ಶನಿವಾರ, ಡಿಸೆಂಬರ್ 5, 2020
21 °C

ಯಾದಗಿರಿ ನಗರಸಭೆ: ವಿಲಾಸ ಪಾಟೀಲ ಅಧ್ಯಕ್ಷ, ಪ್ರಭಾವತಿ ಕಲಾಲ್‌ ಉಪಾಧ್ಯಕ್ಷೆ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಭಾರಿ ಕುತೂಹಲ ಕೆರಳಿಸಿದ್ದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ವಿಲಾಸ‌ ಪಾಟೀಲ ಅಧ್ಯಕ್ಷರಾಗಿ, ಪ್ರಭಾವತಿ ಮಾರುತಿ ಕಲಾಲ್‌ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬೆಳಿಗ್ಗೆ 11 ಗಂಟೆ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. 3ನೇ ವಾರ್ಡ್‌ನಿಂದ ವಿಲಾಸ ಪಾಟೀಲ, 9ನೇ ವಾರ್ಡ್‌ನಿಂದ ಪ್ರಭಾವತಿ ಮಾರುತಿ ಕಲಾಲ್‌ ನಗರಸಭೆಗೆ ಆಯ್ಕೆಯಾಗಿದ್ದಾರೆ.

ಯಾದಗಿರಿ ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು, 16 ಬಿಜೆಪಿ, 11 ಕಾಂಗ್ರೆಸ್‌, ಜೆಡಿಎಸ್‌ 3, ಪಕ್ಷೇತರ ಒಬ್ಬ ಸದಸ್ಯರಿದ್ದಾರೆ. ಜೆಡಿಎಸ್‌ನ ಮೂವರಲ್ಲಿ ಒಬ್ಬರು ನಿಧನರಾಗಿದ್ದು, ಇಬ್ಬರು ಬಿಜೆ‍ಪಿಗೆ, ಪಕ್ಷೇತರ ಸದಸ್ಯ ಕೂಡ ಬಾಹ್ಯ ಬೆಂಬಲ ನೀಡಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಿತು. ಐದು ನಿಮಿಷಗಳ ಕಾಲ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಆದರೆ, ಯಾರೂ ನಾಮಪತ್ರ ಹಿಂಪಡೆಯದ ಕಾರಣ ಕೈ ಎತ್ತುವ ಮೂಲಕ ಚುನಾವಣೆ ನಡೆಯಲಾಗುವುದು ಎಂದು ಚುನಾವಣೆ ಅಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಶಂಕರಗೌಡ ಎಸ್‌.ಸೋಮನಾಳ ಪ್ರಕಟಿಸಿದರು.

ವಿಲಾಸ‌ ಪಾಟೀಲ ಪ್ರಥಮ ಪ್ರಜೆ: ಬಿಜೆ‍ಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿಲಾಸ‌ ಪಾಟೀಲ ಪರ ರಾಯಚೂರು ಸಂಸದ ರಾಜಾ ಅಮರೇಶ ನಾಯಕ, ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಒಬ್ಬ ಪಕ್ಷೇತರ ಸದಸ್ಯ, ಜೆಡಿಎಸ್‌ ಇಬ್ಬರು ಸದಸ್ಯರು ಸೇರಿದಂತೆ 21 ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮನ್ಸೂರ್ ಅಹಮ್ಮದ್ ಆಫಕಾನಿ ನಾಮಪತ್ರ ಸಲ್ಲಿಸಿದ್ದರು. 11 ಮತಗಳು ಪಡೆದು ಪರಭಾವಗೊಂಡರು. ಹೆಚ್ಚು ಮತ ಪಡೆದ ವಿಲಾಸ‌ ಪಾಟೀಲ ನಗರದ ಪ್ರಥಮ ಪ್ರಜೆಯಾದರು.

ಇನ್ನು ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಯಿಂದ ಪ್ರಭಾವತಿ ಮಾರುತಿ ಕಲಾಲ್‌ ಸ್ಪರ್ಧಿಸಿದರೆ, ಕಾಂಗ್ರೆಸ್‌ನಿಂದ ಉಪಾಧ್ಯಕ್ಷೆ ಸ್ಥಾನಕ್ಕೆ ನಿರ್ಮಲಾ ಭೋಜರಾಜ ಜಗನ್ನಾಥ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿಯ ಪ್ರಭಾವತಿ ಮಾರುತಿ ಕಲಾಲ್‌ ಸಂಸದ, ಶಾಸಕ, ಸದಸ್ಯರನ್ನು ಒಳಗೊಂಡಂತೆ 21 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ನಿರ್ಮಲಾ ಭೋಜರಾಜ ಕೇವಲ 11 ಮತಗಳಿಗೆ ತೃಪ್ತಿಪಟ್ಟರು.

ನಂತರ ಚುನಾವಣೆ ಅಧಿಕಾರಿ ಶಂಕರಗೌಡ ಸೋಮನಾಳ ಹೆಚ್ಚಿನ ಮತ ಪಡೆದ ವಿಲಾಸ್‌ ಪಾಟೀಲ, ಪ್ರಭಾವತಿ ಮಾರುತಿ ಕಲಾಲ್‌ ಅವರನ್ನು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಪ್ರಕಟಿಸಿದರು. ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಪ್ರಭಾರಿ ನಗರಸಭೆ ಪೌರಾಯುಕ್ತ ಬಕ್ಕಪ್ಪ ಹೊಸಮನಿ ಇದ್ದರು.

9ನೇ ಅವಧಿಗೆ ಚುನಾವಣೆ: 2004ರಲ್ಲಿ ಯಾದಗಿರಿ ಪುರಸಭೆಯಿಂದ ನಗರಸಭೆಯಾಯಿತು. ಅಂದಿನಿಂದ ಇಲ್ಲಿಯವರೆಗೆ 8 ಅವಧಿ ಮುಗಿದಿದ್ದು, ಈಗ 9ನೇ ಅವಧಿಗೆ ಚುನಾವಣೆ ನಡೆಯಿತು.

ವಿಜಯೋತ್ಸವ: ಬಿಜೆಪಿಯಿಂದ ನಗರಸಭೆ ಅಧ್ಯಕ್ಷರಾಗಿ ವಿಲಾಸ‌ ಪಾಟೀಲ, ಉಪಾಧ್ಯಕ್ಷೆಯಾಗಿ ಪ್ರಭಾವತಿ ಮಾರುತಿ ಕಲಾಲ್‌ ಹೆಸರು ಘೋಷಿಸುತ್ತಿದ್ದಂತೆ ನಗರಸಭೆ ಹೊರಗಡೆ ಜಮಾಯಿಸಿದ್ದ ಬಿಜೆಪಿಯ ನೂರಾರು ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ರಾಯಚೂರು ಸಂಸದ ರಾಜಾ ಅಮರೇಶ ನಾಯಕ, ಶಾಸಕ ವೆಂಕಟರಡ್ಡಿ ಮುದ್ನಾಳ, ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಚಂಡರಕಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್‌, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟರೆಡ್ಡಿ ಅಬ್ಬೆತುಮಕೂರ, ಗುರು ಕಾಮಾ, ದೇವಿಂದ್ರನಾಥ ನಾದ, ಮುಖಂಡರಾದ ಮಲ್ಲನಗೌಡ ಪಾಟೀಲ ಹತ್ತಿಕುಣಿ, ಖಂಡಪ್ಪ ದಾಸನ್‌, ಸಿದ್ದಣ್ಣ ಕಾಡಂನೋರ, ಸಿದ್ದಪ್ಪ ಹೊಟ್ಟಿ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಅಭಿನಂದಿಸಿದರು.

ನಗರಸಭೆಯ ಎಲ್ಲ ಸದಸ್ಯರನ್ನು ಒಟ್ಟಿಗೆ ಕರೆದೊಯ್ದು ನಗರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲಾಗುವುದು. ಅಭಿವೃದ್ಧಿಯಲ್ಲಿ ಯಾವುದೇ ರಾಜಿ ಇಲ್ಲ
ವಿಲಾಸ ಪಾಟೀಲ, ನೂತನ ನಗರಸಭೆ ಅಧ್ಯಕ್ಷ 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.