ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ನಿರ್ವಹಣೆ ಕೊರತೆಯಿಂದ ನಲುಗಿದ ‘ಲುಂಬಿನಿ ವನ’

ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಅಭಿವೃದ್ಧಿ ಕಾಮಗಾರಿ ಸ್ಥಗಿತ, ಅಲಂಕಾರಿಕ ಗಿಡಗಳು ಹಾಳು
Last Updated 6 ಜುಲೈ 2021, 3:32 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಏಕೈಕ ಉದ್ಯಾನ ‘ಲುಂಬಿನಿ ವನ’ ನಿರ್ವಹಣೆ ಕೊರತೆಯಿಂದ ನಲುಗುತ್ತಿದೆ. ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ನಿರ್ವಹಣೆ ಮಾಡದೆ ಹಾಗೇಯೆ ಬಿಡಲಾಗಿದ್ದು, ಕಳೆ ಕಳೆದುಕೊಂಡಿದೆ.

2015ರ ನವೆಂಬರ್ 22ರಂದು ಉದ್ಘಾಟನೆಗೊಂಡ ಲುಂಬಿನಿ ವನ ಬರಬರುತ್ತಾ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಬರುತ್ತಿದೆ. ಪಾಥ್‌ ವೇ, ವಾಕಿಂಗ್‌ ವೇ, ಅಲಂಕಾರಿಕ ಗಿಡಗಳು ಹಾಳಾಗಿದ್ದು, ಈಗ ಎಲ್ಲ ಕಡೆ ಕಳೆ ಸಸ್ಯಗಳು ಬೆಳೆದು ನಿಂತಿವೆ.

₹5 ಕೋಟಿಗೆ ಹೆಚ್ಚಿನ ಅನುದಾನದಲ್ಲಿ ವಿವಿಧ ಕಾಮಗಾರಿ ನಿರ್ಮಾಣಮಾಡಲಾಗಿದೆ. ಆದರೆ, ಈಗ ಎಲ್ಲವೂ ನಿಷ್ಪ್ರಯೋಜನವಾದಂತೆ ಆಗಿದೆ. ಮಹಿಳಾ ಶೌಚಾಲಯವೂ ಹಾಳಾಗಿದ್ದು, ಶೌಚಕ್ಕೆ ಪರದಾಡ ಬೇಕಾಗಿದೆ.

52 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಉದ್ಯಾನವನ ಈಗ ಅಲ್ಲಲ್ಲಿ ಉದ್ಯಾನ ಹಾಳಾಗಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಎಲ್ಲೆಂದರೆಲ್ಲೆ ಬಿಸಾಡಿದ್ದು ಕಂಡು ಬರುತ್ತದೆ.

ನಗರಸಭೆ ವ್ಯಾಪ್ತಿಯಲ್ಲಿ 250ಕ್ಕೂ ಹೆಚ್ಚು ಉದ್ಯಾನ ವನಗಳಿದ್ದು, ಕೆಲ ಕಡೆ ಮಾತ್ರ ಚೆನ್ನಾಗಿವೆ. ಉಳಿದವು ಒತ್ತುವರಿಯಾಗಿ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಲುಂಬಿನಿ ವನ ಸಣ್ಣ ಕೆರೆಯ ಮಧ್ಯದಲ್ಲಿ ನಿರ್ಮಾಣವಾಗಿದೆ. ಬೋಟಿಂಗ್‌ ಕೂಡ ಇಲ್ಲ. ಮಕ್ಕಳ ಆಟಿಕೆ, ಪಾದಚಾರಿ ಮಾರ್ಗ ರಸ್ತೆ ಹಾಳಾಗಿದೆ.

ಹಸಿರು ಮಾಯ: ವನದ ಐಲ್ಯಾಂಡ್‌ಗೆ ತೆರಳುವ ಮಾರ್ಗದಲ್ಲಿ ನೆಲಹಾಸು ಬಂಡೆಗಳು ಮೇಲೆದ್ದಿವೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಒಂದು ಕಾಲದಲ್ಲಿ ಕಬ್ಬಿಣದ ಸರಳುಗಳಿಂದ ಮಾಡಿರುವ ಅಲಂಕಾರಕ್ಕೆ ಹಸಿರು ಬಳ್ಳಿ ತುಂಬಿತ್ತು. ಈಗ ಎಲ್ಲ ಒಣಗಿ ನಿಂತಿವೆ. ಆ ಮಾರ್ಗದಲ್ಲಿ ತೆರಳವವರು ಕಣ್ಣಿಗೆ ಒಣ ಬಳ್ಳಿಗಳನ್ನು ಸರಿಸಿಕೊಂಡು ತೆರಳಬೇಕಿದೆ. ಇದೇ ಮಾರ್ಗದಲ್ಲಿ ಗೇಟ್‌ ಮುರಿದು ಬಿದ್ದಿದೆ.

ಉದ್ಯಾನ ಪ್ರವೇಶಕ್ಕಾಗಿ ಸಾರ್ವಜನಿಕರಿಂದ ₹5 ಟಿಕೆಟ್‌ ದರ ನಿಗದಿ ಪಡಿಸಲಾಗಿದೆ. ಉದ್ಯಾನ ನಿರ್ವಹಣೆಗೆ ಹಣ ಸಂಗ್ರಹವಾಗುತ್ತಿದೆ. ಆದರೆ, ಉದ್ಯಾನ ಮಾತ್ರ ನಿರ್ವಹಣೆ ಕೊರತೆ ಎದುರಿಸುತ್ತಿದೆ.

***

ಮಕ್ಕಳ ಆಟಿಕೆಗಳು ಹಾಳು

ಲುಂಬಿನಿ ವನದಲ್ಲಿರುವ ಮಕ್ಕಳ ಆಟಿಕೆಗಳು ಹಾಳು ಬಿದ್ದಿವೆ. ಜಾರುವ ಬಂಡೆ, ತೂಗುಯ್ಯಾಲೆ ಸೇರಿದಂತೆ ವಿವಿಧ ಆಟಿಕೆಗಳು ಮಕ್ಕಳಿಗೆ ಆಟವಾಡಲು ಅನುಕೂಲವಿಲ್ಲದಂತೆ ಇವೆ. ಅಲ್ಲದೆ ಮಕ್ಕಳ ಆಟಿಕೆಗಳು ಇರುವ ಜಾಗದಲ್ಲಿ ಹುಲ್ಲು ಬೆಳೆದಿದೆ. ಇದನ್ನು ಕಾಲಕಾಲಕ್ಕೆ ಸ್ವಚ್ಛತೆ ಮಾಡುವವರು ಇಲ್ಲದಂತಾಗಿದೆ.

‘ಮಕ್ಕಳನ್ನು ಉದ್ಯಾನ ವನಕ್ಕೆ ಕರೆದುಕೊಂಡರೆ ಬಂದರೆ ಆಟಿಕೆಗಳು ಮುರಿದಿವೆ. ಆದರೆ, ಮಕ್ಕಳು ಆಟವಾಡಲು ಹಾತೊರೆಯುತ್ತಿದ್ದಾರೆ. ಇಲ್ಲಿ ನೋಡಿದರೆ ಎಲ್ಲ ಆಟಿಕೆಗಳು ಮುರಿದು ಬಿದ್ದಿವೆ. ಅಲ್ಲಲ್ಲಿ ರಂಧ್ರ ಬಿದ್ದಿವೆ. ಮಕ್ಕಳು ಅದರೊಳಗೆ ಸಿಲುಕಿಕೊಂಡರೆ ಕಷ್ಟ ಪಡಬೇಕಾಗುತ್ತದೆ. ಹೀಗಾಗಿ ಸಂಬಂಧಿಸಿದವರು ಹೊಸ ಆಟಿಕೆಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಈಗಿರುವ ಆಟಿಕೆಗಳನ್ನಾದರೂ ದುರಸ್ತಿ ಮಾಡಿ ಮಕ್ಕಳ ಆಟಕ್ಕೆ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಪೋಷಕರಾದ ಲಲಿತಾ ಡೇವಿಡ್‌, ಗಾಯತ್ರಿ ಶರಣಗೌಡ, ಜೀವನಕುಮಾರ ಪಾಟೀಲ.

***

ಲುಂಬಿನಿ ವನದ ಬಗ್ಗೆ ಕಾಳಜಿ ಇಲ್ಲದಿದ್ದರಿಂದ ಈ ಪರಿಸ್ಥಿತಿ ಏರ್ಪಟ್ಟಿದೆ. ಅಸ್ವಚ್ಛತೆ ತಾಂಡಾವವಾಡುತ್ತಿದೆ. ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಇನ್ನೂದರೂ ಸ್ವಚ್ಛತೆ ಕಾಪಾಡಬೇಕಾಗಿದೆ

ಸೈಯದ್‌ ಶಫಿ ಅಹ್ಮದ್, ಸ್ಥಳೀಯ ನಿವಾಸಿ

***

ಲುಂಬಿನಿ ವನದಲ್ಲಿ ಮಕ್ಕಳ ಆಟಿಕೆ ಹಾಳಾಗಿರುವುದು ಗಮನಕ್ಕೆ ಬಂದಿದೆ. ದುರಸ್ತಿಗೆ ಯೋಗ್ಯವಿದ್ದರೆ ಮಾಡಲಾಗುವುದು. ಇಲ್ಲದಿದ್ದರೆ ಹೊಸದು ಅಳವಡಿಸಲಾಗುವುದು

ಭೀಮರಾಯ ಕಲ್ಲೂರು, ಪ್ರಭಾರಿ ಪ್ರವಾಸೋದ್ಯಮ ಸಹಾಯಕ ನಿರ್ದೇಶಕ

***

ಲಾಕ್‌ಡೌನ್‌ ವೇಳೆ ಲುಂಬಿನ ವನದ ಕಾಮಗಾರಿ ಸ್ಥಗಿತವಾಗಿತ್ತು. ಆಂಧ್ರದ ಕಾರ್ಮಿಕರು ಬಂದಿರಲಿಲ್ಲ. ಇನ್ನೊಂದು ವಾರದಲ್ಲಿ ಕೆಲಸ ಮುಗಿಯಲಿದೆ

ಶಿವರಾಜ ಹುಡೇದ್‌, ನಿರ್ಮಿತಿ ಕೇಂದ್ರ ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT