ಶನಿವಾರ, ಸೆಪ್ಟೆಂಬರ್ 18, 2021
24 °C

ಕೃಷ್ಣಾ ಅಚ್ಚುಕಟ್ಟು ಪ್ರದೇಶ: ಪಾಲನೆಯಾಗದ ಬೆಳೆ ಪದ್ಧತಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಪದ್ಧತಿ ಉಲ್ಲಂಘಿಸಿ ನಿಷೇಧಿತ ಬೆಳೆ ಬೆಳೆಯುವುದು ಸಾಮಾನ್ಯವಾಗಿದೆ. ಅಧಿಕ ನೀರು ಬೇಕಾಗುವ ಬೆಳೆಯನ್ನು ಬೆಳೆಯುವ ಕಾರಣ ಅದೇ ಕಾಲುವೆ ಜಾಲದ ಕೆಳ ಭಾಗದ ರೈತರಿಗೆ ನೀರು ಸಿಗುವುದಿಲ್ಲ ಎಂಬ ಆರೋಪವಿದೆ.

ಪ್ರತಿ ವರ್ಷ ನಡೆಯುವ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ, ‘ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ, ಕಬ್ಬು, ಬಾಳೆ ಬೆಳೆಯುವುದು ನಿಷೇಧಿಸಲಾಗಿದೆ. ಲಘು ನೀರಾವರಿ ಬೆಳೆಗಳಾದ ಹತ್ತಿ, ಶೇಂಗಾ, ಸೂರ್ಯಕಾಂತಿ, ಸಜ್ಜೆ, ಅಲಸಂದಿ, ಮೆಣಸಿನಕಾಯಿ ಮುಂತಾದ ಬೆಳೆ ಬೆಳೆಯಲು ಅವಕಾಶವಿದೆ’ ಎಂಬ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.

ಆದರೆ, ವಾಸ್ತವ ಅಂಶವು ಬೇರೆಯದ್ದೇ ಆಗಿರುತ್ತದೆ. ಆಂಧ್ರಪ್ರದೇಶದ ವಲಸಿಗರು ಕಾಲುವೆ ಮೇಲ್ಭಾಗದ ಪ್ರದೇಶದಲ್ಲಿ ಸಮೃದ್ಧಿಯಾಗಿ ದೊರೆಯುವ ಜಮೀನುಗಳನ್ನು ಕಡಿಮೆ ದರದಲ್ಲಿ ಖರೀದಿಸಿದರು. ಅಲ್ಲದೆ ಸ್ಥಳೀಯ ರಾಜಕೀಯ ಮುಖಂಡರ ಜಮೀನುಗಳನ್ನು ಲೀಜ್ ರೂಪದಲ್ಲಿ ಪಡೆದುಕೊಂಡು ನಿಷೇಧಿತ ಬೆಳೆ ಭತ್ತ ಬೆಳೆಯಲು ಆರಂಭಿಸಿದರು. ಇದೇ ಮಾದರಿಯನ್ನು ಸ್ಥಳೀಯ ರೈತರು ಅನುಸರಿಸುತ್ತಿದ್ದಾರೆ. ‘ಭತ್ತ ಬೆಳೆ ಬಿಟ್ಟು ಬೇರೆ ಪರ್ಯಾಯ ಬೆಳೆ ಬೆಳೆಯಲು ಆಗದು’ ಎಂಬ ಸ್ಥಿತಿಯನ್ನು ಕೆಲ ರೈತರು ಉಂಟು ಮಾಡಿದ್ದಾರೆ.

ಭತ್ತ ಬೆಳೆ ನಿಷೇಧಿಸಲು ಮುಖ್ಯ ಕಾರಣವೆಂದರೆ, ಭತ್ತ ಬೆಳೆಗೆ ಅಧಿಕ ನೀರು ಬೇಕಾಗುತ್ತದೆ. ನಿರಂತರವಾಗಿ ನೀರು ನಿಲುಗಡೆಯಿಂದ ಹಾಗೂ ಅಧಿಕ ರಸಗೊಬ್ಬರ ಬಳಕೆಯಿಂದ ಇಲ್ಲಿನ ಫಲವತ್ತಾದ ಮಣ್ಣು ನಾಶವಾಗಿ ಭೂಮಿ ಬರಡಾಗುತ್ತಲಿದೆ. ಹೆಚ್ಚಿನ ನೀರು ಮೇಲ್ಭಾಗದ ರೈತರು ಉಪಯೋಗಿಸುವುದರಿಂದ ಅದೇ ಕಾಲುವೆ ಜಾಲದ ಕೆಳಭಾಗದ ರೈತರು ನೀರಿನಿಂದ ವಂಚಿತರಾಗಿದ್ದಾರೆ. ಸಾಮಾಜಿಕ ನ್ಯಾಯದ ಪಾಲನೆಯಾಗುತ್ತಿಲ್ಲ.

‘ಪಂಜಾಬ್‌ ಹೊರತುಪಡಿಸಿ ಅತ್ಯಧಿಕ ರಸಗೊಬ್ಬರವನ್ನು ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬಳಸಲಾಗುತ್ತದೆ. ಇದು ಮನಕುಲಕ್ಕೆ ಅಪಾಯ ತಂದೊಡ್ಡಿದೆ. ರಸಾಯನಿಕಯುಕ್ತ ನೀರು ನದಿ, ಹಳ್ಳಕ್ಕೆ ಹರಿಬಿಡುವುದರಿಂದ  ಜನರು ವಿವಿಧ ರೋಗಗಳ ಭೀತಿ ಎದುರಿಸುವಂತಾಗಿದೆ’ ಎಂದು ನೀರಾವರಿ ಸಲಹಾ ಸಮಿತಿ ಮಾಜಿ ಸದಸ್ಯ ಭಾಸ್ಕರರಾವ ಮುಡಬೂಳ ತಿಳಿಸಿದರು.

‘ನೀರಾವರಿ ಕಾಯ್ದೆಯಲ್ಲಿ ಬೆಳೆ ಪದ್ಧತಿ ಉಲ್ಲಂಘಿಸಿದರೆ ಶಿಸ್ತುಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಆದರೆ, ಕಾನೂನು ಸದ್ಬಳಕೆಯಾಗುತ್ತಿಲ್ಲ. ಅಲ್ಲದೆ ಅಂದಿನ ಕೆಬಿಜೆಎನ್‌ಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎ.ಪಿ.ಜೋಶಿ ಅವರು 2004 ಜೂನ್ 11ರಂದು ಸುತ್ತೋಲೆ ಹೊರಡಿಸಿ ಬೆಳೆ ಪದ್ಧತಿ ಉಲ್ಲಂಘಿಸಿದವರ
ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿಗಮದ ಎಂಜಿನಿಯರ್ ಅವರಿಗೆ ಸೂಚಿಸಿದ್ದರು. ಅಲ್ಲದೆ ಅಂದಿನ ಲೋಕಾಯುಕ್ತ ದಿ.ವೆಂಕಟಾಚಲಯ್ಯನವರು 2003 ನವೆಂಬರ್‌ 12ರಂದು ಶಹಾಪುರ ನಗರಕ್ಕೆ ಬಂದಾಗ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭತ್ತ ಬೆಳೆ ನಿಷೇಧಿಸುವಂತೆ ದೂರು ಸಲ್ಲಿಸಿದಾಗ ಅರ್ಜಿಯನ್ನು ಪುರಸ್ಕರಿಸಿ ಸಂಬಂಧಪಟ್ಟ ಇಲಾಖೆ ಹಾಗೂ ಎಂಜಿನಿಯರ್ ಅವರಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದರು’ ಎಂದರು.

ಈಗ ಕಾಲುವೆಯ ನೀರು ರಾಜಕೀಯ ಸ್ವರೂಪ ಪಡೆದಿದೆ. ಭತ್ತ ಬೆಳೆಗಾರರ ಪರವಾಗಿ ವಕಾಲತ್ತು ವಹಿಸುವ ರೈತ ಮುಖಂಡರ ಸಂಖ್ಯೆ ಹೆಚ್ಚಾಗಿದೆ. ತೋಳ್ಬಲ ಇದ್ದವರು ನೀರು ದಕ್ಕಿಸಿಕೊಳ್ಳುತ್ತಾರೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕಾಲುವೆ ಕೆಳ ಭಾಗದ ರೈತರಿಗೆ ನೀರು
ಮರಿಚೀಕೆಯಾಗಿದೆ. ಒಂದಡೆ ಹಸಿರಿನಿಂದ ಕಂಗೊಳಿಸುವ ಭೂಮಿ ಇನ್ನೊಂದಡೆ ಲಘು ಬೆಳೆಗಳಿಗೆ ನೀರು ಸಿಗದೆ ಪರಿತಪಿಸುವ ಸ್ಥಿತಿ ಮುಂದುವರೆದ ಭಾಗದಂತೆ ಸಾಗಿದೆ.

53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ

ಸುರಪುರ: ಭತ್ತ ನಿಷೇಧಿತ ಬೆಳೆಯಾದರೂ ಸುರಪುರ ಮತ್ತು ಹುಣಸಗಿ ತಾಲ್ಲೂಕುಗಳ ಒಟ್ಟು 1.43 ಲಕ್ಷ ಹೆಕ್ಟೇರ್ ಜಮೀನಿನ ಪೈಕಿ 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ.

ತಜ್ಞರು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜಮೀನು ಕೃಷ್ಣಾ ನದಿ ನೀರಿಗೆ ಅಷ್ಟಾಗಿ ಹೊಂದಿಕೊಳ್ಳದ ಕಾರಣ ಲಘು ನೀರಾವರಿಗೆ ಶಿಫಾರಸ್ಸು ಮಾಡಿದ್ದರು. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭಾರಿ ನೀರಾವರಿ ಬೆಳೆಗಳನ್ನು ನಿಷೇಧಿಸಿತ್ತು. ನಾರಾಯಣಪುರ ಜಲಾಶಯ ಲೋಕಾರ್ಪಣೆ ಆದ ದಶಕಗಳ ನಂತರವೂ ಇಲ್ಲಿನ ರೈತರು ಭತ್ತ ಅಥವಾ ಇತರೆ ಭಾರಿ ನೀರಾವರಿ ಕೃಷಿಗೆ ಕೈ ಹಾಕಿರಲಿಲ್ಲ. ಕ್ರಮೇಣ ಆಂಧ್ರ ರೈತರು ಈ ಭಾಗಕ್ಕೆ ವಲಸೆ ಬರತೊಡಗಿದ ಮೇಲೆ ಕೃಷಿ ಚಿತ್ರಣವೇ ಬದಲಾಯಿತು.

ಪಕ್ಕದ ಜಮೀನು ಭತ್ತದ ಗದ್ದೆ ಮಾಡಿದರೆ ಅನಿವಾರ್ಯವಾಗಿ ಇತರ ರೈತರು ತಮ್ಮ ಜಮೀನನ್ನು ಗದ್ದೆ ಮಾಡಲೇಬೇಕು. ಇಲ್ಲದಿದ್ದರೆ ಪಕ್ಕದ ಗದ್ದೆಯ ನೀರು ಇತರ ಜಮೀನಿಗೆ ಹರಿದು ಸದಾ ತೇವಾಂಶವಿರವುದರಿಂದ ಲಘು ಬೆಳೆಗಳು ಬೆಳೆಯುವುದಿಲ್ಲ.

ಟೇಲ್ ಎಂಡ್ ಸಮಸ್ಯೆ: ಲಘು ನೀರಾವರಿ ದೃಷ್ಟಿಕೋನವನ್ನಿಟ್ಟುಕೊಂಡು ನೀರಾವರಿ ವ್ಯವಸ್ಥೆ ಅಳವಡಿಸಲಾಗಿತ್ತು. ಆದರೆ ಭತ್ತಕ್ಕೆ ಹೆಚ್ಚಿನ ನೀರು ಹಿಡಿದಿಟ್ಟುಕೊಳ್ಳುವುದರಿಂದ ಕಾಲುವೆ ಕೊನೆ ಭಾಗದ ರೈತರು ನೀರಾವರಿಯಿಂದ ವಂಚಿತರಾಗಬೇಕಾಯಿತು. ಅಲ್ಲಿಂದ ಆರಂಭವಾದ ಟೇಲ್ ಎಂಡ್ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ.

ಸವಳು ಜವಳು: ಭತ್ತಕ್ಕೆ ಅತಿಯಾಗಿ ಯೂರಿಯಾ ಮತ್ತು ಇತರ ರಸಾಯನಿಕ ಗೊಬ್ಬರ ಬಳಸುವುದರಿಂದ ಭೂಮಿ ಸವಳು ಜವಳಾಗುತ್ತಿದೆ. ಇಂತಹ ಜಮೀನುಗಳಲ್ಲಿ ಭತ್ತ ಬಿಟ್ಟು ಬೇರೆ ಏನನ್ನೂ ಬೆಳೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ತಹಶೀಲ್ದಾರ್‌ರಿಂದ ನಿಯಮ ಉಲ್ಲಂಘನೆ: ಧಾರ್ಮಿಕ ಮತ್ತು ದತ್ತಿ ಇಲಾಖೆಯಲ್ಲಿ ಬರುವ ದೇವರಗೋನಾಲದ ಮೌನೇಶ್ವರ ದೇವಸ್ಥಾನಕ್ಕೆ 45 ಎಕರೆ ಕೃಷಿ ಭೂಮಿ ಇದೆ. ತಹಶೀಲ್ದಾರ್ ಈ ಜಮೀನನ್ನು ಭತ್ತ ಬೆಳೆಯಲು ಹರಾಜು ಮಾಡುವ ಮೂಲಕ ನಿಷೇಧಿತ ನಿಯಮ ಉಲ್ಲಂಘಿಸಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.

 

ನಿಷೇಧ, ನಷ್ಟದ ಮಧ್ಯೆಯೂ ಭತ್ತ ನಾಟಿ

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಮತ್ತು ನಾಟಿ ಮಾಡಲು ಲಘು ಬೆಳೆಗಳಿಗೆ ಮಾತ್ರ ಅನುಮತಿಸಲಾಗಿದೆ ಎಂದು ಪ್ರತಿ ವರ್ಷವೂ ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ.

ಆದರೆ, ವಾಸ್ತವದಲ್ಲಿ ಭತ್ತವೇ  ಇಲ್ಲಿ ಪ್ರಮುಖ ಬೆಳೆಯಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಬಂದ ಆರಂಭದ ದಿನಗಳಲ್ಲಿ ಈರುಳ್ಳಿ, ಶೇಂಗಾ, ಸೂರ್ಯಕಾಂತಿ, ಮೆಣಸಿನಕಾಯಿ ಮತ್ತಿತರ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆ ಸಂದರ್ಭದಲ್ಲಿ ನೀರು ಅಷ್ಟಾಗಿ ಬಳಕೆ ಮಾಡುತ್ತಿರಲಿಲ್ಲ. ಆದರೆ, ಈ ಎಲ್ಲ ಪ್ರಮುಖ ಬೆಳೆಗಳು ರೈತರ ಆರ್ಥಿಕ ಮಟ್ಟ ಸುಧಾರಿಸುವಲ್ಲಿ ಪರಿಮಾಣಕಾರಿ ಆಗಲಿಲ್ಲ. 90 ರ ದಶಕದಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಭತ್ತ ಬೆಳೆಯುವ ಆಂಧ್ರ ಮೂಲದ ರೈತರು ಆಗಮಿಸಿದರು. ಆ ಸಂದರ್ಭದಲ್ಲಿ ಭತ್ತ ಬೆಳೆ ರೈತರ ಕೈ ಹಿಡಿದಿದ್ದರಿಂದಾಗಿ, ಇಲ್ಲಿನ ಬಹುತೇಕ ರೈತರು ಭತ್ತ ಬೆಳೆಗೆ ಮುಂದಾದರು. ಆಗಿನಿಂದ ಆರಂಭವಾದ ಭತ್ತ ಇಡೀ ಅಚ್ಚುಕಟ್ಟು ಪ್ರದೇಶವನ್ನೇ ಆವರಿಸಿಕೊಂಡಿದೆ.

‘ಆ ಸಂದರ್ಭದಲ್ಲಿ ಭತ್ತ ಧಾರಣೆ ಚೆನ್ನಾಗಿತ್ತು. ರೈತರ ಜೀವನ ಮಟ್ಟವನ್ನೇ ಬದಲಾಯಿಸಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲವಾದರೂ ಭತ್ತದ ಬೆಳೆಯಿಂದ ರೈತರು ಹೊರಬರುವ ಸ್ಥಿತಿಯಲ್ಲಿ ಇಲ್ಲ’ ಎಂದು ಭತ್ತ ಬೆಳೆಗಾರರ ಸಂಘದ ಅಧ್ಯಕ್ಷ ಬಸಣ್ಣ ದೇಸಾಯಿ ಬೈಲಕುಂಟಿ ಹೇಳುತ್ತಾರೆ.

‘ಕಳೆದ ಎರಡು ದಶಕಗಳ ಹಿಂದೆ ರಸಗೊಬ್ಬರ ಬೆಲೆ ಅತ್ಯಂತ ಕಡಿಮೆ ಇತ್ತು. ಬೀಜ, ಕಳೆ ತೆಗೆಯುವುದು, ಪಟ್ಲರ್ ಹೊಡೆಯುವುದು, ರಾಶಿ ಮಾಡುವುದು ಸೇರಿದಂತೆ ಎಲ್ಲ ಖರ್ಚು ಕಡಿಮೆ ಇತ್ತು. ಎಕರೆ ಪ್ರದೇಶಕ್ಕೆ ₹10 ರಿಂದ ₹15 ಸಾವಿರ ಖರ್ಚಾಗುತ್ತಿತ್ತು. ಇಳುವರಿ ಕೂಡಾ 40 ರಿಂದ 45 ಚೀಲ ಬರುತ್ತಿತ್ತು. ಆದರೆ, ಈಗ ರಸಗೊಬ್ಬರ, ಕೂಲಿ ಕಾರ್ಮಿಕರ ಕೂಲಿ, ನಾಟಿ ಮಾಡುವುದೂ ಸೇರಿದಂತೆ ಎಲ್ಲ ಖರ್ಚುಗಳು ಏರಿಕೆಯಾಗಿವೆ. ಇದರಿಂದಾಗಿ ಎಕರೆಗೆ ₹35 ರಿಂದ 40 ಸಾವಿರ ಖರ್ಚಾಗುತ್ತದೆ’ ಎಂದು ಭತ್ತ ಬೆಳೆಗಾರ ನಿಂಗನಗೌಡ ಬಸನಗೌಡ್ರ ವಜ್ಜಲ ಹೇಳುತ್ತಾರೆ.

‘ಬಹುತೇಕ ಭೂಮಿ ಭತ್ತ ಬೆಳೆಗೆ ಮಾತ್ರ ಹೊಂದಿಕೊಂಡಿದ್ದು, ಬೇರೆ ಯಾವುದೇ ಬೆಳೆ ಬೆಳೆಯದಂಥ ಸ್ಥಿತಿ ಇದೆ. ಇದರಿಂದಾಗಿ ಕಳೆದ ಮೂರು ವರ್ಷಗಳಿಂದಲೂ ಭತ್ತದಿಂದ ನಷ್ಟ ಅನುಭವಿಸುತ್ತಿದ್ದರೂ ಮತ್ತೆ ಭತ್ತ ನಾಟಿ ಮಾಡುವುದನ್ನು ಬಿಡುವಂತಿಲ್ಲ’ ಎಂದು ರೈತ ಸಿದ್ದಣ್ಣ ಮೇಟಿ ಹೇಳಿದರು.

 

*ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸುವ ಅಧಿಕಾರಿಗಳು ಮೌನಕ್ಕೆ ಶರಣಾದರೆ, ಜನಪ್ರತಿನಿಧಿಗಳು ಓಟ್ ಬ್ಯಾಂಕಿಗಾಗಿ ರೈತರ ನಡುವೆ ಕಂದಕ ನಿರ್ಮಿಸಿದ್ದಾರೆ

ಭಾಸ್ಕರರಾವ ಮುಡಬೂಳ, ರೈತ ಮುಖಂಡ

*ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ನಿಷೇಧಿತ ಬೆಳೆಯಾದರೆ ಅದನ್ನು ಬೆಳೆಯುವ ರೈತರಿಗೆ ಯಾವುದೇ ರಿಯಾಯಿತಿ ನೀಡಬಾರದು. ಈ ಮೂಲಕ ಅವರಿಗೆ ಕಡಿವಾಣ ಹಾಕಿದಂತೆ ಆಗುತ್ತದೆ

ಅಭಿದ್ ಎಸ್.ಎಸ್, ಜಂಟಿ ಕೃಷಿ ನಿರ್ದೇಶಕ

*ಭತ್ತ ನಿಷೇಧಿತ ಬೆಳೆ ಎನ್ನುವುದನ್ನೇ ಶಾಸನ ಸಭೆಯಲ್ಲಿ ತೆಗೆದುಹಾಕಬೇಕು. ರೈತರು ಗಾಂಜಾ ಬಿತ್ತನೆ ಮಾಡುತ್ತಿಲ್ಲ. ಆಹಾರಕ್ಕಾಗಿ ಭತ್ತ ನಾಟಿ ಮಾಡುತ್ತಾರೆ. ಕಾನೂನುನಲ್ಲಿ ದುಶ್ಚಟಕ್ಕೆ ಪ್ರೇರಿಸುವ ವಸ್ತುಗಳನ್ನು ನಿಷೇಧಿಸಿದ್ದರೂ ಎಗ್ಗಿಲ್ಲದೆ ಮಾರಾಟವಾಗುತ್ತಿದೆ

ಮಲ್ಲಿಕಾರ್ಜುನ ಸತ್ಯಂಪೇಟೆ, ರೈತ ಮುಖಂಡ

*ಭತ್ತ ನಿಷೇಧ ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಅದು ಕೃಷಿ ಇಲಾಖೆಗೆ ಸಂಬಂಧಿಸಿದ್ದು. ಮೊದಲಿನಿಂದಲೂ ದೇವರಗೋನಾಲದ ಮೌನೇಶ್ವರ ದೇವಸ್ಥಾನದ ಭೂಮಿ ಭತ್ತ ಬೆಳೆಯಲು ಲೀಜ್ ಕೊಡಲಾಗುತ್ತಿದೆ

ಸುಬ್ಬಣ್ಣ ಜಮಖಂಡಿ, ತಹಶೀಲ್ದಾರ್, ಸುರಪುರ

*ಭತ್ತ ಬೆಳೆ ನಿಷೇಧ ಈಗ ಮುಗಿದ ಅಧ್ಯಾಯ. ಈ ಬಗ್ಗೆ ನಮ್ಮ ರೈತರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ಈಗ ರೈತ ಮತ್ತು ಸರ್ಕಾರ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಅನಿವಾರ್ಯವಾಗಿ ಇದಕ್ಕೆ ಹೊಂದಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಇರುತ್ತದೆಂಬ ನಂಬಿಕೆ ಇಲ್ಲ.

ಹಣಮಂತ್ರಾಯ ಮಡಿವಾಳ, ರೈತ ಸಂಘದ ಅಧ್ಯಕ್ಷ, ಸುರಪುರ

ಪೂರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.