ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋರನಹಳ್ಳಿ ಸಿಲಿಂಡರ್ ದುರ್ಘಟನೆ ಸಂತ್ರಸ್ಥರ ಮೂಕವೇದನೆ

ನಾಡು ಆಳುವ ದೊರೆಗೆ ಏನೆಂದು ಕೇಳಲಿ...?
Last Updated 19 ಮಾರ್ಚ್ 2022, 2:24 IST
ಅಕ್ಷರ ಗಾತ್ರ

ದೋರನಹಳ್ಳಿ(ಶಹಾಪುರ): ಬದುಕು ಛಿದ್ರವಾಗಿದೆ. ಮುಂದೇನು ಎಂಬ ಭಯ, ಆತಂಕದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಕುಟುಂಬದ ಯಜಮಾನ ಇಲ್ಲದೆ ಅನಾಥ ಪ್ರಜ್ಞೆ ನಮ್ಮನ್ನು ಕಾಡುತ್ತಲಿದೆ. ಕೇವಲ ₹ 5 ಲಕ್ಷ ಪರಿಹಾರ ಧನದ ಚೆಕ್ ಪಡೆದುಕೊಂಡು ಮೌನವಹಿಸಬೇಕಾ. ದುರ್ಘಟನೆಗೆ ಹೊಣೆಯಾಗಿರುವ ಕಂಪನಿ ವಿರುದ್ಧ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ. 15 ಅಮೂಲ್ಯ ಜೀವ ಕಳೆದುಕೊಂಡವರ ಸಾವಿಗೆ ನ್ಯಾಯ ದೊರಕಿಸಿಕೊಡಿ. ನಾಡನ್ನು ಆಳುವ ದೊರೆಗೆ ಏನೆಂದು ಕೇಳಲಿ ಎನ್ನುವ ಪ್ರಶ್ನೆ ನೊಂದವರನ್ನು ಕಾಡುತ್ತಲಿದೆ.

ಇದು ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಫೆ.25ರಂದು ಸಿಲಿಂಡರ್ ಅಡುಗೆ ಅನಿಲ ಸೋರಿಕೆಯಿಂದ 24 ಜನ ಗಾಯಗೊಂಡು ಅದರಲ್ಲಿ 15 ಜನ ಮೃತಪಟ್ಟಿದ್ದಾರೆ. ಇನ್ನೂ 8 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಕುಟುಂಬಳಿಗೆ ಶನಿವಾರ ಮುಖ್ಯಮಂತ್ರಿ ಅವರು ತಲಾ ₹ 5 ಲಕ್ಷ ಪರಿಹಾರದ ಚೆಕ್ ವಿತರಣೆಗೆ ಗ್ರಾಮಕ್ಕೆ ಆಗಮಿಸುತ್ತಿರುವಾಗ ನೊಂದ ಕುಟುಂಬಗಳು ಕೇಳುತ್ತಿರುವ ಪರಿ ಇದು.

ನಮಗೆ ಒಂದಿಷ್ಟು ಹಣದ ಆಸರೆ ಬೇಕಾಗಿಲ್ಲ. ಕುಟುಂಬದ ಆಧಾರ ಸ್ತಂಭವಾಗಿರುವ ತಂದೆ-ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇವೆ. ಬದುಕಿನ ಉತ್ಸಾಹ ಕಳೆದು ಕೊಂಡಿ ದ್ದೇವೆ. ಕೊನೆ ಪಕ್ಷ ಸರ್ಕಾರಿ ಉದ್ಯೋಗ ನೀಡಿ ಎನ್ನುತ್ತಾರೆ ಮಲ್ಲಿಕಾರ್ಜುನ.

ಅದರಂತೆ ಚೆನ್ನವೀರ ಕುಟುಂಬವು ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ನಾಲ್ಕು ಮಂದಿ ಹೆಣ್ಣುಮಕ್ಕಳು. ಚೆನ್ನವೀರ ಒಬ್ಬರೆ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಸರ್ಕಾರ ಹೆಣ್ಣು ಮಕ್ಕಳ ರಕ್ಷಣೆಗೆ ಬೆನ್ನೆಲುಬಾಗಿ ನಿಲ್ಲಬೇಕು. ಿದರಂತೆ ಇನ್ನೂ ಹಲವು ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಅವೆಲ್ಲವುಗಳಿಗೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿ ಭರವಸೆಯ ಜೀವನಕ್ಕೆ ಮುನ್ನುಡಿಯನ್ನು ಬರೆಯಲಿ ಎನ್ನುತ್ತಾರೆ ಗ್ರಾಮದ ಮುಖಂಡರು.

‘ಸರ್ಕಾರ ಪರಿಹಾರ ವಿತರಿಸಿ ಕೈ ತೊಳೆದುಕೊಂಡರೆ ಸಾಲದು. ಇದಕ್ಕೆ ಹೊಣೆ ಸಿಲಿಂಡರ್ ಕಂಪನಿ ಆಗಿದೆ. ಸರ್ಕಾರ ಉನ್ನತಮಟ್ಟದ ನ್ಯಾಯಾಂಗ ತನಿಖೆಗೆ ಆದೇಶ ನೀಡುವುದು ಅಗತ್ಯವಾಗಿದೆ. ಪೊಲೀಸರು ದೂರು ದಾಖಲಿಸುವಾಗ ಕಂಪನಿಯನ್ನು ಹೊರಗಿಟ್ಟು ಮಾಲೀಕ ಮತ್ತು ವಿತರಕನ ಮೇಲೆ ದೂರು ದಾಖಲಿಸಿಕೊಂಡಿರುವುದು ಹಾಸ್ಯಾಸ್ಪದ ವಾಗಿದೆ. ತನಿಖೆಯನ್ನು ದಾರಿ ತಪ್ಪಿಸುವ ಪೂರ್ವ ನಿಯೋಜಿತ ಕೆಲಸವಾಗಲಿದೆ. ಸರ್ಕಾರ ಯಾಕೆ ಐಒಸಿ ಕಂಪನಿಯ ಮೇಲೆ ಮೃಧು ಧೋರಣೆ ಅನುಸರಿಸುತ್ತಿದೆ. ಜನತೆಯ ಜೀವಕ್ಕಿಂತ ಕಂಪನಿಯ ಹಿತರಕ್ಷಣೆಗೆ ಮುಂದಾಗಿರುವುದು ಬೇಸರ ಮೂಡಿಸಿದೆ. ದುರ್ಘಟನೆ ನಡೆದು 22 ದಿನ ಸಂದಿವೆ. ಪೊಲೀಸರು ಮಾತ್ರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ದುರ್ಘಟನೆ ತನಿಖೆಗೆ ಪ್ರತ್ಯೇಕ ತಂಡ ರಚಿಸಿ ಮಾಹಿತಿ ಪಡೆಯುವುದು ಸೂಕ್ತವಾಗಿದೆ‘ ಎನ್ನುತ್ತಾರೆ ವಕೀಲರಾದ ಭಾಸ್ಕರರಾವ ಮುಡಬೂಳ ಹಾಗೂ ಸಯ್ಯದ ಇಬ್ರಾಹಿಂಸಾಬ್ ಜಮದಾರ.

ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ದೂಳು ಎಬ್ಬಿಸಿ ಮಾಯವಾಗುವುದು ಬೇಡ. ಅಮಾಯಕರ ಸಾವಿಗೆ ನ್ಯಾಯ ದೊರಕಿಸಿಕೊಡಿ. ಕಂಪನಿಯಿಂದಲೂ ಮೃತ ಕುಟುಂಬದ ಅವಲಂಬಿತರಿಗೆ ತಲಾ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಯುವ ವಕೀಲರ ಸಮುದಾಯವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT