ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜನಸಾಮಾನ್ಯರ ಕೆಲಸಕ್ಕೆ ತಪ್ಪದ ಕಚೇರಿ ಅಲೆದಾಟ

3 ನಗರಸಭೆ, 3 ಪುರಸಭೆ, ಒಂದು ಪಟ್ಟಣ ಪಂಚಾಯ್ತಿಯಲ್ಲಿ ದಲ್ಲಾಳಿಗಳ ಹಾವಳಿ, ಅಭಿವೃದ್ಧಿ ಕುಂಠಿತ
Last Updated 24 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯ್ತಿ ಇದ್ದರೂ ಸಾರ್ವಜನಿಕರ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವುದು ಮೊದಲಿಂದಲೂ ಕೇಳಿ ಬರುತ್ತಿರುವ ದೂರಾಗಿದೆ.

ಯಾದಗಿರಿ, ಶಹಾಪುರ, ಸುರಪುರ ನಗರಸಭೆ ಸ್ಥಾನವನ್ನು ಹೊಂದಿದ್ದರೆ, ಗುರುಮಠಕಲ್‌, ಕೆಂಭಾವಿ, ಕಕ್ಕೇರಾ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿ ಸ್ಥಾನವನ್ನು ಹೊಂದಿದೆ. ವಡಗೇರಾ ತಾಲ್ಲೂಕು ಕೇಂದ್ರವಾದರೂ ಇನ್ನೂ ಗ್ರಾಮ ಪಂಚಾಯಿತಿ ಮಾತ್ರ ಇದೆ. ಸೌಲಭ್ಯಗಳು ಮಾತ್ರ ಆಮೆಗತಿಯಲ್ಲಿ ಸಾಗುತ್ತಿವೆ ಎನ್ನುವ ಆರೋಪ ಸಾರ್ವಜನಿಕರದ್ದು.

ಯಾದಗಿರಿ, ಶಹಾಪುರ, ಸುರಪುರ ನಗರಸಭೆ ವ್ಯಾಪ್ತಿಗೆ ತಲಾ 31 ವಾರ್ಡ್‌ಗಳು ಹೊಂದಿದ್ದರೆ, ಗುರುಮಠಕಲ್, ಕಕ್ಕೇರಾ, ಕೆಂಭಾವಿ ಪುರಸಭೆಯಲ್ಲಿ ತಲಾ 23 ವಾರ್ಡ್‌ಗಳಿವೆ.

’ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಗೊಂದಲದಿಂದ ಎರಡು ವರ್ಷಗಳ ನಂತರ ಆಡಳಿತ ಮಂಡಳಿ ರಚನೆಯಾಗಿದ್ದು, ಅಕ್ಟೋಬರ್‌ 29ಕ್ಕೆ ಒಂದು ವರ್ಷ ಪೂರ್ಣಗೊಳಿಸುತ್ತಿದೆ. ಜನಪ್ರತಿನಿಧಿಗಳ ಆಳ್ವಿಕೆ ಶುರುವಾಗಿ ಒಂದು ವರ್ಷ ಗತಿಸಿದರೂ ಶಾಶ್ವತ ಕುಡಿವ ನೀರು, ವಾರ್ಡ್‌ನ ಸಮಸ್ಯೆ, ಶೌಚಾಲಯ ಸೇರಿದಂತೆ ಹೇಳಿಕೊಳ್ಳುವಂತೆ ಯಾವುದೇ ಒಂದು ಕೆಲಸ ಆಗಿಲ್ಲ‘ ಎಂದು ನಗರ ನಿವಾಸಿ ಚಂದ್ರಶೇಖರ ಪಾಟೀಲ ಆರೋಪಿಸುತ್ತಾರೆ.

24X7 ನೀರು ಕನಸಿನ ಮಾತು:

ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಂಡ 24X7 ನೀರು ಕನಸಿನ ಮಾತಾಗಿದೆ. ನಗರದ ಕೆಲ ಕಡೆ ಮಾತ್ರ ಮೀಟರ್‌ ಅಳವಡಿಸಿದ್ದು ಬಿಟ್ಟರೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಸಮರ್ಪಕ ನೀರು ಪೂರೈಕೆಯೇ ಸವಾಲಾಗಿದೆ.

ಹದಗೆಟ್ಟ ಬಡಾವಣೆ ರಸ್ತೆಗಳು:

ಜಿಲ್ಲೆಯ ಬಹುತೇಕ ನಗರ, ಪಟ್ಟಣಗಳ ಬಡಾವಣೆಗಳ ರಸ್ತೆಗಳು ಹದಗೆಟ್ಟಿದ್ದು, ಹಲವಾರು ವರ್ಷಗಳು ಕಳೆದರೂ ದುರಸ್ತಿ ಭಾಗ್ಯವಿಲ್ಲದಂತಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರೂ ಅದೇ ಮಾರ್ಗದಲ್ಲಿ ಸಂಚಾರ ಮಾಡಿದರೂ ಜಾಣಕುರುಡರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‘ನಗರದ ಲುಂಬಿನಿ ವನಕ್ಕೆ ತೆರಳುವ ರಸ್ತೆ ಹದಗೆಟ್ಟು ಹಲವಾರು ವರ್ಷಗಳು ಕಳೆದಿದೆ. ಇದೇ ಮಾರ್ಗದಲ್ಲಿ ಜನಪ್ರತಿನಿಧಿಗಳು ತೆರಳುತ್ತಾರೆ. ಮಳೆಗಾಲದಲ್ಲಿ ಉಂಟಾದ ತಗ್ಗುದಿನ್ನೆಗಳು ಇಲ್ಲಿಯವರೆಗೆ ಮುಚ್ಚಿಲ್ಲ. ಇನ್ನು ಬೇರೆ ಕಡೆಯೂ ಇದೇ ಸಮಸ್ಯೆ ಇದೆ. ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿದೆ’ ಎಂದು ನಗರ ನಿವಾಸಿ ಬಸವರಾಜ ಪಾಟೀಲ ದೂರುತ್ತಾರೆ.

ಮುಖ್ಯರಸ್ತೆಯಲ್ಲೂ ಕತ್ತಲು:

ನಗರದ ಬಹುತೇಕ ಮುಖ್ಯರಸ್ತೆಗಳಲ್ಲೂ ಬೀದಿ ದೀಪಗಳು ಬೆಳಗುತ್ತಿಲ್ಲ. ಹೈಟೆಕ್‌ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುವುದು ಎಂದು ಹೇಳುವುದು ಕೆಲ ತಿಂಗಳಿಂದಲೂ ಸಾಮಾನ್ಯವಾಗಿದೆ. ಆದರೆ, ಬೀದಿ ದೀಪಗಳು ಮಾತ್ರ ಬೆಳಗುತ್ತಿಲ್ಲ.

ಬೀದಿದೀಪಗಳು ಸರಿಯಾಗಿ ಬೆಳಗದ ಕಾರಣ ಅಪಘಾತಕ್ಕೆ ಕಾರಣವಾಗುತ್ತಿವೆ. ರಸ್ತೆ ಮಧ್ಯೆದಲ್ಲಿಯೇ ಬಿಡಾಡಿ ದನಗಳು ಮಲಗುತ್ತವೆ. ಇದರಿಂದ ವಾಹನ ಸವಾರರು ತುಂಬಾ ತೊಂದರೆ ಪಡುತ್ತಿದ್ದಾರೆ. ದೀಪಗಳು ಇದ್ದರೆ ಸಮಸ್ಯೆ ಉದ್ಭವಿಸುವುದಿಲ್ಲ.

ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ:

ಖಾತಾ ನಕಲು ಸೇರಿದಂತೆ ವಿವಿಧ ಕೆಲಸಗಳಿಗಾಗಿ ಸಾರ್ವಜನಿಕರನ್ನು ಅಲೆದಾಡಿಸಲಾಗುತ್ತಿದೆ ಎನ್ನುವ ಆರೋಪ ಸಾಮಾನ್ಯವಾಗಿದೆ. ಒಂದು ಸಹಿ ಮಾಡಿಸಿಕೊಳ್ಳಲು ಹಲವಾರು ದಿನಗಳು ಬೇಕಾಗುತ್ತವೆ.

‘ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ ವಿಪರೀತವಾಗಿದೆ. ದಲ್ಲಾಳಿಗಳ ಮೂಲಕ ತೆರಳಿದರೆ ಕೆಲಸ ಸುಲಭವಾಗುತ್ತದೆ. ನಾವೇ ನೇರವಾಗಿ ತೆರಳಿದರೆ ಒಂದು ವಾರ ಬಿಟ್ಟು ಬನ್ನಿ, ಸಾಹೇಬರು ಇಲ್ಲ. ಇತ್ಯಾದಿ ನೆಪಗಳನ್ನು ಹೇಳುತ್ತಾರೆ. ಹೀಗಾದರೆ ಸಾರ್ವಜನಿಕ ಕೆಲಸಗಳು ಆಗುವುದು ಯಾವಾಗ’ ಎಂದು ಪ್ರಶ್ನಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಮುಸ್ತಾಫ್‌ ಪಟೇಲ್‌.

ಸದಸ್ಯರ ಕೆಲಸಗಳೇ ಆಗುತ್ತಿಲ್ಲ:

ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಮಾತನ್ನೂ ಅಧಿಕಾರಿಗಳು ಕೇಳುತ್ತಿಲ್ಲ. ಇದರಿಂದ ವಾರ್ಡ್‌ ಜನರಿಗೆ ಸರಿಯಾದ ಸೌಲಭ್ಯ ಕಲ್ಪಿಸಲು ಆಗುತ್ತಿಲ್ಲ ಎನ್ನುವುದು ಬಹುತೇಕ ಸದಸ್ಯರ ಮಾತಾಗಿದೆ.

ಆಡಳಿತ ನಡೆಸುವ ಪಕ್ಷದವರಿಗೆ ಮಾತ್ರ ಅನುದಾನ ಕೊಟ್ಟರೆ, ವಿರೋಧ ಪಕ್ಷದವರಿಗೆ ತಾರತ್ಯಮ ಮಾಡಲಾಗುತ್ತಿದೆ ಎಂದು ಸದಸ್ಯರೇ ಆರೋಪಿಸುತ್ತಾರೆ.

ನಗರೋತ್ಥಾನ ಕಾಮಗಾರಿ ಕುಂಠಿತ:

ನಗರಸಭೆ, ಪುರಸಭೆಗಳಲ್ಲಿ ನಗರೋತ್ಥಾನ ಕಾಮಗಾರಿ ಕುಂಠಿತಗೊಂಡಿದೆ. 2017–18ನೇ ಸಾಲಿನ ಕಾಮಗಾರಿಯೂ ಪೂರ್ಣಗೊಂಡಿಲ್ಲ. 2020–21ನೇ ಸಾಲಿನ ಕಾಮಗಾರಿ ಯಾವಾಗ ಆರಂಭಿಸುವುದು ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.

ಸಂಬಂಧಿಸಿದ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಆಡಳಿತ ಮಂಡಳಿಗಳತ್ತ ಗಮನಹರಿಸಿ ಅಭಿವೃದ್ಧಿ ಕೆಲಸಗಳು ಆಗುವಂತೆ ನೋಡಿಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಅನುದಾನ ಹಂಚಿಕೆ; ತಾರತಮ್ಯ ಇಲ್ಲ

‘ಬೀದಿ ದೀಪ ನಿರ್ವಹಣೆಗಾಗಿ ರಾಜ್ಯಮಟ್ಟದಲ್ಲಿಯೇ ಟೆಂಡರ್‌ ಕರೆಯಲಾಗಿದೆ. ಅವರೇ ನಿರ್ವಹಣೆ ಮಾಡುತ್ತಾರೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಫಲಾನುಭವಿಗಳಿಗೆ ₹15 ಸಾವಿರ ಅನುದಾನ ನೀಡಲಾಗುತ್ತಿದೆ. ಆಡಳಿತ, ವಿರೋಧ ಪಕ್ಷದವರಿಗೆ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತ್ಯಮ ಮಾಡಿಲ್ಲ. ಸಾರ್ವಜನಿಕರು ಆಯಾ ನಗರಸಭೆ ಸದಸ್ಯರಿಗೆ ಖಾತಾ ನಕಲು ಬಗ್ಗೆ ಗಮನಕ್ಕೆ ತನ್ನಿ. ಇದರಿಂದ ದಲ್ಲಾಳಿಗಳ ಹಾವಳಿ ನಿಲ್ಲುತ್ತದೆ’ ಎನ್ನುತ್ತಾರೆ ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ.

ಸುರಪುರ: ಸೌಕರ್ಯಗಳಿಲ್ಲದ ವಾರ್ಡ್‌ಗಳು

ಸುರಪುರ: ಇಲ್ಲಿನ ನಗರಸಭೆ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಿ ಅ. 29ಕ್ಕೆ ಒಂದು ವರ್ಷ ತುಂಬುತ್ತದೆ. ಆದರೆ, ಬಹುತೇಕ ವಾರ್ಡ್‌ಗಳಲ್ಲಿ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತದೆ.

ವಾರ್ಡ್ ನಂ. 30 ಅಲೆಮಾರಿ ಜನಾಂಗ ಬಡಾವಣೆಯಲ್ಲಿ ಪ್ರತಿ ವರ್ಷ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುತ್ತದೆ. ತಾತ್ಕಾಲಿಕ ವ್ಯವಸ್ಥೆ ಮಾಡಿ ಕೈತೊಳೆದುಕೊಳ್ಳಲಾಗುತ್ತದೆ.

ದೇವಿಕೇರಿ ರಸ್ತೆ, ಹಸನಾಪುರದ ಎರಡೂ ವಾರ್ಡ್‌ಗಳಲ್ಲಿ, ಮಹಿಬೂಬ ನಗರ ಕಾಲೊನಿ, ಧೂಳಪೇಟ, ವೆಂಕಟಾಪುರ, ಉದ್ದಾರ ಓಣಿ, ಮೋಜಂಪುರ, ಕುಮಾರನಾಯಕ ಕಾಲೊನಿ ಮತ್ತಿತರ ಹಲವಾರು ವಾರ್ಡ್‌ಗಳಲ್ಲಿ ಸಮರ್ಪಕ ರಸ್ತೆ, ಚರಂಡಿ, ವಿದ್ಯುತ್ ವ್ಯವಸ್ಥೆ ಇಲ್ಲ.

‘ಒಂದು ವರ್ಷದ ಅವಧಿಯಲ್ಲಿ ಪ್ರತಿ ವಾರ್ಡ್‌ಗೆ ₹ 3 ರಿಂದ 5 ಲಕ್ಷ ಮೂಲ ಸೌಕರ್ಯಕ್ಕೆ ಖರ್ಚು ಮಾಡಲಾಗಿದೆ. ಅವಶ್ಯವಿದ್ದೆಡೆ ಸ್ಮಶಾನ ಅಭಿವೃದ್ಧಿ, ಉದ್ಯಾನ ಕಾಮಗಾರಿ ಮಾಡಲಾಗಿದೆ’ ಎನ್ನುತ್ತಾರೆ ಪೌರಾಯುಕ್ತ ಜೀವನ ಕಟ್ಟಿಮನಿ.

‘ನಗರೋತ್ಥಾನ ಯೋಜನೆಯಡಿ ರಂಗಂಪೇಟೆ ರಸ್ತೆ ವಿಸ್ತರಣೆ, ರಸ್ತೆ, ಚರಂಡಿಗೆ ₹ 4.5 ಕೋಟಿ ವೆಚ್ಚ ಮಾಡಲಾಗಿದೆ. ₹ 6 ಕೋಟಿ ವೆಚ್ಚದಲ್ಲಿ ನೀರು ಸರಬರಾಜು ಯೋಜನೆಯ 3 ಕಿ.ಮಿ ಹೊಸ ಪೈಪ್‌ಲೈನ್ ಅಳವಡಿಸಲಾಗಿದೆ. 300 ಎಚ್‌ಪಿಯ ಎರಡು ಮೋಟಾರ್ ಖರೀದಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಶಾಸಕ ನರಸಿಂಹ ನಾಯಕ ಅವರ ವಿಶೇಷ ಅನುದಾನದಡಿ ₹ 3 ಕೋಟಿ ಹಣದಲ್ಲಿ ₹1 ಕೋಟಿಯಲ್ಲಿ ಜಾಕ್‌ವೆಲ್‌ಗೆ ವಿದ್ಯುತ್ ಎಕ್ಸ್‌ಪ್ರೆಸ್ ಲೈನ್ ಅಳವಡಿಸಲಾಗಿದೆ. ಉಳಿದ ಹಣವನ್ನು ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ಹುಣಸಗಿ: ಕಾಣದ ಅಭಿವೃದ್ಧಿ

ಹುಣಸಗಿ: 2020ರ ಫೆಬ್ರುವರಿಯಲ್ಲಿ ಹುಣಸಗಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಆದರೆ, ಪಟ್ಟಣ ಪಂಚಾಯಿತಿಯಾದರೂ ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬುದು ಇಲ್ಲಿನ ನಾಗರಿಕರ ಆರೋಪವಾಗಿದೆ.

ಹುಣಸಗಿ ಪಟ್ಟಣದ ಆಶ್ರಯ ಕಾಲೊನಿ, ಯುಕೆಪಿ ಕ್ಯಾಂಪ್ ರಸ್ತೆ, ಮಹಾಂತಸ್ವಾಮಿ ವೃತ್ತ ಹೀಗೆ ಹಲವಾರು ಭಾಗಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು, ರಸ್ತೆ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪಟ್ಟಣದ ಬಸವೇಶ್ವರ ವೃತ್ತದಿಂದ ಸಮುದಾಯ ಆರೋಗ್ಯ ಕೇಂದ್ರದ ವರೆಗಿನ ರಸ್ತೆಯ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ನಿತ್ಯ ಈ ಮಾರ್ಗದಲ್ಲಿ ರಾತ್ರಿ ಸಂಚರಿಸುವ ಸಾರ್ಜಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಟ್ಟಣ ನಿವಾಸಿಗಳಾದ ನಿಂಗು ನಾಯಕ ಹಾಗೂ ಚನ್ನಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ.

ಹುಣಸಗಿ ಪಟ್ಟಣದ ಹಿಂದಿರುವ ಡಾಲರ್ಸ್ ಕಾಲೊನಿ, ವಜ್ಜಲ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಅಮರೇಶ್ವರ ನಗರ ವಾರ್ಡ್‌ ಸಂಖ್ಯೆ 12 ಹಾಗೂ ವಾರ್ಡ್‌ ಸಂಖ್ಯೆ 13 ಭಾಗ್ಯನಗರ ಇಲ್ಲಿ ಇನ್ನೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸುಸಜ್ಜಿತ ರಸ್ತೆ ಇಲ್ಲ ಎಂದು ಇಲ್ಲಿನ ನಾಗರಿಕರು ಹೇಳುತ್ತಾರೆ. ಪಟ್ಟಣದಲ್ಲಿ ಅಲ್ಲಲ್ಲಿ ವಿದ್ಯುತ್ ಕಂಬಗಳು ಶಿಥಿಲವಾಗಿವೆ ಎಂದು ಬಸವರಾಜ ವೈಲಿ ತಿಳಿಸುತ್ತಾರೆ.

