ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಖಾಸಗೀಕರ ವಿರೋಧಿಸಿ ಸಾರ್ವತ್ರಿಕ ಮುಷ್ಕರ

ಜೆಸಿಟಿಯು ಬೃಹತ್‌ ಪ್ರತಿಭಟನಾ ಮೆರವಣಿಗೆ, ಮಾನವ ಸರಪಳಿ ನಿರ್ಮಾಣ
Last Updated 26 ನವೆಂಬರ್ 2020, 11:50 IST
ಅಕ್ಷರ ಗಾತ್ರ

ಯಾದಗಿರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಇಂದು ‘ಅಖಿಲ ಭಾರತ ಸಾರ್ವತ್ರಿಕ ಮುಷ್ಕರ’ದ ಪ್ರಯುಕ್ತ ನಗರದಲ್ಲಿ ‘ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿಗಳಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.

ಸಾರ್ವತ್ರಿಕ ಮುಷ್ಕರದ ಅಂಗವಾಗಿ ನಗರದ ಹೊಸ ಬಸ್ ನಿಲ್ದಾಣದಿಂದ ನೇತಾಜಿ ಸುಭಾಷ್ ಚಂದ್ರಬೋಸ್ ವೃತ್ತದವರೆಗೆ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ ನಡೆಯಿತು. ನಂತರ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ಮಾತನಾಡಿ, ಹಣಕಾಸು ವಲಯ ಸೇರಿದಂತೆ ರೈಲ್ವೆ, ವಿಮಾನಯಾನ, ಆರೋಗ್ಯ, ಶಿಕ್ಷಣ, ವಿದ್ಯುತ್, ದೂರ ಸಂಪರ್ಕ, ಬ್ಯಾಂಕ್, ವಿಮಾ ಮತ್ತತರ ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಆರ್ಡಿನೆನ್ಸ್ ಕಾಖಾನೆಗಳು, ಬಂದರು ಮಂತಾದ ಸರ್ಕಾರದ ಉತ್ಪಾದನಾ ಮತ್ತು ಸೇವಾ ಸಂಸ್ಥೆಗಳ ಸಾಂಸ್ಥೀಕರಣವನ್ನು ನಿಲ್ಲಿಸಿ. ಎಲ್ಲಾ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಾಗೂ ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳಿ ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಮುಖಂಡ ಗಾಲಿಬ್‍ಸಾಬ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ವರ್ಷಕ್ಕೆ 200 ದಿನಗಳ ಕೆಲಸವನ್ನು ವರ್ಧಿತ ವೇತನದಲ್ಲಿ ಒದಗಿಸಬೇಕು. ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಿ. ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ₹7500 ರೂಪಾಯಿ ನಗದು ವರ್ಗಾವಣೆ ಮಾಡಿ. ಎಲ್ಲಾ ಅಗತ್ಯವಿರುವವರಿಗೆ ತಿಂಗಳಿಗೆ 10 ಕೆಜಿ ಉಚಿತ ಪಡಿತರ ಒದಗಿಸಿ ಎಂದು ಒತ್ತಾಯಿಸಿದರು.

ಎಐಟಿಯುಸಿ ಜಿಲ್ಲಾ ಸಹ ಕಾರ್ಯದರ್ಶಿ ಕಲ್ಪನಾ ಗುರುಸುಣಗಿ ಮಾತನಾಡಿ, ಆಶಾ-ಅಂಗನವಾಡಿ-ಬಿಸಿಯೂಟ ಕಾರ್ಯಕರ್ತಯರನ್ನು ಸರ್ಕಾರಿ ನೌಕರರಂದು ಪರಿಗಣಿಸಿ. ಗುತ್ತಿಗೆ-ಹೊರಗುತ್ತಿಗೆ-ದಿನಗೂಲಿ-ನಿಶ್ಚಿತ ವೇತನ ಇತ್ಯಾದಿ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಾರ್ಮಿಕರು ಮತ್ತು ನೌಕರರನ್ನು ಖಾಯಂಗೊಳಿಸಿ. ಅದು ಆಗುವವರೆಗೆ ಮಾಸಿಕ ₹21,000 ವೇತನ ನೀಡಿ. ಎಲ್ಲರಿಗೂ ಪಿಂಚಣಿ ಒದಗಿಸಿ ಎನ್‌ಪಿಎಸ್ ರದ್ದುಮಾಡಿ ಮತ್ತು ಹಿಂದಿನ ಪಿಂಚಣಿ ಯೋಜನೆಯನ್ನು ಪುನಃಸ್ಥಾಪಿಸಿ ಇಪಿಎಸ್-95 ಸುಧಾರಿಸಿ ಎಂದು ಆಗ್ರಹಪಡಿಸಿದರು.

ಜಿಲ್ಲಾಧಿಕಾರಿಗಳ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸ್ವೀಕರಿಸಿ ಸರ್ಕಾರಕ್ಕೆ ತಲುಪಿಸುವುದಾಗಿ ಹೇಳಿದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್., ಪಂಚಾಯಿತಿ ನೌಕರರ ಸಂಘದ ಬಸವರಾಜ ದೊರೆ, ಅಂಗನವಾಡಿ ಸಂಘದ ಅನಿತಾ ಹಿರೇಮಠ, ಶಾರದಾದೇವಿ, ಬಿಸಿಯೂಟ ಖಜಾಂಚಿ ಬಸಮ್ಮ, ವಿಮಾ ನೌಕರರ ಸಂಘದ ಮಹಾಂತೇಶ, ವಾಹನ ಚಾಲಕರ ಸಂಘದ ಮಲ್ಲಣಗೌಡ ಮಾತನಾಡಿದರು.

ಚಂದ್ರಕಲಾ, ರೇಣುಕಾ, ಶ್ರೀಕಾಂತ, ಗಜಾನನ, ಮಲ್ಲಿಕಾರ್ಜುನ್, ರಾಜೇಶ್ವರಿ, ನಾಗಮ್ಮ, ಬನ್ನಮ್ಮ, ಮಮತಾ, ಗಿರಿಜಾ, ನಿರ್ಮಲಾ ಸೇರಿದಂತೆ ಇತರೆ ಕಾರ್ಮಿಕರು ಭಾಗವಹಿಸಿದ್ದರು.

***

ಸರ್ಕಾರಿ ಮತ್ತು ಸಾರ್ವಜನಿಕ ರಂಗದ ಘಟಕಗಳ ನೌಕರರ ಒತ್ತಾಯದ ಅಕಾಲಿಕ ನಿವೃತ್ತಿಯ ಮೇಲಿನ ಕ್ರೂರ ಸುತ್ತೋಲೆ ಹಿಂತೆಗೆದುಕೊಳ್ಳಿ
ಕೆ. ಸೋಮಶೇಖರ್, ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT