ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನ; ಗ್ರಾಮಸ್ಥರಿಗೆ ಸೀಮಿತವಾದ ಪೂಜೆ

ಜಿಲ್ಲೆಯ ಪ್ರಸಿದ್ಧ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆ ರದ್ದು, ಪೊಲೀಸರ ಕಣ್ಣು ತಪ್ಪಿಸಿ ಆಗಮಿಸಿದ ಭಕ್ತರು
Last Updated 14 ಜನವರಿ 2022, 8:35 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಪ್ರಸಿದ್ಧ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆ ರದ್ದು ಪಡಿಸಲಾಗಿದ್ದು, ದೇವಸ್ಥಾನದಲ್ಲಿಪೂಜೆ ಗ್ರಾಮಸ್ಥರಿಗೆ ಮಾತ್ರ ಸೀಮಿತವಾಗಿತ್ತು.

ಜನವರಿ 13ರಿಂದ 18ರ ವರೆಗೆ ಸಂಕ್ರಾಂತಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೋವಿಡ್‌ ಹರಡುವ ಭೀತಿಯಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಾತ್ರಾ ಮಹೋತ್ಸವನ್ನು ರದ್ದು ಮಾಡಿದ್ದರಿಂದ ಈ ಬಾರಿ ಪಲ್ಲಕ್ಕಿ ಉತ್ಸವ, ಹೊನ್ನಕೆರೆಯ ಗಂಗಾ ಸ್ನಾನ ನಡೆಯಲಿಲ್ಲ. ದೇಗುಲ ಸರಳವಾಗಿ ಪೂಜಾ ವಿಧಿ ವಿಧಾನಗಳನ್ನು ಪೂಜಾರಿಗಳು ನಡೆಸಿದರು.

ದೇಗುಲ ಆವರಣದಲ್ಲಿ ಸರಳವಾಗಿ ಕೆಲವೇ ಭಕ್ತರ ಸಮ್ಮುಖದಲ್ಲಿ ಸರಪಳಿ ಹರಿಯುವ ಕಾರ್ಯಕ್ರಮ ನಡೆಯಿತು.ಮಾಹಾಲಿಂಗಯ್ಯ ಮುತ್ಯಾ ತಡಿಬಿಡಿಒಂದೇ ಬಾರಿ ಸರಪಳಿ ಹರಿದರು.

ದೇವಸ್ಥಾನದ ಸಮೀಪದ ಹೊನ್ನಕೆರೆ ಬಳಿ ಭಕ್ತರು ತೆಂಗಿನಕಾಯಿ ಒಡೆದು ಹರಿಕೆ ತೀರಿಸಿದರು
ದೇವಸ್ಥಾನದ ಸಮೀಪದ ಹೊನ್ನಕೆರೆ ಬಳಿ ಭಕ್ತರು ತೆಂಗಿನಕಾಯಿ ಒಡೆದು ಹರಿಕೆ ತೀರಿಸಿದರು

ಜಿಲ್ಲಾಡಳಿತ ಜಾತ್ರೆ ರದ್ದು ಪಡಿಸಲಾಗಿದೆ ಎಂದು ಪ್ರಕಟಣೆ ನೀಡಿದ್ದರೂ ಭಕ್ತರು ಮಾತ್ರ ವಿವಿಧ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ್ದರು. ತೆಲಂಗಾಣ, ಆಂಧ್ರ ಪ್ರದೇಶದ ಭಕ್ತರಲ್ಲದೇ ಮಹಾರಾಷ್ಟ್ರದಿಂದಲೂ ಮಲ್ಲಯ್ಯನ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.

ಪೊಲೀಸರ ಕಣ್ಣು ತಪ್ಪಿ ಆಗಮಿಸಿದ ಭಕ್ತರು:

ಮೈಲಾಪುರ ಗ್ರಾಮ ಪ್ರವೇಶಿಸುವ ಆರು ಕಡೆ ಪೊಲೀಸ್‌ ಇಲಾಖೆಯಿಂದ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಹೊರ ಜಿಲ್ಲೆ, ಅಂತರ ರಾಜ್ಯ ಭಕ್ತರು ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಭಕ್ತರು ಪೊಲೀಸರ ಕಣ್ಣು ತಪ್ಪಿಸಿ ಜಮೀನುಗಳ ದಾರಿಯಿಂದ ಬಂದ ಗ್ರಾಮವನ್ನು ಪ್ರವೇಶ ಮಾಡುತ್ತಿದ್ದರು.

ಪೊಲೀಸರು ಎಷ್ಟೆ ಮನವಿ ಮಾಡಿಕೊಂಡರೂ ಭಕ್ತರು ಮಾತ್ರ ಗ್ರಾಮದೊಳಗೆ ವಿವಿಧ ಕಡೆಯಿಂದ ಪ್ರವೇಶ ಪಡೆದರು. ಆದರೆ, ದೇವಸ್ಥಾನ ಸಮೀಪ ಬ್ಯಾರಿಕೇಡ್‌ ಹಾಕಿ ಪೊಲೀಸರು ಸರ್ಪಗಾವಲು ಹಾಕಿದ್ದರಿಂದ ದೇಗುಲಕ್ಕೆ ತೆರಳಲು ಆಗಲಿಲ್ಲ. ಪೊಲೀಸರು ದೇವರ ದರ್ಶನಕ್ಕೆ ಬಿಡದಿದ್ದರಿಂದ ಕೆಲವರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಆದರೂ ದೇಗುಲಕ್ಕೆ ಪ್ರವೇಶ ನಿರಾಕರಣೆ ಮಾಡಲಾಯಿತು.

ದೇವಸ್ಥಾನದ ಸಮೀಪದ ಹೊನ್ನಕೆರೆ ಬಳಿ ಭಕ್ತರೊಬ್ಬರ ನೋಟ
ದೇವಸ್ಥಾನದ ಸಮೀಪದ ಹೊನ್ನಕೆರೆ ಬಳಿ ಭಕ್ತರೊಬ್ಬರ ನೋಟ

ಸಿಕ್ಕಸಿಕ್ಕಲ್ಲಿ ತೆಂಗಿನಕಾಯಿ ಒಡೆದರು:

ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶ ನಿಷೇಧ ಮಾಡಿದ್ದರಿಂದ ಭಕ್ತರು ಸಿಕ್ಕಸಿಕ್ಕ ಜಾಗದಲ್ಲಿ ತೆಂಗಿನಕಾಯಿ ಒಡೆದು ಭಕ್ತಿಯ ಪರಿಕಾಷ್ಠೆ ಮೆರೆದರು.

ಹೊನ್ನಕೆರೆಯ ಗಂಗಾ ಸ್ನಾನಘಟ್ಟದ ಬಳಿ, ಕಲ್ಲು ಬಂಡೆಯ ಮೇಲೆ ತೆಂಗಿನಕಾಯಿ ಒಡೆಯುವ ಮೂಲಕ ತಮ್ಮ ಹರಿಕೆ ತೀರಿಸಿದರು. ಅಲ್ಲದೇ ಬಂಡಾರ ಎರೆಚಿ ಏಳು ಕೋಟಿಗೆ ಏಳು ಕೋಟಿಗೆ ಎಂದು ಭಕ್ತರು ಹರ್ಷೋದ್ಘಾರ ಮಾಡಿದರು.

ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ತೆಂಗಿನಕಾಯಿ ಮಾರಾಟ ಮಾಡುವುದು ನಡೆದಿತ್ತು. ಜಾತ್ರಾ ಮಹೋತ್ಸವದಲ್ಲಿ ಜನದಟ್ಟಣೆ ಸೇರುವುದರಿಂದ ಗ್ರಾಮದ ಸುತ್ತಮುತ್ತಲೂ ಒಂದು ಕಿಲೋಮೀಟರ್ ವ್ಯಾಪ್ತಿ ಪ್ರದೇಶಕ್ಕೆ ಅನ್ವಯಿಸುವಂತೆ ಕಲಂ 144 ಸೆಕ್ಷನ್ ಜಾರಿ ಮಾಡಲಾಗಿತ್ತು.

ಲಾಠಿ ಬೀಸಿದ ಪೊಲೀಸರು:

ಹೊನ್ನಕೆರೆಯ ದಡ ಹತ್ತಿರ ಪೊಲೀಸರು ಚೆಕ್‌ಪೋಸ್ಟ್‌ ತೆರೆದು ಭಕ್ತರು ಕೆರೆಗೆ ಇಳಿಯದಂತೆ ಮನವಿ ಮಾಡುತ್ತಿದ್ದರು. ಆದರೂ ಭಕ್ತರು ಪ್ರವೇಶ ಮಾಡಿದ್ದರಿಂದ ಕೆಲವರಿಗೆ ಲಾಠಿ ಬೀಸಿದರು. ಇದರಿಂದ ಭಕ್ತ ಸಮೂಹ ಚದುರಿ ಓಡಿ ಹೋದರು. ಇದಾದ ಕೆಲವೊತ್ತಿನಲ್ಲೇ ಭಕ್ತರು ಕೆರೆಗೆ ಸ್ನಾನ ಮಾಡಲು ಇಳಿಯುತ್ತಿದ್ದರು.

ದೇವಸ್ಥಾನದ ಸಮೀಪದ ಹೊನ್ನಕೆರೆ ಗುಡ್ದದ ಬಳಿ ಭಕ್ತರು ಊಟ ಸವಿದರು
ದೇವಸ್ಥಾನದ ಸಮೀಪದ ಹೊನ್ನಕೆರೆ ಗುಡ್ದದ ಬಳಿ ಭಕ್ತರು ಊಟ ಸವಿದರು

ಪೊಲೀಸರ ಹರಸಾಹಸ:

ವಿವಿಧ ಕಡೆಯಿಂದ ಆಗಮಿಸುವ ಭಕ್ತರ ನಿಯಂತ್ರಣಕ್ಕಾಗಿ ಇಬ್ಬರು ಡಿವೈಎಸ್ಪಿ, 15 ಸಿಪಿಐ, 30 ಪಿಎಸ್ಐ ಹಾಗೂ 350 ಕ್ಕೂ ಹೆಚ್ಚು ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಹೆಡ್ ಕಾನ್‌ಸ್ಟೆಬಲ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಭಕ್ತರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುವಂತೆ ಆಗಿತ್ತು. ಗುರುವಾರ ರಾತ್ರಿಯಿಂದಲೇ ಗಸ್ತು ತಿರುಗುತ್ತಿದ್ದರು.

ಚೆಕ್‌ಪೋಸ್ಟ್‌ನಲ್ಲಿ ಕುರಿಗಳ ವಶ:

ಮಲ್ಲಯ್ಯ ದೇವರಿಗೆ ಹರಿಕೆ ಹೊತ್ತವರು ಕುರಿಮರಿಗಳನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುವವರನ್ನು ಚೆಕ್‌ಪೋಸ್ಟ್‌ನಲ್ಲಿಯೇ ತಡೆದು ಕುರಿಮರಿಯನ್ನು ವಶಕ್ಕೆ ಪಡೆದು ರಸೀದಿ ನೀಡಿ ಕಳುಹಿಸುತ್ತಿದ್ದರು. ಪಶುಸಂಗೋಪನಾ ಇಲಾಖೆಯ ಸಿಬ್ಬಂದಿ ಆರು ಚೆಕ್‌ಪೋಸ್ಟ್‌ಗಳಲ್ಲಿ ಕುರಿಮರಿಗಳನ್ನು ವಶಕ್ಕೆ ಪಡೆಯುತ್ತಿದ್ದರು.

ಮಾಸ್ಕ್‌ ಜಾಗೃತಿ: ಜಾತ್ರೆಗಾಗಿ ಆಗಮಿಸಿ ಭಕ್ತರಿಗೆ ಪೊಲೀಸ್‌ ಇಲಾಖೆಯಿಂದ ಮಾಸ್ಕ್‌ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದರು. ಕೆಲವರಿಗೆ ಸ್ಥಳದಲ್ಲೇ ದಂಡ ವಿಧಿಸಿದರು.

ಯಾದಗಿರಿ ತಾಲ್ಲೂಕಿನಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಭಕ್ತರಿಗೆ ಪೂಜಾರಿಗಳು ಬಂಡಾರ ನಾಮ ಬಳಿದರು
ಯಾದಗಿರಿ ತಾಲ್ಲೂಕಿನಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಭಕ್ತರಿಗೆ ಪೂಜಾರಿಗಳು ಬಂಡಾರ ನಾಮ ಬಳಿದರು

ಬೆಟ್ಟ ಗುಡ್ಡಗಳಲ್ಲಿ ಅಡುಗೆ: ಗ್ರಾಮಸ್ಥರು ಬೆಟ್ಟಗುಡ್ಡ, ಹೊನ್ನಕೇರಿಯ ಅಕ್ಕಪಕ್ಕದಲ್ಲಿ ಹೋಳಿಗೆ ಊಟ ಸಿದ್ಧ ಮಾಡಿ ಸಂಬಂಧಿಕರಿಗೆ ಉಣಬಡಿಸುತ್ತಿದ್ದರು. ಹೂರಣ ಹೋಳಿಗೆಯನ್ನು ಮಹಿಳೆಯರು ಕುಟುಂಬ ಸಮೇತ ಬಂದು ತಯಾರು ಮಾಡುತ್ತಿದ್ದರು.

ಕಳೆದ ಕುಂದಿದ ವ್ಯಾಪಾರ: ಜಾತ್ರೆಗಾಗಿ ವಿವಿಧ ಅಂಗಡಿ ಮುಂಗಟ್ಟುಗಳನ್ನು ಮೊದಲೇ ಸಿದ್ಧ ಮಾಡಿಟ್ಟುಕೊಳ್ಳಲಾಗಿತ್ತು. ಆದರೆ, ಪೊಲೀಸರು ಎಲ್ಲ ಅಂಗಡಿಗಳನ್ನು ಮುಚ್ಚಿಸಿದ್ದರಿಂದ ವ್ಯಾಪಾರ ಕಳೆಕುಂದಿತ್ತು.

ಕಬ್ಬಿನ ಜಲ್ಲೆ ಜೋಡಿ ₹50ಗೆ ಮಾರಾಟ ಮಾಡಲಾಗುತ್ತಿತ್ತು. ಆಗಾಗ ಪೊಲೀಸರು ಬಂದು ಮಾರಾಟ ಬಂದ್‌ ಮಾಡುವಂತೆ ಸೂಚನೆ ನೀಡುತ್ತಿದ್ದರು. ಇದರಿಂದ ವ್ಯಾಪಾರವೇ ಇಲ್ಲ ಎಂದು ವ್ಯಾಪಾರಿಗಳು ಅಳಲು ತೊಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT