.37 ಹೆಕ್ಟೇರ್‌ ಹತ್ತಿ, 232.05ಹೆಕ್ಟೇರ್ ಸಜ್ಜೆ, 178.80ಹೆಕ್ಟೇರ್ ಕಬ್ಬು, 11.28 ಹೆಕ್ಟೇರ್ ಸೂರ್ಯಕಾಂತಿ, 8.80 ಹೆಕ್ಟೇರ್ ಜೋಳ ಹಾನಿಯಾಗಿದ್ದು, 10.48 ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಗಳು ಹಾಳಾಗಿವೆ’ ಎಂದು ಕೃಷಿ ಇಲಾಖೆ ತಿಳಿಸಿದೆ.

ಶಹಾಪುರ ತಾಲ್ಲೂಕಿನಲ್ಲಿ 647.40 ಹೆಕ್ಟೇರ್, ವಡಗೇರಾ ತಾಲ್ಲೂಕಿನಲ್ಲಿ 1,182.99 ಹೆಕ್ಟೇರ್, ಸುರಪುರ ತಾಲ್ಲೂಕಿನಲ್ಲಿ 1,681.98 ಹೆಕ್ಟೇರ್, ಹುಣಸಗಿ ತಾಲ್ಲೂಕಿನಲ್ಲಿ 7,304.95 ಹೆಕ್ಟೇರ್, ಯಾದಗಿರಿ ತಾಲ್ಲೂಕಿನಲ್ಲಿ 341.20 ಹೆಕ್ಟೇರ್, ಗುರುಮಠಕಲ್‌ ತಾಲ್ಲೂಕಿನಲ್ಲಿ 13 ಹೆಕ್ಟೇರ್‌ ಪ್ರದೇಶ ಸೇರಿದಂತೆ 11,171.52 ಹೆಕ್ಟೇರ್‌ನಷ್ಟು ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಅಕಾಲಿಕ ಮಳೆಯಿಂದ ಹಾನಿಯಾಗಿವೆ.

ಕೃಷಿ ಇಲಾಖೆ ಪ್ರಕಾರ, ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಹುಣಸಗಿ ತಾಲ್ಲೂಕಿನಲ್ಲಿ ಮತ್ತು ಕಡಿಮೆ ಹಾನಿ ಗುರುಮಠಕಲ್‌ ತಾಲ್ಲೂಕಿನಲ್ಲಿ ಆಗಿದೆ.

ಜಿಲ್ಲೆಯಲ್ಲಿ ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳಲ್ಲಿ ಅತ್ಯಧಿಕ ಮಳೆ, ಪ್ರವಾಹದಿಂದ ಬೆಳೆಗಳು ಹಾನಿಯಾಗಿವೆ. 11171.52 ಹೆಕ್ಟೇರ್‌ ಪ್ರದೇಶದ 13,086 ರೈತರು ಬಾಧಿತರಾಗಿದ್ದಾರೆ.

ಭತ್ತದ ದರ ಇಳಿಕೆ: ಅಕಾಲಿಕ ಮಳೆಯಿಂದ ಭತ್ತದ ಬೆಲೆಯೂ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಸೋನಾ ಮಸೂರಿ ₹1,100 ದರ ಇದೆ. ಜಿಪಿಟಿ ಸೋನಾದ ದರ ₹1,250 ಇದೆ. ಸಂಚಾರಿ ಭತ್ತ ಖರೀದಿ ಕೇಂದ್ರಗಳು ಆರಂಭವಾಗಬೇಕು ಎಂದು ರೈತ ಮುಖಂಡ ಮಲ್ಲಣ್ಣ ಪರಿವಾಣ ಗೋಗಿ ಹೇಳುತ್ತಾರೆ.

‘ತೊಗರಿ, ಶೇಂಗಾ, ಹತ್ತಿ ಬೆಳೆಗಳಿಗೆ ಹವಾಮಾನ ಬದಲಾವಣೆಗಳಿಂದ ಬೆಳೆಗಳು ಹಾನಿಯಾಗುತ್ತವೆ. ಇದರಿಂದ ಕಾಲಕಾಲಕ್ಕೆ ಕೃತಕವಾಗಿ ತಯಾರಿಸಿದ ಬೆಲ್ಲ, ರಸಗೊಬ್ಬರ ಸಿಂಪಡಣೆ ಮಾಡುವುದರಿಂದ ಶೇ 90 ರಷ್ಟು ಬೆಳೆ ಹಾನಿ ತಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ್ ತಿಳಿಸುತ್ತಾರೆ.

****

ಜಿಲ್ಲೆಯಲ್ಲಿ ಭತ್ತ ಹಾನಿ ವಿವರ

ತಾಲ್ಲೂಕು; ಹೆಕ್ಟೇರ್‌

ಶಹಾಪುರ; 510.57

ವಡಗೇರಾ; 504.13

ಸುರಪುರ; 1,316.34

ಹುಣಸಗಿ; 2,768.68

ಯಾದಗಿರಿ;249.60

ಗುರುಮಠಕಲ್‌;13

ಒಟ್ಟು; 5362.32

ಆಧಾರ: ಕೃಷಿ ಇಲಾಖೆ
***
ಸುರಪುರ: 1,114 ಹೆಕ್ಟೇರ್ ಬೆಳೆ ಹಾನಿ

ಸುರಪುರ: ಅಕಾಲಿಕ ಮಳೆಯಿಂದ ತಾಲ್ಲೂಕಿನ ಸುರಪುರ, ಕೆಂಭಾವಿ ಮತ್ತು ಕಕ್ಕೇರಾ ಹೋಬಳಿ ವ್ಯಾಪ್ತಿಯಲ್ಲಿ 1,114 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದರಲ್ಲಿ ಕೆಂಭಾವಿ ವ್ಯಾಪ್ತಿಯಲ್ಲಿ 74 ಹೆಕ್ಟೇರ್ ಕಬ್ಬು ಹಾನಿಯಾಗಿದ್ದು, ಉಳಿದ 1,030 ಹೆಕ್ಟೇರ್‌ನಲ್ಲಿ ಭತ್ತ ಹಾನಿಯಾಗಿದೆ. ಅಲ್ಪಸ್ವಲ್ಪ ಮೆಣಸಿನಕಾಯಿ ಬೆಳೆಯೂ ಹಾನಿಯಾಗಿದೆ.

ಬೆಳೆ ಹಾನಿಗೊಳಗಾದ 1,822 ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಕಟಾವು ಮಾಡದ ಬೆಳೆ ಮಾತ್ರ ಪರಿಹಾರದ ವ್ಯಾಪ್ತಿಗೆ ಬರುತ್ತದೆ. ಬಹಳಷ್ಟು ರೈತರು ಭತ್ತ ರಾಶಿ ಮಾಡಿ ಒಣಗಿಸಲು ಹಾಕಿದ್ದರು. ಇದಕ್ಕೂ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಇದಕ್ಕೆ ಪರಿಹಾರ ಇಲ್ಲ. ಕೃಷಿ ಮತ್ತು ಕಂದಾಯ ಇಲಾಖೆಯವರು ಪರಿಹಾರದ ಜಂಟಿ ಸಮೀಕ್ಷೆ ಮಾಡಿ ಮುಗಿಸಿದ್ದಾರೆ. ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಒಂದು ಹೆಕ್ಟೇರ್‌ಗೆ ₹13,500 ಪರಿಹಾರ ನೀಡಲಾಗುತ್ತದೆ. ಒಬ್ಬ ರೈತನಿಗೆ ಎರಡು ಹೆಕ್ಟೇರ್‌ಗಿಂತ ಹೆಚ್ಚಿನ ಪರಿಹಾರ ದೊರಕುವುದಿಲ್ಲ. ಇದರಿಂದ ರೈತರು ಆಘಾತದಲ್ಲಿದ್ದಾರೆ.
***
ಶಹಾಪುರ: ಶೇ 72ರಷ್ಟು ಅಧಿಕ ಮಳೆ

ಶಹಾಪುರ: ಪ್ರಸಕ್ತ ಬಾರಿ ಮುಂಗಾರು ಮಳೆಯು ವಾಡಿಕೆಗಿಂತ ಶೇ 72ರಷ್ಟು ಅಧಿಕವಾಗಿದೆ. ಸದಾ ಕೊರತೆ ಮಳೆಯನ್ನು ಅನುಭವಿಸುತ್ತಿದ್ದ ರೈತರಿಗೆ ಮುಂಗಾರಿನ ಅಧಿಕ ಮಳೆಯು ರೈತರ ಬೆವರಿನ ಶ್ರಮ ಕಸಿದುಕೊಂಡಿದೆ.

‘ಕಳೆದ ಒಂದು ತಿಂಗಳು ನಾವು ಜೀವ ಕೈಯಲ್ಲಿ ಹಿಡಿದುಕೊಂಡು ಉಸಿರು ಬಿಡುವಂತೆ ಆಗಿದೆ. ಚಿನ್ನದ ಧಾರಣೆಯನ್ನು ಕಂಡಿರುವ ಹತ್ತಿಯನ್ನು ಕೀಳುತ್ತಿರುವಾಗ ಅಕಾಲಿಕವಾಗಿ ಸುರಿದ ಮಳೆಯಿಂದ ಧಾರಣೆ ಕುಸಿಯಿತು. ಬೆಳೆಯು ನಷ್ಟವಾಯಿತು’ ಎಂದು ರೈತ ಶಿವಮಾನಯ್ಯ ತಿಳಿಸಿದರು.

‘ವಾಣಿಜ್ಯ ಬೆಳೆಯೆಂದು ಬ್ಯಾಡಗಿ, ಗುಂಟೂರ ತಳಿಯ ಮೆಣಸಿನಕಾಯಿ ಬೆಳೆಗೆ ಅಧಿಕ ತೇವಾಂಶದ ಬಿಸಿ ತಟ್ಟಿದೆ. ಸದಾ ಮೋಡ ಕವಿದ ಹಾಗೂ ಮಂಜಿನ ವಾತಾವರಣದಿಂದ ಬೆಳೆಗೆ ವಿವಿಧ ರೋಗ ಮುತ್ತಿಕ್ಕಿ ಹೈರಾಣಗೊಳಿಸಿವೆ. ಕ್ರಿಮಿನಾಶಕ ಔಷಧಿ ಸಿಂಪಡಿಸಿ ಕೈ ಸವೆದಿವೆ. ಧಾರಣಿ, ಇಳುವರಿ ಕುಸಿದ ಭೀತಿ ಎದುರಾಗಿದೆ ರೈತ ಗೌಡಪ್ಪಗೌಡ ಮದ್ರಿಕಿ ತಿಳಿಸಿದರು.

‘ಕೊಯ್ಲಿಗೆ ಬಂದಿದ್ದ ಭತ್ತ ಬೆಳೆಗೆ ಅಕಾಲಿಕ ಮಳೆ ಹಾಗೂ ತೇವಾಂಶದ ಹೆಚ್ಚಳ ಮಾರಕವಾಯಿತು. ಆದರೆ, ರಭಸದ ಮಳೆ ಹೆಚ್ಚು ಆಗದ ಕಾರಣ ಒಂದಿಷ್ಟು ನಾವು ಬಚಾವ್ ಆಗಿದ್ದೇವೆ. ಇಲ್ಲದಿದ್ದರೆ, ಪರಿಸ್ಥಿತಿ ಇನ್ನೂ ಗಂಭೀರವಾಗುತಿತ್ತು. ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸಿದೆ. ಆದರೆ, ಅದು ನೆರವಿಗೆ ಬರುತ್ತಿಲ್ಲ’ ಎಂದು ರೈತರು ತಿಳಿಸಿದರು.

***
‘ತೂಕದಲ್ಲಿ ಮೋಸ’

ಶಹಾಪುರ: ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹತ್ತಿ ಬಿಡಲಾಗುತ್ತಿದೆ. ಅಲ್ಲಲ್ಲಿ ತೂಕದಲ್ಲಿ ಮೋಸ ಮಾಡುವುದು ಕಂಡು ಬರುತ್ತಿದೆ. ಒಂದೊಂದು ಕಡೆ ಒಂದೊಂದು ತೂಕ ಇರುವುದರಿಂದ ಅಧಿಕಾರಿಗಳು ಭೇಟಿ ನೀಡಿ ಸರಿಪಡಿಸಬೇಕು’ ಎಂದು ರೈತರು ಹೇಳುತ್ತಾರೆ.

‘ಹತ್ತಿ ಖರೀದಿಗೆ ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಇನ್ನಿತರ ರಾಜ್ಯಗಳಿಂದ ದಲ್ಲಾಳಿಗಳು ಇಲ್ಲಿಗೆ ಬರುತ್ತಾರೆ. ರೈತರು ಬೆಳೆದ ಹತ್ತಿ ಜಮೀನಿಗೆ ನೇರವಾಗಿ ತೆರಳಿ ಖರೀದಿಸಿ, ತೂಕ ಮಾಡಿಕೊಳ್ಳುತ್ತಾರೆ. ವಿದ್ಯುನ್ಮಾನ ಯಂತ್ರ ಸಮರ್ಪಕವಾಗಿ ಇವೆ ಎಂಬ ಆತಂಕ ಕಾಡುತ್ತದೆ. ತೂಕದಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚು. ಈಗಾಗಲೇ ಹಲವು ಕಡೆ ತೂಕದಲ್ಲಿ ರೈತರು ಮೋಸ ಹೋಗಿದ್ದಾರೆ. ರೈತರು ಜಾಗೃತಗೊಳ್ಳುವುದು ಅಗತ್ಯ’ ಎಂದು ರೈತ ಮುಖಂಡ ಮಲ್ಲಯ್ಯ ಕಮತಗಿ ಹೇಳುತ್ತಾರೆ.

***

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT