ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಉದ್ಘಾಟನೆಗೆ ಸೀಮಿತವಾದ ಆರೋಗ್ಯ ಕೇಂದ್ರ

ಸಂಸದರ ಆದರ್ಶ ಗ್ರಾಮದಲ್ಲಿ ಕಾರ್ಯಾರಂಭ ಮಾಡದ ಸೌಖ್ಯ ಕೇಂದ್ರ, ರಾಜಕೀಯ ಇಚ್ಛಾಶಕ್ತಿ ಕೊರತೆ
Last Updated 25 ಮೇ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಗ್ರಾಮದಲ್ಲಿ ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿರುವ ಆರೋಗ್ಯ ಮತ್ತು ಕ್ಷೇಮ ಸೌಖ್ಯ ಕೇಂದ್ರ ಉದ್ಘಾಟನೆಯಾಗಿ ಹಲವು ತಿಂಗಳು ಕಳೆದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ಇದರಿಂದ ಜನರಿಗೆ ಪರದಾಟ ತಪ್ಪಿಲ್ಲ.

ಇದು ರಾಯಚೂರು ಸಂಸದ ರಾಜಾ ಅಮರೇಶ ನಾಯಕ ಅವರ ಆದರ್ಶ ಗ್ರಾಮ. ಇಂಥ ಗ್ರಾಮದಲ್ಲೇ ಕೇಂದ್ರ ಸರ್ಕಾರದ ಯೋಜನೆಯ ಆಸ್ಪತ್ರೆ ಕಾರ್ಯಾರಂಭ ಮಾಡದಿರುವುದು ಸೋಜಿಗದ ಸಂಗತಿಯಾಗಿದೆ.

ಆರೋಗ್ಯ ಉಪ ಕೇಂದ್ರ: ಕೊಳ್ಳೂರು ಗ್ರಾಮದಲ್ಲಿ ಸದ್ಯ ಆರೋಗ್ಯ ಉಪ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಆದರೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹತ್ತಿಗೂಡುರು ಪ್ರಾಥಮಿಕ ಆರೋಗ್ಯ ಕೇಂದ್ರ ಹೊಂದಿದ್ದು, ಅಲ್ಲಿ ವೈದ್ಯರು ಇರುತ್ತಾರೆ. ಇಲ್ಲಿ ಯಾವಾಗಲೊ ಒಮ್ಮೆ ವೈದ್ಯರು ಬರುತ್ತಾರೆ. ಮಿಕ್ಕ ಎಲ್ಲ ಕೆಲಸವನ್ನು ದಾದಿಯರೇ ನೋಡಿಕೊಳ್ಳುತ್ತಾರೆ.

ನೀರಿನ ಸಮಸ್ಯೆ: ಉಪ ಕೇಂದ್ರದಲ್ಲಿ ನೀರಿನ ಸಮಸ್ಯೆ ಇದೆ. ಜೊತೆಗೆ ಸಣ್ಣ ಕೋಣೆಗಳು ಇರುವುದರಿಂದ ಬಾಣಂತಿಯರು ಮತ್ತು ಸಾಮಾನ್ಯ ಜನರಿಗೆ ಪರೀಕ್ಷೆ ಮಾಡಲು ಸಮಸ್ಯೆ ಆಗುತ್ತದೆ. ನಾಲೈದು ದಶಕದ ಹಿಂದೆ ಈ ಕಟ್ಟಡ ನಿರ್ಮಿಸಿದ್ದು, ಇದು ಸುಸ್ಥಿತವಾಗಿಲ್ಲ.

ಊರ ಹೊರಗಡೆ ಕೇಂದ್ರ ನಿರ್ಮಾಣ: ಈಗ ನಿರ್ಮಾಣವಾಗಿರುವ ಆರೋಗ್ಯ ಮತ್ತು ಕ್ಷೇಮ ಸೌಖ್ಯ ಕೇಂದ್ರ ಗ್ರಾಮದ ಹೊರಗಡೆ ಇದೆ. ಅಲ್ಲದೆ ಕಟ್ಟಡ ನಿರ್ಮಾಣ ಮಾಡಿದಷ್ಟೆ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇದರಿಂದ ಸಮಸ್ಯೆ ಏರ್ಪಟ್ಟಿದೆ.

ಈ ಕಟ್ಟಡ ಗ್ರಾಮ ಪಂಚಾಯಿತಿ ಬಳಿ ಇದೆ. ಆದರೂ ಯಾವುದೇ ಸೌಲಭ್ಯವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಲ್ಪಿಸಿಲ್ಲ.

‘ಮೂಲ ಸೌಕರ್ಯದ ಬಗ್ಗೆ ಗ್ರಾಮದ ಪಿಡಿಒ, ಟಿಎಚ್‌ಒ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ, ಯಾವುದೇ ಉಪಯೋಗವಾಗಿಲ್ಲ. ಇದರಿಂದ ಸಮಸ್ಯೆ ಹಾಗೇ ಉಳಿದುಕೊಂಡಿದೆ’ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದರು.

ಐದಾರು ಗ್ರಾಮಗಳಿಗೆ ಅನುಕೂಲ: ಆರೋಗ್ಯ ಮತ್ತು ಕ್ಷೇಮ ಸೌಖ್ಯ ಕೇಂದ್ರ ಐದಾರು ಗ್ರಾಮಗಳಿಗೆ ಕೇಂದ್ರ ಸ್ಥಾನದಲ್ಲಿದೆ. ಇದು ಆರಂಭವಾದರೆ ಅಕ್ಕಪಕ್ಕದ ಜನರಿಗೆ ಅನುಕೂಲವಾಗಲಿದೆ. ಟೊಣ್ಣೂರು, ಗೌಡೂರು, ಯಕ್ಷಂತಿ, ಮಕಕಲ್‌ ಗ್ರಾಮಗಳ ಜನರಿಗೆ ಈ ಆಸ್ಪತ್ರೆಯಿಂದ ಅನುಕೂಲ ಕಲ್ಪಸಿದಂತೆ ಆಗುತ್ತದೆ.

‘ಕ್ಷೇತ್ರಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಶೀಘ್ರ ಎಚ್ಚೆತ್ತು. ಆಸ್ಪತ್ರೆಯಲ್ಲಿ ಆರಂಭಿಸಬೇಕು. ದಾದಿಯರು ಬೆಳಿಗ್ಗೆ ಬಂದು ಹೋಗುತ್ತಾರೆ. ರಾತ್ರಿ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಾಲ್ಲೂಕು ಕಡೆ ಮುಖ ಮಾಡಬೇಕು. ಆಸ್ಪತ್ರೆ ಕಾರ್ಯಾರಂಭ ಮಾಡಿದರೆ ವೈದ್ಯರು ಸಕಾಲಕ್ಕೆ ಸಿಗುತ್ತಾರೆ. ಹೀಗಾಗಿ ಶೀಘ್ರವೇ ಆರಂಭಕ್ಕೆ ಒತ್ತು ನೀಡಬೇಕು’ ಎಂದು ಗ್ರಾಮಸ್ಥ ಶಿವಾರೆಡ್ಡಿ ಪಾಟೀಲ ಆಗ್ರಹಿಸುತ್ತಾರೆ.

***

ಸಂಸದರ ಆದರ್ಶ ಗ್ರಾಮದಲ್ಲಿ ಆರೋಗ್ಯ ಕೇಂದ್ರ ನಿರ್ವಹಿಸದೆ ಇರುವುದು ಈಗ ನಿಮ್ಮ ಮೂಲಕ ಗಮನಕ್ಕೆ ಬಂದಿದೆ. ಡಿಸಿ, ಡಿಎಚ್‌ಒಗೆ ಮಾತನಾಡಿ ಆರಂಭಿಸಲು ಸೂಚಿಸುತ್ತೇನೆ.
–ರಾಜಾ ಅಮರೇಶ ನಾಯಕ, ರಾಯಚೂರು ಸಂಸದ

***

ಆರೋಗ್ಯ ಮತ್ತು ಕ್ಷೇಮ ಸೌಖ್ಯ ಕೇಂದ್ರದಲ್ಲಿ ಕೆಲ ಕೆಲಸಗಳು ಬಾಕಿ ಇರುವುದರಿಂದ ಇಲ್ಲಿ ಕಾರ್ಯನಿರ್ವಹಿಸಲು ಆಗಿಲ್ಲ. ಕೆಲಸಗಳು ಮುಗಿದ ಮೇಲೆ ಆರಂಭಿಸಲಾಗುವುದು.
–ಡಾ.ಇಂದುಮತಿ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

***
ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಆರೋಗ್ಯ ಕೇಂದ್ರ ಇನ್ನೂ ಆರಂಭವಾಗುವ ಮುನ್ನವೇ ಮೇಲ್ಛಾವಣಿ ಸಿಮೆಂಟ್‌ ಕುಸಿದಿದೆ.
–ಶಿವಾರೆಡ್ಡಿ ಪಾಟೀಲ, ಕೊಳ್ಳೂರು (ಎಂ) ಗ್ರಾಮಸ್ಥ

***

ಹೊಸ ಆಸ್ಪತ್ರೆಯಲ್ಲಿ ನೀರು, ವಿದ್ಯುತ್‌, ಒಳಚರಂಡಿ, ಆವರಣ ಗೋಡೆ ಇಲ್ಲ. ಅಕ್ಕಪಕ್ಕದಲ್ಲಿ ಜಾಲಿಗಿಡ ಬೆಳೆದಿದ್ದು, ಕೆಲಸಗಾರರು ಇಲ್ಲದಿದ್ದರಿಂದ ಸಮಸ್ಯೆ ಆಗಿದೆ.
–ಡಾ.ಮಂಜುಳಾ ದೇಸಾಯಿ, ಹತ್ತಿಗೂಡುರು ಪಿಎಚ್‌ಸಿ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT