ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ‘ಕಂಟೇನ್ಮೆಂಟ್‌’ ಹೆಚ್ಚಳ

ಸದ್ಯ 32 ಪ್ರದೇಶಗಳಿಗೆ ದಿಗ್ಬಂಧನ: ದಿಗ್ಬಂಧಿತ ಪ್ರದೇಶಗಳು ಮತ್ತಷ್ಟು ಹೆಚ್ಚುವ ಸಾಧ್ಯತೆ
Last Updated 10 ಜೂನ್ 2020, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ 32ಕಂಟೇನ್ಮೆಂಟ್‌ ಝೋನ್‌ ನಿರ್ಮಿಸಿದ್ದು, ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಮೊದಲ ಬಾರಿ ಮೇ 12ರಂದು ಗುಜರಾತ್‌ನ ಅಹಮದಾಬ್‌ನಿಂದ ಸುರಪುರ ನಗರಕ್ಕೆ ಬಂದ ದಂಪತಿಗೆ ಕೋವಿಡ್‌ ಪತ್ತೆಯಾಗಿತ್ತು. ಅಂದೇ ಅವರು ವಾಸಿಸುವ ಆಸರ್‌ ಮೊಹಲ್ಲಾ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಆ ನಂತರ ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚಳವಾದಂತೆ ಕಂಟೇನ್ಮೆಂಟ್‌ ಝೋನ್‌ಗಳು ಹೆಚ್ಚಾಗುತ್ತಾ ಹೋದವು. ಇವು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಯಾದಗಿರಿ, ಗುರುಮಠಕಲ್‌ನಲ್ಲಿ ಹೆಚ್ಚು:

ಜಿಲ್ಲೆಗೆ ಸಾವಿರಾರು ವಲಸಿಗರು ಬಂದಿದ್ದಾರೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾದಗಿರಿ, ಗುರುಮಠಕಲ್‌, ಹುಣಸಗಿ ತಾಲ್ಲೂಕುಗಳಿಗೆ ಸೇರಿದ್ದಾರೆ. ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿ ಇರಿಸಲಾಗಿತ್ತು. 14 ದಿನಗಳ ಅವಧಿ ಮುಗಿದರೂ ಕೆಲವರ ವರದಿ ಬರುವುದು ವಿಳಂಬವಾಯಿತು. ಅದೇ ವೇಳೆ ರಾಜ್ಯ ಸರ್ಕಾರ ಕ್ವಾರಂಟೈನ್‌ನಲ್ಲಿ ಇದ್ದವರನ್ನು ಬಿಡುಗಡೆ ಮಾಡಲು ಹೇಳಿದ್ದರಿಂದ ಸಾವಿರಾರು ಜನ ಮನೆಗೆ ತೆರಳಿದರು. ಅವರು ಗ್ರಾಮಗಳಿಗೆ ತೆರಳಿದ ನಂತರ ಪಾಸಿಟಿವ್‌ ಬಂದಿದ್ದು, ಇದರಿಂದ ಅವರು ವಾಸಿಸುವ ವಾರ್ಡ್‌, ಗ್ರಾಮಗಳನ್ನು ಕಂಟೇನ್ಮೆಂಟ್‌ ಝೋನ್‌ಗಳೆಂದು ಘೋಷಣೆ ಮಾಡಲಾಗಿದೆ. ಯಾದಗಿರಿ, ಗುರುಮಠಕಲ್‌ ತಾಲ್ಲೂಕಿನಲ್ಲಿ ಹೆಚ್ಚು ನಿರ್ಮಾಣ ಮಾಡಲಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಕಂಟೇನ್ಮೆಂಟ್‌ ಝೋನ್:

ಯಾದಗಿರಿ ತಾಲ್ಲೂಕಿನಲ್ಲಿ 14, ಗುರುಮಠಕಲ್‌ ತಾಲ್ಲೂಕಿನಲ್ಲಿ 10, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ತಲಾ 1, ಶಹಾಪುರ ತಾಲ್ಲೂಕಿನಲ್ಲಿ 4, ವಡಗೇರಾ ತಾಲ್ಲೂಕಿನಲ್ಲಿ 2 ಕಂಟೇನ್ಮೆಂಟ್‌ ಝೋನ್ ನಿರ್ಮಿಸಲಾಗಿದೆ.

ಕಂಟೇನ್ಮೆಂಟ್ ಝೋನ್ ಆ್ಯಪ್ ಮುಖಾಂತರ ಶೇ 29.35ರಷ್ಟು ಸರ್ವೆಮಾಡಲಾಗಿದೆ. ಇನ್ನು ಜಿಲ್ಲೆಯಾದ್ಯಂತ ಮತಗಟ್ಟೆ ಅಧಿಕಾರಿಗಳು, ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರಿಂದ ‘ಹೆಲ್ತ್ ವಾಚ್ ಆ್ಯಪ್’ ಮೂಲಕ ನಡೆಸುತ್ತಿರುವ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ಕಾರ್ಯ ಶೇ 90ರಷ್ಟು ಪೂರ್ಣಗೊಂಡಿದೆ. 32 ಕಂಟೇನ್ಮೆಂಟ್ ಝೋನ್‌ನಲ್ಲಿ 6,629 ಕುಟುಂಬಗಳಿವೆ. ಇದರಲ್ಲಿ 147 ಜನಕ್ಕೆ ಕೋವಿಡ್‌ ದೃಢಪಟ್ಟಿದೆ. ಮಿಕ್ಕವರಿಗೆಕ್ವಾರಂಟೈನ್‌ನಲ್ಲಿ ಇದ್ದಾಗಲೇ ಸೋಂಕು ಕಾಣಿಸಿಕೊಂಡಿತ್ತು. ಇವರೆಲ್ಲರೂ ಗುಜರಾತ್‌ ಮತ್ತು ಮಹಾರಾಷ್ಟ್ರದಿಂದ ಹಿಂತಿರುಗಿ ಬಂದಿದ್ದಾರೆ. ಮಹಾರಾಷ್ಟ್ರ ಬಂದವರಿಗೆ ಅತಿ ಹೆಚ್ಚು ಕೋವಿಡ್‌ ತಗುಲಿದೆ.

ಸೀಲ್‌ಡೌನ್‌ಗೆ ಸ್ಥಳೀಯರ ಆಕ್ಷೇಪ:

ನಗರ ಮಧ್ಯದಲ್ಲಿರುವ ಶಾಲೆ, ವಸತಿನಿಲಯಗಳಲ್ಲಿ ಕ್ವಾರಂಟೈನ್‌ ಬೇಡವೆಂದಿದ್ದಜನ ಈಗ ಸೀಲ್‌ಡೌನ್‌ಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸೋಂಕಿತರ ಮನೆಯನ್ನು ಮಾತ್ರ ಸೀಲ್‌ಡೌನ್‌ ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ನಿಯಮದಂತೆ ಇಡೀ ಬಡಾವಣೆ, ಗ್ರಾಮ, ವಾರ್ಡ್‌ ಅನ್ನು ಸೀಲ್‌ಡೌನ್‌ ಮಾಡುತ್ತಿದ್ದಾರೆ.

‘ಈಗ ಮುಂಗಾರು ಹಂಗಾಮು ಸಮಯ. ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಸೀಲ್‌ಡೌನ್‌ ಮಾಡಿದರೆ 28 ದಿನ ಹೊರಬರುವಂತಿಲ್ಲ. ಹೀಗಾಗಿ, ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದು ಲಕ್ಷ್ಮಿ ನಗರದ ರೈತ ರಾಮಪ್ಪ ಶಿವಪ್ಪ ಹೇಳಿದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಇಲ್ಲಿಯವರೆಗೆ 32ಕಂಟೇನ್ಮೆಂಟ್‌ ಝೋನ್ ನಿರ್ಮಿಸಲಾಗಿದೆ. ಜನರು ಅಲ್ಲಿಂದ ಹೊರ ಬರದೆ ಜಿಲ್ಲಾಡಳಿತ ಜೊತೆ ಸಹಕರಿಸಬೇಕು
ಪ್ರಕಾಶ ರಜಪೂತ, ಹೆಚ್ಚುವರಿ ಜಿಲ್ಲಾಧಿಕಾರಿ

ಕಂಟೇನ್ಮೆಂಟ್‌ ಝೋನ್‌ಗಳಲ್ಲಿ ಶೀಘ್ರ ಎಲ್ಲರ ಪರೀಕ್ಷೆ ಮಾಡಬೇಕು. ಅಲ್ಲಿರುವ ಜನರ ಭಯ ನಿವಾರಿಸಿ, ಜಾಗೃತಿ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು
ಪರಶುರಾಮ ಶೇಗುರಕರ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT