ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ‌ಮಲ್ಲಯ್ಯನ ಜಾತ್ರೆಗೆ ಖಾಕಿ ಕಣ್ಗಾವಲು

ಪೂಜೆ ಗ್ರಾಮಸ್ಥರಿಗೆ ಸೀಮಿತ; ಹೊರ ಜಿಲ್ಲೆ, ಅಂತರ ರಾಜ್ಯ ಭಕ್ತರ ಪ್ರವೇಶ ನಿಷೇಧ
Last Updated 14 ಜನವರಿ 2022, 4:59 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಪ್ರಸಿದ್ಧ ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ದೇವರ ಜಾತ್ರೆ ಕೋವಿಡ್‌ ಭೀತಿಯಿಂದ ರದ್ದುಗೊಂಡಿದ್ದು, ಗ್ರಾಮಸ್ಥರಿಗೆ ಮಾತ್ರ ಪ್ರವೇಶವಿದೆ. ಹೊರ ಜಿಲ್ಲೆ, ಅಂತರ ರಾಜ್ಯದ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.

ಪ್ರತಿ ವರ್ಷ ಜನವರಿ 13ರಿಂದ 18ರ ವರೆಗೆ ಮೈಲಾರಲಿಂಗೇಶ್ವರ ಜಾತ್ರೆಯು ಶ್ರದ್ಧಾ, ಭಕ್ತಿಯೊಂದಿಗೆ ಅದ್ಧೂರಿಯಿಂದ ಜರುಗುತ್ತಿತ್ತು. ಜ.14ರಂದು ನಡೆಯುವ ಪಲ್ಲಕ್ಕಿ ಉತ್ಸವದೊಂದಿಗೆ ಸರಪಳಿ ಹರಿಯಲಾಗುತ್ತಿತ್ತು. ಆದರೆ, ಈ ಬಾರಿ ಸರಳವಾಗಿ ಆಚರಣೆ ಮಾಡಲು ಜಿಲ್ಲಾಡಳಿತ ಸೂಚಿಸಿದೆ.

ದೇವಸ್ಥಾನದಿಂದ ಹೊನ್ನಕೇರಿಗೆ ಮೈಲಾರಲಿಂಗೇಶ್ವರ ಗಂಗಾ ಸ್ನಾನ, ಪಲ್ಲಕ್ಕಿ ಉತ್ಸವ ಸರಳವಾಗಿ ನಡೆಯುವ ಸಾಧ್ಯತೆ ಇದೆ. ಗ್ರಾಮಕ್ಕೆ ಪ್ರವೇಶಿಸುವ ಪ್ರಮುಖ ಮಾರ್ಗಗಳನ್ನು ಜೆಸಿಬಿ ಮೂಲಕ ರಸ್ತೆಯಲ್ಲಿ ಮಣ್ಣು ಹಾಕಿ ನಿರ್ಬಂಧ ಹಾಕಲಾಗಿದೆ. ಹೀಗಾಗಿ, ಹೆಚ್ಚು ಜನರು ಸೇರದಂತೆ ಪೊಲೀಸ್‌ ಇಲಾಖೆಯಿಂದ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ.

ಗ್ರಾಮದಲ್ಲಿ ಪ್ರವೇಶ ಮಾರ್ಗದಲ್ಲಿ ಆರೋಗ್ಯ ಇಲಾಖೆಯಿಂದ ಥರ್ಮಲ್‌ ಸ್ಕ್ರಿನಿಂಗ್‌ ಮಾಡಿ ಭಕ್ತರನ್ನು ತಪಾಸಣೆ ಮಾಡಲಾಗುತ್ತಿದೆ. ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ

ಸಾರಿಗೆ ಇಲಾಖೆಗೆ ನಷ್ಟ:

ಮೈಲಾಪುರ ಜಾತ್ರೆಯ ಅಂಗವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಜಾತ್ರಾ ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತಿತ್ತು. ಇದರಿಂದ ಲಕ್ಷಾಂತರ ಆದಾಯ ಸಂಸ್ಥೆಗೆ ಬರುತ್ತಿತ್ತು. ಇದಕ್ಕೂ ವರ್ಷ ಕೊಕ್ಕೆ ಬಿದ್ದಿದೆ. ಜಿಲ್ಲೆಯಲ್ಲಿ ನಾಲ್ಕು ಡಿಪೋಗಳಿದ್ದು, ವಿವಿಧ ಮೂಲೆ ಮೂಲೆಗಳಿಂದ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದರು. ಕೊರೊನಾ ಕರಿನೆರಳು ಬಿದ್ದಿರುವ ಪರಿಣಾಮ ಸಾರಿಗೆ ಇಲಾಖೆಗೂ ಆದಾಯ ನಷ್ಟವಾದಂತೆ ಆಗಿದೆ.

ಮುಜರಾಯಿ ಇಲಾಖೆಗೂ ನಷ್ಟ:

ದೇವಸ್ಥಾನಕ್ಕೆ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆ, ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಒಂದು ವರ್ಷಕ್ಕೆ ಸಮನಾಗಿ ಕಾಣಿಕೆಯ ಹಣ ಜಾತ್ರೆಯ ದಿನಗಳಲ್ಲಿ ಜಮೆ ಆಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣ ಮುಜರಾಯಿ ಇಲಾಖೆಗೂ ನಷ್ಟವಾಗುತ್ತಿದೆ.

ಜಿಲ್ಲೆಯಲ್ಲಿ ಯಾದಗಿರಿ ತಾಲ್ಲೂಕಿನ ಮೈಲಾಪುರ ಮತ್ತು ಸುರಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರ ದೇವಸ್ಥಾನಗಳು ‘ಎ’ ದರ್ಜೆಯ ಸ್ಥಾನ ಹೊಂದಿವೆ. ಈ ದೇಗುಲಗಳಿಗೆ ಲಕ್ಷಾಂತರ ಭಕ್ತ ವೃಂದ ಹೊಂದಿದೆ.

ವ್ಯಾಪಾರಿಗಳ ಬದುಕಿಗೆ ಬರೆ:

ಜಾತ್ರೆಗಾಗಿ ಹಲವು ದಿನಗಳಿಂದಲೇ ಸಿದ್ಧತೆ ಮಾಡಿಕೊಂಡಿದ್ದ ವ್ಯಾಪಾರಿಗಳ ಬದುಕಿನ ಮೇಲೆ ಬರೆ ಎಳೆದಂತೆ ಆಗಿದೆ. ಮಂಡಾಳು, ಬೆಂಡು ಬತ್ತಾಸು, ಜಿಲೇಬಿಯಂತ ಸಿಹಿ ಪದಾರ್ಥಗಳ ವರ್ತಕರ ವಹಿವಾಟು ಮಂಕಾಗಿದೆ. ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳು ದೇವಸ್ಥಾನಕ್ಕೆ ತೆರಳುವ ಮಾರ್ಗದುದ್ದಕ್ಕೂ ಜಮಾಯಿಸಿ, ಭರ್ಜರಿ ವ್ಯಾಪಾರ ಮಾಡುತ್ತಿದ್ದರು. ಇದರ ಜತೆಗೆ ಕಬ್ಬು ಮಾರಾಟವೂ ಜೋರಾಗಿ ನಡೆಯುತ್ತಿತ್ತು. ಈ ಎಲ್ಲ ಚಟುವಟಿಕೆಗಳು ಕಳೆಗುಂದಿವೆ.

ಸಿಂದಗಿ ಸೇರಿದಂತೆ ವಿವಿಧ ಕಡೆಯಿಂದ ಕಬ್ಬಿನ ಹಾಲಿನ ಯಂತ್ರಗಳೊಂದಿಗೆ ಆಗಮಿಸಿದ ವ್ಯಾಪಾರಿಗಳಿಗೆ ಈ ವರ್ಷ ಕೊರೊನಾ ಬಿಸಿ ತಟ್ಟಿದೆ.

ಜಾತ್ರೆಗಳು ರದ್ದು

ಓಮೈಕ್ರಾನ್ ಕಾರಣ ಜಿಲ್ಲೆಯ ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿಗ್ಗಿ ಸಂಗಮೇಶ್ವರ ಮತ್ತು ಬಲಭೀಮೇಶ್ವರ ಜಾತ್ರೆಯನ್ನು ಜಿಲ್ಲಾಧಿಕಾರಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ದೇವರ ಭಕ್ತರು ದೇವಸ್ಥಾನಕ್ಕೆ ಬರದೇ ತಮ್ಮ ತಮ್ಮ ಮನೆಯಲ್ಲಿ ಭಕ್ತಿಯಿಂದ ಪೂಜಾ ಕ್ರಮಗಳನ್ನು ಮಾಡಿ ಕೊರೊನಾ ಸೋಂಕು ಹರಡದಂತೆ ತಡೆಯಲು ಪೊಲೀಸ್‌ ಇಲಾಖೆಗೆ ಸಹಕರಿಸಲು ಜಿಲ್ಲಾ ಪೊಲೀಸ್‌ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಪುಣ್ಯ ಸ್ನಾನಕ್ಕೆ ತಡೆ

ಮಕರ ಸಂಕ್ರಾಂತಿಯಂದು ಮಲ್ಲಯ್ಯನ ಜಾತ್ರೆಗೆ ಆಗಮಿ ಸುವ ಅಪಾರಮ ಸಂಖ್ಯೆಯ ಭಕ್ತ ಗಣ ಮೈಗೆ ಎಳ್ಳು ಹಚ್ಚಿಕೊಂಡು ಹೊನ್ನಕೆರೆಯಲ್ಲಿ ಸ್ನಾನ ಮಾಡಿ ಧನ್ಯತಾ ಭಾವ ಅನುಭವಿಸುತ್ತಾರೆ. ಹೊನ್ನಕೆರೆಯಲ್ಲಿ ಸ್ನಾನ ಮಾಡಿದರೆ ಅಷ್ಟ ತೀರ್ಥದಲ್ಲಿ ಮಿಂದಷ್ಟು ಪುಣ್ಯ ಬರುತ್ತದೆ ಎಂಬುದು ಭಕ್ತರ ನಂಬಿಕೆ. ಆದರೆ, ಪುಣ್ಯ ಸ್ನಾನಕ್ಕೂ ಈ ವರ್ಷ ತಡೆಯೊಡ್ಡಲಾಗಿದೆ. ಪಲ್ಲಕ್ಕಿ ಉತ್ಸವದ ವೇಳೆ ಪರಸ್ಪರ ಬಂಡಾರ ಎರಚಿಕೊಳ್ಳುವುದು ಜಾತ್ರೆಯ ಭಕ್ತರ ಮತ್ತೊಂದು ವೈಶಿಷ್ಟ್ಯತೆ.

* ಕೋವಿಡ್‌ ಹೆಚ್ಚುತ್ತಿರುವ ಕಾರಣದಿಂದ ಮೈಲಾಪುರ ಜಾತ್ರೆಯನ್ನು ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಸರಳವಾಗಿ ಪೂಜಾ ಕಾರ್ಯಕ್ರಮಕ್ಕೆ ಸೂಚಿಸಲಾಗಿದೆ.

-ಚನ್ನಮಲ್ಲಪ್ಪ ಘಂಟಿ ಯಾದಗಿರಿ ತಹಶೀಲ್ದಾರ್‌

* ಗ್ರಾಮದ ಸುತ್ತ 1 ಕಿ.ಮೀ ವರೆಗೂ 144 ಸಿಆರ್‌ಪಿಸಿ ವಿಧಿಸಲಾಗಿದೆ. ಗ್ರಾಮಕ್ಕೆ ಪ್ರವೇಶಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದ್ದು, ಭಕ್ತರು ಮನೆಗಳಲ್ಲಿದ್ದು, ಸಹಕಾರಿಸಿ.

-ಡಾ.ಸಿ.ಬಿ.ವೇದಮೂರ್ತಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT