ಶುಕ್ರವಾರ, ಜೂನ್ 25, 2021
20 °C
ಜಿಲ್ಲೆಯಲ್ಲಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದವರಿಗೆ ದಂಡದ ಶಿಕ್ಷೆ

ಯಾದಗಿರಿ: 449 ವಾಹನ ವಶ, ₹34 ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಸೋಮವಾರದಿಂದ ಕಠಿಣ ಲಾಕ್‌ಡೌನ್‌ ನಿಯಮ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿವರಿಗೆ ದಂಡ ಮತ್ತು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಪೊಲೀಸರು ರಸ್ತೆಗೆ ಇಳಿದು ಅನವಶ್ಯವಾಗಿ ತಿರುಗಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.

10 ಗಂಟೆ ನಂತರವೂ ಕೆಲ ಅಂಗಡಿಗಳು ತೆಗೆದಿದ್ದರಿಂದ ಅಧಿಕಾರಿಗಳ ತಂಡ ತೆರಳಿ ಮುಚ್ಚಿಸಿದರು. ಜೊತೆಗೆ ದಂಡವನ್ನೂ ವಿಧಿಸಿದರು.

ನಗರದ ಸುಭಾಷ ವೃತ್ತ, ಶಾಸ್ತ್ರಿ, ಹೊಸಳ್ಳಿ ಕ್ರಾಸ್‌, ಗಾಂಧಿ ವೃತ್ತ, ಗಂಜ್‌ ವೃತ್ತ, ಪದವಿ ಕಾಲೇಜು ಸೇರಿದಂತೆ ನಗರದ ವಿವಿಧೆಡೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸಾರ್ವಜನಿಕರು ಅನಗತ್ಯವಾಗಿ ತಿರುಗಾಡದಂತೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

449 ವಿವಿಧ ವಾಹನಗಳ ವಶ:

ನಗರದ ವಿವಿಧೆಡೆ ಬೆಳಿಗ್ಗೆಯೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ
ಪಡೆದಿದ್ದಾರೆ.

ಇದಕ್ಕೂ ಮುಂಚೆ ಭಾನುವಾರ ಸಂಜೆ ಪೊಲೀಸ್‌ ವಾಹನಗಳಲ್ಲಿ ಮೈಕ್‌ ಮೂಲಕ ಕೋವಿಡ್‌ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ್ದರು.

ಬೆಳಿಗ್ಗೆ 6 ಗಂಟೆ ಸಂಜೆ 5 ಗಂಟೆ ವರೆಗೆ 449 ನಾಲ್ಕು ಚಕ್ರ, ದ್ವಿಚಕ್ರ, ತ್ರಿ ಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ದ್ವಿಚಕ್ರ 406, ತ್ರಿ ಚಕ್ರ 25, ನಾಲ್ಕು ಚಕ್ರದ 18 ವಾಹನ ಸೇರಿದಂತೆ ಒಟ್ಟಾರೆ 449 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ನಗರದ ಸುಭಾಷ ವೃತ್ತದಲ್ಲಿ ಪೊಲೀಸರು, ಗೃಹ ರಕ್ಷಕದಳದ ಸಿಬ್ಬಂದಿ ಜೊತೆಗೂಡಿ ವಾಹನಗಳನ್ನು ಲಾರಿಗೆ ಹತ್ತಿಸಿ ಪೊಲೀಸ್‌ ಠಾಣೆಗೆ ಒಯ್ದರು. ಇದರಿಂದ ವಾಹನಗಳಲ್ಲಿ ಬಂದ ಸವಾರರು ಪೊಲೀಸರ ಜೊತೆ ವಾಗ್ವದ ನಡೆಸಿದರು. ಕೆಲವರು ಅಗತ್ಯ ದಾಖಲಾತಿ ತೋರಿಸಿದರೂ ಪೊಲೀಸರು ವಾಹನಗಳನ್ನು ಬಿಡಲಿಲ್ಲ. ಇದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಸವಾರರು ಮನೆಗೆ ತೆರಳಿದರು.

ಮಾಸ್ಕ್‌ ಧರಿಸದರಿಗೆ ದಂಡ:

ವಾಹನ ಸವಾರರು ನಿಯಮ ಉಲ್ಲಂಘಿಸಿದ್ದರಿಂದ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಿದರು.

349 ಜನರಿಗೆ ತಲಾ ₹100 ರಂತೆ ₹34,900 ದಂಡ ವಸೂಲಿ ಮಾಡಿದರು. ಇದೇ ವೇಳೆ ಕೊರೊನಾ ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಪೊಲೀಸರು ಜಾಗೃತಿ ಮೂಡಿಸಿದರು.‌

* ಸಾರ್ವಜನಿಕರು ಅನಗತ್ಯವಾಗಿ ವಾಹನಗಳಲ್ಲಿ ಸಂಚಾರ ಮಾಡಬಾರದು. ಜನರು ಸರ್ಕಾರದೊಂದಿಗೆ ಕೈ ಜೋಡಿಸಿ ಮನೆಗಳಲ್ಲಿ ಇರಬೇಕು.

-ಡೆಕ್ಕ ಕಿಶೋರ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು