ಸುರಪುರ: ‘ಸೆ.7ರಂದು ಗಣೇಶ ಸ್ಥಾಪನಾ ದಿನ, 16ರಂದು ಈದ್ ಮಿಲಾದ್ ಹಬ್ಬ ಇವೆ. ಹಿಂದೂ–ಮುಸ್ಮಿಮರು ಪರಸ್ಪರ ಸ್ನೇಹ, ಸೌರ್ಹಾದತೆಯಿಂದ ವರ್ತಿಸಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು’ ಎಂದು ಡಿವೈಎಸ್‍ಪಿ ಜಾವೀದ್ ಇನಾಮದಾರ ಹೇಳಿದರು.
ಬುಧವಾರ ನಗರದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ಹಬ್ಬದ ಹಿಂದೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇರುತ್ತದೆ. ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಬೇಕು. ಇನ್ನೊಬ್ಬರ ಭಾವನೆಗೆ ಧಕ್ಕೆ ತರುವುದಾಗಲಿ ಅವಹೇಳನ ಮಾಡುವುದಾಗಲಿ ಮಾಡುವಂತಿಲ್ಲ. ಶಾಂತಿ ಸುವ್ಯವಸ್ಥೆ ಕದಡುವ ಕೆಲಸ ಮಾಡಬಾರದು’ ಎಂದು ತಿಳಿಸಿದರು.
ಇನ್‍ಸ್ಪೆಕ್ಟರ್ ಆನಂದ ವಾಗ್ಮೋಡೆ ಮಾತನಾಡಿ, ‘ಗಣೇಶ ಸ್ಥಾಪನಾ ಮಂಡಳಿಯವರು ಮುಂಚಿತವಾಗಿ ಪೊಲೀಸ್ ಠಾಣೆಗೆ ನಿಖರ ಮಾಹಿತಿ ನೀಡಬೇಕು. ವಿಸರ್ಜನೆ ದಿನಾಂಕ ಮುಂಚಿತವಾಗಿ ತಿಳಿಸಬೇಕು, ಸುಪ್ರೀಂ ಕೋರ್ಟ್ ಆದೇಶದಂತೆ ಹೆಚ್ಚಿನ ಡಿಸೆಬೆಲ್ ಧ್ವನಿವರ್ಧಕ ಬಳಸುವಂತಿಲ್ಲ. ಯಾವುದೇ ಒಂದು ಕೋಮಿನ ಭಾವನೆ ಕೆರಳಿಸುವಂಥ ಹಾಡುಗಳನ್ನು ಹಾಕುವಂತಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘ಜೆಸ್ಕಾಂ ಮತ್ತು ಅಗ್ನಿಶಾಮಕ ಠಾಣೆಯಿಂದ ಮುಂಚಿತವಾಗಿ ಪರವಾನಗಿ ಪಡೆದುಕೊಳ್ಳಬೇಕು. ಗಣೇಶ ಮಂಟಪದಲ್ಲಿ ಸ್ವಯಂ ಸೇವಕರನ್ನು ನೇಮಿಸಬೇಕು. ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿಕೊಂಡಲ್ಲಿ ಪೊಲೀಸ್ ನಿಯೋಜನೆ ಮಾಡಲು ಮುಂಚಿತವಾಗಿ ತಿಳಿಸಬೇಕು. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಸಬಾರದು’ ಎಂದು ತಿಳಿಸಿದರು.
ಮುಖಂಡರಾದ ನರಸಿಂಹಕಾಂತ ಪಂಚಮಗಿರಿ, ಉಸ್ತಾದ ವಜಾಹತ್ ಹುಸೇನ್, ಶರಣುನಾಯಕ ಡೊಣ್ಣಿಗೇರಾ, ಅಹ್ಮದ್ ಪಠಾಣ, ಅಬ್ದುಲ್‍ಅಲೀಂ ಗೋಗಿ, ಶಿವಲಿಂಗ ಚಲವಾದಿ, ಸಚಿನಕುಮಾರ ನಾಯಕ, ಆನಂದ ಕಡಿಮನಿ, ಶರಣಪ್ಪ ಇತರರು ಮಾತನಾಡಿದರು. ಜೆಸ್ಕಾಂ ಎಇಇ ಶಾಂತಪ್ಪ ವೇದಿಕೆಯಲ್ಲಿದ್ದರು. ಹೆಡ್‌ಕಾನ್‍ಸ್ಟೆಬಲ್ ದಯಾನಂದ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.