ಶುಕ್ರವಾರ, ಡಿಸೆಂಬರ್ 4, 2020
23 °C
ಜಿಲ್ಲೆಯಲ್ಲಿ ಇಳಿಕೆಯಾಗುತ್ತಿರುವ ಕೋವಿಡ್‌ ಪ್ರಕರಣಗಳು

ಯಾದಗಿರಿ: ಕೋವಿಡ್‌ ಕೇರ್ ಸೆಂಟರ್‌ಗಳು ಖಾಲಿ ಖಾಲಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಇಳಿಕೆಯಾಗಿದ್ದು, 12ಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿಲ್ಲ. ಗುರುವಾರ ಕೇವಲ ಒಂದು ಪ್ರಕರಣ ದೃಢಪಟ್ಟಿದ್ದು, ಇದು ಕೋವಿಡ್‌ ಪತ್ತೆಯಾದಾಗಿನಿಂದ ಕಡಿಮೆ ಸಂಖ್ಯೆಯಾಗಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೇ 12ರಂದು ದಂಪತಿಯಲ್ಲಿ ಕೋವಿಡ್‌ ದೃಢವಾಗಿತ್ತು. ಆ ನಂತರ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತ ಹೋಗಿದ್ದವು. ಮುಂಬೈನಿಂದ ಬಂದವರಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಆಗಿನಿಂದ ಪ್ರಕರಣಗಳು ಎರಡು ಅಂಕಿ, ಮೂರಂಕಿಗಳಲ್ಲಿ ವರದಿಯಾಗುತ್ತಿದ್ದವು. ಬರುಬರುತ್ತಾ ಕೋವಿಡ್‌ ವರದಿಗಳು ಕಡಿಮೆಯಾಗುತ್ತಿವೆ.

ಕೋವಿಡ್‌ ಆಸ್ಪತ್ರೆ, ಕೇರ್‌ ಸೆಂಟರ್‌ ಖಾಲಿ: ಜಿಲ್ಲೆಯಲ್ಲಿ ಒಂದು ಕೋವಿಡ್‌ ಆಸ್ಪತ್ರೆ, ಮೂರು ಕೋವಿಡ್‌ ಕೇರ್‌ ಸೆಂಟರ್ ಸ್ಥಾಪಿಸಲಾಗಿತ್ತು. ಅದು ಈಗ ಖಾಲಿಯಾಗಿದೆ. ಕೋವಿಡ್‌ ದೃಢವಾದರೆ ಮನೆಗಳಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಹಾಪುರ, ಸುರಪುರ, ಯಾದಗಿರಿ ತಾಲ್ಲೂಕಿನ ಬಂದಳ್ಳಿಯ ಏಕಲವ್ಯ ಶಾಲೆಯಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗಿತ್ತು. ಈಗ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಹಳೆ ಆಸ್ಪತ್ರೆಗಳಿಗೆ ಕರೆಯಿಸಿಕೊಳ್ಳಲಾಗಿದೆ. 

ಕೋವಿಡ್‌ ಪರೀಕ್ಷೆಗೆ ಟಾರ್ಗೆಟ್‌: ಕೋವಿಡ್ ವರದಿಗಳು ಕಡಿಮೆಯಾಗಿದ್ದರೂ ಪರೀಕ್ಷೆ ಮಾಡುವುದು ಕಡಿಮೆ ಮಾಡಿಲ್ಲ ಎನ್ನುತ್ತಿವೆ ವೈದ್ಯಕೀಯ ಮೂಲಗಳು. ಜಿಲ್ಲೆಯಲ್ಲಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿನಿತ್ಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದೆ.

‘ನಗರದ ಪ್ರದೇಶಗಳಲ್ಲಿ ನಿಗದಿತ ಗುರಿಗಿಂತ ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಜನರು ಮಾಸ್ಕ್‌ ಧರಿಸುವುದು ಕಡ್ಡಾಯವಾಗಿ ಪಾಲಿಸಬೇಕು. ಆಗಾಗ ಸ್ಯಾನಿಟೈಸ್‌ನಿಂದ ಮಾತ್ರವಲ್ಲದೆ ಸಾಬೂನಿಂದಲೂ ಕೈ ತೊಳೆದುಕೊಳ್ಳಬೇಕು. ಕಡ್ಡಾಯವಾಗಿ ಅಂತರ ಪಾಲಿಸಬೇಕು. ಜನ ಸಂದಣಿಯಲ್ಲಿ ಹೆಚ್ಚು ಓಡಾಟ ಮಾಡಬಾರದು. ಇವುಗಳಿಂದ ಮಾತ್ರ ಕೋವಿಡ್‌ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಪಾಟೀಲ ಅವರು.

ಜನರು ಮೈಮರೆಯುವಂತಿಲ್ಲ: ‘ಜಿಲ್ಲೆಯಲ್ಲೂ ಕೋವಿಡ್ ಹರಡುವಿಕೆ ಕಡಿಮೆಯಾಗಿದ್ದು, ಆಶಾದಾಯಕ ಬೆಳವಣಿಗೆ. ಆದರೆ, ಜನರು ಮೈಮರೆಯುವಂತಿಲ್ಲ. ಕೋವಿಡ್‌ ಬಗ್ಗೆ ಜಾಗೃತಿ ವಹಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎನ್ನುತ್ತಾರೆ ಇಂಡಿಯನ್‌ ಮೆಡಿಕಲ್‌ ಅಸೋಸಿಯೆಷನ್‌ ಪ್ರಧಾನ ಕಾರ್ಯದರ್ಶಿ ಡಾ.ವೀರೇಶ ಜಾಕಾ.

‘ಯುರೋಪ್‌ನಲ್ಲಿ ಕೋವಿಡ್ 2ನೇ ಅಲೆ ಆರಂಭಗೊಂಡಿದೆ. ಅಲ್ಲಿ ದಿನಕ್ಕೆ ಸಾವಿರಾರೂ ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್‌ ಕಡಿಮೆಯಾಗುತ್ತಿದೆಯೇ ಹೊರತು ಸಂಪೂರ್ಣ ಹೋಗಿಲ್ಲ. ಆ ವೈರಾಣುಗೆ ಔಷಧಿ ಇನ್ನೂ ಸಿಕ್ಕಿಲ್ಲ. ಸದ್ಯಕ್ಕೆ ಮಾಸ್ಕ್ ಧರಿಸುವುದೇ ಔಷಧಿ ಎಂದು ಜನತೆ ಭಾವಿಸಬೇಕು’ ಎನ್ನುತ್ತಾರೆ ಅವರು.

ಕೋವಿಡ್‌ ಪ್ರಕರಣಗಳ ವಿವರ

ಕಳೆದ ಒಂದು ವಾರದಿಂದ ಕೋವಿಡ್‌ ಪ್ರಕರಣಗಳು ಕಡಿಮೆಯಾಗಿದ್ದು, ಕೇವಲ 48 ಪ್ರಕರಣಗಳು ಪತ್ತೆಯಾಗಿವೆ. ನವೆಂಬರ್ 13ರಂದು 6, 14ರಂದು 11, 15ರಂದು 7, 16ರಂದು 5, 17ರಂದು 6, 18ರಂದು 12, ನವೆಂಬರ್ 19ರಂದು 1 ಪ್ರಕರಣ ಪತ್ತೆಯಾಗಿದೆ.

‌ಶಹಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕೋವಿಡ್‌ ಪೀಡಿತರು ಸಾವನ್ನಪ್ಪಿದ್ದಾರೆ. ಹುಣಸಗಿ ತಾಲ್ಲೂಕಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಯಾದಗಿರಿ ತಾಲ್ಲೂಕಿನಲ್ಲಿ 12, ಗುರುಮಠಕಲ್‌ 5, ಶಹಾಪುರ 25, ವಡಗೇರಾ 6, ಸುರಪುರ 10, ಹುಣಸಗಿ ತಾಲ್ಲೂಕಿನಲ್ಲಿ 3 ಜನ ಕೋವಿಡ್‌ನಿಂದ ನಿಧನರಾಗಿದ್ದಾರೆ. ಇಲ್ಲಿಯವರೆಗೆ 61 ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ ಹೆಚ್ಚು ಸಕರಾತ್ಮಕ ಪ್ರಕರಣಗಳು ಪತ್ತೆಯಾಗಿದ್ದು, ವಡಗೇರಾ ತಾಲ್ಲೂಕಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ದೃಢಪಟ್ಟಿವೆ. ಯಾದಗಿರಿ 3461, ಗುರುಮಠಕಲ್‌ 917, ಶಹಾಪುರ 2478, ವಡಗೇರಾ 536, ಸುರಪುರ 1661, ಹುಣಸಗಿ ತಾಲ್ಲೂಕಿನಲ್ಲಿ 974 ಸಕರಾತ್ಮಕ ಪ್ರಕರಣಗಳು ವರದಿಯಾಗಿವೆ.

ಕೋವಿಡ್‌ ಅಂಕಿ ಅಂಶಗಳು

ತಾಲ್ಲೂಕು;ಗುಣಮುಖರಾದವರ ಸಂಖ್ಯೆ

ಯಾದಗಿರಿ;3435
ಗುರುಮಠಕಲ್‌;897
ಶಹಾಪುರ;2708
ವಡಗೇರಾ;517
ಸುರಪುರ;1634
ಹುಣಸಗಿ;953
ಒಟ್ಟು;10,144
(ಇದು ನವೆಂಬರ್ 19 ವರೆಗಿನ ಮಾಹಿತಿ)

ಆಧಾರ: ಜಿಲ್ಲಾ ಆರೋಗ್ಯ ಇಲಾಖೆ

***

ಕೋವಿಡ್‌ ಪ್ರಕರಣಗಳು ಇಳಿಕೆಯಾಗುತ್ತಿದ್ದರೂ ನಾವು ದಿನ ನಿತ್ಯ 1,100 ಪರೀಕ್ಷೆಗಳನ್ನು ಮಾಡುತ್ತಿದ್ದೇವೆ. ಆದರೂ ಜನರು ಕೋವಿಡ್‌ ನಿಯಮಗಳನ್ನು ಪಾಲಿಸಬೇಕು
ಡಾ. ಇಂದುಮತಿ ಪಾಟೀಲ, ಡಿಎಚ್‌ಒ

***

ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಗಣನೀಯವಾಗಿ ಇಳಿಮುಖವಾಗುತ್ತಿದೆ. ಆದರೆ, ಜನರು ಜಾಗೃತಿಯನ್ನು ಇನ್ನು ಮುಂದುವರೆಸಬೇಕಾದ ಅಗತ್ಯವಿದೆ

ಡಾ.ವೀರೇಶ ಜಾಕಾ, ಐಎಂಎ, ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು