ಶುಕ್ರವಾರ, ಜೂನ್ 5, 2020
27 °C
ಅಧಿಕಾರಿಗಳಿಂದ ಬಾಲಕಿಯರ ಪೋಷಕರಿಗೆ ತಿಳಿವಳಿಕೆ

ಯಾದಗಿರಿ: 4 ಬಾಲ್ಯ ವಿವಾಹ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ತಾಲ್ಲೂಕಿನ ಕಣೇಕಲ್, ಸೈದಾಪುರ ಮತ್ತು ವಂಕಸಂಬ್ರ ಗ್ರಾಮದಲ್ಲಿ ಎರಡು ಬಾಲ್ಯ ವಿವಾಹ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 4 ಬಾಲ್ಯ ವಿವಾಹಗಳನ್ನು ವಿವಿಧ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ತಡೆದಿದ್ದಾರೆ.

ಮಕ್ಕಳ ಸಹಾಯವಾಣಿ-1098ಗೆ ಬಂದ ದೂರಿನ್ವಯ ಮೇ 20ರಂದು ನಡೆಯಬೇಕಿದ್ದ ಯಾದಗಿರಿ ತಾಲ್ಲೂಕಿನ ಕಣೇಕಲ್ ಗ್ರಾಮದಲ್ಲಿ ಒಂದು ಮತ್ತು ವಂಕಸಂಬ್ರ ಗ್ರಾಮದಲ್ಲಿ 2 ಬಾಲ್ಯವಿವಾಹಗಳನ್ನು ಒಂದು ದಿನ ಮುಂಚಿತವಾಗಿ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಬಾಲಕಿಯರನ್ನು ರಕ್ಷಣೆ ಮಾಡಿದೆ. ಅದರಂತೆ ಸೈದಾಪುರದಲ್ಲಿ ಮೇ 24ರಂದು ನಡೆಯಬೇಕಿದ್ದ ಬಾಲ್ಯವಿವಾಹವನ್ನು ಕೂಡ ಮಕ್ಕಳ ಸಹಾಯವಾಣಿ-1098ಗೆ ಬಂದ ದೂರಿನ್ವಯ ಮೇ 20ರಂದು ದಾಳಿ ನಡೆಸಿ ತಡೆದಿದೆ.

‘ದೇಶದಾದ್ಯಂತ ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಿಸಿದೆ. ಇದನ್ನು ತಡೆಗಟ್ಟಲು ಸರ್ಕಾರ ಲಾಕ್‍ಡೌನ್ ಘೋಷಿಸಿದ್ದರೂ ಸರ್ಕಾರದ ಆದೇಶ ಉಲ್ಲಂಘನೆ ಜತೆಗೆ ಬಾಲ್ಯವಿವಾಹಕ್ಕೆ ಮುಂದಾಗಿರುವುದು ಕಾನೂನು ಅಪರಾಧ. ಬಾಲ್ಯ ವಿವಾಹ ನಿಷೇಧ ಮತ್ತು ನಿಯಂತ್ರಣ ಕಾಯ್ದೆ-2006ರ ಪ್ರಕಾರ ಹೆಣ್ಣಿಗೆ 18 ವರ್ಷ ಮತ್ತು ಗಂಡಿಗೆ 21 ವರ್ಷ ಪೂರ್ಣಗೊಂಡಿರಬೇಕು ಎಂಬುದಾಗಿ ಬಾಲಕಿಯರ ಪೋಷಕರಿಗೆ ತಿಳಿವಳಿಕೆ ನೀಡಲಾಯಿತು. ನಂತರ ಕೋವಿಡ್-19 ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಬಾಲ್ಯವಿವಾಹದಿಂದ ರಕ್ಷಿಸಿದ ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಯಿತು. ತದನಂತರ ಬಾಲಕಿಯರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಪುನರ್ವಸತಿಗಾಗಿ ಮತ್ತು ಮುಂದಿನ ಕ್ರಮಕ್ಕಾಗಿ ಒಪ್ಪಿಸಲಾಯಿತು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಮಾಹಿತಿ ನೀಡಿದ್ದಾರೆ.

ದಾಳಿಯಲ್ಲಿ ಯಾದಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ.ಮಣ್ಣೂರ, ಸೈದಾಪುರ ಪಿಎಸ್‌ಐ ಸುವರ್ಣಾ, ಎಎಸ್‌ಐ ಭೀಮರಾಯ, ಅಂಗನವಾಡಿ ಮೇಲ್ವಿಚಾರಕಿ ಅನಿತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ದೇವಪ್ಪ, ಸಾಬಯ್ಯ ಎನ್., ಮಕ್ಕಳ ಸಹಾಯವಾಣಿ ಸಿಬ್ಬಂದಿ ನಾಗಪ್ಪ ಗಮಗ ಹಾಗೂ ಹೆಡ್‍ಕಾನ್‍ಸ್ಟೆಬಲ್ ಗೋಪಾಲರೆಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು