ಗುರುವಾರ , ಜೂನ್ 24, 2021
25 °C
ನೂತನ ಜಿಲ್ಲಾಸ್ಪತ್ರೆಯಾದರೂ ಯಂತ್ರವಿಲ್ಲ l ಹಳೆ ಆಸ್ಪತ್ರೆಗೆ ಅಲೆದಾಟ ತಪ್ಪಿಲ್ಲ l ಅಧಿಕಾರಿಗಳ ನಿರ್ಲಕ್ಷ್ಯ

ಯಾದಗಿರಿ| ಒಂದೇ ಸಿಟಿ ಸ್ಕ್ಯಾನ್: ರೋಗಿಗಳ ಪರದಾಟ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದಲ್ಲಿ ಹಳೆ ಮತ್ತು ಹೊಸ ಜಿಲ್ಲಾಸ್ಪತ್ರೆಗಳಿದ್ದು, ಇವರೆಡಕ್ಕೂ ಒಂದೇ ಸಿಟಿ ಸ್ಕ್ಯಾನಿಂಗ್‌ ಯಂತ್ರ ಇದ್ದು, ರೋಗಿಗಳು ಪರದಾಡುವಂತಾಗಿದೆ.

300 ಹಾಸಿಗೆಗಳ ಹೊಸ ಜಿಲ್ಲಾಸ್ಪತ್ರೆ ಉದ್ಘಾಟನೆಯಾಗಿ ಹಲವಾರು ತಿಂಗಳು ಕಳೆದರೂ ಒಂದು ಸಿಟಿ ಸ್ಕ್ಯಾನಿಂಗ್ ಯಂತ್ರವಿಲ್ಲದಿದ್ದರಿಂದ ಹಳೆ ಆಸ್ಪತ್ರೆಗೆ ಅಲೆದಾಟ ತಪ್ಪಿಲ್ಲ.

ಕೋವಿಡ್‌ ಸೋಂಕಿತರಿಗೆ ಸ್ಕ್ಯಾನಿಂಗ್: ಆರ್‌ಟಿಪಿಸಿಆರ್‌ ವರದಿಯಲ್ಲಿ ನೆಗಟಿವ್ ಬಂದರೂ ಸಿಟಿ ಸ್ಕ್ಯಾನಿಂಗ್ ಮಾಡಿ ಕೋವಿಡ್‌ ಪತ್ತೆ ಹಚ್ಚಲಾಗುತ್ತಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಆಸ್ಪತ್ರೆ ಮಾಡಲಾಗಿದೆ. ಆದರೆ, ಪರೀಕ್ಷೆ ಮಾಡಲು ಮತ್ತೆ ಹಳೆ ಆಸ್ಪತ್ರೆಗೆ ಧಾವಿಸಬೇಕಿದೆ. ಇದು ರೋಗಿಗಳಿಗೆ ಅಲೆದಾಡಲು ಕಾರಣವಾಗಿದೆ.

8 ಗಂಟೆ ನಂತರ ಪರೀಕ್ಷೆ: ಕೋವಿಡ್‌ ಪರೀಕ್ಷೆ ನಂತರ ಎರಡರಿಂದ ಮೂರು ದಿನ ವರದಿ ವಿಳಂಬವಾಗಿ ಬರುತ್ತದೆ. ರೋಗಿ ಒಂದು ವೇಳೆ ಗಂಭೀರವಾಗಿ ಕಾಯಿಲೆಗೆ ತುತ್ತಾದರೆ ಮತ್ತೆ ರಾತ್ರಿ 8 ಗಂಟೆ ತನಕ ಕಾಯಬೇಕಿದೆ. ಇದು ರೋಗಿ ಮೇಲೆ ಪರಿಣಾಮ ಬೀರುತ್ತದೆ. 300 ಹಾಸಿಗೆ ಆಸ್ಪತ್ರೆಗಳ ಸುಸಜ್ಜಿತ ಆಸ್ಪತ್ರೆ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿಯವರೆಗೆ ಸಿಟಿ ಸ್ಕ್ಯಾನಿಂಗ್ ಯಂತ್ರ ಬಂದಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತವೆ.

‘ನಮ್ಮ ಸಂಬಂಧಿಕರೊಬ್ಬರಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ಮಾಡಲಾಯಿತು. ಆದರೆ, ವರದಿ ಮೂರು ದಿನಗಳ ನಂತರ ಬಂತು. ಆಗ ಸ್ಕ್ಯಾನಿಂಗ್ ಮಾಡಲು ವೈದ್ಯರು ಹೇಳಿದರು. ಆದರೆ, ಹಳೆ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ 8 ನಂತರ ಮಾತ್ರವೇ ಸ್ಕ್ಯಾನ್‌ ಮಾಡುತ್ತೇವೆ ಎಂದು ಸಿಬ್ಬಂದಿ ಹೇಳಿದರು. ಇದರಿಂದ ರೋಗಿಯ ಕಾಯಿಲೆ ಯಾವ ರೀತಿ ಇದೆ ಎನ್ನುವುದು ತಿಳಿಯುವುದು ಅವಶ್ಯವಿತ್ತು. ರಾತ್ರಿ ತನಕ ಕೂಡಲು ಸಮಯವಿಲ್ಲ ಎಂದು ತಿಳಿದು ಪಕ್ಕದ ರಾಯಚೂರುಗೆ ಹೋಗಿ ಸಿಟಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರಲಾಯಿತು. ದುಡ್ಡಿದ್ದವರು ಹೇಗೋ ಬೇರೆ ಜಿಲ್ಲೆಗಳಿಗೆ ಹೋಗಿ ಬರುತ್ತಾರೆ. ಆದರೆ, ಬಡವರು ತಮ್ಮ ಪಾಳಿ ಬರುವ ತನಕ ಕಾಯಬೇಕಾಗಿದೆ. ಅಲ್ಲಿಯವರೆಗೆ ರೋಗಿಗೆ ಯಾವುದೇ ಅಪಾಯವಾದರೂ ಕೇಳುವವರು ಇಲ್ಲದಂತಾಗಿದೆ’ ಎನ್ನುತ್ತಾರೆ ಕಾಂಗ್ರೆಸ್‌ ಯುವ ಮುಖಂಡ ಅವಿನಾಶ ಜಗನ್ನಾಥ.

‘ಸದ್ಯ ಸಿಟಿ ಸ್ಕ್ಯಾನಿಂಗ್ ಸಮಸ್ಯೆ ಇಲ್ಲ. ರಾತ್ರಿ ಮಾತ್ರ ಕೋವಿಡ್‌ ರೋಗಿಗಳ ಸ್ಕ್ಯಾನಿಂಗ್‌ ಮಾಡಲಾಗುತ್ತಿದೆ. ಬೆಳಿಗ್ಗೆಯಿಂದ ಕೋವಿಡೇತರ ರೋಗಿಗಳ ಪರೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಕೆಕೆಆರ್‌ಡಿಬಿಗೂ ಮಾಹಿತಿ ನೀಡಿದ್ದೇವೆ. ಜಿಲ್ಲಾಸ್ಪತ್ರೆ ಮತ್ತು ಯಿಮ್ಸ್‌ಗೂ ಸಿಟಿ ಸ್ಕ್ಯಾನಿಂಗ್ ಯಂತ್ರ ಬರಲಿದೆ. ಹೀಗಾಗಿ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ’ ಎನ್ನುತ್ತಾರೆ ಪ್ರಭಾರಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ್.

***

ಒಂದು ತಿಂಗಳಲ್ಲಿ ಯಂತ್ರ

‘ಇನ್ನು ಒಂದು ತಿಂಗಳಲ್ಲಿ ಜಿಲ್ಲೆಯ ಮೂರು ಕಡೆ ಸಿಟಿ ಸ್ಕ್ಯಾನಿಂಗ್ ಯಂತ್ರಗಳು ಬರಲಿದೆ. ಶಹಾಪುರ, ಸುರಪುರದಲ್ಲಿ ತಾಲ್ಲೂಕು ವೈದ್ಯಾಧಿಕಾರಿ, ಯಾದಗಿರಿಯಲ್ಲಿ ಡಿಎಚ್‌ಒ ಟೆಂಡರ್‌ ಕರೆಯಲಿದ್ದಾರೆ. ತಾಲ್ಲೂಕು ರೋಗಿಗಳನ್ನು ಜಿಲ್ಲಾ ಕೇಂದ್ರಕ್ಕೆ ಶಿಫಾರಸು ಮಾಡುವುದರಿಂದ ರೋಗಿಗಳಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಯಂತ್ರ ಸ್ಥಾಪನೆಗೆ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಮಾಹಿತಿ ನೀಡುತ್ತಾರೆ.

***
ಯಾದಗಿರಿ ಜಿಲ್ಲಾಸ್ಪತ್ರೆ, ಶಹಾಪುರ, ಸುರಪುರ ತಾಲ್ಲೂಕುಗಳಿಗೂ ಸಿಟಿ ಸ್ಕ್ಯಾನ್ ಯಂತ್ರಕ್ಕಾಗಿ ಕೆಕೆಆರ್‌ಡಿಬಿಗೆ ಮನವಿ ಮಾಡಲಾಗಿದೆ. ಶೀಘ್ರವೇ ಟೆಂಡರ್‌ ಕರೆದು ಸ್ಥಾಪನೆ ಮಾಡಲಾಗುವುದು
ಡಾ.ರಾಗಪ್ರಿಯಾ ಆರ್‌, ಜಿಲ್ಲಾಧಿಕಾರಿ

***

ಈಗಾಗಲೇ ನಾವು ಯಂತ್ರಕ್ಕಾಗಿ ಮನವಿ ಮಾಡಿದ್ದೇವೆ. ₹1ರಿಂದ ₹2 ಕೋಟಿ ಮೌಲ್ಯದ ಯಂತ್ರ ಇದಾಗಿದ್ದು, ಅಳವಡಿಸಲು ₹30ರಿಂದ 40 ಸಾವಿರ ಖರ್ಚು ಬರಲಿದೆ
ಡಾ.ಸಂಜೀವಕುಮಾರ ರಾಯಚೂರಕರ್, ಪ್ರಭಾರಿ ಜಿಲ್ಲಾ ಶಸ್ತ್ರಚಿಕಿತ್ಸಕ

***

ಹಳೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ ರಾತ್ರಿ 8 ಗಂಟೆ ನಂತರ ಸಿಟಿ ಸ್ಕ್ಯಾನ್‌ ಮಾಡಲಾಗುತ್ತಿದೆ. ಇದರ ಬದಲು ಎರಡು ಪಾಳಿಯಲ್ಲಿ ಮಾಡಿದರೆ ಎಲ್ಲ ರೋಗಿಗಳಿಗೆ ಅನುಕೂಲವಾಗುತ್ತದೆ
ಅವಿನಾಶ ಜಗನ್ನಾಥ, ಕಾಂಗ್ರೆಸ್‌ ಯುವ ಮುಖಂಡ

***

ಕೋವಿಡ್‌ ಅಲ್ಲದೆ ಇನ್ನಿತರ ಕಾಯಿಲೆಗಳಿರುವವರಿಗೆ, ಗರ್ಭಿಣಿಯರಿಗೆ ಸಿಟಿ ಸ್ಕ್ಯಾನಿಂಗ್ ಅವಶ್ಯಕತೆಯಿದ್ದು, ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಒಂದೇ ಇರುವುದು ರೋಗಿಗಳು ಪರದಾಡುವಂತಾಗಿದೆ
- ಮಾಣಿಕರೆಡ್ಡಿ ಕುರಕುಂದಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.