‘ಪಟ್ಟಣ ಪಂಚಾಯಿತಿಯಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಅನುದಾನ ಹಂಚಿಕೆ ಆಗಿರಲಿಲ್ಲ. ಆದರೆ, ಸದ್ಯ ಪಟ್ಟಣ ಪಂಚಾಯಿತಿಗೆ ಸಾಕಷ್ಟು ಅನುದಾನ ಬಂದಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಶೋಕ ಅಶೋಕ್ ಚವಾಣ್‌ ತಿಳಿಸಿದರು.

‘15ನೇ ಹಣಕಾಸು ಯೋಜನೆಯಡಿ ₹1.73 ಕೋಟಿ, ಎಸ್‌ಎಫ್‌ಸಿ ಯೋಜನೆಯಡಿ ₹74 ಲಕ್ಷ, ಕೆಕೆಆರ್‌ಡಿಬಿ ₹12 ಲಕ್ಷ ಹೀಗೆ ಸಾಕಷ್ಟು ಅನುದಾನ ಬಂದಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ’ ಎಂದು ವಿವರಿಸಿದರು.

ಶಹಾಪುರ: ಬೆಳಗದ ಬೀದಿ ದೀಪಗಳು

ಶಹಾಪುರ: ಬೀದರ್‌-ಶ್ರೀರಂಗಪಟ್ಟಣದ ಹೆದ್ದಾರಿ ಮೇಲಿನ ನಗರದ ಮುಖ್ಯ ಬೀದಿ ದೀಪಗಳು ಬೆಳಗದೆ ಹಲವು ತಿಂಗಳು ಕಳೆದಿವೆ.

ಆರು ತಿಂಗಳ ಹಿಂದೆ ₹25 ಲಕ್ಷ ವೆಚ್ಚದಲ್ಲಿ ಬೀದಿ ದೀಪಗಳ ಅಳವಡಿಕೆಗಾಗಿ ಟೆಂಡರ್ ಕರೆಯಲಾಗಿತ್ತು. ಆದರೆ, ಇಂದಿಗೂ ದೀಪಗಳನ್ನು ಅಳವಡಿಸಿಲ್ಲ. ನಗರದಲ್ಲಿ 3000ಕ್ಕೂ ಅಧಿಕ ಬೀದಿ ದೀಪಗಳಿವೆ. ಅಲ್ಲೊಂದು ಇಲ್ಲೊಂದು ಬೆಳಕು ಬೀರುತ್ತವೆ. ಸ್ವತಃ ಶಾಸಕ ಶರಣಬಸಪ್ಪ ದರ್ಶನಾಪುರ ಅವರು ಬೀದಿ ದೀಪಗಳನ್ನು ಅಳವಡಿಸಲು ನಗರಸಭೆ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದರು. ಇನ್ನೂ ಅದು ಕಾರ್ಯಗತವಾಗಿಲ್ಲ ಎಂಬುದು ನಗರ ಜನತೆಯ ಆರೋಪವಾಗಿದೆ.

15ನೇ ಹಣಕಾಸು ಯೋಜನೆ ಅಡಿಯಲ್ಲಿ ₹2.50 ಕೋಟಿ ಅನುದಾನ ಮಂಜೂರಾಗಿದೆ. ಟೆಂಡರ್ ಕರೆದಿಲ್ಲ. ಇದರಿಂದ ನಗರದ 31 ವಾರ್ಡ್‌ಗಳಲ್ಲಿ ಚರಂಡಿ, ಸಿ.ಸಿ ರಸ್ತೆ, ಕಾಂಪೌಂಡ್‌ ನಿರ್ಮಾಣ ಹೀಗೆ ಹಲವಾರು ಮೂಲ ಸೌಲಭ್ಯದ ಕಾಮಗಾರಿ ನನೆಗುದಿಗೆ ಬಿದ್ದಿವೆ. ಕೋವಿಡ್ ಸಂಕಷ್ಟದಿಂದ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದಿಂದ ಎಸ್‌ಎಫ್‌ಸಿ, 15ನೇ ಹಣಕಾಸು ಯೋಜನೆ ಅಡಿಯಲ್ಲಿ ಬರಬೇಕಾದ ಅನುದಾನ ಶೇ 50ರಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿ ಒಬ್ಬರು.

ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಇಲ್ಲದ ಖುಲ್ಲಾ ಜಾಗದಲ್ಲಿ ಕಟ್ಟಡ ಹಾಗೂ ಮನೆ ನಿರ್ಮಿಸಲು ಸರ್ಕಾರ ತಡೆ ಹಿಡಿದ ಕಾರಣ ಜನತೆಗೆ ದೊಡ್ಡ ಸಮಸ್ಯೆಯಾಗಿದೆ. ನಗರಸಭೆಯ ವ್ಯಾಪ್ತಿಗೆ ಗ್ರಾಮ ಪಂಚಾಯಿತಿ ಅಧೀನದ ಹಳಿಸಗರ, ರಾಕಂಗೇರಾ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅಂಥ ಪ್ರದೇಶದಲ್ಲಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿಲ್ಲ. ಈಗ ಮನೆ ನಿರ್ಮಿಸಲು ನಗರಸಭೆ ಪರವಾನಗಿ ನೀಡುತ್ತಿಲ್ಲ ಹಾಗೂ ಖಾತಾ ನಕಲು ಬರುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುವಂತೆ ಆಗಿದೆ. ಇದರ ಬಗ್ಗೆ ತ್ವರಿತವಾಗಿ ಅಧಿಕಾರಿಗಳು ಗಮನಹರಿಸಬೇಕು ಎನ್ನುತ್ತಾರೆ ನಗರದ ನಿವಾಸಿ ಶರಣಪ್ಪ.

ನಗರಸಭೆಯಲ್ಲಿ ಅಭಿವೃದ್ಧಿ ಕಾಮಗಾರಿ ಇಲ್ಲವಾಗಿವೆ. ಕೇವಲ 10 ತಿಂಗಳಿಗೆ ಒಬ್ಬರಂತೆ ಅಧ್ಯಕ್ಷರನ್ನು ಬದಲಾಯಿಸುವುದು ಕೆಲಸವಾಗಿದೆ. ಹೂಳು ತುಂಬಿದ ಚರಂಡಿ, ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು, ರಾತ್ರಿ ಬೀದಿ ದೀಪಗಳು ಇಲ್ಲವಾಗಿವೆ. ನಗರಸಭೆಗೆ ತೆರಳಿ ಬೀದಿ ದೀಪ ಅಳವಡಿಸಲು ಮನವಿ ಮಾಡಿದರೆ ನಾಳೆ ಹಾಕುತ್ತೇವೆ ಎನ್ನುತ್ತಲೇ ಹಲವು ತಿಂಗಳು ದೂಡಿದ್ದಾರೆ. ಯಾರ ಮುಂದೆ ಹೇಳಬೇಕು ನಮ್ಮ ಗೋಳು ಎಂದು ಪ್ರಶ್ನಿಸುತ್ತಾರೆ ನಗರದ ನಿವಾಸಿ ಒಬ್ಬರು.

* ಕೋವಿಡ್‌ ಕಾರಣದಿಂದ ಅನುದಾನ ಬಂದಿಲ್ಲ. ಪೌರಕಾರ್ಮಿಕರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಶೇ 50ರಷ್ಟು ಕೆಲಸಗಳು ಆಗಿವೆ.

-ವಿಲಾಸ ಪಾಟೀಲ, ನಗರಸಭೆ ಅಧ್ಯಕ್ಷ ಯಾದಗಿರಿ

* ನಗರಸಭೆಯಲ್ಲಿ ₹3 ಕೋಟಿ ತೆರಿಗೆ ಸಂಗ್ರಹವಾಗಬೇಕು. ಈಗ ಕೇವಲ ₹75 ಲಕ್ಷ ಮಾತ್ರ ಸಂಗ್ರಹಿಸಲಾಗಿದೆ. ಖಾತಾ ನಕಲಿಗೆ ಸರಿಯಾದ ದಾಖಲೆಗಳು ಸಲ್ಲಿಸದಿರುವುದು ಸಮಸ್ಯೆಯಾಗುತ್ತದೆ.

-ಭೀಮಣ್ಣ ಟಿ ನಾಯಕ, ಯಾದಗಿರಿ ನಗರಸಭೆ ಪೌರಾಯುಕ್ತ

* ಆಡಳಿತ ಮಂಡಳಿ ಇದ್ದರೂ ಯಾವುದೇ ಕೆಲಸಗಳು ಆಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಮನೆಗಳ ಹಂಚಿಕೆಯೇ ಆಗಿಲ್ಲ. ಬೀದಿ ದೀಪಗಳ ನಿರ್ವಹಣೆ ಕೊರತೆಯಿಂದ ಜನತೆ ಕತ್ತಲಲ್ಲಿ ಕಾಲ ಕಳೆಯಬೇಕಾಗಿದೆ.

-ಅವಿನಾಶ ಜಗನ್ನಾಥ, ಯುವ ಕಾಂಗ್ರೆಸ್‌ ಉಪಾಧ್ಯಕ್ಷ

* ನಾನು ಅಧಿಕಾರ ಸ್ವೀಕರಿಸಿ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಮೂಲ ಸೌಕರ್ಯಗಳಗೆ ಹೆಚ್ಚಿನ ಅದ್ಯತೆ ನೀಡಲಾಗಿದೆ.

-ಸುಜಾತಾ ವೇಣುಗೋಪಾಲ ಜೇವರ್ಗಿ, ಅಧ್ಯಕ್ಷೆ ನಗರಸಭೆ ಸುರಪುರ

* ನಗರಸಭೆಯಲ್ಲಿ ಮಧ್ಯವರ್ತಿಗಳ ಯಾವುದೇ ಹಾವಳಿ ಇಲ್ಲ. ಕೆಲಸಗಳು ಆನ್‌ಲೈನ್‌ನಲ್ಲೆ ನಡೆಯುತ್ತಿವೆ. ಸಾರ್ವಜನಿಕರು ನೇರವಾಗಿ ಸಿಬ್ಬಂದಿಯನ್ನು ಸಂಪರ್ಕಿಸಿ ಕೆಲಸ ಮಾಡಿಕೊಳ್ಳುತ್ತಾರೆ

-ಜೀವನ ಕಟ್ಟಿಮನಿ ಪೌರಾಯುಕ್ತ ನಗರಸಭೆ ಸುರಪುರ

* ಕೆಲಸಗಳಿಗೆ ನಗರಸಭೆಗೆ ಮೇಲಿಂದ ಮೇಲೆ ಅಲೆದಾಡಬೇಕು. ಭ್ರಷ್ಟಾಚಾರದ ಹಾವಳಿ ಇದೆ. ಸಮರ್ಪಕ ಕೆಲಸ ಆಗುತ್ತಿಲ್ಲ. ಅಪರಾ ತಪರಾ ಕೆಲಸ ಮಾಡುತ್ತಿದ್ದಾರೆ.

-ನಾಗೇಂದ್ರ ದೊರೆ, ನಾಗರಿಕ ಸುರಪುರ

* ಬಹಳಷ್ಟು ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಇಲ್ಲ. ಸಿಸಿ ರಸ್ತೆ, ಚರಂಡಿ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಮುಖ್ಯವಾಗಿ ನೀರು ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ.

-ವೆಂಕಟೇಶ ಬೇಟೆಗಾರ, ಕಾಂಗ್ರೆಸ್ ಮುಖಂಡ ಸುರಪುರ

****

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT