ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮಹಿಳಾ ಕಾಯಕೋತ್ಸವ ಯಶಸ್ವಿಗೊಳಿಸಿ

2ನೇ ಹಂತದ ಕಾಯಕೋತ್ಸವ ತರಬೇತಿ; ತಾಲ್ಲೂಕು ಪಂಚಾಯಿತಿ ಇಒ ಹೇಳಿಕೆ
Last Updated 5 ಸೆಪ್ಟೆಂಬರ್ 2021, 7:15 IST
ಅಕ್ಷರ ಗಾತ್ರ

ಯಾದಗಿರಿ: ಎರಡನೇ ಹಂತದ ಮಹಿಳಾ ಕಾಯಕೋತ್ಸವ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಯಾದಗಿರಿ ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಶರಬೈ ಅವರು ಪಿಡಿಒಗಳಿಗೆ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಈಚೆಗೆ ನಡೆದ 2ನೇ ಹಂತದ ಮಹಿಳಾ ಕಾಯಕೋತ್ಸವ ಅಭಿಯಾನದ ಅಂಗವಾಗಿ ಪಿಡಿಒ, ಕಾರ್ಯದರ್ಶಿ, ಕರವಸೂಲಿಗಾರ, ಕಂಪ್ಯೂಟರ್ ಆಪರೇಟರ್ ಹಾಗೂ ಸಮೀಕ್ಷಾ ಕಾರ್ಯಕರ್ತರಿಗೆ ತರಬೇತಿ ಹಾಗೂ ಅಭಿಯಾನದ ಯಶಸ್ವಿ ಕಾರ್ಯಾಗಾರದ ಕುರಿತು ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಿಳಾ ಕೂಲಿ ಕಾರ್ಮಿಕರ ಭಾಗವಹಿಸುವಿಕೆ ಹೆಚ್ಚಿಸಲು ಯಾದಗಿರಿ, ಗುರುಮಠಕಲ್ ತಾಲ್ಲೂಕಿನ ಆಯ್ದ 12 ಗ್ರಾಮ ಪಂಚಾಯಿತಿಗಳಲ್ಲಿ ಒಂದು ತಿಂಗಳವರೆಗೆ ನಡೆಯುವ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸ್ವ-ಸಹಾಯ ಸಂಘಗಳ ಭಾಗ ವಹಿಸುವಿಕೆಗೆ ಉತ್ತೇಜನ ನೀಡಬೇಕು. ಮಹಿಳೆಯರು ಯೋಜನೆಯಡಿ ಹೆಚ್ಚಾಗಿ ಭಾಗವಹಿಸುವಂತೆ ಪ್ರೇರೆಪಿಸಲು ಹಾಗೂ ಮಹಿಳಾ ಕಾಯಕ ಬಂಧುಗಳಿಗೆ ತರಬೇತಿ ನೀಡುವುದು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಎರಡನೇ ಹಂತದ ಮಹಿಳಾ ಕಾಯಕೋತ್ಸವದಡಿ ಸಮೀಕ್ಷೆ ಮಾಡುವ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಬೇಕು. ಸಮೀಕ್ಷಾ ನಮೂನೆ ಪ್ರಕಾರ ಒಂದು ಕುಟುಂಬದ ಸಂಪೂರ್ಣ ವಿವರ ನಮೂದಿಸಬೇಕು ಎಂದರು.

ಉದ್ಯೋಗ ಚೀಟಿ ಇಲ್ಲದ ಕುಟುಂಬಕ್ಕೆ ನಮೂನೆ-1ರಡಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್‍ಪಾಸ್ ಬುಕ್ ಹಾಗೂ ಒಂದು ಫೋಟೋ ನೀಡಬೇಕು. ಇದರ ಜತೆಗೆ ಪಡಿತರ ಚೀಟಿಯಲ್ಲಿರುವ 18 ವರ್ಷ ಮೇಲ್ಪಟ್ಟ ಸದಸ್ಯರ ಮೂಲ ದಾಖಲಾತಿಗಳ ಜಿರಾಕ್ಸ್ ಪ್ರತಿ ಪಡೆಯಬೇಕು. ಈಗಾಗಲೇ ಜಾಬ್ ಕಾರ್ಡ್ ಇರುವ ಕುಟುಂಬದ ಸದಸ್ಯರು, ನರೇಗಾ ಯೋಜನೆಯಡಿ ಕೆಲಸ ಮಾಡಲು ಇಚ್ಛಿಸಿದರೇ ಅವರಿಂದಲೂ ನಮೂನೆ-6ರಲ್ಲಿ ಕೂಲಿ ಬೇಡಿಕೆ ಪಡೆದು ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು ಎಂದು ವಿವರಿಸಿದರು.

ಮನರೇಗಾ ಯೋಜನೆಯಡಿ ಮಹಿಳೆಯರಿಗೆ ತೋಟಗಾರಿಕೆ, ಅರಣ್ಯೀಕರಣ, ರೇಷ್ಮೆ ಕಾಮಗಾರಿಗಳಿಗೆ ಗುಂಡಿ ತೆಗೆಯುವ ಕೆಲಸ, ಬದು ನಿರ್ಮಾಣ, ಕೃಷಿ ಹೊಂಡ, ಮೀನಿನ ಹೊಂಡ ನಿರ್ಮಾಣ, ಭೂ-ಅಭಿವೃದ್ಧಿ ಕೆಲಸಗಳು, ಕೆರೆ ಹೂಳೆತ್ತುವುದು, ನೀರಿನ ಸಂರಕ್ಷಣೆ ಕಾಮಗಾರಿ ಬಗ್ಗೆ ತಿಳಿಸಬೇಕು. ವೈಯಕ್ತಿಕ ಕಾಮಗಾರಿಗಳಲ್ಲಿ ದನ, ಕುರಿ, ಮೇಕೆ, ಹಂದಿ, ಕೋಳಿ ಸಾಕಾಣಿಕೆ ಶೆಡ್ ನಿರ್ಮಾಣದ ವೈಯಕ್ತಿಕ ಕಾಮಗಾರಿ ಅಲ್ಲದೆ ಸಮುದಾಯ ಕಾಮಗಾರಿಗಳಲ್ಲಿ ನಿರ್ವಹಿಸುವ ಇತರೆ ಅಕುಶಲ ಕೆಲಸಗಳು ನೀಡುವ ಕುರಿತು ಸಮೀಕ್ಷಾ ಸಮಯದಲ್ಲಿ ಮಾಹಿತಿ ನೀಡಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಗುರುಮಠಕಲ್ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕರವಸೂಲಿಗಾರರು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ತಾಲ್ಲೂಕು ಐಇಸಿ ಸಂಯೋಜಕರಾದ ದುರಗೇಶ, ಬಸಪ್ಪ ಹಾಗೂ ಸಮೀಕ್ಷಾ ಕಾರ್ಯಕರ್ತರು ಇದ್ದರು.

***

ಮನರೇಗಾ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಶೇ 5ರಷ್ಟು ಹೆಚ್ಚಿಸಿ, ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸಬೇಕು. ಕಾಮಗಾರಿ ಸ್ಥಳಗಳನ್ನು ಮಹಿಳೆ ಹಾಗೂ ಮಕ್ಕಳ ಸ್ನೇಹಿಯಾಗಿ ಮಾಡಿ.
-ಬಸವರಾಜ ಶರಬೈ, ತಾ.ಪಂ ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT