ಯಾದಗಿರಿ: ಜಿಲ್ಲೆಯಲ್ಲಿ ಕಳೆದ ವಾರದಿಂದ ನಿರಂತರ ಮಳೆಯಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿದರೆ, ಜನಜೀವನ ಅಸ್ತವ್ಯಸ್ತವಾಗಿದೆ.
ಬುಧವಾರ ರಾತ್ರಿಯಿಂದ ಮಳೆಯಾಗಿದ್ದು, ಗುರುವಾರವೂ ಮುಂದುವರಿತ್ತು. ಕೆಲ ಗಂಟೆಗಳ ಕಾಲ ಮಳೆ ಸುರಿದು, ಮತ್ತೆ ಬಿಡುವು ನೀಡುತ್ತಿತ್ತು. ಗುರುವಾರ ಪೂರ್ತಿ ಮಳೆಯಾಗಿದೆ. ನಿರಂತರ ಮಳೆಯಿಂದ ಜಿಲ್ಲೆಯ ಹಲವಾರು ಕಡೆ ಮನೆಗಳು ಕುಸಿದಿವೆ. ಜುಲೈ 19ರಿಂದ ಜುಲೈ 27ರ ವರೆಗೆ ಜಿಲ್ಲೆಯಲ್ಲಿ 358 ಮನೆಗಳು ಕುಸಿದಿವೆ.
ಶಾಲಾ–ಕಾಲೇಜುಗಳಿಗೆ ರಜೆ: ಹಮಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಿರುವುದರಿಂದ ಜುಲೈ 27 ಗುರುವಾರ ಜಿಲ್ಲೆಯಾದ್ಯಂತ ಶಾಲಾ–ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಕಳೆದ ವಾರದಿಂದ ಮಳೆಯಾಗುತ್ತಿರುವ ಪರಿಣಾಮ ಹಸಿರುವಲಯ ನಿರ್ಮಾಣವಾಗಿದೆ. ಭತ್ತ ನಾಟಿ ಮಾಡುತ್ತಿದ್ದು, ಬೆಟ್ಟ ಗುಡ್ಡಗಳು ಹಸಿರು ಹೊದ್ದಿವೆ.
ಇನ್ನೊಂದೆಡೆ ವಿಜಯಪುರದ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಿದ್ದರಿಂದ ಅಲ್ಲಿಂದ ಹೊರ ಹರಿವು ಹೆಚ್ಚಾಗಿದೆ. ಬಸವಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. 21 ಗೇಟುಗಳ ಮೂಲಕ ನೀರು ಹರಿಸಲಾಗುತ್ತಿದೆ.
ಇತ್ತ ನಗರ ಹೊರವಲಯದ ಭೀಮಾ ನದಿಗೂ ನೀರು ಬಿಡುಗಡೆ ಮಾಡಲಾಗಿದ್ದು, ದಡಮೀರಿ ನದಿ ಹರಿಯುತ್ತಿದೆ. ಯಾದಗಿರಿ–ಗುರುಸಣಗಿ ಬ್ರಿಜ್ ಕಂ ಬ್ಯಾರೇಜ್‌ಗೆ 12 ಸಾವಿರ ಕ್ಯುಸೆಕ್ ಒಳಹರಿವಿದ್ದರೆ, 28,000 ಕ್ಯುಸೆಕ್ ನದಿಗೆ ಹರಿಸಲಾಗುತ್ತಿದೆ. 24 ಗೇಟುಗಳಲ್ಲಿ 14 ಗೇಟುಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ನದಿಯಲ್ಲಿನ ಕಂಗಳೇಶ್ವರ, ವೀರಾಂಜನೇಯ ದೇಗುಲ ಜಲಾವೃತವಾಗಿದೆ.
ಅಲ್ಲದೇ ದೊಡ್ಡ ಹಳ್ಳದಲ್ಲಿ ಮೀನಿಗಾಗಿ ಬಲೆ ಬೀಸಿ ಮೀನುಗಾರರು ಶಿಕಾರಿ ಕೈಗೊಂಡಿದ್ದರು. ಜಿಲ್ಲಾಡಳಿತ ಭವನದ ಆಹಾರ ಇಲಾಖೆ ಉಪನಿರ್ದೇಶಕರ ಕಚೇರಿಗೆ ಮಳೆ ನೀರು ನುಗ್ಗಿತ್ತು. ಕೆಲಸಗಾರರು ಬೆಳಿಗ್ಗೆ ನೀರು ಹೊರ ಹಾಕಿದರು.
ನಾರಾಯಣಪುರ ಡ್ಯಾಂ ಅಲರ್ಟ್: ಬುಧವಾರ ರಾತ್ರಿಯಿಂದಲೇ ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಬಿಡುವ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಗುರುವಾರ ಪೊಲೀಸ್ ಇಲಾಖೆಯಿಂದ ಕೃಷ್ಣಾ ನದಿ ದಡ ಗ್ರಾಮಗಳ ಜನರಿಗೆ ಮಾಹಿತಿ ನೀಡಿದರು.
ಕೃಷ್ಣಾ ನದಿ ದಡಕ್ಕೆ ಸಾರ್ವಜನಿಕರು ತೆರಳದಂತೆ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸಲಾಯಿತು. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟ ಪ್ರಯುಕ್ತ ಸುರಪುರ ಪೊಲೀಸ್ ಠಾಣೆ ಜನಸ್ನೇಹಿ ಪೊಲೀಸ್ ದಯಾನಂದ ಅವರು ನದಿ ಪಾತ್ರದ ಜನರಿಗೆ ನದಿಬಳಿ ಹೋಗದಂತೆ ಜಾಗೃತಿ ಮೂಡಿಸಿದರು.
ನದಿ ಪಾತ್ರದಲ್ಲಿ ಇರುವ ಗ್ರಾಮಗಳಾದ ಲಿಂಗದಳ್ಳಿ, ಬಂಡೊಳ್ಳಿ, ದಾದಾಲಾಪುರ, ತಿಂಥಣಿ, ಅರಳಹಳ್ಳಿ, ದೇವಾಪುರ, ಶೆಳ್ಳಗಿ, ಮುಸ್ಟಳ್ಳಿ, ಬೇವಿನಾಳ, ಸೂಗೂರು, ಹೇಮ್ಮಡಗಿ, ಅಡ್ಡೋಡಗಿ, ಚೌಡೇಶ್ವರಿಹಾಳ, ಕರ್ನಾಳ, ಹೇಮನೂರ ಗ್ರಾಮಸ್ಥರು ಯಾವುದೇ ಕಾರಣಕ್ಕೂ ನದಿಯಲ್ಲಿ ಇಳಿಯದಂತೆ ನದಿ ದಡಕ್ಕೆ ಹೋಗದಂತೆ ಎಲ್ಲಾ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಸೋರುತ್ತಿರುವ ಶಾಲೆಗಳು: ನಿರಂತರ ಮಳೆಯಿಂದ ಜಿಲ್ಲೆಯ ವಿವಿಧ ಶಾಲೆಗಳು ಸೋರುತ್ತಿವೆ. ವಡಗೇರಾ ತಾಲ್ಲೂಕಿನ ಕದರಾಪುರ, ಬೆಂಡೆಬೆಂಬಳಿ, ಕೊಂಕಲ್ ಸೇರಿದಂತೆ ವಿವಿಧ ಕಡೆ ಶಾಲೆಗಳು ಶಿಥಿಲಾವಸ್ಥೆಗೆ ತಲುಪಿವೆ.
ವಡಗೇರಾ ತಾಲ್ಲೂಕಿನ ಕೊಂಕಲ್ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲಾ ಆವರಣವು ಸಂಪೂರ್ಣವಾಗಿ ಚರಂಡಿಯ, ಮಳೆಯ ನೀರಿನಿಂದಾಗಿ ಕೆರೆಯಂತಾಗಿದೆ.
ಪ್ರೌಢ ಶಾಲೆಯಲ್ಲಿ 7ನೇ ತರಗತಿಯಿಂದ 10 ನೇ ತರಗತಿ ವರೆಗೆ 298 ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಮೂರು ಜನ ಕಾಯಂ ಶಿಕ್ಷಕರು; ಇದರಲ್ಲಿ ಒಬ್ಬರು ಮುಖ್ಯಶಿಕ್ಷಕರು ಇದ್ದಾರೆ. ಇವರ ಜೊತೆಗೆ 4 ಜನ ಅತಿಥಿ ಶಿಕ್ಷಕರು ಸಹ ಇದ್ದಾರೆ.
ಸೋರುತ್ತಿರುವ ಕೋಣೆಗಳು: ಈ ಶಾಲೆಯಲ್ಲಿ 11 ಕೋಣೆಗಳು ಇದ್ದು, ಇದರಲ್ಲಿ 1 ಕೋಣೆ ಮುಖ್ಯಶಿಕ್ಷಕ, ಕೋಣೆ ಸಿಬ್ಬಂದಿ ವರ್ಗಕ್ಕೆ, 1 ಕೋಣೆ ಶಿಕ್ಷಕರಿಗೆ ಮೀಸಲಾಗಿದ್ದರೆ ಉಳಿದ 9 ಕೋಣೆಯಲ್ಲಿ 3 ಕೋಣೆಗಳು ಶಿಥಲಗೊಂಡಿವೆ. ಉಳಿದ 6 ಕೊಣೆಗಳಲ್ಲಿ ಕಲಿಕೆ ಹಾಗೂ ಬೋಧನೆ ನಡೆಯುತ್ತಿದೆ.
ಮೂರು ಕೋಣೆಗಳು ಶಿಥಿಲಗೊಂಡಿರುವದರಿಂದ ಮಳೆಯ ನೀರು ಹನಿ ಹನಿಯಾಗಿ ವರ್ಗಕೋಣೆಯ ಒಳಗಡೆ ಬಿಳುವುದರಿಂದ ಸ್ಥಳದ ಅಭಾವದಿಂದಾಗಿ ಮಕ್ಕಳ ಕಲಿಕೆಗೆ ಹಾಗೂ ಬೋಧನೆ ಮಾಡಲು ತೊಂದರೆಯಾಗುತ್ತಿದೆ.
ಕೆರೆಯಂತಾದ ಶಾಲಾ ಆವರಣ: ಶಾಲಾ ಆವರಣವು ತಗ್ಗು ಪ್ರದೇಶದಲ್ಲಿ ಇರುವುದರಿಂದ ಚರಂಡಿಯ, ಮಳೆಯ ಹಾಗೂ ಇನ್ನಿತರ ಕಡೆಯಿಂದ ಬರುವ ಹೊಲಸು ನೀರು ಶಾಲಾ ಆವರಣದಲ್ಲಿ ಸಂಗ್ರಹವಾಗಿ ಶಾಲಾ ಆವರಣವೂ ಗಬ್ಬು ದುರ್ವಾಸನೆ ಕೂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.