ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹತ್ತಿಕುಣಿ ಜಲಾಶಯ ಭರ್ತಿ

Last Updated 21 ಆಗಸ್ಟ್ 2020, 16:20 IST
ಅಕ್ಷರ ಗಾತ್ರ

ಯರಗೋಳ: ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಗೆ ಹತ್ತಿಕುಣಿ ಯೋಜನೆ ಜಲಾಶಯ ತುಂಬಿದ್ದು, ಶುಕ್ರವಾರ ಸಾಂಪ್ರದಾಯಿಕ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ, ನೀರು ಹರಿಬಿಡಲಾಯಿತು.

ಮುಂಗಾರು ಮಳೆ ಜೋರಾಗಿ ಸುರಿದ ಪರಿಣಾಮ ಜಲಾಶಯಕ್ಕೆ ನಿರಂತರ ನೀರು ಹರಿದು ಬರುತ್ತಿದ್ದು, ಒಳಹರಿವು ಹೆಚ್ಚಳವಾಗಿದೆ. ಜಲಾಶಯದಲ್ಲಿ ನೀರು ಸಂಗ್ರಹ ಗರಿಷ್ಠ ಮಟ್ಟ ತಲುಪಿದೆ. 2010, 2013, 2016ರಲ್ಲಿ ಜಲಾಶಯ ಭರ್ತಿಯಾಗಿತ್ತು. ಇದೀಗ ಈ ವರ್ಷ ಮತ್ತೆ ಜಲಾಶಯ ತುಂಬಿದೆ.

4 ವರ್ಷಗಳ ನಂತರ ಜಲಾಶಯದ ನೀರಿನಮಟ್ಟ ಗರಿಷ್ಠ ತಲುಪಿದ್ದು, ಆಣೆಕಟ್ಟೆಯ 2 ಗೇಟ್ ಮೂಲಕ 240 ಕ್ಯುಸೆಕ್ಸ್ ನೀರು ನದಿಗೆ ಹರಿಬಿಡಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ, ಹತ್ತಿಕುಣಿ ಯೋಜನೆಯ ಪ್ರಭಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೈಲಾಸನಾಥ ಅನ್ವಾರ ತಿಳಿಸಿದ್ದಾರೆ.

ನದಿ ಸುತ್ತಲಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮುನ್ನೆಚ್ಚರಿಕೆಯಿಂದ ಪಂಪ್ ಸೆಟ್‌ ತೆಗೆಯುವಂತೆ, ನದಿ ಪಾತ್ರದಲ್ಲಿ ಬಟ್ಟೆ ತೊಳೆಯದಂತೆ, ಈಜು ಆಡದಂತೆ, ಜಾನುವಾರು ಬಿಡದಂತೆ, ಯಾವುದೇ ಚಟುವಟಿಕೆಗಳಿಗಾಗಿ ನದಿಯಲ್ಲಿ ಇಳಿಯದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹತ್ತಿಕುಣಿ, ಯಡ್ಡಳ್ಳಿ, ಹೊನಗೇರಾ, ಬಂದಳ್ಳಿ, ಕಟ್ಟಿಗೆ ಶಾಹಪುರ ಗ್ರಾಮದ ರೈತರು ಸಂತಸದಲ್ಲಿದ್ದಾರೆ. ಯೋಜನೆ ವ್ಯಾಪ್ತಿಯ 2,145 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ನೀರಾವರಿ ಸವಲತ್ತು ಪಡೆಯಲಿದೆ.


ಜಲಾಶಯದ ಗರಿಷ್ಠ ಮಟ್ಟ 1,363 ಅಡಿ ಇದ್ದು, ಜಲಾಶಯದ ಒಟ್ಟು ಸಾಮರ್ಥ್ಯ 30 ಅಡಿ ಎತ್ತರ ಇದೆ. ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 0.352 ಟಿ.ಎಂ.ಸಿ ಇದೆ.

***

ಜಲಾಶಯಕ್ಕೆ ಬಾಗಿನ ಅರ್ಪಿಸಿ ನದಿಗೆ ನೀರು ಹರಿಬಿಡಲಾಗಿದೆ. ಯೋಜನೆ ವ್ಯಾಪ್ತಿಯ ರೈತರು ಸಂತಸದಲ್ಲಿದ್ದಾರೆ

-ವೀರಭದ್ರಪ್ಪ ಯಡ್ಡಳ್ಳಿ, ಅಧ್ಯಕ್ಷ, ಹತ್ತಿಕುಣಿ ಜಲಾಶಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಿ

***

ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಬಿಡಲಾಗಿದ್ದು, ನದಿ ಸುತ್ತಲಿನ ಜನರು ಎಚ್ಚರ ವಹಿಸಬೇಕು

-ಕೈಲಾಸನಾಥ ಅನ್ವಾರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT