ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಬೇಸಿಗೆ ಬಿಸಿಲು: ಈಜುಕೊಳದಲ್ಲಿ ಮೋಜು

ಶಾಲಾ–ಕಾಲೇಜಿಗೆ ರಜೆ, ಈಜುಕೊಳದಲ್ಲಿ ಮಿಂದೆಳುವ ಯುವಜನತೆ
Last Updated 13 ಮೇ 2022, 2:09 IST
ಅಕ್ಷರ ಗಾತ್ರ

ಯಾದಗಿರಿ: ಬೇಸಿಗೆ ಬಿಸಿಲು ಹೆಚ್ಚಿರುವ ಪರಿಣಾಮ ಶಾಲಾ–ಕಾಲೇಜು ವಿದ್ಯಾರ್ಥಿ ಗಳು ಈಜುಕೊಳದಲ್ಲಿ ಮೋಜು–ಮಸ್ತಿ ಮಾಡುತ್ತಿದ್ದಾರೆ.

ಒಂದೆಡೆ ನೆತ್ತಿ ಸುಡುವ ಬಿಸಿಲು. ಇದನ್ನು ತಾತ್ಕಾಲಿಕವಾಗಿ ಮರೆಯಲು ಈಜು ಕೊಳದಲ್ಲಿ ಮಿಂದೆದ್ದು, ಬಿಸಿ ಲಿನ ಆಯಾಸವನ್ನು ಕಡಿಮೆ ಮಾಡಿಕೊ ಳ್ಳುತ್ತಿದ್ದಾರೆ ನಗರ ನಿವಾಸಿಗಳು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಶನಿವಾರದಿಂದ ಆರಂಭಗೊಂಡ ಈಜುಕೊಳದಲ್ಲಿ ಮಕ್ಕಳಾಟ ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಾತ್ರ ಮೋಡ ಕವಿದ ವಾತಾವರಣ ಇದೆ. ಆದರೂ ಶೆಖೆಯ ವಾತಾವರಣ ಇದ್ದು, 38ರಿಂದ 40 ಡಿಗ್ರಿ ಸೆಲ್ಸಿಯಸ್‌ ಬಿಸಿಲು ಇದೆ.

ಮಕ್ಕಳು, ವಯಸ್ಕರು ಈಜು ಕೊಳದಲ್ಲಿ ಇಳಿದು ಈಜಾಡಿ ಸಂಭ್ರಮ ಪಡುತ್ತಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಮಕ್ಕಳು ಬಾವಿಗಳಲ್ಲಿ ಉಚಿತವಾಗಿ ಈಜಾಡಿದರೆ, ನಗರ ಪ‍್ರದೇಶದಲ್ಲಿ ಶುಲ್ಕ ನೀಡಿ ಈಜಾಡುತ್ತಿದ್ದಾರೆ. ಬೆಳಿಗ್ಗೆ 6ರಿಂದ ಈಜುಕೊಳ ಆರಂಭವಾಗುತ್ತಿದೆ. ಬೆಳಿಗ್ಗೆ 5ರಿಂದ 6 ಗಂಟೆವರೆಗೆ ಈಜುಕೊಳ ಸ್ವಚ್ಛತೆ ಮಾಡಲಾಗುತ್ತಿದೆ.

ಈಜುಕೊಳದಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗೆ ಪ್ರತ್ಯೇಕವಾಗಿದೆ. ಈಜು ಬಂದರೂ ಮಕ್ಕಳಿಗೆ ನಿರ್ಮಿಸಿದ ಈಜು ಕೊಳದಲ್ಲಿ ಈಜಾಡಿದ ನಂತರ ದೊಡ್ಡಕೊಳದಲ್ಲಿ ಪ್ರವೇಶ ಕಲ್ಪಿಸಲಾಗುತ್ತಿದೆ.

ಸರ್ಕಾರಿ ಈಜುಕೊಳದಲ್ಲಿ ಪ್ರತಿ ಗಂಟೆಗೆ ಸದ್ಯಕ್ಕೆ ಮಕ್ಕಳಿಗೆ ₹30, ವಯಸ್ಕರಿಗೆ ₹50 ಶುಲ್ಕ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶುಲ್ಕ ಹೆಚ್ಚಿಸಲಾಗುತ್ತಿದೆ ಎನ್ನುತ್ತಾರೆ ಕ್ರೀಡಾ ಇಲಾಖೆಯ ಅಧಿಕಾರಿಗಳು.

ಒಂದು ತಿಂಗಳಿಗೆ ದಿನಕ್ಕೆ 1 ಗಂಟೆಯಂತೆ 11 ವರ್ಷದೊಳಗಿನ ಮಕ್ಕಳಿಗೆ ₹500 ಹಾಗೂ ವಯಸ್ಕರಿಗೆ ₹1,000 ದರ ನಿಗದಿಪಡಿಸಲಾಗಿದೆ.

ಮಹಿಳೆಯರಿಗೆ ಪ್ರತ್ಯೇಕ ಸಮಯ:
ಸದ್ಯಕ್ಕೆ ಪುರುಷರಿಗೆ ಮಾತ್ರ ಈಜುಕೊಳದಲ್ಲಿ ಪ್ರವೇಶವಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಮಯ ನಿಗದಿ ಮಾಡಿ ಅವಕಾಶ ಕಲ್ಪಿಸಲಾಗುವುದು ಎನ್ನುತ್ತಾರೆ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರಾಜು ಭಾವಿಹಳ್ಳಿ.

‘ಮಹಿಳೆಯರಿಗೂ ಈಜುಕೊಳದಲ್ಲಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಸಂಜೆ 5ರಿಂದ 6 ಗಂಟೆ ವರೆಗೆ ಮಹಿಳಾ ಸಿಬ್ಬಂದಿಯನ್ನು ನೇಮಿಸಿ ಅವಕಾಶ ಕಲ್ಪಿಸಲಾಗುವುದು’ ಎನ್ನುತ್ತಾರೆ ಅವರು.

***

ಈಜು ತರಬೇತಿ ಆರಂಭವಾಗಲಿ

ಸದ್ಯಕ್ಕೆ ಈಜುಕೊಳದಲ್ಲಿ ಈಜು ಬರುವವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತಿದೆ. ಆದರೆ, ಈಜು ಬರುವವರು ಕಲಿಯಲು ಆಸಕ್ತಿ ಇದ್ದರೂ ತರಬೇತುದಾರರು ಇಲ್ಲದಿದ್ದರಿಂದ ನಿರಾಶೆ ಹೊಂದುವಂತೆ ಆಗಿದೆ.

ಲೈಫ್‌ ಜಾಕೆಟ್‌, ಟ್ಯೂಬ್‌, ತರಬೇತುದಾರರು, ಸೂಪರ್‌ ವೈಸರ್‌ ಸೇರಿದಂತೆ ಅಗತ್ಯ ಸಿಬ್ಬಂದಿ ಇಲ್ಲ. ಇದರಿಂದ ಈಜು ಕಲಿಯುವವರಿಗೆ ಸದ್ಯಕ್ಕೆ ಪ್ರವೇಶವಿಲ್ಲ. ಮುಂದಿನ ದಿನಗಳಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕ್ರೀಡಾ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

‘ಶಾಲೆಗಳು ಆರಂಭವಾದ ನಂತರ ಮಕ್ಕಳದೇ ಒಂದು ತಂಡ ಮಾಡಿ ಈಜು ಕಲಿಸಲು ತರಬೇತಿದಾರರನ್ನು ನೇಮಕ ಮಾಡಿಕೊಳ್ಳಲಾಗುವುದು. ಆಗ ಜಿಲ್ಲೆಯಿಂದಲೂ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರಯತ್ನ ಮಾಡಲಾಗುವುದು ಎನ್ನುತ್ತಾರೆ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರಾಜು ಭಾವಿಹಳ್ಳಿ.
******

ವರದಿ ಪರಿಣಾಮ: ಈಜುಕೊಳ ಆರಂಭ

‘ಬೇಸಿಗೆಯಲ್ಲೂ ಆರಂಭವಾಗದ ಸರ್ಕಾರಿ ಈಜುಕೊಳ’ ಎನ್ನುವ ಶೀರ್ಷಿಕೆಯಡಿ ಏಪ್ರಿಲ್‌ 27ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ವರದಿಯ ಪರಿಣಾಮ ಎಚ್ಚೆತ್ತ ಅಧಿಕಾರಿಗಳು ಈಜುಕೊಳ ಆರಂಭಿಸಿ ಸಾರ್ವಜನಿಕರಿಗೆ ಮುಕ್ತ ಮಾಡಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ₹ 1.70 ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಮಾಡಲಾಗಿದೆ. ಬೇಸಿಗೆಯಲ್ಲೂ ಈಜುಕೊಳ ಆರಂಭವಾಗದ ಕುರಿತು ವರದಿ ಮಾಡಿದ್ದರಿಂದ ಮಕ್ಕಳು, ದೊಡ್ಡವರು ಈಗ ಖುಷಿಯಿಂದ ಈಜಾಡುತ್ತಿದ್ದಾರೆ.

***

ಈಜುಕೊಳ ಆರಂಭಿಸಿದ್ದರಿಂದ ಮಕ್ಕಳು, ವಯಸ್ಕರು ಬರುತ್ತಿದ್ದಾರೆ. ಈಜು ಕಲಿಯಬೇಕು ಎನ್ನುವವರು ಸದ್ಯಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಶಿಬಿರ ಹಮ್ಮಿಕೊಳ್ಳಲಾಗುವುದು
ರಾಜು ಭಾವಿಹಳ್ಳಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ

***

ಜಿಲ್ಲಾ ಕ್ರೀಡಾಂಗಣದಲ್ಲಿ ಈಜುಕೊಳ ಆರಂಭಿಸಿದ್ದರಿಂದ ಮಕ್ಕಳು, ವಯಸ್ಕರು ಈಜಾಡಿ ಬಿಸಿಲ ಬೇಗೆಯನ್ನು ಮರೆಯುತ್ತಿದ್ದಾರೆ. ಈಜು ತರಬೇತಿಯೂ ಆರಂಭವಾಗಲಿ
ಅಭಿಷೇಕ ಆರ್‌ ದಾಸನಕೇರಿ, ಯಾದಗಿರಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT