ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 'ಗಾಂಧಿ ಪುರಸ್ಕಾರ' ಗ್ರಾಮಕ್ಕೆ ಬೇಕಿದೆ ಸಮಗ್ರ ಅಭಿವೃದ್ಧಿ

ಜಿಲ್ಲೆಯ ಮೂರು ಗ್ರಾಮಗಳ ಆಯ್ಕೆ, ಕೆಲವೇ ಕ್ಷೇತ್ರಗಳಲ್ಲಿ ಸಾಧನೆ, ಆದರೂ ಪ್ರಶಸ್ತಿ ಗರಿ
Last Updated 9 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಗಾಂಧಿ ಗ್ರಾಮ ಪುರಸ್ಕಾರಕ್ಕೆ 2020–21ನೇ ಸಾಲಿನಲ್ಲಿ ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ಕೋವಿಡ್‌ ಕಾರಣ ಕಳೆದೆರಡು ವರ್ಷಗಳಲ್ಲಿ ಪುರಸ್ಕಾರ ಲಭಿಸಿರಲಿಲ್ಲ.

ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸ ಬೇಕೆಂಬ ಉದ್ದೇಶದಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013-14ನೇ ಸಾಲಿನಿಂದ ಪ್ರತಿ ತಾಲ್ಲೂಕಿಗೆ ಒಂದು ಗ್ರಾಮ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಂಡು ₹5 ಲಕ್ಷ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತದೆ. ಆದರಂತೆ ಜಿಲ್ಲೆಗೆ 2020–21ನೇ ಸಾಲಿಗೆ ಮೂರು ಪಂಚಾಯಿತಿಗಳು ಪಾ‌ತ್ರವಾಗಿವೆ.

ಪುರಸ್ಕಾರಕ್ಕೆ ಪಂಚಾಯಿತಿಗಳನ್ನು ಆಯ್ಕೆ ಮಾಡುವ ಸಂಬಂಧ 250 ಅಂಕಗಳ ಪ್ರಶ್ನೆಗಳನ್ನು ಗೂಗಲ್ ಫಾರ್ಮ್ ತಂತ್ರಾಂಶದಿಂದ ಉತ್ತರಿಸಲು ಅವಕಾಶ ಕಲ್ಪಿಸಲಾಗಿತ್ತು. ಹೆಚ್ಚು ಅಂಕಗಳನ್ನು ಗಳಿಸಿರುವ ತಾಲ್ಲೂಕಿಗೆ5 ಗ್ರಾಮ ಪಂಚಾಯಿತಿಗಳನ್ನು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಿ ಜಿ. ಪಂ ಸಿಇಒಗೆ ಕಳಿಸಲಾಗಿತ್ತು. ಜಿಲ್ಲಾಮಟ್ಟದ ಅಧಿಕಾರಿಗಳ ನೇತೃತ್ವದ ತಂಡ ಸ್ಥಳ, ದಾಖಲೆ ಪರಿಶೀಲಿಸಿ ವರದಿಯನ್ನು ಸಿಇಒಗೆ ಸಲ್ಲಿಸಿದ್ದಾರೆ. ಸಿಇಒ ನೇತೃತ್ವದ ಸಮಿತಿ ಆಯ್ಕೆ ಮಾಡಿದೆ.

ಸೌಲಭ್ಯಗಳಿಂದ ವಂಚಿತ: ಜಿಲ್ಲೆಯ 3 ಗ್ರಾಮ ಪಂಚಾಯಿತಿಗಳು ₹5 ಲಕ್ಷ ‍ಪುರಸ್ಕಾರಕ್ಕೆ ಭಾಜನವಾಗಿದ್ದರೂ ಅಗತ್ಯ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸಮಪರ್ಕ ಚರಂಡಿ ವ್ಯವಸ್ಥೆ, ಸಿಸಿಟಿವಿ, ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿಲ್ಲ. ಜನಸಂಖ್ಯೆಗೆ ತಕ್ಕಂತೆ ಸೌಲಭ್ಯಗಳಿಲ್ಲ. ಮಳೆಗಾಲದಲ್ಲಿ ರಸ್ತೆಗಳ ಮೇಲೆಯೇ ಚರಂಡಿ ನೀರು ಹರಿಯುತ್ತದೆ.

ಹುಣಸಗಿ ತಾಲ್ಲೂಕಿನ ಮುದನೂರ (ಕೆ) ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸರ್ಕಾರಿ ಕಲ್ಯಾಣ ಮಂಟಪ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗೆ ಅನೇಕ ಸೌಲಭ್ಯಗಳಿಂದ ವಂಚಿತವಾಗಿವೆ. ಕೆಲವೇ ಮಾನದಂಡ ಇಟ್ಟು ಪ್ರಶಸ್ತಿ ನೀಡುವುದಕ್ಕಿಂತ ಗ್ರಾಮ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ತಕ್ಕಂತೆ ಪ್ರಶಸ್ತಿ ನೀಡಿದರೆ ಅನುಕೂಲ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

ಶಹಾಪುರ ತಾಲ್ಲೂಕಿನ ನಾಗನಟಗಿ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ 27 ಇದೆ. ಅಲ್ಲದೆ ಜನಸಂಖ್ಯೆ 10,424 ಇದೆ. ಒಟ್ಟು 14 ಜನ ಸಿಬ್ಬಂದಿ ಇದ್ದಾರೆ.

ಹುಣಸಗಿ ತಾಲ್ಲೂಕಿನ ಮುದನೂರ (ಕೆ) ಗ್ರಾಮ 8 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದು, 20 ಸದಸ್ಯರು ಇದ್ದಾರೆ. ಮುದನೂರು (ಬಿ),ಮುದನೂರು (ಕೆ),ರಾಂಪುರ,ಯಡಿಯಾಪುರ ಗ್ರಾಮಗಳನ್ನು ಒಳಗೊಂಡಿದೆ.

ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮ ಪಂಚಾಯಿತಿಯಲ್ಲಿ 7,500 ಜನಸಂಖ್ಯೆ, 14 ಸದಸ್ಯರ ಸಂಖ್ಯೆ ಹೊಂದಿದೆ.
12 ಸಿಬ್ಬಂದಿ ಇದ್ದಾರೆ. ಅನಪುರ, ನಸಲವಾಯಿ, ಎಡೇಪಲ್ಲಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ.

ಶಹಾಪುರ ತಾಲ್ಲೂಕಿನ ನಾಗನಟಗಿ ಗ್ರಾಮ ಪಂಚಾಯಿತಿ ಸರಿಯಾದ ಕಟ್ಟಡ ಭಾಗ್ಯವಿಲ್ಲ. ಕೇವಲ ಎರಡು ಕೋಣೆಗಳು ಮಾತ್ರ ಇವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಂಗನಾಳ, ದರಿಯಾಪುರ, ಉಮರದೊಡ್ಡಿ, ಸೈದಾಪುರ, ಮೇಘನಾಯಕ ತಾಂಡಾ, ದಾಂಬ್ಲೂ, ಭೀಮ್ಲೂ ನಾಯಕ ತಾಂಡಾ, ಬಾಣತಿಹಾಳ ಗ್ರಾಮಗಳು
ಬರುತ್ತವೆ.

ಗ್ರಾಮದಲ್ಲಿ ಜಲ ಜೀವನ ಮಿಷನ್ ಅನುಷ್ಠಾನಗೊಂಡರೂ ಸರಿಯಾದ ಕೆಲಸ ನಿರ್ವಹಿಸಿಲ್ಲ. ಸಮರ್ಪಕವಾಗಿ ನೀರು ಬರುವುದಿಲ್ಲ. ರಸ್ತೆಯ ಮಧ್ಯದಲ್ಲಿ ಪೈಪ್‌ ಅಳವಡಿಸಿದ್ದರಿಂದ ರಸ್ತೆ ಹಾಳಾಗಿವೆ. ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ. ಚರಂಡಿಯಲ್ಲಿ ಹೂಳು ತುಂಬಿದ್ದು ರಸ್ತೆಯ ಮೇಲೆ ನೀರು ಹರಿಯುತ್ತವೆ. ಗ್ರಾಮದಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯವಿಲ್ಲ.

ಇದರ ಬಗ್ಗೆ ಸ್ಪಷ್ಟನೆ ಪಡೆಯಲು ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ ಅಣ್ಣಾರಾವ ಅವರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.

***

ಅನಪುರ: ಸ್ವಚ್ಛತೆ, ಶುದ್ಧ ನೀರಿಗೆ ಒಲಿದ ಪ್ರಶಸ್ತಿ

ಗುರುಮಠಕಲ್: ತಾಲ್ಲೂಕಿನ ಅನಪುರ ಗ್ರಾಮದಲ್ಲಿನ ಸ್ವಚ್ಛತೆ ಮತ್ತು ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆಯಿಂದ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಗ್ರಾಮದಲ್ಲಿ ಬಹುತೇಕ ಸಿಸಿ ರಸ್ತೆಗಳು ಉತ್ತಮವಾಗಿದ್ದು, ಚರಂಡಿಗಳು ಹೂಳು ತುಂಬದಂತೆ ಸ್ವಚ್ಛಗೊಳಿಸಲಾಗುತ್ತದೆ. ಪ್ರತಿನಿತ್ಯವೂ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಬೀದಿ ದೀಪಗಳು ಸುಸ್ಥಿತಿಯಲ್ಲಿವೆ ಎಂದು ಗ್ರಾಮದ ಮಹಿಳೆಯರು ಹೇಳುತ್ತಾರೆ.

ಸದ್ಯ ಗ್ರಾಮಕ್ಕೆ ವಿದ್ಯುತ್ ಸಮಸ್ಯೆ ಮಾತ್ರ ಕಾಡುತ್ತಿದ್ದು, ‘ವಿದ್ಯುತ್ ಸರಬರಾಜಿನಲ್ಲಿ ಪದೆ ಪದೇ ವ್ಯತ್ಯಯವಾಗುತ್ತದೆ’ ಎನ್ನುವುದು ಗ್ರಾಮಸ್ಥರ ದೂರು.

ಮನೆಗೊಂದು ಶೌಚಾಲಯದ ವ್ಯವಸ್ಥೆಯಿದ್ದರೂ ಜನರು ರೂಢಿಯಂತೆ ಬಯಲು ಶೌಚಕ್ಕೆ ತೆರಳುತ್ತಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಜಾಗೃತಿ ಕೊರತೆ ನೀಗಿದರೆ ಅದೂ ನಿಲ್ಲಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವರ್ಧನರೆಡ್ಡಿ ಹೇಳಿದರು.

‘ಗ್ರಾಮ ಸಾಮಾನ್ಯವಾಗಿ ಬೆಳೆಯುತ್ತಿದೆ. ಹೆಚ್ಚುವರಿಯಾಗಿ ಬೆಳೆದ ಭಾಗದಲ್ಲಿ ಇನ್ನೂ ಕೆಲವೊಂದು ಚರಂಡಿಗಳನ್ನು ನಿರ್ಮಿಸುವುದು ಮತ್ತು ಹಳೆಯ ಸಿಸಿ ರಸ್ತೆಗಳು ಅಲ್ಲಲ್ಲಿ ಹಾಳಾಗಿದ್ದು, ಅವುಗಳನ್ನು ಸರಿಪಡಿಸುವುದು ಹಾಗೂ ಹೊಸ ಸಿಸಿ ರಸ್ತೆಗಳ ತೀರ್ಮಾನಕ್ಕೆ ಚಿಂತಿಸುತ್ತಿರುವುದಾಗಿ’ ಅವರು ಮಾಹಿತಿ ನೀಡಿದರು.

***

ನಾಗನಟಗಿ: ನರೇಗಾ ಅನುಷ್ಠಾನದ ಗರಿ

ಶಹಾಪುರ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಅತ್ಯುತ್ತಮ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ) ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ತಾಲ್ಲೂಕಿನ ನಾಗನಟಗಿ ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಲಭಿಸಿತ್ತು. ಈಗ ರಾಜ್ಯ ಸರ್ಕಾರದಿಂದ ₹5 ಲಕ್ಷ ಬಹುಮಾನ ಕೂಡ ಬಂದಿದೆ.
ಕೋವಿಡ್ ಸಂದರ್ಭದಲ್ಲಿ ಕೂಲಿ ಕೆಲಸವಿಲ್ಲದೆ ಬದುಕು ಚಿಂತಾಜನಕ ಸ್ಥಿತಿಯಲ್ಲಿ ಇದ್ದಾಗ ನೆರವಿನ ಆಸರೆ ನೀಡಿದ್ದು ನರೇಗಾ ಯೋಜನೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದುಳಿದ ಬಡ ಕೂಲಿಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಆಗ ಹೆಸರು ನೋಂದಾಯಿಸಿಕೊಂಡ ಕಾರ್ಮಿಕರಿಗೆ ಸುಮಾರು 34 ಸಾವಿರ ಕೆಲಸದ ದಿನಗಳನ್ನು ನೀಡುವುದರ ಮೂಲಕ ₹1.20ಕೋಟಿ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಲಾಗಿದೆ ಎಂದು ನೆನಪಿಸುತ್ತಾರೆ ಅಂದಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತಕುಮಾರ.

******

ಮುದನೂರ: ಅಭಿವೃದ್ಧಿ ಮರೀಚಿಕೆ

ಹುಣಸಗಿ: ಆದ್ಯ ವಚನಕಾರ ದೇವರದಾಸಿಮಯ್ಯನವರ ಕ್ಷೇತ್ರವಾಗಿರುವ ಮುದನೂರು ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಇಲ್ಲಿ ಇನ್ನೂ ಸಾಕಷ್ಟು ಸೌಲಭ್ಯಗಳು ಒದಗಿಸಬೇಕಿದೆ.

‘ಮುದನೂರು (ಕೆ) ಹಾಗೂ ಮುದನೂರು (ಬಿ) ಗ್ರಾಮದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಸರ್ಕಾರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡುತ್ತಾ ಬಂದಿದ್ದರೂ ಸಮರ್ಪಕ ಬಳಕೆಯಾಗಿಲ್ಲ’ ಎಂದು ಮುದನೂರು ಗ್ರಾಮದ ಪ್ರಶಾಂತ ಸಾಹುಕಾರ್ ದೂರಿದರು.

‘ಕಳೆದ ಒಂದು ದಶಕದ ಹಿಂದೆಯೇ ಮುದನೂರು ಗ್ರಾಮದ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಯಾತ್ರಿ ನಿವಾಸ, ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಇಂದಿಗೂ ಪೂರ್ಣಗೊಂಡಿಲ್ಲ’ ಎಂದು ಭೀಮರಡ್ಡಿ ಬೆಕಿನ್ಯಾಳ ಆರೋಪಿಸಿದರು.

‘ಗ್ರಾಮದ ಜನತಾ ಕಾಲನಿಗೆ ತೆರಳುವ ರಸ್ತೆ ಹೆದೆಗೆಟ್ಟಿದ್ದು, ಕೊಳಚೆ ನೀರು ನಿತ್ಯ ರಸ್ತೆ ಮೇಲೆ ಹರಿಯುತ್ತಿದೆ. ಸೂಕ್ತ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ’ ಎಂದು ಗ್ರಾಮಸ್ಥಬಾಷಾ ಪಟೇಲ್‌ ಆಗ್ರಹಿಸಿದರು.

‘ತೆರಿಗೆ ವಸೂಲಾತಿ, ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು ಸೇರಿದಂತೆ ಎಲ್ಲ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಜಾಗೃತಿಗಾಗಿ ನಮ್ಮ ಗ್ರಾ.ಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಗೌಡ ಉಳ್ಳೇಸೂಗೂರು ತಿಳಿಸಿದರು.

‘ಶೇ 100 ತೆರಿಗೆ ವಸೂಲಾತಿಯನ್ನು ಹೊಂದಿದ್ದು, 2020-21 ನೇ ಸಾಲಿನಲ್ಲಿ ₹16 ಲಕ್ಷ ಹಾಗೂ 2021-22 ನೇ ಸಾಲಿನಲ್ಲಿ ₹14 ಲಕ್ಷಕ್ಕೂ ಹೆಚ್ಚು ತೆರಿಗೆಯನ್ನು ಸಂಗ್ರಹಿಸಲಾಗಿದೆ’ ಎಂದು ವಿವರಿಸಿದರು.

‘ಕಳೆದ ಒಂದು ದಶಕದ ಹಿಂದೆ ಇದೇ ಗ್ರಾಮ ಸುವರ್ಣ ಗ್ರಾಮ ಯೋಜನೆಯಡಿ ಆಯ್ಕೆಯಾಗಿತ್ತು. ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಮಾಡುವ ಮೂಲಕ ಅಭಿವೃದ್ಧಿ ಪಡಿಸಲಾಗಿದೆ’ ಎಂದು ಮುಖಂಡ ಕೃಷ್ಣಾ ರಡ್ಡಿ ತಿಳಿಸಿದರು.

***

ಪೂರಕಮಾಹಿತಿ: ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT