ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕಾಯ್ದೆ ವಾಪಸ್‌ -ರೈತರ ವಿಜಯೋತ್ಸವ

ರೈತ, ಕಾರ್ಮಿಕ ವಿರೋಧಿ ನೀತಿ ಕೈಬಿಡಲು ಸರ್ಕಾರಕ್ಕೆ ಆಗ್ರಹ
Last Updated 12 ಡಿಸೆಂಬರ್ 2021, 5:04 IST
ಅಕ್ಷರ ಗಾತ್ರ

ಯಾದಗಿರಿ: ಕೇಂದ್ರ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದು, ರೈತರು ಒಂದು ವರ್ಷದಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರಿಂದ ಸಂಯುಕ್ತ ಹೋರಾಟ – ಕರ್ನಾಟಕ (ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ) ದಿಂದ ನಗರದ ಸುಭಾಷ ವೃತ್ತದಲ್ಲಿ ವಿಜಯೋತ್ಸವ ಮಾಡಿದರು.

ಶನಿವಾರ ಸುಭಾಷ ವೃತ್ತದಲ್ಲಿ ಜಮಾಯಿಸಿದ ಪದಾಧಿಕಾರಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೋರಾಟ ಚಿರಾಯುವಾಗಲಿ ಎಂದರು.

ದೆಹಲಿ ಗಡಿಯಲ್ಲಿ ಕಳೆದ ಒಂದು ವರ್ಷದಿಂದ ಸಾವಿರಾರು ರೈತರು ಚಳಿ, ಗಾಳಿ, ಮಳೆ, ಬಿಸಿಲೆನ್ನದೇ ಪ್ರತಿಭಟನೆ ಮಾಡಿದ್ದು, ಇದರಲ್ಲಿ 700ಕ್ಕೂ ಹೋರಾಟಗಾರರು ನಿಧನರಾಗಿದ್ದಾರೆ. ಇವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕೃಷಿ ಮಾಡುವವರಿಗೆ ಈಗ ಹೆಣ್ಣು ಕೊಡುತ್ತಿಲ್ಲ. ಇಂಥ ಪರಿಸ್ಥಿತಿಯನ್ನು ಸರ್ಕಾರಗಳು ತಂದಿಟ್ಟಿವೆ. ಇದರಿಂದ ಕೃಷಿಕರು ಇದರಿಂದ ದೂರ ಸರಿಯುತ್ತಿದ್ದಾರೆ. ರೈತರಿಗೂ ಸೂಕ್ತ ಬೆಂಬಲ ಬೆಲೆ ನೀಡಬೇಕು
ಎಂದು ಒತ್ತಾಯಿಸಿದರು.

ಕೇಂದ್ರ ಬಿಜೆಪಿ ಸರ್ಕಾರದ ಎಲ್ಲಾ ರೀತಿಯ ದಮನ ಮತ್ತು ದಬ್ಬಾಳಿಕೆಯನ್ನು ಎದುರಿಸಿದ ರೈತರು ದೇಶ ವಿದೇಶಗಳ ಕಾರ್ಪೋರೇಟ್ ಕಂಪನಿಗಳ ಮತ್ತು ಅವರ ಬಾಲಬಡುಕರು ಮಂಡಿಯೂರುವಂತೆ ಮಾಡಿದ್ದಾರೆ. ರೈತರ ಬಹುತೇಕ ಎಲ್ಲಾ ಹಕ್ಕೋತ್ತಾಯಗಳನ್ನು ಈಡೇರಿಸಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಕೇಂದ್ರ ಸರ್ಕಾರವು ರೈತರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡು ಜಾರಿಗೊಳಿಸುವುದಾಗಿ ಲಿಖಿತ ಭರವಸೆ ನೀಡಿದೆ. ಇದೊಂದು ಮಹಾ ವಿಜಯ ಎಂದರು.

ಈ ವೇಳೆ ಆರ್‌ಕೆಎಸ್ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟ, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಚನ್ನಪ್ಪ ಆನೆಗುಂದಿ, ಆರ್‌ಕೆಎಸ್‌ ಜಿಲ್ಲಾ ಸಹ ಕಾರ್ಯದರ್ಶಿ ಜಮಾಲ್‌ಸಾಬ್, ರೈತ ಸಂಘ ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆ ನಾಗರತ್ನಾ ವಿ ಪಾಟೀಲ, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಎಸ್‌.ಎಂ.ಸಾಗರ್‌, ರಾಜ್ಯ ಕಾರ್ಯದರ್ಶಿ ಎಐಯುಟಿಯುಸಿ ಕೆ.ಸೋಮಶೇಖರ್, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್, ಸಿಐಟಿಯು ಜಿಲ್ಲಾ ಸಂಚಾಲಕ ಜೈಲಾಲ್ ತೋಟದಮನಿ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕಲ್ಪನಾ ಗುರುಸುಣಗಿ, ಸಿಐಟಿಯು ಮುಖಂಡ ಗಾಲಿಬಸಾಬ್‌ ಎಂ ಬೆಳಗೇರಾ, ವಿಶ್ವನಾಥರೆಡ್ಡಿ ಗೊಂದೆಡಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT