ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 5 ತಿಂಗಳಾದರೂ ನೇಮಕವಾಗಿಲ್ಲ ತಹಶೀಲ್ದಾರ್‌

ಗುರುಮಠಕಲ್‌ ತಾಲ್ಲೂಕು ಆಡಳಿತ ಪ್ರಭಾರಿ ಕೈಯಲ್ಲಿ; ಮ್ಯುಟೇಷನ್‌, ತಿದ್ದುಪಡಿಗೆ ಪರದಾಟ
Last Updated 6 ಜುಲೈ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ 5 ತಿಂಗಳಿಂದ ನಾವಿಕನಿಲ್ಲದ ಹಡಗು ಅದಂತೆ ಆಗಿದೆ ಗುರುಮಠಕಲ್‌ ತಾಲ್ಲೂಕಿನ ಪರಿಸ್ಥಿತಿ. ಕಾಯಂ ತಹಶೀಲ್ದಾರ್‌ ಇಲ್ಲದೆ ಕಡತ ವಿಲೇವಾರಿಗೆ ಸಮಸ್ಯೆ ಉಂಟಾಗಿದ್ದು, ಇದು ತಾಲ್ಲೂಕಿನ ಜನತೆಗೆ ಸಮಸ್ಯೆ ತಂದೊಡ್ಡಿದೆ.

ಗ್ರೇಡ್‌–2 ತಹಶೀಲ್ದಾರ್‌ ಮೇಲೆ ಕಚೇರಿಕಾರ್ಯಾಭಾರ ಬಿದ್ದಿದ್ದು, ಯಾದಗಿರಿ ತಾಲ್ಲೂಕು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರಿಗೆ ಗುರುಮಠಕಲ್‌ ಪ್ರಭಾರ ವಹಿಸಲಾಗಿದೆ.

ಯಾದಗಿರಿ–ಗುರುಮಠಕಲ್‌ ತಾಲ್ಲೂಕುಗಳನ್ನು ಒಬ್ಬರೇ ನಿಭಾಯಿಸಲು ತೊಂದರೆಯಾದಂತೆ ಆಗಿದೆ. ಇದರಿಂದ ಜನರ ಕೆಲಸಗಳು ಶೀಘ್ರ ಆಗುತ್ತಿಲ್ಲ.

ಗ್ರೇಡ್‌–2 ಹಂತದಲ್ಲಿ ಆಗುವ ಜಾತಿ, ಆದಾಯ, ಪಹಣಿ ಸೇರಿದಂತೆ ಇನ್ನಿತರ ಕೆಲಸಗಳು ಆಗುತ್ತಿದ್ದು, ತಹಶೀಲ್ದಾರ್‌ ಮಟ್ಟದಲ್ಲಿ ಆಗುತ್ತಿರುವ ಕೆಲಸಗಳು ಸ್ಥಗಿತಗೊಂಡಿವೆ.

ಜಮೀನಿನ ಮ್ಯುಟೇಷನ್‌ ಬದಲಾವಣೆ: ತಂದೆ, ತಾಯಿ ಹೆಸರಿನಲ್ಲಿದ್ದ ಜಮೀನನ್ನು ಮಕ್ಕಳು ತಮ್ಮ ಹೆಸರಿಗೆ ಮಾಡಿಕೊಳ್ಳಲು ಮ್ಯುಟೇಷನ್‌ ಬೇಕಾಗುತ್ತದೆ. ಪಹಣಿ, ಆಧಾರ್ ಕಾರ್ಡ್‌, ವಂಶಾವಳಿ ನೀಡಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದಾಗ ಅಕ್ಕಪಕ್ಕದ ಜಮೀನವರು ಆಕ್ಷೇಪಣೆ ವ್ಯಕ್ತಪಡಿಸಿದರೆ ಇಬ್ಬರನ್ನು ಕರೆದು ವಿಚಾರಿಸಬೇಕಾಗುತ್ತದೆ. ಇದು ತಹಶೀಲ್ದಾರ್‌ ನೇತೃತ್ವದಲ್ಲಿ ನಡೆಯುತ್ತದೆ. ಇದು ನಡೆಯದ ಕಾರಣ ಹಲವಾರು ಮ್ಯುಟೇಷನ್‌ ಅರ್ಜಿಗಳು ವಿಲೇವಾರಿ ಆಗಿಲ್ಲ.

ಕಡತ ವಿಲೇವಾರಿಗೆ ಸಮಸ್ಯೆ: ತಹಶೀಲ್ದಾರ್‌ ಮಟ್ಟದಲ್ಲಿ ಆಗುವ ಕೆಲಸಗಳನ್ನು ಗುರುಮಠಕಲ್‌ ಸಿಬ್ಬಂದಿ ಯಾದಗಿರಿಗೆ ಹೊತ್ತು ತರಬೇಕಿದೆ. ಯಾದಗಿರಿ ತಹಶೀಲ್ದಾರ್‌ ಗುರುಮಠಕಲ್‌ ಪ್ರಭಾರ ವಹಿಸಿಕೊಂಡಿದ್ದರಿಂದ ಅಲ್ಲಿಗೆ ಹೋಗಿ ಬರಲು ಸಮಸ್ಯೆ ಆಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಆಗಾಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆಗಳು ನಡೆಯುತ್ತವೆ. ತಹಶೀಲ್ದಾರ್‌ ಅವರು ಭಾಗವಹಿಸಬೇಕಾಗುತ್ತದೆ. ಹೀಗಾಗಿ ಗುರುಮಠಕಲ್‌ಗೆ ತೆರಳಲು ಸಮಸ್ಯೆ ಆಗುತ್ತಿದೆ. ಇದರಿಂದ ಕಡತ ವಿಲೇವಾರಿಗೂ ತೊಂದರೆ ಆಗಿದೆ.

ತಹಶೀಲ್ದಾರ್‌ ಇಲ್ಲದ ಕಚೇರಿ ಅನಾಥ: ಗುರುಮಠಕಲ್‌ ತಹಶೀಲ್ದಾರ್ ಆಗಿದ್ದ ಸಂಗಮೇಶ ಜಿಡಗಿ ಅವರನ್ನು ಜಮೀನಿನ ಮ್ಯುಟೇಷನ್‌ ಬದಲಾವಣೆಗಾಗಿ 2021ರ ಫೆಬ್ರುವರಿ 22ರಂದು ₹ 5 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದರು. ಅಂದಿನಿಂದ ಇಂದಿನವರೆಗೆ ಕಾಯಂ ತಹಶೀಲ್ದಾರ್‌ ಇಲ್ಲದೆ ಕಚೇರಿ ಅನಾಥವಾಗಿದೆ.

ತಂದೆ ಹೆಸರಿನಲ್ಲಿದ್ದ ಹೊಲವನ್ನು ದೊಡ್ಡಬನ್ನಪ್ಪ ಹೆಸರಿಗೆ ವರ್ಗಾಯಿಸಲು ತಹಶೀಲ್ದಾರ್‌ ಮೊದಲು ₹ 15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ₹ 10 ಸಾವಿರಕ್ಕೆ ಒಪ್ಪಿದ್ದರು. ₹ 5 ಸಾವಿರ ಪಡೆಯುವಾಗ ಸಿಕ್ಕಿಬಿದ್ದಿದ್ದರು.

ಗುರುಮಠಕಲ್‌ ತಾಲ್ಲೂಕಿನಲ್ಲಿ ಒಂದು ವರ್ಷಾವಾದರೂ ಮ್ಯುಟೇಷನ್‌ ಅರ್ಜಿಗಳು ವಿಲೇವಾರಿಯಾಗದೇ ಉಳಿದಿದ್ದು, ಸಂಬಂಧಿಸಿದ ಅರ್ಜಿದಾರರು ನಿತ್ಯ ಕಚೇರಿಗೆ ಅಲೆದಾಡುವಂತೆ ಆಗಿದೆ.

ಕೋವಿಡ್‌ ನೆಪ: ಇದೇ ಫೆಬ್ರುವರಿಯಲ್ಲಿ ಆಗಿನ ತಹಶೀಲ್ದಾರ್‌ ಎಸಿಬಿ ಬಲೆಗೆ ಬಿದ್ದಿದ್ದರು. ಆ ನಂತರ ಕೋವಿಡ್‌ ಕಾರಣದಿಂದ ತಹಶೀಲ್ದಾರ್‌ ನೇಮಕ ಪ್ರಕ್ರಿಯೆ ಆಗಿಲ್ಲ. ತಿದ್ದು‍ಪಡಿ, ಮ್ಯುಟೇಷನ್‌ ಇನ್ನಿತರ ತಹಶೀಲ್ದಾರ್‌ ಮಟ್ಟದಲ್ಲಿ ಆಗುವ ಕೆಲಸಗಳು ಬಾಕಿ ಇವೆ. ಕೋವಿಡ್‌ನಿಂದ ನೇಮಕಾತಿ ಪ್ರಕ್ರಿಯೆ ತಡವಾಗಿದ್ದು, ಇದು ಜನರ ಮೇಲೆ ಪ್ರಭಾವ ಬಿದ್ದಿದೆ.

***

ಗುರುಮಠಕಲ್‌ ತಾಲ್ಲೂಕಿನಲ್ಲಿ ಇರುವುದು ತಹಶೀಲ್ದಾರ್ ಕಚೇರಿ ಯಾದರೂ ನಾಡ ಕಚೇರಿಯ ಕೆಲಸಕ್ಕಷ್ಟೆ ಸೀಮಿತವಾಗಿದೆ. ಜನರ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ.
-ಮಹಾದೇವಪ್ಪ ಎಂ.ಟಿ.ಪಲ್ಲಿ ಸಾಮಾಜಿಕ ಕಾರ್ಯಕರ್ತ

***

ಕಳೆದ ಸೆಪ್ಟೆಂಬರ್‌ನಲ್ಲಿ ನಮ್ಮ ತಾಯಿ ಹೆಸರಲ್ಲಿ ಖರೀದಿಸಿದ್ದ ಜಮೀನಿನ ಮ್ಯುಟೇಶನ್‌ ಮಾಡದಂತೆ ಬೇರೆಯ ವರು ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರ್ ಇಲ್ಲದ್ದರಿಂದ ವಿಚಾರಣೆ ಮಾಡಲಾಗಿಲ್ಲ. ಕಚೇರಿಗೆಸುತ್ತಾಡುತ್ತಿದ್ದೇವೆ.
-ಯಲ್ಲಪ್ಪ ಕಂದಕೂರ, ಸ್ಥಳೀಯ ನಿವಾಸಿ

***

ಎರಡು ತಾಲ್ಲೂಕುಗಳನ್ನು ನಿಭಾಯಿಸುವುದು ಸವಾಲಿನ ಕೆಲಸ. ಆದರೂ ತಿದ್ದುಪಡಿ ಇನ್ನಿತರ ಕೆಲಸ ಮಾಡಲಾಗುತ್ತಿದೆ. ಕೋವಿಡ್‌ ಕಾರಣದಿಂದ ಸಮಸ್ಯೆ ಆಗಿತ್ತು.
-ಚನ್ನಮಲ್ಲಪ್ಪ ಘಂಟಿ, ಪ್ರಭಾರಿ ತಹಶೀಲ್ದಾರ್‌, ಗುರುಮಠಕಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT