ಭಾನುವಾರ, ಆಗಸ್ಟ್ 1, 2021
21 °C
ಮೈಲಾಪುರ ಅಗಸಿಯಿಂದ ಸುಭಾಷ ವೃತ್ತದವರೆಗೆ ಬೃಹತ್ ಮೆರವಣಿಗೆ; ಸರ್ಕಾರಗಳ ವಿರುದ್ಧ ಆಕ್ರೋಶ

ಯಾದಗಿರಿ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ಮೈಲಾಪುರ ಅಗಸಿಯಿಂದ ಸುಭಾಷ ವೃತ್ತದವರೆಗೆ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಬೃಹತ್ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಮತ್ತು ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಈ ವೇಳೆ ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಅವರು ನಗರದ ಮೈಲಾಪುರ ಅಗಸಿಯಲ್ಲಿ ಸೇರಿದ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರ ಸೈಕಲ್ ರ‍್ಯಾಲಿಗೆ ಚಾಲನೆ ನೀಡಿದರು.

ಟಾಂಗಾದಲ್ಲಿ ಪ್ರಯಾಣ ಬೆಳೆಸಿ ತಹಶೀಲ್ದಾರ್‌ ಕಚೇರಿ ಮೂಲಕ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದಿಂದ ನೇತಾಜಿ ಸುಭಾಷ್‌ಚಂದ್ರ ಚೌಕ್ ಬಳಿ ಕಾರ್ಯಕರ್ತರತ್ತ ಕೈ ಬೀಸಿ ಎತ್ತಿನಬಂಡಿಯನ್ನು ಪಕ್ಷದ ಇತರ ನಾಯಕರಾದ ಸೂರಜ್ ಹೆಗಡೆ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಶರಣಪ್ಪ ಮಟ್ಟೂರ, ಚನ್ನಾರೆಡ್ಡಿಗೌಡ ಪಾಟೀಲ ತುನ್ನೂರ, ಎ.ಸಿ.ಕಾಡ್ಲೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್‌ರೊಂದಿಗೆ ಹತ್ತಿದರು.

ಈ ವೇಳೆ ಮಾತನಾಡಿದ ಮಹಾದೇವಪ್ಪ, ‘ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪೆಟ್ರೋಲ್, ಡೀಸೆಲ್ ದರ ₹1 ಏರಿಸಿದಾಗ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸರ್ಕಾರದ ನಡೆಯನ್ನು ಖಂಡಿಸಿ ಭಾರಿ ಪ್ರಚಾರ ಪಡೆದರು. ಆದರೆ, ಈಗ ತೈಲ ಬೆಲೆ ಒಂದು ಲೀಟರ್‌ಗೆ ₹ 100 ದಾಟಿದೆ. ಇದರಿಂದ ಜನ ಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ಕಾರ್ಪೋರೇಟ್ ವಲಯ ಪರ ಮೋದಿ ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಪೆಟ್ರೋಲ್‌, ಡೀಸೆಲ್‌, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜನ ಸಾಮಾನ್ಯರಿಗೆ ಹೊರೆಯಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳಾದ ತೈಲ ಬೆಲೆ ಏರಿಕೆ ಹಾಗೂ ರೈತ ವಿರೋಧಿ ಕಾಯ್ದೆಗಳ ಜಾರಿಗೆ ವಿರೋಧ ವ್ಯಕ್ತಪಡಿಸಿದರು.

ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ‘ಕಳೆದ 3 ವರ್ಷಗಳಲ್ಲಿ ತೈಲ ಬೆಲೆ ಏರಿಕೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಅಲ್ಲದೇ ಜನಸಾಮಾನ್ಯರು ಉಪಯೋಗಿಸುವ ಅಡುಗೆ ಅನಿಲ ದರ ದುಪ್ಪಟ್ಟಾಗಿದೆ. ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚುತ್ತಲೇ ಇದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಬದುಕು ಸಾಗಿಸಲು ಹರ ಸಾಹಸ ಪಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತರು ಸಾಲ ಮಾಡಿ ಕೃಷಿ ಮಾಡಿದರೂ ಅವರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಈ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ದೇಶದ ರೈತರು ತಿಂಗಳು ಕಾಲ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ತಿಳಿಸಿದರು.

ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಶ್ರೀನಿವಾಸರೆಡ್ಡಿ ಕಂದಕೂರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸರೆಡ್ಡಿ ಅನಪುರ, ಮಹಿಪಾಲರೆಡ್ಡಿ ಹತ್ತಿಕುಣಿ, ಚಿದಾನಂದಪ್ಪ ಕಾಳೆಬೆಳಗುಂದಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ ನಾಯಕ, ಮರೆಪ್ಪ ಬಿಳ್ಹಾರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜಾಕುಮಾರ ನಾಯಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಗೂಳಿ, ಶ್ಯಾಂಸನ್ ಮಾಳಿಕೇರಿ, ನಗರಸಭೆ ಸದಸ್ಯರಾದ ಗಣೇಶ ದುಪ್ಪಲ್ಲಿ, ಹಣಮಂತ ನಾಯಕ, ಸಾಬರೆಢ್ಡಿ ಕಲಬುರ್ಗಿ, ರಾಘವೇಂದ್ರ ಮಾನಸಗಲ್, ಬಸ್ಸುಗೌಡ ಬಿಳ್ಹಾರ, ಜಹೀರ್ ಸಾಬ್, ಮಾಣಿಕರೆಡ್ಡಿ ಕುರಕುಂದಿ, ಬಸವರಾಜ್ ಸೊನ್ನದ, ಸೋಮಶೇಖರ ಮಸ್ಕನಳ್ಳಿ, ರಿಯಾಜ್ ಅಹ್ಮದ್, ಅನಿನಾಶ ಜಗನ್ನಾಥ, ಸಂಜುಕುಮಾರ ಕವಲಿ, ಅಭಿಷೇಕ ದಾಸನಕೇರಿ, ಮಂಜುನಾಥ ದಾಸನಕೇರಿ ಸೇರಿದಂತೆ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದ್ದರು.

***

ಸೈಕಲ್ ಜಾಥಾ, ಟಾಂಗಾ ಮೆರವಣಿಗೆ

ಯಾದಗಿರಿ: ದೇಶದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಪ್ರತಿಭಟನೆಯಲ್ಲಿ ಮೈಲಾಪುರ ಅಗಸಿಯಿಂದ ಸುಭಾಷ ವೃತ್ತದವರೆಗೆ ಸೈಕಲ್ ಚಲಾಯಿಸುವ ಮೂಲಕ ಕಾರ್ಯಕರ್ತರೊಂದಿಗೆ ಪ್ರಯಾಣ ಬೆಳೆಸಿದ ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.

ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ತೆರಳಿದ ಮುಖಂಡರು ಗಾಂಧಿವೃತ್ತ, ವೀರಶೈವ ಕಲ್ಯಾಣ ಮಂಟಪ, ತಹಶೀಲ್ದಾರ್ ಕಚೇರಿ ಮಾರ್ಗವಾಗಿ ಶಾಸ್ತ್ರೀ ವೃತ್ತದ ಮೂಲಕ ಸುಭಾಷ ವೃತ್ತ ತಲುಪಿದರು.

ದಾರಿಯುದ್ದಕ್ಕೂ ದರ್ಶನಾಪುರ ಅವರು ನವ ಯುವಕರಂತೆ ಎಲ್ಲರಿಗಿಂತ ಮುಂದೆ ಸೈಕಲ್ ಸವಾರಿ ಮಾಡಿದರು. ಕಾರ್ಯಕರ್ತರು ಅವರಿಗೆ ಜೈಕಾರ ಹಾಕಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ನಂತರ ಅವರು ಸುಭಾಷ ವೃತ್ತದಲ್ಲಿ ಕುದುರೆ ಟಾಂಗಾದಲ್ಲಿ ಆಗಮಿಸಿದ ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಅವರ ಜೊತೆಗೂಡಿ ಜನರತ್ತ ಕೈ ಬೀಸಿ ಪ್ರತಿಭಟನೆಗೆ ಶಕ್ತಿ ತುಂಬಿದರು.

***

ದೇಶದಲ್ಲಿ ಬೆಲೆ ಏರಿಕೆಯಿಂದ ಕೋಟ್ಯಂತರ ಜನ ಸಮಸ್ಯೆಗೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರ ಮೇಲೆ ಹೊರೆ ಹೊರೆಸಿವೆ

- ಶರಣಬಸಪ್ಪಗೌಡ ದರ್ಶನಾಪುರ, ಶಹಾಪುರ ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು