ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಲಸಿಕೆಯಿಂದ 3ನೇ ಅಲೆ ತಡೆ ಸಾಧ್ಯ–ಜಿಲ್ಲಾಧಿಕಾರಿ

ಹಳ್ಳಿಗಳಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ, ಲಸಿಕಾಕರಣಕ್ಕೆ ಜನರ ಮನವೊಲಿಕೆ
Last Updated 14 ಆಗಸ್ಟ್ 2021, 16:29 IST
ಅಕ್ಷರ ಗಾತ್ರ

ಯಾದಗಿರಿ: ಲಸಿಕಾಕರಣಕ್ಕೆ ಜನರು ಸಹಕಾರ ಕೊಟ್ಟರೆ ಮಾತ್ರ 3 ನೇ ಅಲೆ ತಡೆಯಲು ಸಾಧ್ಯ. ಲಸಿಕಾಕರಣ ಕೇವಲ ಆರೋಗ್ಯ ಇಲಾಖೆ ಸೀಮಿತವಲ್ಲ. ಎಲ್ಲಾ ಇಲಾಖೆಯವರು ಕೈ ಜೋಡಿಸಬೇಕು. ಪ್ರತಿ ಗ್ರಾಮದಲ್ಲಿರುವ ಆಶಾಕಾರ್ಯಕರ್ತೆಯರು, ಶಾಲೆಯ ಮತ್ತು ಅಂಗನವಾಡಿ ಶಿಕ್ಷಕರು, ಪಿಡಿಒಗಳು ಮತ್ತು ಗ್ರಾಮ ಲೆಕ್ಕಿಗರು ಸೇರಿ ಜನರನ್ನು ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸುವುದು ಅವರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ತಿಳಿಸಿದರು.

ತಾಲ್ಲೂಕಿನ ಮುಂಡರಗಿ, ರಾಮಸಮುದ್ರ, ಗುರುಮಠಕಲ್ ತಾಲ್ಲೂಕಿನ ಕಂದಕೂರ, ಚಿಂತನಹಳ್ಳಿ ತಾಂಡಾ, ಮೊಗದಂಪುರ ಮತ್ತು ಮೊಗದಂಪುರ ತಾಂಡಾದ ಲಸಿಕಾಕರಣ ಕೇಂದ್ರಗಳಿಗೆ ಭೇಟಿ ನೀಡಿ ಜನರ ಮನವೊಲಿಸಿ ಅವರು ಮಾತನಾಡಿದರು.

ಕೋವಿಡ್ ಲಸಿಕಾಕರಣದ ಬಗ್ಗೆ ಜನರಲ್ಲಿ ತಪ್ಪು ಮಾಹಿತಿ ಇದೆ. ಅದನ್ನು ದೂರ ಮಾಡಬೇಕಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ಮತ್ತು ಬೀದಿ ನಾಟಕಗಳನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಿಕೊಳ್ಳುತ್ತೇವೆ. ಪ್ರತಿ ತಾಲ್ಲೂಕಿನಲ್ಲಿ ಸಭೆ ಮಾಡಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೂ ಲಸಿಕೆ ನೀಡಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಲಸಿಕೆ ಹಾಕುವುದರಲ್ಲಿ ಆಶಾಕಾರ್ಯಕರ್ತೆಯರು ಪ್ರಮುಖ ಪಾತ್ರವಹಿಸಬೇಕು. ಅವರು ಪ್ರತಿದಿನ ಶೇ 50ರಷ್ಟು ಲಸಿಕೆ ನೀಡಿಕೆಯ ಗುರಿ ಮುಗಿಸಬೇಕು. ಶಿಕ್ಷಕರ ಮಾತನ್ನು ಜನರು ಪಾಲಿಸುತ್ತಾರೆ. ಹೀಗಾಗಿ ಅವರು ಮನವೊಲಿಸಬೇಕು ಎಂದರು.

18 ವರ್ಷ ಮೇಲ್ಪಟ್ಟವರು ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಮೂರನೇ ಅಲೆ ಬರುತ್ತಿರುವುದರಿಂದ ಗಡಿ ಭಾಗಗಳಲ್ಲಿ ಟೆಸ್ಟಿಂಗ್ ಪ್ರಾರಂಭಿಸಲಾಗಿದೆ. ಎರಡನೇ ಡೋಸ್ ಲಸಿಕೆ ಪಡೆದವರು ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸರಿಯಾದ ಯೋಜನೆ ರೂಪಿಸಿಕೊಂಡು ಜನರಿಗೆ ಲಸಿಕೆ ನೀಡಬೇಕು. ರೈತರ ಜಮೀನಲ್ಲಿ ರಾಶಿ ಇರುವುದರಿಂದ ಅವರು ಬೆಳಿಗ್ಗೆಯೇ ತೆರಳುತ್ತಾರೆ ಎಂದರು.

ನಮ್ಮಲ್ಲಿ 15 ಸಾವಿರ ಲಸಿಕೆ ಇರುವುದರಿಂದ ಯಾವುದೇ ರೀತಿಯ ಸಮಸ್ಯೆ ಇಲ್ಲ. ಕಳೆದ ವಾರ ಶೇಕಡವಾರು 37 ರಷ್ಟು ಲಸಿಕಾಕರಣವಾಗಿದ್ದು, ಶೇಕಡಾವಾರು 41 ರಂದು ಪ್ರಗತಿ ಸಾಧಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ, ಆರ್‌ಸಿಎಚ್‌ಒ ಡಾ.ಲಕ್ಷ್ಮಿಕಾಂತ ಒಂಟಿಪೀರ, ಜಿಲ್ಲಾ ನೋಡಲ್ ಅಧಿಕಾರಿ ಡಾ.ಭಗವಂತ ಅನ್ವರ, ಯಾದಗಿರಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ಗುರುಮಠಕಲ್ ತಹಶೀಲ್ದಾರ ಶರಣಬಸವ ಇದ್ದರು.

***

ಜ್ವರ ಬರುತ್ತವೆ ಎಂಬ ಭಯ ಮೇಡಂ!
ಗುರುಮಠಕಲ್‌ ತಾಲ್ಲೂಕಿನ ಚಿಂತನಹಳ್ಳಿಯ ಯುವಕರು ಕೋವಿಡ್‌ ಲಸಿಕೆ ಹಾಕಿಕೊಂಡರೆ ಜ್ವರ ಬರುತ್ತದೆ. ಹೀಗಾಗಿ ಭಯ ಇದೆ ಮೇಡಂ ಎಂದರು.

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಅವರು ಪ್ರತಿಕ್ರಿಯಿಸಿ, ನೋಡಿ ನಾನು ಲಸಿಕೆ ಹಾಕಿಕೊಂಡಿದ್ದೇನೆ. ನನಗೆ ಜ್ವರ ಬಂದಿಲ್ಲ. ಎಲ್ಲರಿಗೂ ಜ್ವರ ಬರುತ್ತದೆ ಎಂದು ಭಾವಿಸಬಾರದು. ನಿಮಗೆ ಕೊರೊನಾ ಬಂದರೆ ಜ್ವರಕ್ಕಿಂತ ಜಾಸ್ತಿ ಕಷ್ಟ ಅನುಭವಿಸಬೇಕಾಗುತ್ತದೆ. 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ತಿಳಿಸಿದಾಗ ಯುವಕರು ಲಸಿಕಾಕರಣಕ್ಕೆ ಒಪ್ಪಿದರು.

ತಮ್ಮ ಜಮೀನಿನಲ್ಲಿ ಕೆಲಸಗಳು ಇರುವುದರಿಂದ, ಜ್ವರ ಬಂದ್ರೆ ಕೆಲಸ ಮಾಡೋಕೆ ಆಗಲ್ಲ ಎಂದು ಲಸಿಕಾ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಮೊಗದಂಪುರ ತಾಂಡಾದ ಜನರು ಜಿಲ್ಲಾಧಿಕಾರಿ ಮನವೊಲಿಕೆಯಿಂದ ಲಸಿಕೆ ಹಾಕಿಸಿಕೊಳ್ಳುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT