ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಆಟೊ ನಿಲ್ದಾಣದಲ್ಲಿ ಬೈಕ್ ಪಾರ್ಕಿಂಗ್

ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿಯೇ ಪಾಲನೆಯಾಗದ ಸಂಚಾರ ನಿಯಮ
Last Updated 30 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಹೃದಯ ಭಾಗವಾದ ಮಹಾತ್ಮ ಗಾಂಧಿ ವೃತ್ತ, ನಗರ ಪೊಲೀಸ್‌ ಠಾಣೆ ಮುಂಭಾಗದ ಆಟೊ ನಿಲ್ದಾಣದಲ್ಲಿ ಬೇಕಾಬಿಟ್ಟಿಬೈಕ್‌ ಪಾರ್ಕಿಂಗ್‌ ಮಾಡಲಾಗುತ್ತಿದೆ. ಇದರಿಂದ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿಯೇ ಸಂಚಾರ ನಿಯಮಕ್ಕೆ ಎಳ್ಳುನೀರು ಬಿಡಲಾಗಿದೆ.

ನಗರದ ಪ್ರಮುಖ ಮಾರುಕಟ್ಟೆ ಸ್ಥಳ, ವ್ಯಾಪಾರ ವಹಿವಾಟು ಹೆಚ್ಚಿರುವ ಗಾಂಧಿ ವೃತ್ತದಲ್ಲಿ ಈಚೆಗೆ ಆಟೊ ನಿಲ್ದಾಣ ಮಾಡಲಾಗಿದೆ. ಬ್ಯಾರಿಕೇಡ್‌ ಅಳವಡಿಸಿ ಆಟೊ ನಿಲ್ದಾಣ ಎಂದು ಫಲಕ ಹಾಕಲಾಗಿದೆ. ಆದರೆ, ಅಲ್ಲಿ ಆಟೊಗಳಿಗಿಂತ ಹೆಚ್ಚು ದ್ವಿಚಕ್ರ ವಾಹನಗಳೇ ನಿಂತಿರುತ್ತವೆ. ಇದರಿಂದ ಆಟೊ ಚಾಲಕರು ಹೊರಗಡೆ ಆಟೊಗಳನ್ನು ನಿಲ್ಲಿಸುತ್ತಿದ್ದಾರೆ.

ಹಬ್ಬ ಹರಿದಿನಗಳಲ್ಲಿ ಟ್ರಾಫಿಕ್ ಜಾಂ: ಆಟೊ ನಿಲ್ದಾಣ ಸಮೀಪ ಹಬ್ಬ ಹರಿದಿನಗಳಲ್ಲಿ ತುಂಬಾ ಟ್ರಾಫಿಕ್‌ ಜಾಂ ಉಂಟಾಗುತ್ತದೆ. ವೃತ್ತದ ಸುತ್ತಮುತ್ತಲಿನ ಜಾಗದಲ್ಲಿ ಬಾಳೆದಿಂಡು, ತೆಂಗಿನಕಾಯಿ, ಹೂ, ಹಣ್ಣು ಸೇರಿದಂತೆ ವಿವಿಧ ಪೂಜಾ ಸಾಮಗ್ರಿ ಮಾರಾಟಕ್ಕೆ ಇಡಲಾಗುತ್ತಿದೆ. ಖರೀದಿಗೆ ಬರುವವರು ಸೇರಿದಂತೆ ಎಲ್ಲರೂ ಈ ಆಟೊ ನಿಲ್ದಾಣದಲ್ಲಿಯೇ ವಾಹನಗಳನ್ನು ಪಾರ್ಕ್‌ ಮಾಡುತ್ತಾರೆ.

ಹಣ್ಣು, ಅಂಗಡಿ ಮಾಲೀಕರಿಗೆ ಸಂಕಷ್ಟ: ನಿಲ್ದಾಣದಸುತ್ತಮುತ್ತ ವಿವಿಧ ಹಣ್ಣಿನ ವ್ಯಾಪಾರಿಗಳು ಹಣ್ಣುಗಳನ್ನು ತಳ್ಳುಗಾಡಿಗಳಲ್ಲಿಟ್ಟು ವ್ಯಾಪಾರ ಮಾಡುತ್ತಾರೆ. ಆದರೆ, ಈ ಬೈಕ್‌ಗಳನ್ನು ದಾಟಿ ಗ್ರಾಹಕರು ಬರುವುದಿಲ್ಲ. ಇದರಿಂದ ನಮಗೆ ವ್ಯಾಪಾರವೇ ಆಗುವುದಿಲ್ಲ ಎಂದು ಹೇಳುತ್ತಾರೆ.

‘ಹಣ್ಣಿನ ಅಂಗಡಿಗಳಲ್ಲದೇ ಕಿರಾಣ ಅಂಗಡಿಗಳು ಇವೆ. ಆದರೆ, ಇತ್ತ ಯಾರೂ ಬರುವುದಿಲ್ಲ. ಬಯಲಿನ ಪ್ರದೇಶದಲ್ಲಿರುವ ಕಡೆ ಗ್ರಾಹಕರು ತೆರಳುತ್ತಾರೆ. ಕಳೆದ ಮೂರು ತಿಂಗಳಿಂದ ಸಂಚಾರ ಪೊಲೀಸರು ದಂಡ ಕಟ್ಟಿಸಿದರೂ ಬೈಕ್‌ ಪಾರ್ಕಿಂಗ್‌ ಮಾಡುವುದು ನಿಂತಿಲ್ಲ’ ಎಂದು ಹಣ್ಣಿನ ವ್ಯಾಪಾರಿ ಮಲ್ಲಯ್ಯ ಬಾಗ್ಲಿ ಅಳಲು ತೊಡಿಕೊಂಡರು.

ಹದಗೆಟ್ಟ ಗಾಂಧಿ ವೃತ್ತದ ರಸ್ತೆ: ಚಕ್ರಕಟ್ಟ, ಹತ್ತಿಕುಣಿ ಕ್ರಾಸ್‌, ವೀರಶೈವ ಕಲ್ಯಾಣ ಮಂಟಪಕ್ಕೆ ಗಾಂಧಿ ವೃತ್ತವೇ ಪ್ರಮುಖ ದಾರಿ. ಆದರೆ, ವೃತ್ತದಬಳಿಯೇರಸ್ತೆ ಹದಗೆಟ್ಟಿದ್ದು, ಮಳೆಯಾದರೆ ತಗ್ಗುದಿನ್ನೆಗಳೇ ಕಾಣಿಸುವುದಿಲ್ಲ. ವೃತ್ತದಿಂದ ಚಕ್ರಕಟ್ಟಕ್ಕೆ ತೆರಳುವ ರಸ್ತೆ ತಗ್ಗು, ಎತ್ತರ ಇದ್ದು, ಚಾಲಕರು ಪರದಾಡುತ್ತಿದ್ದಾರೆ.

ಡಾಂಬರು ಕಿತ್ತಿ ಹೋಗಿದ್ದು, ಸಂಬಂಧಿಸಿದವರು ದುರಸ್ತಿ ಮಾಡಲು ಹೋಗಿಲ್ಲ. ಇದರಿಂದ ನೂರಾರು ಜನರು ಸಂಚರಿಸುವ ವೃತ್ತ ಮತ್ತಷ್ಟು ಹದಗೆಟ್ಟಿದೆ.

ಮನೆಗೆ ತೆರಳಲು ನಿವಾಸಿಗರ ಪರದಾಟ:

ವೃತ್ತದಿಂದ ಆಚೆ ತಮ್ಮ ಮನೆಗಳಿಗೆ ತೆರಳಲು ಮಹಿಳೆಯರು ಹರಸಾಹಸ ಪಡಬೇಕಾಗಿದೆ. ಅಡ್ಡಾಡಿಡ್ಡಿ ಬೈಕ್‌ಗಳನ್ನು ನಿಲ್ಲಿಸುವುದರಿಂದ ಸಂದು, ಗೊಂದಿ ಮಾಡಿಕೊಂಡು ನುಸುಳಿಕೊಂಡು ತೆರಳಬೇಕಾಗಿದೆ.

‘ಇದು ಆಟೊ ನಿಲ್ದಾಣವೋ ಬೈಕ್‌ ಪಾರ್ಕಿಂಗ್‌ ಸ್ಥಳವೋ ತಿಳಿಯದಾಗಿದೆ. ನಮ್ಮ ಮನಗೆ ತೆರಳಲು ದಾರಿಯೇ ಇಲ್ಲದಂತಾಗಿದೆ’ ಎಂದು ಗೃಹಿಣಿ ಶಾಂತಬಾಯಿ ಹೇಳುತ್ತಾರೆ.

ಟೊಯಿಂಗ್‌ ವಾಹನವೇ ಇಲ್ಲ!

2016–17ರ ಸಾಲಿನಲ್ಲಿ ಸಂಚಾರ ಪೊಲೀಸ್ ಠಾಣೆಯಾಗಿದ್ದು, ಇಲ್ಲಿಯವರೆಗೆ ಟೊಯಿಂಗ್‌ ವಾಹನವೇ ಇಲ್ಲ. ಇದರಿಂದ ಪಾರ್ಕಿಂಗ್‌ ಇಲ್ಲದ ಸ್ಥಳದಲ್ಲಿ ವಾಹನಗಳನ್ನು ಸಾಗಿಸಲು ಸೂಕ್ತ ವಾಹನವೇ ಇಲ್ಲದಂತಾಗಿದೆ.

ರೈಲ್ವೆ ಸ್ಟೆಷನ್‌ ರಸ್ತೆ, ಚಿತ್ತಾಪುರ ರಸ್ತೆ, ಹತ್ತಿಕುಣಿ ಕ್ರಾಸ್, ಗಾಂಧಿ ವೃತ್ತ, ಗಂಜ್‌ ವೃತ್ತ, ತಹಶೀಲ್ದಾರ್‌ ಕಚೇರಿ ಸೇರಿದಂತೆ ವಿವಿಧ ಕಡೆ ಫುಟ್‌ಪಾತ್‌ನಲ್ಲಿಯೇ ವಾಹನಗಳನ್ನು ಪಾರ್ಕಿಂಗ್‌ ಮಾಡಲಾಗುತ್ತಿದೆ. ಪಾದಚಾರಿಗಳು ಇವುಗಳನ್ನು ತಳ್ಳಿಕೊಂಡೇ ಹೋಗಬೇಕಿದೆ. ಟೊಯಿಂಗ್‌ ವಾಹನ ಇದ್ದರೆ ಭಯಕ್ಕಾದರೂ ಕೆಲವರು ಸರಿಯಾದ ಸ್ಥಳದಲ್ಲಿ ನಿಲ್ಲಿಸುತ್ತಾರೆ.

‘ಟೊಯಿಂಗ್‌ ವಾಹನ ಇಲ್ಲದಿರುವ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ಸೂಕ್ತವಾಗಿ ಸ್ಪಂದಿಸಿದ್ದಾರೆ. ಗಾಂಧಿ ವೃತ್ತದಲ್ಲಿ ಬದಲಿ ವ್ಯವಸ್ಥೆಗೆ ಇಲ್ಲ. ಇದರಿಂದ ಅಲ್ಲಿ ಟ್ರಾಫಿಕ್‌ ಸಮಸ್ಯೆ ಆಗುತ್ತಿದೆ’ ಎನ್ನುತ್ತಾರೆ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಮೆಹಬೂಬ್‌ ಅಲಿ ಅವರು.

* ಹಬ್ಬಗಳ ವೇಳೆ ಇಲ್ಲಿ ಕಾಲಿಡಲು ಜಾಗವಿರುವಿರುವುದಿಲ್ಲ. ಅದಕ್ಕಿಂತ ಮುಂಚಿತವಾಗಿ ಅಧಿಕಾರಿಗಳು ಇದಕ್ಕೆ ಪರಿಹಾರ ಹುಡುಕಬೇಕು

-ಮುರುಗೇಂದ್ರ ಕಟ್ಟಿಮನಿ, ನಗರ ನಿವಾಸಿ

* ನಗರದ ಪ್ರಮುಖ ವೃತ್ತದಲ್ಲೇ ಇಂಥ ಅವ್ಯವಸ್ಥೆ ತಾಂಡವವಾಡುತ್ತಿದೆ. ಸಂಬಂಧಿಸಿದವರು ಶೀಘ್ರ ಇತ್ತ ಗಮನಹರಿಸಿ ಸಮಸ್ಯೆ ಬಗೆ ಹರಿಸಬೇಕು

-ಮುಸ್ತಾಫ್ ಪಟೇಲ್, ನಗರ ನಿವಾಸಿ

* ಬೈಕ್‌ ಪಾರ್ಕ್‌ ಮಾಡುವುದರಿಂದ ಆಟೊಗಳನ್ನು ಹೊರಗಡೆ ನಿಲ್ಲಿಸುತ್ತಿದ್ದರು. ನಾನು ಬಂದ ಮೇಲೆ ದಂಡ ವಿಧಿಸುತ್ತಿದ್ದೇನೆ. ಟ್ರಾಫಿಕ್‌ ಪಾಯಿಂಟ್‌ ಹಾಕಲಾಗಿದೆ.

-ಮೆಹಬೂಬ್‌ ಅಲಿ, ಸಂಚಾರ ಪೊಲೀಸ್ ಪಿಎಸ್‌ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT