ಸೈದಾಪುರ: ಮಾದಕ ವಸ್ತುಗಳ ಸೇವನೆಯಿಂದ ಯುವ ಜನಾಂಗ ಅಡ್ಡ ದಾರಿ ಹಿಡಿಯುತ್ತಿದೆ. ಇಂತಹ ಸಂದರ್ಭದಲ್ಲಿ ಯಾವುದೇ ದುಶ್ಚಟಗಳಿಗೆ ವಿದ್ಯಾರ್ಥಿಗಳು ಬಲಿಯಾಗದೆ ಸ್ವಾಸ್ಥ್ಯ ಸದೃಡ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಂಚಾಲಕ ಭೀಮಣ್ಣ ಬಿ. ವಡವಟ್ ಹೇಳಿದರು.
ಪಟ್ಟಣದ ಮಲ್ಹಾರ ಕಾರಡ್ಡಿ ಬಸವಂತರಾಯ ಸಿದ್ದಪ್ಪ ಸ್ಮಾರಕ ವಿದ್ಯಾವರ್ಧಕ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಿದ ಸ್ವಾಸ್ಥ್ಯ ಸಂಕಲ್ಪ ತಂಬಾಕು ವಿರೋಧಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಕ್ಷಣಿಕ ಸುಖದ ಭ್ರಮೆಯಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿ ತಮಗೆ ಅರಿವಿಲ್ಲದಂತೆ ತಮ್ಮ ಬದುಕುನ್ನು ನಾಶ ಮಾಡಿಕೊಳ್ಳುತ್ತಿರುವುದು ಸಾಮಾಜಿಕ ದುರುಂತವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
'ಮಾದಕ ವಸ್ತುಗಳ ಸೇವನೆಯಿಂದ ದೇಹದ ಪ್ರತಿಯೊಂದು ಜೀವಕೋಶದ ಮೇಲೂ ದುಷ್ಪರಿಣಾಮ ಬೀರುತ್ತದೆ. ವಿಶ್ವಾದ್ಯಂತ ಪ್ರತಿ ವರ್ಷ 5.4 ಮಿಲಿಯನ್ ಜನರು ತಂಬಾಕು ಸೇವನೆಯಿಂದ ಮೃತರಾಗುತ್ತಿದ್ದಾರೆ. ಅದರಲ್ಲಿ ನಮ್ಮ ಭಾರತದ ದೇಶದಲ್ಲಿ ಶೇಕಡ 30ರಷ್ಟು ಜನ ಮಾದಕ ವಸ್ತುಗಳ ವ್ಯಸನಿಗಳಾಗಿರುವುದು ಅತ್ಯಂತ ಕಳವಳದ ಸಂಗತಿಯಾಗಿದೆ. ಇದು ನಮ್ಮ ಕುಟುಂಬ ದೇಶವನ್ನು ಇನ್ನೋಷ್ಟು ಆರೋಗ್ಯ ಮತ್ತು ಆರ್ಥಿಕವಾಗಿ ಕುಗ್ಗಿಸುತ್ತದೆ. ಪ್ರಜ್ಞಾನವಂತ ಯುವಕರು ದುಃಶ್ಚಟಗಳಿಗೆ ದಾಸರಾಗದೆ ಎಚ್ಚರಿಕೆಯಿಂದ ಇರಬೇಕು ಹಾಗೂ ಇದರ ಬಗ್ಗೆ ಪ್ರತಿಯೊಬ್ಬರು ಅರಿತು ಕೊಂಡು ಸುತ್ತಮುತ್ತಲಿನಲ್ಲಿರುವ ಮಾದಕ ವಸ್ತುಗಳ ಸೇವನೆ ಮಾಡುವವರಿಗೆ ಅರಿವು ಮೂಡಿಸಿ ನಮ್ಮ ಸಮಾಜವನ್ನು ರೋಗ ಮುಕ್ತವಾನ್ನಾಗಿ ಮಾಡುವುದಕ್ಕೆ ಪ್ರತಿಯೊಬ್ಬರು ಮುಂದಾಗಬೇಕು’ ಎಂದು ಮನವಿ ಮಾಡಿದರು.
ಹಾಗೂ ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞೆ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಜಿ.ಎಮ್ ಗುರುಪ್ರಸಾದ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕ ದೇವಿಂದ್ರ ಪೀರ, ಚಂದ್ರಶೇಖರ ಡೋಣೆಗೌಡ, ಬಸವರಾಜ ಬರಮಶೆಟ್ಟಿ, ಶಾಂತಲ್ ಎನ್, ಅನುರಾಧ, ಸದಾಶಿವ, ಯೋಜನೆಯ ಸೈದಾಪುರ ವಲಯದ ಮೇಲ್ವಾಚರಕಿ ರಂಗಮ್ಮ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ದ್ರಾಕ್ಷಾಯಣಿ ಸೇರಿದಂತೆ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.