ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಮೀನುಗಳು ಜಲಾವೃತ್ತ, ಮುಳುಗಿದ ಸೇತುವೆ

ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಡುಗಡೆ; ಹಲವೆಡೆ ರಸ್ತೆ ಸಂಪರ್ಕ ಕಡಿತ, ವಾಹನ ಸವಾರರ ಪರದಾಟ
Last Updated 25 ಜುಲೈ 2021, 3:12 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3.50 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗಿದೆ. ಅಲ್ಲದೇ ನದಿಯಂಚಿನ ನೂರಾರು ಎಕರೆ ಜಮೀನುಜಲಾವೃತ್ತವಾಗಿದೆ.

ಸತತ ಮೂರು ವರ್ಷಗಳಿಂದ ಪ‍್ರವಾಹ ಎದುರಿಸುತ್ತಿರುವ ಜಿಲ್ಲೆಯ ಜನತೆ ಮಹಾರಾಷ್ಟ್ರದ ಜಲಾಶ ಯಗಳಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುವುದೇ ಇದಕ್ಕೆ ಕಾರಣವಾಗಿದೆ.

ನಾರಾಯಣಪುರ ಜಲಾಶಯ 33.31 ಟಿಎಂಸಿ ಸಾಮರ್ಥ್ಯ ಹೊಂದಿದ್ದು, 23.24 ಟಿಎಂಸಿ ಇಟ್ಟುಕೊಂಡು ಉಳಿದ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಇದರಿಂದ ಕೃಷ್ಣಾ ನದಿ ಭೋರ್ಗೆಯುತ್ತಿದ್ದು, ಜಮೀನುಗಳು ನೀರು ನಿಂತು ಹಾಳಾಗಿವೆ.

ಹತ್ತಿ, ಭತ್ತ ಗದ್ದೆಗೆ ನೀರು: ಕೃಷ್ಣಾ ನದಿಗೆ ಮಿತಿಗಿಂತ ಹೆಚ್ಚುವರಿ ನೀರು ಬರುತ್ತಿದ್ದು, ಇದು ಜಮೀನು, ಹಳ್ಳಗಳಿಗೆ ನುಗ್ಗುತ್ತಿದೆ. ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಅಲ್ಲದೇ ನೂರಾರು ಮೋಟಾರ್‌ಗಳು ನದಿಯಲ್ಲಿ ಮುಳುಗಿದ್ದು, ಹೊರಗಡೆ ತೆಗೆಯಲು ಹಲವಾರು ರೈತರು ಪ್ರಯಾಸ ಪಡಬೇಕಾಯಿತು. ಕೆಲವರು ಸಾಹಸ ಮಾಡಿ ಮೋಟರ್, ‍ಪೈಪ್‌ ನದಿ ದಂಡೆಗೆ ಎಳೆದು ತಂದಿದ್ದಾರೆ.

ಸೇತುವೆ ಬಳಿ ಪೊಲೀಸ್‌ ಬಂದೋಬಸ್ತ್‌: ಕಳೆದ ಎರಡ್ಮೂರು ದಿನದಿಂದ ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಎರಡು ಕಡೆ ಬ್ಯಾರಿಕೇಡ್‌ ಹಾಕಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜನರು ತಮ್ಮ ಜಾನುವಾರುಗಳು ಆ ಕಡೆ ಹೋಗದಂತೆ ಎಚ್ಚರ ವಹಿಸಬೇಕು. ಅಲ್ಲದೇ ರಾಯಚೂರು ಕಡೆಗೆ ಹೋಗ ಬೇಕಾದ ಸಾರ್ವಜನಿಕರು ತಿಂಥಣಿ ಸೇತುವೆ ಮೂಲಕ ಪ್ರಯಾಣಿಸಲು ಕೋರಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವೇದಮೂರ್ತಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ: ಕೊಳ್ಳೂರು ಸೇತುವೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಅವರು ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಅವರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ಎರಡು ವರ್ಷದಿಂದ ಪ್ರವಾಹದ ಪರಿಹಾರ ಹಣ ಇನ್ನು ಬಂದಿಲ್ಲ. ಬೆಳೆ ವಿಮೆ‌ ಬಂದಿಲ್ಲ. ಇದರಿಂದ ನಾವು ಹಣ ಕಟ್ಟಿದ್ದರೂ ಲಾಭವಿಲ್ಲದಂತಾಗಿದೆ. ಅಧಿಕಾರಿಗಳು ಮಾತು ಕೇಳಲ್ಲ. ಇದರಿಂದ ನಮಗೆ ನಷ್ಟ ಉಂಟಾಗಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು.

ಸಚಿವರ ವಿರುದ್ಧ ಕೊಳ್ಳೂರು ಗ್ರಾಮದ ರೈತ ಬಸಪ್ಪ ಗರಂ ಆದರು. ಸಮಸ್ಯೆ ಇದ್ದರೆ ಹೇಳಿ. ಹೀಗೆ ಮಾತಾಡಿದರೆ ಹೇಗೆ ಎಂದು ಸಚಿವರೂ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಶಾಸಕ ವೆಂಕಟರೆಡ್ಡಿ ಮುದ್ನಾಳ, ಯೂಡಾ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಸಿದ್ದಣಗೌಡ ಕಾಡಂನೋರ, ಜಿಲ್ಲಾಧಿಕಾರಿ ರಾಗಪ್ರಿಯಾ ಆರ್., ಎಸ್ಪಿ ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮ ನಾಳ, ಕೃಷಿ ಜಂಟಿ ನಿರ್ದೇಶಕಿ ದೇವಿಕಾ ಆರ್., ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದೇವೇಂದ್ರ ನಾಥ ನಾದ, ಗುರು ಕಾಮಾ, ವೆಂಕಟರೆಡ್ಡಿ ಅಬ್ಬೆತುಮಕೂರು ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

‘ಕಾಳಜಿ ಕೇಂದ್ರಗಳು ಸನ್ನದ್ಧ’
ಯಾದಗಿರಿ:
ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗಿ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿರುವುದರಿಂದ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಇದ್ದು, ಅಧಿಕಾರಿಗಳು ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಸೂಚಿಸಿದ್ದಾರೆ.

ಶನಿವಾರ ಮುಂಗಾರು ಪ್ರವಾಹ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಸಂಬಂಧಪಟ್ಟ ಗ್ರಾಮದಲ್ಲಿ ಕಾಳಜಿ ಕೇಂದ್ರಗಳನ್ನು ಸುಸಜ್ಜಿತಗೊಳಿಸಬೇಕು. ಸ್ವಚ್ಛತೆ, ಶೌಚಾಲಯ ಕುಡಿಯುವ ನೀರು, ಉತ್ತಮ‌ ಆಹಾರ ಒದಗಿಸಬೇಕು ಎಂದು ತಿಳಿಸಿದರು.

ಕುಡಿಯುವ ನೀರು, ಆಹಾರ ಗುಣಮಟ್ಟದಲ್ಲಿ ಒದಗಿಸಬೇಕು. ಕಾಳಜಿ ಕೇಂದ್ರದಲ್ಲಿ ಹೆಚ್ಚು ಜನಸಂದಣಿಯಾಗದಂತೆ ಗಮನಹರಿಸಬೇಕು. ಜನ ಸ್ಥಳಾಂತರಕ್ಕೆ ಬಸ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಮಾತನಾಡಿ, ನೋಡಲ್ ಅಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಹೆಚ್ಚವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಪ್ರಭಾಕರ್ ಕವಿತಾಳ, ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಭೀಮರಾಯ ಕಲ್ಲೂರ, ಅಧಿಕಾರಿಗಳು ಇದ್ದರು.

***

ಹತ್ತಿ ಮತ್ತು ಭತ್ತ ನಾಟಿಗೆ ₹30 ಸಾವಿರ ಖರ್ಚು ಮಾಡಿದ್ದೇವೆ. ಆದರೆ, ಜಮೀನು ಜಲಾವೃತ್ತವಾಗಿದ್ದು, ಬೆಳೆ ಹಾನಿ ಆತಂಕ ಎದುರಾಗಿದೆ.
-ಶಿವಾರೆಡ್ಡಿ ಪಾಟೀಲ, ಕೊಳ್ಳೂರು ಗ್ರಾಮಸ್ಥ

***

ರೈತರಿಗೆ ಬೆಳೆ ವಿಮೆ ಬಂದಿಲ್ಲದ ಕುರಿತು ಮಾಹಿತಿ ಸಿಕ್ಕಿದೆ. ಸಂಬಂಧಿಸಿದವರಿಗೆ ಸೂಚಿಸಿ ಪರಿಹಾರ ಕೊಡಿಸಲಾಗುವುದು.
-ಆರ್‌.ಶಂಕರ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT