ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಪಾಳುಬಿದ್ದ ಶಿಕ್ಷಕರ ವಸತಿ ಸಂಕೀರ್ಣಗಳು

ಜಿಲ್ಲೆಯಾಗಿ 11 ವರ್ಷವಾದರೂ ಗುರುಭವನ ಇಲ್ಲ, ಬಾಡಿಗೆ ಕಟ್ಟಡಗಳಲ್ಲೇ ಸಭೆ, ಸಮಾರಂಭ
Last Updated 12 ಸೆಪ್ಟೆಂಬರ್ 2022, 4:47 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 11 ವರ್ಷ ಕಳೆದರೂ ಜಿಲ್ಲಾ ಗುರುಭವನವೂ ಇಲ್ಲ. 2007–08ರಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಶಿಕ್ಷಕರ ವಸತಿ ಸಂಕೀರ್ಣಗಳು ಪಾಳು ಬಿದ್ದಿವೆ.

ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಶಿಕ್ಷಕ, ಶಿಕ್ಷಕಿಯರು ಇದ್ದು, ಅವರಿಗೆ ಅನುಕೂಲವಾಗಲು ಆಯಾ ಭಾಗದಲ್ಲಿ ಶಿಕ್ಷಕರ ವಸತಿ ಸಂಕೀರ್ಣ ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ಬಳಕೆ ಮಾಡದ ಕಾರಣ ಪಾಳು ಬಿದ್ದಿದ್ದು, ಕೋಟ್ಯಂತರ ಹಣ ವ್ಯರ್ಥವಾಗಿದೆ.

ಎಲ್ಲೆಲ್ಲಿ ಶಿಕ್ಷಕರ ವಸತಿ ಸಂಕೀರ್ಣಗಳಿವೆ: ಜಿಲ್ಲೆಯಲ್ಲಿ 2007–08 ಮತ್ತು 2011–12 ಸಾಲಿನಲ್ಲಿ ನಿರ್ಮಿಸಿದ ಶಿಕ್ಷಕರ ವಸತಿ ಸಂಕೀರ್ಣಗಳು ಇಲ್ಲಿಯತನಕ ಬಳಕೆಯಾಗದೇ ವ್ಯರ್ಥವಾಗಿವೆ.

ಗುರುಮಠಕಲ್‌ ತಾಲ್ಲೂಕಿನ ಮಾಧ್ವರ, ಕೊಂಕಲ್‌, ಯಾದಗಿರಿ ತಾಲ್ಲೂಕಿನ ಕಡೇಚೂರು, ಯಲಸತ್ತಿ, ಸುರಪುರ ತಾಲ್ಲೂಕಿನ ಕೆಂಭಾವಿ, ಹುಣಸಗಿ ತಾಲ್ಲೂಕಿನ ಹುಣಸಗಿ, ವಜ್ಜಲ, ಕೋಡೆಕಲ್‌, ವಡಗೇರಾ ತಾಲ್ಲೂಕಿನ ತಡಿಬಿಡಿ, ಬೆಂಡೆಬೆಂಬಳಿ, ಶಹಾಪುರ ತಾಲ್ಲೂಕಿನ ಚಟ್ನಳ್ಳಿ ಗ್ರಾಮಗಳಲ್ಲಿ ನಿರ್ಮಿಸಿರುವ ಶಿಕ್ಷಕರ ವಸತಿ ಸಂಕೀರ್ಣಗಳು ಪಾಳು ಬಿದ್ದಿವೆ.

₹33.42, ₹47.68 ಲಕ್ಷ ವೆಚ್ಚ: 2007–08ರಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣಗಳಿಗೆ ₹33.42 ಲಕ್ಷ, 2011–12ರಲ್ಲಿ ₹47.68 ಲಕ್ಷ ವೆಚ್ಚ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಒಟ್ಟಾರೆ 11 ಶಿಕ್ಷಕರ ವಸತಿ ಸಂಕೀರ್ಣಗಳಿಗೆ ₹4.10 ಕೋಟಿ ವೆಚ್ಚಮಾಡಲಾಗಿದೆ.

ಗುರುಭವನವೂ ಇಲ್ಲ: ಜಿಲ್ಲೆಯಲ್ಲಿ ಸುಸಜ್ಜಿತವಾದ ಗುರುಭವನವೂ ಇಲ್ಲದಂತೆ ಆಗಿದೆ. ಶಾಲಾ ಶಿಕ್ಷಕರ ಸಂಘ ಈ ಬಗ್ಗೆ ಆಸಕ್ತಿ ವಹಿಸಿದರೆ ನಿರ್ಮಿಸಬಹುದು ಎಂದು ಶಿಕ್ಷಕರು ಹೇಳುವ ಮಾತು. ಬೇರೆ ಜಿಲ್ಲೆಗಳಿಂದ ಶಿಕ್ಷಕರು ಆಗಮಿಸಿದರೆ ಗುರುಭವನದಲ್ಲಿ ತಂಗಲು ಸಹಾಯವಾಗುತ್ತದೆ. ಆದರೆ, ಜಿಲ್ಲೆಯಲ್ಲಿ 11 ವರ್ಷಗಳಾದರೂ ಗುರುಭವನವೇ ಇಲ್ಲ.

ಅನೈತಿಕ ಚಟುವಟಕೆ ತಾಣ
ಜಿಲ್ಲೆಯ 11 ಕಡೆ ನಿರ್ಮಿಸಿರುವ ಶಿಕ್ಷಕರ ವಸತಿ ಸಂಕೀರ್ಣಗಳು ಈಗ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿವೆ. ಕಟ್ಟಡಗಳ ಸುತ್ತಮುತ್ತಲೂ ಜಾಲಿ ಗಿಡಗಳು ಬೆಳೆದಿವೆ. ಕಿಟಿಕಿ ಬಾಗಿಲುಗಳು ಮುರಿದು ಬಿದ್ದಿವೆ. ಕುಡಿದು ಬಿಸಾಡಿದ ಬಾಟಲಿಗಳು ಕಟ್ಟಡದಲ್ಲಿ ಬಿದ್ದಿವೆ. ಆಡುಗೆ ಮಾಡಿಕೊಂಡು ಪತ್ರೋಳಿ ಬಿಸಾಡಿರುವುದು ಕಂಡು ಬರುತ್ತಿದೆ.

ಕುರಿಗಳು, ಹಸು ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ. ಮಲಮೂತ್ರ ವಿರ್ಸಜಿಸುವ ತಾಣವಾಗಿವೆ. ಕಟ್ಟಡಗಳನ್ನು ಒಂದೇ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಸದ್ಬಳಕೆಯಾಗುತ್ತಿಲ್ಲ.

ಸುರಪುರ:ಗುರುಭವನ ಇಲ್ಲ
ಸುರಪುರ:
ದೂರದ ಊರುಗಳ ಶಿಕ್ಷಕರು ರಾತ್ರಿ ಸಮಯದಲ್ಲಿ ತಂಗಲು, ಶಿಕ್ಷಕರ ಸಭೆ ನಡೆಸಲು, ಕಾರ್ಯಕ್ರಮ ಏರ್ಪಡಿಸಲು ತಾಲ್ಲೂಕಿಗೆ ಒಂದು ಶಿಕ್ಷಕರ ಭವನ ಅವಶ್ಯಕತೆ ಇದೆ. ಆದರೆ, ಇಚ್ಛಾಶಕ್ತಿಯ ಕೊರತೆಯಿಂದ ಇದುವರೆಗೂ ಶಿಕ್ಷಕರ ಭವನ ನಿರ್ಮಾಣವಾಗಿಲ್ಲ.

ಇದರಿಂದ ಶಿಕ್ಷಕರ ಸಂಘದ ಪದಾಧಿಕಾರಿಗಳು ಯಾವುದೇ ಶಾಲೆಯಲ್ಲಿ ಕುಳಿತು ಅಥವಾ ಹೋಟೆಲ್‌ನಲ್ಲಿ ಸಭೆ ನಡೆಸುವಂತಾಗಿದೆ. ಸಣ್ಣ, ಪುಟ್ಟ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ನಡೆಸುತ್ತಾರೆ. ಶಿಕ್ಷಕರ ದಿನಾಚರಣೆ ಇತರ ದೊಡ್ಡ ಸಮಾರಂಭಗಳನ್ನು ಕಲ್ಯಾಣ ಮಂಟಪ, ಇಲ್ಲವೇ ಕ್ರೀಡಾಂಗಣದಲ್ಲಿ ನಡೆಸುವಂತಾಗಿದೆ ಎನ್ನುತ್ತಾರೆ ಶಿಕ್ಷಕರು.

ಮುಕ್ತಿ ಕಾಣದ ಗುರುಭವನ ಕಟ್ಟಡ
ಶಹಾಪುರ/ವಡಗೇರಾ:
ನಗರದ ಹೃದಯ ಭಾಗದಲ್ಲಿನ ಹಳೆ ಬಸ್ ನಿಲ್ದಾಣದ ಎದುರುಗಡೆ ಗುರುಭವನ ಕಟ್ಟಡ ಕಾಮಗಾರಿ 25 ವರ್ಷದ ಹಿಂದೆ ಆರಂಭಗೊಂಡರೂ ಇಂದಿಗೂ ಪೂರ್ಣಗೊಂಡಿಲ್ಲ. ಅದು ಸದ್ಯಕ್ಕೆ ಅನೈತಿಕ ಚಟುವಟಿಕೆಯ ತಾಣವಾಗಿ ಪರಿವರ್ತನೆ ಆಗಿದೆ.

ಕಟ್ಟಡ ಛಾವಣಿ ಹಾಕಿದ್ದಾರೆ. ಆದರೆ ಬಾಗಿಲು, ಕಿಟಿಕಿ, ನೆಲಹಾಸಿಗೆ, ವಿದ್ಯುತ್ ಸಂಪರ್ಕ ಇಲ್ಲವಾಗಿದೆ. ಸುತ್ತಲು ಜಾಲಿ ಗಿಡ ಬೆಳೆದು ನಿಂತಿವೆ. ಅನುದಾನ ಕೊರತೆ ಇಲ್ಲ. ಆದರೆ, ಅದರ ನಿರ್ವಹಣೆ ಹಾಗೂ ಶಿಕ್ಷಕ ಸಂಘದಲ್ಲಿನ ಸಮನ್ವಯದ ಕೊರತೆ, ಕಾಮಗಾರಿ ಪೂರ್ಣಗೊಳಿಸುವ ಇಚ್ಛಾಶಕ್ತಿ ಕೊರತೆಯಿಂದ ಗುರುಭವನ ಕಟ್ಟಡ ಅನಾಥವಾಗಿ ನಿಂತಿದೆ ಎನ್ನುತ್ತಾರೆ ನಿವೃತ್ತ ಶಿಕ್ಷಕರು ಒಬ್ಬರು.

ಅದರಂತೆ ವಡಗೇರಾ ತಾಲ್ಲೂಕಿನ ಬೆಂಡಬೆಂಬಳಿ, ತಡಿಬಿಡಿ ಹಾಗೂ ಶಹಾಪುರ ತಾಲ್ಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಶಿಕ್ಷಕರ ಸದನ ನಿರ್ಮಿಸಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪಿಯ ಸರ್ಕಾರಿ ಶಾಲಾ ಶಿಕ್ಷಕರಿಗೆ ಮನೆ ನೀಡುವ ಉದ್ದೇಶ ಇದಾಗಿತ್ತು. ಕಟ್ಟಡ ನಿರ್ಮಿಸಿದ್ದೆ ಸಾಧನೆಯಾಗಿದೆ ವಿನಃ ಸದ್ಭಳಕೆಯಾಗದೆ ಉಳಿದುಕೊಂಡಿದೆ. ಈಗ ಅಲ್ಲಿ ವಾಸಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಶಿಕ್ಷಕರು ಒಬ್ಬರು.

ನಿರುಪಯುಕ್ತವಾದ ಶಿಕ್ಷಕರ ವಸತಿ ಸಂಕೀರ್ಣ ಕಟ್ಟಡ
ಗುರುಮಠಕಲ್:
ಸರ್ಕಾರ ಶಿಕ್ಷಕರಿಗೆ ಸೇವಾವಧಿಯಲ್ಲಿ ಸೇವಾ ಸ್ಥಳದಲ್ಲೇ ವಸತಿಯನ್ನು ಕಲ್ಪಿಸಲು ಶಿಕ್ಷಕರ ವಸತಿ ಸಂಕೀರ್ಣ ಹೆಸರಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಡುತ್ತಿದೆ. ಆದರೆ, ತಾಲ್ಲೂಕಿನ ಕೊಂಕಲ್ ಹಾಗೂ ಮಾಧ್ವಾರ ಗ್ರಾಮಗಳಲ್ಲಿ ಶಿಕ್ಷಕರ ವಸತಿ ಸಂಕೀರ್ಣ ಕಟ್ಟಡಗಳು ನಿರ್ಮಿಸಿದಾಗಿಂದಲೂ ಉಪಯೋಗಿಸದೆ ಪಾಳುಬಿದ್ದಿವೆ.

ಸುಮಾರು ಹತ್ತು ವರ್ಷಗಳ ಹಿಂದೆಯೇ ಕಟ್ಟಡಗಳು ನಿರ್ಮಾಣವಾಗಿವೆ. ಆದರೆ, ವಿದ್ಯುತ್, ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸದೇ ಗುತ್ತಿಗೆದಾರರು ಕೆಲಸ ಪೂರ್ಣಗೊಳಿಸಿದ್ದಾರೆ. ಸೌಲಭ್ಯಗಳಿಲ್ಲದ ಕಟ್ಟಡಗಳಿಂದ ಉಪಯೋಗವೇನು? ಹಾಗೆಯೇ ಕಟ್ಟಡಗಳನ್ನು ನಿರ್ಮಿಸಿದ ನಂತರ ನಮ್ಮ ಇಲಾಖೆಗೂ ಹಸ್ತಾಂತರಿಸಿಲ್ಲ ಎಂದು ಶಿಕ್ಷಣ ಇಲಾಖೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

‘ಸದ್ಯ ಕಟ್ಟಡಗಳಲ್ಲಿನ ನೆಲಹಾಸು ಗ್ರಾನೈಟ್‌ಗಳು ಚೂರಾಗಿವೆ. ಕಿಟಕಿಗಳು ಮುರಿದಿವೆ. ಬಾಗಿಲುಗಳನ್ನು ಗೆದ್ದಲು ತಿಂದಾಗಿದೆ. ಸರ್ಕಾರದ ಅನುದಾನವನ್ನು ಗುತ್ತಿಗೆದಾರರ ಲಾಭಕ್ಕಾಗಿ ಬಳಕೆ ಮಾಡಿದಂತೆ ತೋರುತ್ತದೆ. ಉದ್ದೇಶಿತ ಗುರಿ ಈಡೇರದಂತಾದರೆ ಖರ್ಚು ಮಾಡಿದ ಹಣಕ್ಕೆ ಏನು ಬೆಲೆ? ಸಂಬಂಧಿತ ಅಧಿಕಾರಿಗಳು ಏನು ಮಾಡುತ್ತಾರೋ ತಿಳಿಯದು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂಜು ಅಳೆಗಾರ.

‘ಬಳಕೆಗೆ ಯೋಗ್ಯವಾಗಿದ್ದರೆ ಶಿಕ್ಷಕರು ಖಂಡಿತ ವಾಸಿಸುತ್ತಿದ್ದರು. ಗುತ್ತಿಗೆದಾರರು ಬೇಕಾಬಿಟ್ಟಿ ನಿರ್ಮಿಸಿ, ಮೂಲ ಸೌಕರ್ಯಗಳಿಲ್ಲದ ಕಟ್ಟಡಗಳಲ್ಲಿ ಯಾರಾದರೂ ವಾಸಿಸಲು ಹೇಗೆ ಸಾಧ್ಯ?. ಅತ್ತ ಸರ್ಕಾರದ ಹಣ ಮತ್ತು ನಿವೇಶನವೂ ವ್ಯರ್ಥ. ಹಾಗೆಯೇ ಯೋಜನೆಯ ಆಶಯಕ್ಕೂ ಕೊಡಲಿಪೆಟ್ಟು’ ಎಂದು ಹೆಸರು ಹೇಳದ ಶಿಕ್ಷಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

***

ಗುರುಭವನ ನಿರ್ಮಾಣಕ್ಕೆ ಪತ್ರ ಬರೆಯಲು ಸೂಚಿಸಲಾಗಿದೆ. ಶಿಕ್ಷಕರ ವಸತಿ ಸಂಕೀರ್ಣಗಳಲ್ಲಿ ಸೂಕ್ತ ಸೌಲಭ್ಯ, ಗುಣಮಟ್ಟದ ಕಾಮಗಾರಿ ಕೈಗೊಳ್ಳಲಾದ ಕಾರಣ ಹಸ್ತಾಂತರ ಮಾಡಿಕೊಂಡಿಲ್ಲ. ಅವು ಹಾಗೇ ಪಾಳು ಬಿದ್ದಿವೆ.
-ಚಂದ್ರಕಾಂತರೆಡ್ಡಿ, ಕ್ಷೇತ್ರಶಿಕ್ಷಣಾಧಿಕಾರಿ

***

ಗುರುಭವನ ನಿರ್ಮಾಣಕ್ಕೆ ನಗರದಲ್ಲಿ ನಿವೇಶನದ ಅಗತ್ಯವಿದೆ. ಸಂಬಂಧಿಸಿದ ಇಲಾಖೆಗಳಿಗೆ ನಿವೇಶನ ಒದಗಿಸಲು ಸೂಚಿಸಿ, ಶೀಘ್ರದಲ್ಲಿ ಗುರುಭವನಕ್ಕೆ ಅಡಿಗಲ್ಲು ಹಾಕಲು ಯತ್ನಿಸುತ್ತೇನೆ.
-ರಾಜೂಗೌಡ, ಶಾಸಕ

***

ಗುರುಭವನ ನಿರ್ಮಿಸಲು ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಭವನದ ನಿರ್ವಹಣೆ ಸವಾಲಿನದ್ದಾಗಿರುತ್ತದೆ. ಇದಕ್ಕೆ ಸಂಪನ್ಮೂಲದ ಅವಶ್ಯಕತೆ ಇರುತ್ತದೆ. ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು.
-ಶರಣಬಸವ ಗೋನಾಲ, ಶಿಕ್ಷಕರ ಸಂಘದ ಕಾರ್ಯದರ್ಶಿ, ಸುರಪುರ

***

ಗುರುಭವನ ಕಟ್ಟಡ ಕೆಲಸವೂ ತಾಂತ್ರಿಕ ಸಮಸ್ಯೆಯಿಂದ ನೆನಗುದಿಗೆ ಬಿದ್ದಿದೆ. ಶಾಸಕ ಶರಣಬಸಪ್ಪ ದರ್ಶನಾಪುರ ಅವರು ವೈಯಕ್ತಿಕವಾಗಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಕೆಲ ದಿನಗಳಲ್ಲಿ ಕಟ್ಟಡ ಕೆಲಸ ಪೂರ್ಣಗೊಳಿಸಲಾಗುವುದು.
-ಬಸವರಾಜ ಯಾಳಗಿ, ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

***

ಶಿಕ್ಷಕರ ಸೇವಾ ಸ್ಥಳದಲ್ಲೇ ವಸತಿ ವ್ಯವಸ್ಥೆ ಕಲ್ಪಿಸುವ ಶಿಕ್ಷಕರ ವಸತಿ ಸಂಕೀರ್ಣಗಳನ್ನು ಸಂಪೂರ್ಣ ವಸತಿಯೋಗ್ಯವಾಗಿಸಿ ಹಂಚಿಕೆ ಮಾಡಿದರೆ ಸಹಾಯವಾಗುತ್ತದೆ.
-ನಾರಾಯಣರೆಡ್ಡಿ ಪಿ., ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT