ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಗೆ ಈಗ ದಶಕದ ಸಂಭ್ರಮ

71ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ
Last Updated 27 ಜನವರಿ 2020, 10:58 IST
ಅಕ್ಷರ ಗಾತ್ರ

ಯಾದಗಿರಿ: ಯಾದಗಿರಿಗೆ ಈಗ ದಶಕದ ಸಂಭ್ರಮ. ಜಿಲ್ಲೆಯಾದ ನಂತರ ಯಾದಗಿರಿ ನಿರೀಕ್ಷೆ ಮೀರಿ ಬೆಳೆಯುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಭಾವೈಕ್ಯತಾ ಸಮಿತಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 71ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವಸತಿ, ಶಾಲಾ ಕಟ್ಟಡ, ಆಸ್ಪತ್ರೆ, ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್‌ ದೀಪದಂತಹ ಅಭಿವೃದ್ಧಿ ಕಾರ್ಯಗಳಿಂದ ಜಿಲ್ಲೆ ಪ್ರಗತಿ ಪಥದಲ್ಲಿ ಸಾಗಿದೆ. ಶಿಕ್ಷಣ, ಆರೋಗ್ಯ, ಕೃಷಿ, ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ಕಳೆದ ನವೆಂಬರ್‌ನಲ್ಲಿ ಆರೋಗ್ಯ ಮತ್ತು ಪೌಷ್ಟಿಕಾಂಶದ ಡೆಲ್ಟಾ ಸ್ಕೋರ್‌ನಲ್ಲಿ ಜಿಲ್ಲೆಯು ದೇಶಕ್ಕೆ 3ನೇ ರ್‍ಯಾಂಕ್ ಪಡೆದಿದೆ ಎಂದು ತಿಳಿಸಿದರು.

ಗಣರಾಜ್ಯೋತ್ಸವ ಸಾರ್ವಭೌಮತ್ವದ ಸಂಕೇತ: 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆಯುವುದರೊಂದಿಗೆ ಮುನ್ನೂರು ವರ್ಷಗಳ ದಾಸ್ಯದ ಸರಪಳಿ ಕಳಚಿಕೊಂಡ ಭಾರತ, 1950ರ ಜ. 26 ರಂದು ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸಿ, ವಿಶ್ವದಲ್ಲಿ ತಾನೂ ಒಂದು ಸಾರ್ವಭೌಮ ರಾಷ್ಟ್ರವೆಂದು ಸಾರಿದ ದಿನವೇ ಗಣರಾಜ್ಯೋತ್ಸವ ಎಂದು ವಿವರಿಸಿದರು.

₹1.12 ಲಕ್ಷ ರೈತರ ಖಾತೆಗೆ ಹಣ:ಪ್ರಧಾನಮಂತ್ರಿ ಕೃಷಿ ಸಮ್ಮಾನ ನಿಧಿ ಯೋಜನೆಯಡಿ ಭೂ ಸಾಗುವಳಿ ಮಾಡುವ ಜಿಲ್ಲೆಯ ಎಲ್ಲಾ ರೈತರಿಗೆ ಭಾರತ ಸರ್ಕಾರದಿಂದ ₹6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ₹4 ಸಾವಿರ ಸಹಾಯಧನ ಒಟ್ಟು ₹10 ಸಾವಿರ ರೈತರ ಖಾತೆಗೆ ಜಮಾ ಆಗುತ್ತದೆ. 1,25,182 ರೈತರು ನೋಂದಾಯಿಸಿದ್ದು, 1,12,130 ರೈತರು ಲಾಭ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಸಕಾಲ ಅರ್ಜಿಗಳ ವಿಲೇವಾರಿಯಲ್ಲಿ ನವೆಂಬರ್- 2019ರ ಮಾಹೆಯಲ್ಲಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಕಾಲ ಹಾಗೂ ಕಾರ್ಮಿಕ ಸಚಿವ ಎಸ್.ಸುರೇಶ್‍ಕುಮಾರ್ ಅವರು ಜಿಲ್ಲೆಯ ಭೂಮಿ ಅಧಿಕಾರಿ/ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ ಎಂದರು.

ಜಿಲ್ಲಾಸ್ಪತ್ರೆ ಶೀಘ್ರ ಉದ್ಘಾಟನೆ:ಜಿಲ್ಲೆಯಲ್ಲಿ 300 ಹಾಸಿಗೆಗಳ ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಸಿದ್ಧವಾಗಿದ್ದು, ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಕಲ್ಪಿಸಲು ಶೀಘ್ರ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಸ್ಪತ್ರೆಗೆ ಮಾನವ ಸಂಪನ್ಮೂಲ ವಾರ್ಷಿಕ ವೆಚ್ಚ ₹50 ಕೋಟಿ ಆಗಲಿದ್ದು, ವೈದ್ಯರು ಮತ್ತು ಸಿಬ್ಬಂದಿ ನೇಮಕಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಸಂಸದರಾಜಾ ಅಮರೇಶ್ವರ ನಾಯಕ, ಜಿಪಂ ಉಪಾಧ್ಯಕ್ಷೆಗಿರಿಜಮ್ಮ ಸದಾಶಿವಪ್ಪ ರೊಟ್ನಡಗಿ, ತಾಪಂ ಅಧ್ಯಕ್ಷೆಭೀಮವ್ವ ಮಲ್ಲೇಶಪ್ಪ ಅಚ್ಚೋಲಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ,ಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಇದ್ದರು.

***

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರು, ಅಧಿಕಾರಿಗಳು, ವೈದ್ಯರು ಸೇರಿದಂತೆ ಸರ್ವರೂ ಬದ್ಧತೆಯಿಂದ ತನು, ಮನದಿಂದ ದುಡಿಯೋಣ. ಈ ಮೂಲಕ ಯಾದಗಿರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ರೂಪಿಸೋಣ –ಎಂ.ಕೂರ್ಮಾರಾವ್,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT