ತಿಂಥಣಿ ಶ್ರೀ ಮೌನೇಶ್ವರ ಜಾತ್ರೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ

7
ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚನೆ

ತಿಂಥಣಿ ಶ್ರೀ ಮೌನೇಶ್ವರ ಜಾತ್ರೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ

Published:
Updated:
Prajavani

ಯಾದಗಿರಿ: ಫೆಬ್ರುವರಿ 14ರಿಂದ 19ರವರೆಗೆ ನಡೆಯುವ ಜಿಲ್ಲೆಯ ಸುರಪುರ ತಾಲ್ಲೂಕಿನ ತಿಂಥಣಿ ಶ್ರೀ ಮೌನೇಶ್ವರ ದೇವಸ್ಥಾನದ ಜಾತ್ರೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ತಿಂಥಣಿ ಶ್ರೀ ಮೌನೇಶ್ವರ ದೇವಸ್ಥಾನದ ಜಾತ್ರೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಜಾತ್ರೆಗೆ ರಾಜ್ಯದ ಜಿಲ್ಲೆಗಳಿಂದ ಅಷ್ಟೇ ಅಲ್ಲದೆ, ಅಂತರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಚರಂಡಿ ಮತ್ತು ಇನ್ನಿತರ ಸ್ಥಳಗಳಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛತೆ ಕಾಪಾಡಬೇಕು. ಸಾರಿಗೆ ಬಸ್‌ಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ, ವಿದ್ಯುತ್, ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಕರೆದು ನಿರ್ಣಯ ಕೈಗೊಳ್ಳಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಆದೇಶಿಸಿದರು.

ಜಾತ್ರೆಯ ಪ್ರಯುಕ್ತ ದೇವಸ್ಥಾನ ವಸತಿಗೃಹದ 12 ಕೋಣೆಗಳ ಬಾಡಿಗೆ ದರವನ್ನು ಒಂದು ಕೋಣೆಗೆ ₹600ರಂತೆ ನಿಗದಿಪಡಿಸಬೇಕು. ಭಕ್ತರು ಹೊಸದಾಗಿ ವಸತಿ ಗೃಹಗಳನ್ನು ಕಟ್ಟಿಸಲು ಮುಂದೆ ಬರುತ್ತಿದ್ದಾರೆ ಎಂಬುದಾಗಿ ದೇವಸ್ಥಾನ ಸಮಿತಿಯವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, 10x12 ಅಳತೆಯ ಒಂದು ಕೋಣೆ ನಿರ್ಮಾಣಕ್ಕೆ ತಗುಲುವ ವೆಚ್ಚವನ್ನು ವಿವಿಧ ತಾಂತ್ರಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ₹2 ಲಕ್ಷ ನಿಗದಿಪಡಿಸಿದರು. ಜಾತ್ರೆಯಲ್ಲಿ ವಿವಿಧ ಅಂಗಡಿಗಳನ್ನು ಸ್ಥಾಪಿಸಲು ತಹಶೀಲ್ದಾರರು ತಯಾರಿಸಿರುವ ನಕ್ಷೆಗೆ ಜಿಲ್ಲಾಧಿಕಾರಿಗಳು ಅನುಮೋದಿಸಿದರು.

ಜಾತ್ರೆಯ ಸಮಯದಲ್ಲಿ ಮಾಂಸ, ಮದ್ಯ ಮಾರಾಟ ನಿಷೇಧಿಸಬೇಕು. ದೇವಸ್ಥಾನ ಮತ್ತು ಭಕ್ತರ ಸುರಕ್ಷತೆ ದೃಷ್ಟಿಯಿಂದ ಸಿ.ಸಿ ಟಿವಿ ಕ್ಯಾಮರಾ ಅಳವಡಿಕೆ ಮುಖ್ಯವಾಗಿದೆ. ಈಗಾಗಲೇ ಅಳವಡಿಸಿರುವ 8 ಸಿ.ಸಿ ಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿರುವ ಕುರಿತು ಪರಿಶೀಲಿಸಿಕೊಳ್ಳಬೇಕು. ಜಾತ್ರೆ ನಿಮಿತ್ತ ಅಗತ್ಯ ಸ್ಥಳಗಳಲ್ಲಿ ಹೆಚ್ಚಿನ ಸಿ.ಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಅವರು ಸೂಚಿಸಿದರು.

ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತೆ ವಹಿಸಬೇಕು. ದೇವಸ್ಥಾನ ಆವರಣ, ನದಿಯ ದಂಡೆ ಹಾಗೂ ಬಸ್ ನಿಲುಗಡೆ ಸ್ಥಳದಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ. ಜನದಟ್ಟಣೆಯನ್ನು ನಿಯಂತ್ರಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಜಾತ್ರೆಯಲ್ಲಿ ಮಕ್ಕಳು ತಪ್ಪಿಸಿಕೊಂಡಲ್ಲಿ ಅವರನ್ನು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿ, ಪೋಷಕರಿಗೆ ಒಪ್ಪಿಸುವ ಜವಾಬ್ದಾರಿಯನ್ನು ಪೊಲೀಸ್ ಮತ್ತು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಿದರು.

ಜಾತ್ರೆ ಮುಗಿಯುವವರೆಗೆ ತುರ್ತು ಆರೋಗ್ಯ ಸೇವೆಗಳಿಗಾಗಿ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಆಯೋಜಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, 108 ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನ ಸ್ಥಳದಲ್ಲಿರಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮಾತನಾಡಿ, ಶ್ರೀ ಮೌನೇಶ್ವರ ದೇವಸ್ಥಾನದ ಮುಂದುಗಡೆ ಭಕ್ತರನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ನಿರ್ಮಿಸಬೇಕು. ಜಾತ್ರೆಗೆ ಲಕ್ಷಾಂತರ ಭಕ್ತರು ಬರುವುದರಿಂದ ಅವರ ಹಿತಾಸಕ್ತಿ ಕಾಪಾಡಲು 30 ಜನ ಸ್ಥಳೀಯ ಸ್ವಯಂಸೇವಕರನ್ನು ನೇಮಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಡಾ.ಬಿ.ಎಸ್. ಮಂಜುನಾಥ ಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಜನೀಕಾಂತ ಇದ್ದರು.

ಹಟ್ಟಿ ಚಿನ್ನದ ಗಣಿಗೆ ಪತ್ರ
’ದೇವಸ್ಥಾನದ ನದಿ ತೀರದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ನಿರ್ಮಿಸಿದ ಸ್ನಾನ ಘಟ್ಟ ಉತ್ತಮವಾಗಿದೆ. ಇದು ಶಾಶ್ವತವಾಗಿ ಉಳಿಯುವಂತೆ ನೋಡಿಕೊಳ್ಳಲು ಇದರ ಮೇಲೆ ಕಾಂಕ್ರೀಟ್ ಮಾಡಿಸುವ ಅವಶ್ಯವಿದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ನದಿ ನೀರಿನ ರಭಸಕ್ಕೆ ನಿಲ್ಲುವುದಿಲ್ಲ. ಜಾತ್ರೆಯ ಸಮಯದಲ್ಲಿ ನದಿಯಲ್ಲಿ ಸ್ನಾನ ಮಾಡುವ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ತಾತ್ಕಾಲಿಕ ಶೆಡ್‌ಗಳ ನಿರ್ಮಾಣವನ್ನೂ ಹಟ್ಟಿ ಚಿನ್ನದ ಗಣಿ ನಿರ್ವಹಿಸುತ್ತದೆ. ಆದ್ದರಿಂದ ಈ ಎರಡು ಕಾರ್ಯಗಳಿಗೆ ಜಿಲ್ಲಾಡಳಿತದ ವತಿಯಿಂದ ಹಟ್ಟಿ ಚಿನ್ನದ ಗಣಿ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಸೂಚಿಸಿದರು. ಅಲ್ಲದೆ, ಭಕ್ತರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ನಾರಾಯಣಪುರ ಜಲಾಶಯದ ಮೂಲಕ ನದಿಗೆ ನೀರು ಬಿಡುಗಡೆಗೆ ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಪತ್ರ ಬರೆಯುವಂತೆ’ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ತಿಳಿಸಿದರು.

ಅಶ್ಲೀಲ ನೃತ್ಯ ಪ್ರದರ್ಶಿಸಿದರೆ ಕ್ರಮ
’ಜಾತ್ರೆಯು ಭಕ್ತಿಯ ಪ್ರತೀಕವಾಗಿದೆ. ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಬರುತ್ತಾರೆ. ಹಾಗಾಗಿ, ಜಾತ್ರೆಯ ಸಮಯದಲ್ಲಿ ನಡೆಯುವ ನಾಟಕ ಮತ್ತು ಇತರೆ ಪ್ರದರ್ಶನದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡತಕ್ಕದಲ್ಲ. ಒಂದು ವೇಳೆ ಅಶ್ಲೀಲ ಪ್ರದರ್ಶನ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರದರ್ಶನಕ್ಕೆ ಪರವಾನಗಿ ನೀಡುವ ಪೂರ್ವದಲ್ಲಿ ಷರತ್ತು ವಿಧಿಸುವಂತೆ ತಹಶೀಲ್ದಾರ್ ಸುರೇಶ ಅಂಕಲಗಿ ಅವರಿಗೆ ನಿರ್ದೇಶಿಸಿದರು. ಕಳೆದ ವರ್ಷದ ಪೂರ್ವಸಿದ್ಧತಾ ಸಭೆಯಲ್ಲಿ ರಥಕ್ಕೆ ಶೆಡ್ ನಿರ್ಮಾಣ ಸಂಬಂಧ ಲೋಕೋಪಯೋಗಿ ಇಲಾಖೆಯ ಎಇಇ ಅವರಿಗೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಲಾಗಿತ್ತು. ಒಂದು ಅಂದಾಜು ಪಟ್ಟಿ ಸಿದ್ಧಪಡಿಸಲು ವರ್ಷ ಬೇಕಾ?’ ಎಂದು ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !